ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿಗೆ ಎಸ್ಎಂಎಸ್‌ ಮೂಲಕ ಬೆದರಿಕೆ

ಕವಿವಿ ಕುಲಸಚಿವರ ವಿರುದ್ಧ ತನಿಖೆಗೆ ಸಮಿತಿ ರಚನೆ
Last Updated 4 ಆಗಸ್ಟ್ 2014, 20:06 IST
ಅಕ್ಷರ ಗಾತ್ರ

ಧಾರವಾಡ: ‘ನನ್ನ ಮೇಲೆ ಮಹಿಳಾ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಕುಲಸಚಿವೆ ಪ್ರೊ. ಚಂದ್ರಮಾ ಎಸ್. ಕಣಗಲಿ ಎಸ್ಎಂಎಸ್ ಮೂಲಕ ಬೆದರಿಕೆ ಹಾಕಿದ್ದಾರೆ. ಈ ವಿಷಯವನ್ನು ಉನ್ನತ ಶಿಕ್ಷಣ ಸಚಿವರು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಗಮನಕ್ಕೆ ತರಲಾಗಿದೆ’ ಎಂದು ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಚ್.ಬಿ. ವಾಲೀಕಾರ ತಿಳಿಸಿದರು.

ಕವಿವಿ ಆವರಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶುಕ್ರವಾರ (ಆ. 1) ವಿವಿಯ ಸಿಂಡಿಕೇಟ್ ಸಭೆ ನಡೆಯಿತು. ಈ ಸಭೆಯಲ್ಲಿ ಇಂಗ್ಲಿಷ್ ವಿಷಯದ ಎಂ.ಫಿಲ್ ಪರೀಕ್ಷೆಯ ಉತ್ತರಪತ್ರಿಕೆಗಳ ನಾಪತ್ತೆ, ನಕಲಿ ಸಹಿ ಹಾಗೂ ಬಾಹ್ಯ ಮೌಲ್ಯಮಾಪಕರ ನೇಮಕ ಸಂಬಂಧ ಎಸಗಿರುವ ಲೋಪ ಕುರಿತು ಚರ್ಚೆ ನಡೆಯಿತು. ಇಂಗ್ಲಿಷ್ ವಿಭಾಗದ ಆಗಿನ ಮುಖ್ಯಸ್ಥೆಯಾಗಿದ್ದ ಚಂದ್ರಮಾ ಅವರು ಲೋಪ ಎಸಗಿದ್ದಾರೆ ಎಂಬ ಆರೋಪ ಸಂಬಂಧ ತನಿಖಾ ಸಮಿತಿ ರಚಿಸಲು ನಿರ್ಧರಿಸಲಾಯಿತು’ ಎಂದರು.

‘ತಾನು ಸರ್ಕಾರದಿಂದ ನೇಮಕ­ವಾಗಿದ್ದೇನೆ. ಕುಲಪತಿಯ ನಿರ್ದೇಶನದ ಅಗತ್ಯವಿಲ್ಲ ಎಂದಿದ್ದಾರೆ. ಹೀಗಾಗಿ, ನಾನು ಈ ಪ್ರಕರಣವನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದೇನೆ’ ಎಂದು ಡಾ.ಎಚ್‌.ಬಿ.ವಾಲೀಕಾರ ಸ್ಪಷ್ಟ­ಪಡಿಸಿದರು.

‘ನಾನು ಕುಲಪತಿಯಾಗಿದ್ದು ನಾಲ್ಕು ವರ್ಷಕ್ಕೇ ಹೊರತು ಮೂರು ವರ್ಷ ಒಂಬತ್ತು ತಿಂಗಳಿಗಲ್ಲ. ಕಾನೂನಿನ ಚೌಕಟ್ಟಿನಲ್ಲಿ ನನಗೆ ಎಲ್ಲ ರೀತಿಯ ನಿರ್ಣಯ ತೆಗೆದುಕೊಳ್ಳುವ ಅಧಿಕಾರ­ವಿದೆ. ನಿವೃತ್ತಿಗೆ ಸಮೀಪವಿರುವಾಗ ಯಾವ ನಿರ್ಣಯಗಳನ್ನೂ ತೆಗೆದು­ಕೊಳ್ಳಬಾರದು ಎಂದು ಯಾವ ಕಾಯ್ದೆ­ಯಲ್ಲೂ ಹೇಳಿಲ್ಲ’ ಎಂದರು.

ಎಸ್ಎಂಎಸ್‌ ಕಳುಹಿಸಿಲ್ಲ– ಚಂದ್ರಮಾ
‘ನನ್ನ ಮೊಬೈಲ್‌ನಿಂದ ಕುಲಪತಿ ಅವರಿಗೆ ಬೆದರಿಕೆಯ ಎಸ್ಎಂಎಸ್ ಕಳುಹಿಸಿಲ್ಲ’ ಎಂದು ಚಂದ್ರಮಾ ಸ್ಪಷ್ಟ­ಪಡಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಾಕಿ ಉಳಿದಿರುವ 26 ಉಪನ್ಯಾಸಕ ಹುದ್ದೆಗಳ ನೇಮಕಾತಿ ಹಾಗೂ ₨ 4.5 ಕೋಟಿ ವೆಚ್ಚದ ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ಸಂಬಂಧಿಸಿದ ಕಡತಗಳಿಗೆ ಸಹಿ ಹಾಕುವಂತೆ ನನ್ನ ಮೇಲೆ ಒತ್ತಡ ಹೇರಲಾಯಿತು. ವಿವಿ ವ್ಯಾಪ್ತಿಯ ಪ್ರತಿಯೊಂದಕ್ಕೂ ಕುಲ­ಸಚಿವರೇ ಹೊಣೆಯಾಗುವುದರಿಂದ ನಾನು ಸಹಿ ಹಾಕಲಿಲ್ಲ. ಕುಲಪತಿ ಅವರು ತಮ್ಮ ಸೇವಾವಧಿಯ ಕೊನೆಯ ಮೂರು ತಿಂಗಳಲ್ಲಿ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳದಂತೆ 1998ರಲ್ಲಿ ಸರ್ಕಾರವು ರಾಣಿಚೆನ್ನಮ್ಮ ವಿವಿಗೆ ಸೂಚನೆ ನೀಡಿತ್ತು. ಅದರ ಆಧಾರದ ಮೇಲೆ ನಾನು ಪ್ರಶ್ನಿಸಿದೆ’ ಎಂದರು.
‘ಕುಲಪತಿ ಅವರು ಸಿಂಡಿಕೇಟ್‌ ಸದಸ್ಯರ ಎದುರು ನನ್ನನ್ನು ನಿಂದಿಸಿದರು. ಹೀಗಾಗಿ, ಅವರ ಮೇಲೆ ದೌರ್ಜನ್ಯದ ದೂರು ದಾಖಲಿಸಲು ಅನುಮತಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಲ್ಲಿ ಕೋರಿದ್ದೇನೆ. ಅನುಮತಿ ಸಿಕ್ಕಿದರೆ ದೂರು ದಾಖಲಿಸುತ್ತೇನೆ’ ಎಂದರು.

ಉತ್ತರ ಪತ್ರಿಕೆ ನಾಪತ್ತೆ: ‘2013ರಲ್ಲಿ ಪ್ರೊ.ಚಂದ್ರಮಾ ಕಣಗಲಿ ಅವರು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ­ದ್ದ ಸಂದರ್ಭದಲ್ಲಿ ನಡೆದ ಎಂ.ಫಿಲ್‌ ಕೋರ್ಸ್ ಪರೀಕ್ಷೆಯ ಉತ್ತರ ಪತ್ರಿಕೆ­ಗಳು ನಾಪತ್ತೆಯಾಗಿರುವುದರ ಜತೆಗೆ ಬಾಹ್ಯ ಮೌಲ್ಯಮಾಪಕರ ನೇಮಕದಲ್ಲಿ ಲೋಪ ಆಗಿರುವುದು ಮೇಲ್ನೋಟಕ್ಕೆ ಸಾಬೀತು ಆಗಿದೆ’ ಎಂದು ಕವಿವಿ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ.ಎಚ್.ಟಿ. ಪೋತೆ  ‘ಪ್ರಜಾವಾಣಿ’ಗೆ ತಿಳಿಸಿದರು.

‘2014ರ ಏಪ್ರಿಲ್‌ನಲ್ಲಿ ತಮ್ಮ ವಿಭಾಗದ ಎಂ.ಫಿಲ್‌. ಕೋರ್ಸ್‌ನ ಉತ್ತರ ಪತ್ರಿಕೆಗಳನ್ನು ನೀಡುವಂತೆ ವಿಭಾಗದ ಮುಖ್ಯಸ್ಥರಿಗೆ ಸೂಚಿಸಿಲಾ­ಗಿತ್ತು. ಆದರೆ ಇಂಗ್ಲಿಷ್‌ ವಿಭಾಗದಿಂದ ಎಂಟು ತಿಂಗಳು ಕಳೆದರೂ ಉತ್ತರ ಪತ್ರಿಕೆ ಪರೀಕ್ಷಾಂಗ ವಿಭಾಗಕ್ಕೆ ಬರಲಿಲ್ಲ. ಆದರೆ ಸಾಮಾನ್ಯ ಆಡಳಿತ ವಿಭಾಗದಲ್ಲಿ ಉತ್ತರ ಪತ್ರಿಕೆ ನೀಡಿರುವುದಾಗಿ ಚಂದ್ರಮಾ ಅವರು ತಿಳಿಸಿದ್ದಾರೆ’ ಎಂದು ಹೇಳಿದರು.

‘ಉತ್ತರ ಪತ್ರಿಕೆ ಸಲ್ಲಿಸಿ ಪಡೆದಿರುವ ಸ್ವೀಕೃತಿ ಪತ್ರವು 2014ರ ಮಾರ್ಚ್‌ ತಿಂಗಳಿನದ್ದಾಗಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಸಂಬಂಧ ಸ್ವೀಕೃತಿ ಪತ್ರಕ್ಕೂ ನಮಗೂ ಸಂಬಂಧವಿಲ್ಲ ಎಂದು ಸಾಮಾನ್ಯ ಆಡಳಿತ ವಿಭಾಗದ ನೌಕರರು ಲಿಖಿತ ರೂಪದಲ್ಲಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಪ್ರೊ.ಚಂದ್ರಮಾ ಅವರ ವಿರುದ್ಧ ತನಿಖೆ ನಡೆಸಲು ಸಮಿತಿ ರಚಿಸಲಾಯಿತು’ ಎಂದು ಪೋತೆ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT