ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋತುಮತಿಗೆ ಊರಾಚೆ ವಾಸ; ಮುಕ್ತಿ ನೀಡಲು ಮೊರೆ

ಸಮಾಜ ಕಲ್ಯಾಣ ಸಚಿವರ ಕ್ಷೇತ್ರದಲ್ಲೇ ಮೌಢ್ಯಾಚರಣೆ
Last Updated 2 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಚಿಕ್ಕಜಾಜೂರು (ಚಿತ್ರದುರ್ಗ ಜಿಲ್ಲೆ): ಋತುಮತಿ ಮತ್ತು  ಬಾಣಂತಿಗೆ ಊರಾಚೆಯ ಜೋಪಡಿ ಅಥವಾ ಶಾಲೆಯಲ್ಲಿ ವಾಸ ಮಾಡಿಸುವ ಮೌಢ್ಯಾಚರಣೆ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಸಮೀಪದ ಶೃಂಗೇರಿ ಹನುಮನಹಳ್ಳಿ ಗೊಲ್ಲರಹಟ್ಟಿಯಲ್ಲೂ ನಡೆಯುತ್ತಾ ಬಂದಿದೆ.

ಇಲ್ಲಿ ಋತುಮತಿಯಾಗುವ ಹೆಣ್ಣು­ಮಕ್ಕಳು ಮೂರು ದಿನ ಗ್ರಾಮದ ಹೊರಗಿನ ಶಾಲೆ ಅಥವಾ ಜೋಪಡಿ­ಯಲ್ಲಿ ವಾಸ ಇರಬೇಕು. ಇದು ಇಲ್ಲಿನ ಸಂಪ್ರದಾಯ.

ಈ ಊರು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರ ಕ್ಷೇತ್ರ ಹೊಳಲ್ಕೆರೆ ವ್ಯಾಪ್ತಿಯಲ್ಲಿದೆ.

ಊರಾಚೆ ವಾಸ ಮಾಡುವುದರಿಂದ ತಮಗಾಗುತ್ತಿರುವ ತೊಂದರೆಗಳನ್ನು ಗ್ರಾಮದ ಮಹಿಳೆಯರು– ವಿದ್ಯಾರ್ಥಿ­ನಿಯರು ಬಿಚ್ಚಿಡುತ್ತಾರೆ.
‘ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಒಬ್ಬಳು ಡಿಪ್ಲೊಮೊ ನರ್ಸಿಂಗ್‌ ಮುಗಿಸಿದ್ದಾಳೆ, ಇನ್ನೊಬ್ಬಳು ದ್ವಿತೀಯ ಪಿಯು ಓದುತ್ತಿದ್ದಾಳೆ. ಋತುಮತಿ­ಯಾದಾಗ ಮೂರು ದಿನ ಹೊರಗಿರ­ಬೇಕೆಂದು ಹೇಳಿದರೆ, ಅವರು ವಿರೋಧಿಸುತ್ತಾರೆ.

ಆದರೆ, ಗ್ರಾಮದ ಒಂದು ಭಾಗದ ಬಹುತೇಕ ಹೆಂಗಸರು ಋತುಮತಿ­ಯಾದಾಗ ಮೂರು ದಿನವೂ ಗ್ರಾಮದ ಹೊರಗಿನ ಕೊಠಡಿಯಲ್ಲೇ ಇರಬೇಕು. ಹೆರಿಗೆ ಯಾದವರದ್ದು ಮತ್ತೊಂದು ಗೋಳು. ಬಾಣಂತಿಯರು ಐದು ದಿನಗಳ ಕಾಲ ಮನೆ ಸೇರು­ವಂತಿಲ್ಲ’ ಎಂದು ಹೇಳುತ್ತಾರೆ ಮಹಿಳೆಯರು.

ಚಳಿಯಲ್ಲೇ ಮುದುಡುವ ಮಗು­ವಿಗೆ, ಬಾಣಂತಿಯರಿಗೆ ಕಾಯಿಲೆ ಬಿದ್ದರೆ ಅಥವಾ  ಸೋಂಕು ತಗುಲಿ­ದರೆ ಯಾರು ಹೊಣೆ?’ ಎಂದು ಪ್ರಶ್ನಿಸಿದರು ಗ್ರಾಮದ ನೀಲಮ್ಮ, ಗೌರಮ್ಮ, ಗಾಯತ್ರಮ್ಮ, ಯಶೋದಮ್ಮ.

‘ಮೂರು ದಿನಗಳ ಕಾಲ ಊರ ಹೊರಗೆ ಕತ್ತಲೆಯಲ್ಲಿ ಕಾಲ ಕಳೆ­ಯುವುದು ಕಷ್ಟ. ಶಾಲಾ–ಕಾಲೇಜಿನಲ್ಲಿ ಕೊಡುವ ಹೋಂವರ್ಕ್‌ ಬರೆಯಲು, ಪರೀಕ್ಷೆ ಸಮಯಲ್ಲಿ ತುಂಬಾ ತೊಂದರೆ­ಯಾಗುತ್ತದೆ. ಕಡಿಮೆ ಅಂಕಗಳು ಬಂದು ಅನುತ್ತೀರ್ಣರಾಗಬೇಕಾಗಿದೆ. ಬೇರೆ ಜಾತಿಯಲ್ಲಿ ಇರದ ಈ  ಪದ್ಧತಿ ನಮ್ಮ ಜಾತಿಗೆ ಏಕೆ?’ ಎಂದು ಕೇಳುತ್ತಾರೆ ವಿದ್ಯಾರ್ಥಿನಿಯರಾದ ನೇತ್ರಾವತಿ, ರಾಧಾ, ಮಮತಾ, ಮಾರಕ್ಕ ಮತ್ತಿತರರು.

ದೇವರ ಭಯ: ‘ದುಮ್ಮಿ ಗೊಲ್ಲರಹಟ್ಟಿಯ ಜುಂಜಪ್ಪ ಹೇಳಿದರೆ ಹೆಣ್ಣುಮಕ್ಕಳನ್ನು ಒಳಗೆ ಕರೆದು ಕೊಳ್ಳುತ್ತೇವೆ. ಅವರನ್ನು ಮನೆ­ಯಿಂದ ಹೊರಗಿಡುವುದು ನಮಗೂ ಇಷ್ಟವಿಲ್ಲ. ಆದರೆ, ದೇವರ ಭಯದಲ್ಲಿ ಇದನ್ನೆಲ್ಲಾ ನಡೆಸಿಕೊಂಡು ಬರಬೇಕಾ­ಗಿದೆ’ ಎನ್ನುತ್ತಾರೆ ದೇವಸ್ಥಾನದ ಅಧ್ಯಕ್ಷ ನಾಗೇಂದ್ರಪ್ಪ.

‘ಸಚಿವರೇ ಬರಬೇಕು’
ಇಲ್ಲಿನ ಅಂಧಶ್ರದ್ಧೆ ಮತ್ತು ಮೂಢ­ನಂಬಿಕೆಗಳನ್ನು ಹೋಗಲಾಡಿ­ಸಲು ಸಮಾಜ ಕಲ್ಯಾಣ ಸಚಿವರಾದ ಎಚ್‌. ಆಂಜನೇಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರು ನಮ್ಮೂರಿಗೆ ಬರಬೇಕು’ ಎನ್ನುವುದು ಗ್ರಾಮದ ಮಂಜುನಾಥ್‌, ಮರಿಯಪ್ಪ, ತಿಪ್ಪೇಶ್‌, ತಿಪ್ಪೇಸ್ವಾಮಿ, ಕೃಷ್ಣ, ಅಜಯ್‌, ಕೃಷ್ಣಮೂರ್ತಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಗಿರಿಜಮ್ಮ, ಸರೋಜಮ್ಮ, ಶಾಂತಲಾ ಅವರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT