ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳವಳಿ ರಾಜಕೀಯ ಪಕ್ಷವಾಗುವ ಸಂಕ್ರಮಣ ಕಾಲ

Last Updated 2 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ರಾಜಕಾರಣದಲ್ಲಿ ನಾವೆಲ್ಲರೂ ಸುಳ್ಳು­ಗಳನ್ನು ಹೇಳಲಾರದ ಸಾಚಾತನವನ್ನು, ತಾನೇ ಕಂಡ ದಿಟ್ಟ ಸತ್ಯವನ್ನೂ ಅನುಮಾನಕ್ಕೆ ಎಡೆ ಇರುವಂತೆ ಹೇಳುವ ಸಭ್ಯ ವರ್ತನೆಯನ್ನು ಅಪೇಕ್ಷಿಸುತ್ತೇವೆ. ಇದು ಆದರ್ಶ. ಆದರೆ ನಯ­ನಾಜೂಕಿನ ಸಭ್ಯರು ಆಡುವುದೆಲ್ಲ ಅವರ ಹೈಕಮಾಂಡ್ ನಿರೀಕ್ಷಿಸುವ ಮಾತುಗಳೇ ಆಗಿರುತ್ತವೆ. ಅಂದರೆ ಬಹಿರಂಗ­ದಲ್ಲಿ ಆಡಿ ತೋರ­ಬೇಕಾದ ಪಕ್ಷಹಿತದ (ಅಂದರೆ ಒಂದು ಕುಟುಂಬದ ಹಿತದ) ಮಾತಾಗಿರುತ್ತದೆ. ತಮಾಷೆ­ಯೆಂದರೆ ಹೀಗೆ ಸಲೀಸಾಗಿ ಮಾತಾ­ಡುವ ‘ಆತ’ ಮಾತಾಡುತ್ತಿರುವಾಗಲೆ ತನ್ನ ಸುಳ್ಳಿನ ನಿರರ್ಗಳ­ತೆಯ ಬಿಸಿಯಿಂದ ತಾನೇ ಮೈ­ಮರೆತು ಸೊಕ್ಕಿ ಎದುರಾಳಿಯನ್ನು ಅರ್ಥಾತ್ ‘ಈತ’ನನ್ನು ಕೆಣಕುತ್ತಾನೆ.

ವಾದಕ್ಕೇ ಒಂದು ಏರಿಳಿತದ ಲಯವಿದೆ­ಯಲ್ಲವೆ? ಎದುರಾಳಿ ತಾನೇ ನಂಬಲಾರದ್ದನ್ನು ನಂಬಿದವನಂತೆ ಹೇಳುತ್ತ ಇದ್ದಾನೆ ಎಂದು  ‘ಈತ’  ‘ಆತ’ನ ವಾದವನ್ನು ಉಗ್ರವಾಗಿ ಖಂಡಿ­ಸು­ತ್ತಾನೆ. ಈ ಉಗ್ರತೆಯೇ ಕೆಲವೊಮ್ಮೆ ಎದು­ರಾಳಿಯ ವಾದಕ್ಕೆ ಬೆಲೆ ತರುವಂತೆ ಏಕಾಗ್ರನಾಗಿ ಕೇಳುತ್ತಿರು­ವವನಿಗೆ ಭಾಸವಾಗುವುದುಂಟು. ಮತ್ತೆ ಮತ್ತೆ ಹೇಳಿದ್ದು ನಿಜವೆಂದು ಅನ್ನಿಸು­ವುದೂ ಉಂಟು. ಮೀಡಿಯಾದವರು ಹೀಗೆ ಮತ್ತೆ ಮತ್ತೆ ಹೇಳಿಸಿ ಆಡಿದ್ದಕ್ಕೆ ನಿಜದ ಗಿಲೀ­ಟನ್ನು– ಹೊಳಪನ್ನು– ಉಜ್ಜಿ ಉಜ್ಜಿ ತರುವು­ದುಂಟು.

‘ಈತ’ ಕೇಳುತ್ತಾನೆ: ‘ಗುಜರಾತಿನಲ್ಲಿ ನಡೆದ­ದ್ದೇನು?’  ಅದಕ್ಕೆ ‘ಆತ’ ಪ್ರತಿಧ್ವನಿಸುವ ಗೋಲ­ಗುಮ್ಮಟ­ದಂತೆ ಕೇಳುತ್ತಾನೆ: ‘ಇಂದಿರಾ ಸತ್ತ­ಮೇಲೆ ದೆಹಲಿಯಲ್ಲಿ ನಡೆದದ್ದೇನು? ಎಷ್ಟು ಜನರಿಗೆ ಶಿಕ್ಷೆಯಾಗಿದೆ? ಎಷ್ಟು (ಇನ್ನೊಮ್ಮೆ, ಎಷ್ಟುಎಷ್ಟು) ಜನರಿಗೆ ಶಿಕ್ಷೆಯಾಗಿದೆ?’ ಟಿ.ವಿ. ಸ್ಟುಡಿಯೊ ಎಂಬ  ಗುಮ್ಮಟ, ಕರ್ತೃ ಪದದ ಬದ­ಲಾ­­ವ­ಣೆಗೆ ಅವಕಾಶ ಮಾಡಿಕೊಡುತ್ತದೆ. ಭ್ರಷ್ಟಾಚಾರದ ಬಗ್ಗೆಯೂ ಇದು ಹೀಗೆಯೇ.

ಹಲವು ಹೇಯ ಕೃತ್ಯಗಳನ್ನು ವಧೂವರರಂತೆ ಎದುರು ಬದುರು ನಿಲ್ಲಿಸಿ ಯಾರು ಮೊದಲು ಹಾರ ಹಾಕುವವರು ಎಂಬ ನಾಟಕ ನಡೆಯು­ತ್ತದೆ. ಸತ್ತವರು ಸತ್ತರು; ಕಳಕೊಂಡವರು ಕಳಕೊಂಡರು. ಅವರ ಸಂಬಂಧಿಗಳು ನ್ಯಾಯ­ಕ್ಕಾಗಿ ಕಾದು ಕಾದು ನೆರೆಕೂದಲಿನವರಾಗಿ ಮೀಡಿ­ಯಾ­ದಲ್ಲಿ ಕಾಣಿಸಿಕೊಳ್ಳುತ್ತಾರೆ. ಚಾನೆಲ್‌­ನಿಂದ ಚಾನೆಲ್‌ಗೆ ಓಡಾಡುವ ಇವರ ಮುಖ­ಗಳನ್ನು ಇವರ ಸಂಬಂಧಿಗಳು ನೋಡಿ ಸಿಕ್ಕಾಗ ಮೆಚ್ಚುಗೆ ಪಡೆಯುತ್ತವೆ. ‘ನಿಮ್ಮನ್ನ ನಿನ್ನೆ ಟಿ.ವಿ.­ಯಲ್ಲಿ ನೋಡಿದೆ ರೀ’ ಸಜ್ಜನಿಕೆಗಾಗಿ ಪಾರ್ಕಿನಲ್ಲಿ ಕ್ಷಣ ನಿಂತು ಥ್ಯಾಂಕ್ಸ್ ಹೇಳಿ­, ವಿಕ್ಟಿಮ್ಮಿನ ಹೆಂಡತಿಯೊ ಗಂಡನೊ ಮಗನೊ ಮಗಳೊ ಮುಂದುವರೆ­ಯುತ್ತಾರೆ. ಮರೆತುಹೋದ ಸುದ್ದಿ­ಯಲ್ಲ ಎಂಬುದಷ್ಟೇ ಸಮಾಧಾನ.
ಮಾತು ಮಾತು, ಇನ್ನಷ್ಟು ಮಾತು ಹಿಂದಿಯಲ್ಲಿ, ಇಂಗ್ಲಿಷಿನಲ್ಲಿ ಚಾಲಾಕಿನ ಮಾತು. ಅಬ್ಬ! ಕೆಲವೊಮ್ಮೆ ವಿಶ್ಲೇಷಣೆ ಕೂಡಾ. ಮಾತಿನಲ್ಲಿ ಪರಕ್ಕೊಬ್ಬರು/ ಅಪರಕ್ಕೊಬ್ಬರು. ಡಿಸ್ಕಷನ್ನಲ್ಲಿ ಸೈಕಾಲಜಿ ಸೋಷಿಯಾಲಜಿ ಕೂಡಾ.

ಚಾನೆಲ್ 24x7ರಲ್ಲಿ ನಿದ್ದೆಯಿಲ್ಲದೆ ದುಡ್ಡೂ ಮಾಡುವ, ಸದ್ದೂ ಮಾಡುವ ಹಲವು ವಿಚಾರಗಳ ಕಾಕ್‌ಟೈಲ್. ಅದರಲ್ಲಿ ಒಬ್ಬ ಒರಿಜಿನಲ್ ಕೆದರಿದ ಕೂದಲಿನ ಅಡ್ಡಮಾತಿನವ, ಇನ್ನೊಬ್ಬ ಚಿವುಟುವ ಚುಟುಕಿನಲ್ಲಿ ಮಾತೃಶ್ರೀಗೆ ಮೆಚ್ಚಿಗೆಯಾದವ, ಮತ್ತೊಬ್ಬ ಎಲ್ಲರಿಗೂ ಗೊತ್ತಿ­ರು­­ವಂತೆ ಅಸಭ್ಯ ಮಾತಿಗೆ ಪೇಟೆಂಟ್ ಪಡೆದವ. ಇವೆಲ್ಲದರ ಮಧ್ಯೆ ನಾವೂ ಉಸಿರಾಡಲೆಂದು ಉಣ್ಣೆ ಬಟ್ಟೆಯನ್ನು ತೊಟ್ಟ  ಸರಸಿಯೊಬ್ಬನ ಜಾಹೀ­­ರಾತು. ಅಥವಾ ಸಿಮೆಂಟನ್ನು ಇದು ಹೂವೇ ಎನ್ನುವಂತೆ ಮಾರುವ ಆಜಾನುಬಾಹು. ಅವನ ದಪ್ಪದ ಮಾತು.

ಆಡಿದ ಎಲ್ಲ ಮಾತು ಆಡಲೇ ಬೇಕಾದ ಮಾತು ಎನ್ನಿಸಿದಾಗ, ಯಾವುದೂ ನಿಜವಲ್ಲ ಎನ್ನಿಸಿದಾಗ, ಕಿವಿ ಗವ್ವೆನ್ನುವಾಗ, ಆಡಬೇಕಾದ ಮಾತು ಹೊಳೆದಾಗಲೂ ಬಾಯಿಕಟ್ಟಿದಂತೆ ಆದಾಗ, ಏನೂ ಹೇಳದೆ ಹೇಳಿದಂತೆ ಭಾಸ­ವಾಗುವ ಇಂಗ್ಲಿಷ್ ಭಾಷೆ ನಮಗೆ ನೆರವಾಗು­ತ್ತದೆ. ಆತನಾಗಲೀ ಈತನಾಗಲೀ ನಿಜದ ಮಾತಿಗೆ ಕೊಂಚ ಹತ್ತಿರವೂ ಬಂದಿರುವುದಿಲ್ಲ. 

ಈ ಸಜ್ಜನಿಕೆಯ ಸುತ್ತಾಟದ ಗೇಮನ್ನು ಬಿಟ್ಟು ಮತಾನಾಡುವ ಕೆಲವರೂ ಇದ್ದಾರೆ. ಅವರೇ ಬಿಳಿಟೋಪಿಯನ್ನು  ಧರಿಸಿದ ಆಮ್ ಆದ್ಮಿ. ಹೇಳಿದ್ದೇ ಹೇಳುವ, ಭ್ರಷ್ಟಾಚಾರದ ಬಗ್ಗೆ ಮಾತಾ­­ಡುವ ಆಮ್ ಆದ್ಮಿಗಳಾದ ಇವರನ್ನು ದಂಗೆಕೋರರೆಂದು ನಾವು ತಿಳಿದಿದ್ದೆವು. ಆದರೆ ಆಮ್ ಆದ್ಮಿ ಪಕ್ಷ ಕಾಣಿಸಿಕೊಂಡ ಕ್ಷಣದಿಂದ   ತಲೆಗಿಂತ ಅಗಲವಾದ ಬಿಳಿ ಟೋಪಿ ಹಾಕಿ­ಕೊಂಡು ಪೊರಕೆ ಹಿಡಿದವರನ್ನು ನಾವು ಗಮನಿ­ಸಲು ಆರಂಭಿ­ಸಿದ್ದೇವೆ. ತೋರಿದ್ದನ್ನೇ ತೋರಿ ಬೋರಾ­ಗಿದ್ದ ಮೀಡಿಯಾಗೆ ಇವರು ಹೊಸ ‘ಆಗಂತುಕ’­ರಾದರು. ಮೀಡಿಯಾ ಇಂತಹ ‘ಅನ್ಯ’ಕ್ಕಾಗಿ ‘ಆಗಂತುಕ’ ವಿಶೇಷಕ್ಕಾಗಿ ಹಸಿದಿರು­ತ್ತದೆ. ಅವರು ತಮ್ಮ ಬುಡಕ್ಕೇ ಅಪಾಯವೆಂದು ಗೊತ್ತಾದಾಗ ಹಿತ ಹಾಸ್ಯವಾದದ್ದು ಅಪಹಾಸ್ಯ­ವೆನ್ನಿಸುವಂತೆ ಅಬ್ಬರದ ಚಿತ್ರವಾಗುತ್ತದೆ.

ನಾವು ಗಾಂಧಿವಾದದಿಂದ ಪ್ರೇರಿತರಾದವರು ಎಂದು ಆಮ್ ಆದ್ಮಿ ಪಕ್ಷ ಹೇಳುತ್ತದೆ. ಇದರ ಹಿಂದಿರುವ ಒಂದು ಸೈದ್ಧಾಂತಿಕ ವಿಷಯವನ್ನು ವಿಶ್ಲೇಷಿಸುವುದು ನನ್ನ ಉದ್ದೇಶ. ಗಾಂಧೀಜಿ ಬ್ರಿಟಿಷರ ಪಾಲಿಗೆ ಯಾವತ್ತೂ ಅನೀರಿಕ್ಷಿತವಾದ ಗುಣಗಳನ್ನು ಪಡೆದಿದ್ದವರು. ಗಾಂಧಿ ತಾನಿರುವ ಸರ್ಕಾರದ ವಿನಮ್ರ ಪ್ರಜೆಯೆಂದೇ ತಿಳಿದಿದ್ದರು. ಜೈಲಿಗೆ ಹಾಕಿದವನ ಕಾಲಿಗೆ ಮೆಟ್ಟು ಹೊಲೆದು ಕೊಡುತ್ತಿದ್ದರು. ಅದೇ ಕಾಲಕ್ಕೆ ತನ್ನ ದೃಷ್ಟಿ­ಯಲ್ಲಿ ಅನ್ಯಾಯವೆಂದು ತೋರುವುದನ್ನು ವಿರೋಧಿ­ಸಲೂ ಅವರು ಅಂಜುತ್ತಿರಲಿಲ್ಲ. ಸತ್ಯಾಗ್ರಹ­ವೆಂದು ಗಾಂಧಿ ಕರೆಯುತ್ತಿದ್ದ ಪ್ರತಿಭಟನೆ ಕೆಲವೊಮ್ಮೆ ವ್ಯವಸ್ಥೆಯನ್ನು ಬುಡ­ಮೇಲು ಮಾಡುವ ಉದ್ದೇಶವನ್ನು ಹೊಂದಿರು­ತ್ತಿತ್ತು. ಮನುಷ್ಯ ಸತ್ಯವಾದದ್ದನ್ನು ಅರಿಯ­ಬಲ್ಲವನು. ಸರ್ಕಾರದ ನಿಯಮಗಳಿಗೆ ಹೆದರಿ ಮಾತ್ರ ಅವನು ಒಳ್ಳೆಯವನಾಗಿರುತ್ತಾನೆ ಎನ್ನು­ವುದು ಎಲ್ಲ ಕಾಲಕ್ಕೂ ನಿಜವಲ್ಲ. ಅಂದರೆ ಒಂದು ಕಾನೂನಿನ ವ್ಯವಸ್ಥೆಯ ಕಟ್ಟುಪಾಡುಗಳು ಇಲ್ಲದಿದ್ದರೂ ಮನುಷ್ಯ ಒಳ್ಳೆಯವನಾಗಿರಬಲ್ಲ. ಮನುಷ್ಯ­ನನ್ನು ಹಲವು ಸಾರಿ ದುಷ್ಟನನ್ನಾಗಿ ಮಾಡು­ವುದು ವ್ಯವಸ್ಥೆಯ ಅನೈಸರ್ಗಿಕ ಕಟ್ಟು­ಪಾಡು­ಗಳು. ಇದು ಮೂಲದಲ್ಲಿ ‘ಅನಾರ್ಕಿಸ್ಟರ’ ವಾದ. ಅಡಿಗರ ಸಾಲೊಂದನ್ನು ನೆನಪಿಸಿಕೊಳ್ಳು­ವುದಾದರೆ ‘ಒಳ್ಳೆತನ ಅಸಹಜವೇನಲ್ಲ’.

ಗಾಂಧಿಯಲ್ಲಿ ಬಹಳ ಸತ್ವಪೂರ್ಣವಾದ ಅಂಶವೆಂದರೆ ‘ಅರಾಜಕತೆ’; ಟಾಲ್‌ಸ್ಟಾಯ್ ನಂಬಿದ್ದ ಅನಾರ್ಕಿ. ಇಲ್ಲಿ ಸೇರಿಸಲೇಬೇಕಾದ ಮಾತೆಂದರೆ ಈ ಅರಾಜಕತೆ ಪೂರ್ಣವಾಗಿ ಅಂಹಿಸಾ­ತ್ಮಕವಾಗಿರಬೇಕಾಗುತ್ತದೆ. ಎದುರಾಳಿ­ಯನ್ನು ಗೆಲ್ಲಲ್ಲೆಂದು ಸತ್ಯಾಗ್ರಹಿ ಹಿಂಸೆಯನ್ನು ಅನುಭವಿಸಲು ತಾನೇ ತಯಾರಾಗಿರುತ್ತಾನೆ. 4 ಡಿಗ್ರಿ ಸೆಂಟಿಗ್ರೇಡ್ ಚಳಿಯಲ್ಲಿ ರಸ್ತೆಯ ಮೇಲೆ ರಾತ್ರಿಯಿಡೀ ಮುಖ್ಯಮಂತ್ರಿ ಕೇಜ್ರಿವಾಲ್ ಮಲಗು­­ತ್ತಾನೆ. ಇಂತಹ ಚಳಿಯಲ್ಲಿ ಮಲಗು­ವುದು ‘ನಾಟಕ’ವೆನ್ನುವುದಾದರೆ ಹಾಗೆಯೇ ತಿಳಿ­ಯಿರಿ ಎನ್ನುತ್ತಾನೆ. ನಿಜವಾದ ಸತ್ಯಾಗ್ರಹಿ ಜನ­ರಿಂದ ಮುಖ ತಿರುಗಿಸಿರುತ್ತಾನೆ. ಒಳಮಾತು ಕೇಳು­ವು­ದಾದರೆ ಕೇಳಲಿ ಎನ್ನುವುದು ಅವನ/ಳ ಭರವಸೆ.

ಗಾಂಧಿ ತನ್ನ ಇಡೀ ಜೀವನವನ್ನು ಅತ್ಯಂತ ನಿಯಮ­ಬದ್ಧವಾಗಿಯೂ ಹಾಗೆಯೇ ಕಾನೂ­ನಿನ ವಿರೋಧಿಯಾಗಿಯೂ ನಡೆದುಕೊಂಡರು. ಆಭಾಸ­ದಂತೆ (ಅಸಂಗತವೆಂಬಂತೆ) ಕಾಣುವ ಸತ್ಯನಿಷ್ಠೆ ಇದು. ಸೋಲಿನಲ್ಲೂ ಗೆಲ್ಲುವಾತ ‘ಸತ್ಯಾಗ್ರಹಿ’. ಮರಗಳನ್ನು ಕಡಿಯಕೂಡದೆಂದು ಅವುಗಳನ್ನು ಅಪ್ಪಿಕೊಳ್ಳುವ ಚಳವಳಿಯಂತೆಯೇ ರೈತರು ಗಣಿಪ್ರದೇಶದಲ್ಲಿ ಮೈಚೆಲ್ಲಿ ಮಲಗಿ ಗಣಿ ನಿರ್ಮಾಣಕ್ಕೆ ವಿರೋಧ ತೋರಬಹುದಿತ್ತು. ಅದಿರಿನ ಲಾರಿಗಳನ್ನು ಅಡ್ಡಗಟ್ಟಬಹುದಿತ್ತು. ಇವೆಲ್ಲವೂ ಗಾಂಧಿಯ ಕಾನೂನು ಬಾಹಿರವಾದ ಅದರ ಬದುಕಿನ ಮೂಲದಲ್ಲಿರುವ ನಿಯಮ­ವನ್ನು ಎತ್ತಿ ಹಿಡಿಯುವ ಕಾರ್ಯಾಚರಣೆಯಾಗಿ ಇರುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೂ ಸತ್ಯಾಗ್ರಹಗಳು ಮುಂದುವರಿದು ನಮ್ಮ ಪ್ರಜಾ­ತಾಂತ್ರಿಕ ವ್ಯವಸ್ಥೆಯನ್ನು ಬಲಪಡಿಸಿತು. ಈ ಕಾನೂನು ಭಂಗ ಚಳವಳಿಗಳ ದೃಷ್ಟಾರರು ರಾಮ­­ಮನೋಹರ ಲೋಹಿಯಾ ಆಗಿದ್ದರು. ನಮ್ಮ ಕರ್ನಾಟಕದಲ್ಲಿ ಈ ಬಗೆಯ ಅರಾಜಕತೆ­ಯಂತೆ ಕಾಣುವ ಕಾನೂನು ಭಂಗವನ್ನು ನಡೆಸಿದವರು ಎಂ.ಡಿ. ನಂಜುಂಡಸ್ವಾಮಿ­ಯವರು.

ಥಟ್ಟನೆ ನೆನಪಾಗುವ ಕೆಲವು ಉದಾಹರ­ಣೆ­ಗಳನ್ನು ಇಲ್ಲಿ ಹೇಳಬಹುದೆನಿ­ಸು­ತ್ತದೆ. ಸೋಮ­ವಾರದ ದಿನಗಳು ಹಳ್ಳಿಗಳಿಗೆ ರಜೆ ಎಂದು ರೈತ ಚಳವಳಿ ಘೋಷಿಸಿ ಯಾವ ಸರ್ಕಾರಿ ಅಧಿಕಾರಿ­ಯೂ ಗ್ರಾಮದೊಳಗೆ ಬರದಂತೆ ನೋಡಿ­ಕೊಂಡಿದ್ದರು. ಪರಿಸರದ ನಾಶಕ್ಕೆ ಕಾರಣ­ವಾಗುವ ನೀಲಗಿರಿ ಮರಗಳ ಸಸಿಗಳನ್ನು ಕಿತ್ತೊಗೆ­ಯ­ಲಾಯಿತು. ಅಮೆರಿಕ ದೇಶದ ‘ಕೆಂಟುಕಿ ಫ್ರೈಡ್ ಚಿಕನ್’ ಮಳಿಗೆಗಳಿಗೆ ಅವುಗಳು ತೆರೆಯುವ ಮೊದಲೇ ನುಗ್ಗಿ ಪಿಠೋಪಕರಣ­ಗಳನ್ನು ನಾಶ­ಮಾಡುವ ಅತಿಗೂ ಈ ಚಳವಳಿ ಹೋದದ್ದಿದೆ. ಈ ಚಳವಳಿಯಲ್ಲಿ ಗಾಂಧಿಯ ‘ಅನಾರ್ಕಿಸ್ಟ್’ ಗುಣಗಳಲ್ಲಿ ಕೆಲವು ಕಂಡರೂ ವೈಯಕ್ತಿಕವಾಗಿ ನಾನಿದಕ್ಕೆ ವಿರೋಧವಾಗಿದ್ದೆ. ಈಗ ನೋಡಿದರೆ ಈ ವಿರೋಧ ನಕಾರಾತ್ಮಕ­ವಾಗದೆ ಸಕಾರಾತ್ಮಕ­ವಾಗಿರಬೇಕಿತ್ತು ಎಂದು ನನಗನ್ನಿಸುತ್ತಿದೆ.

70ರ ದಶಕದ ಒಂದು ಘಟನೆ ನೆನಪಾಗು­ತ್ತಿದೆ. ದೆಹಲಿಯಲ್ಲಿ ನಾನು ಗೆಳೆಯ ಕಮಲೇಶ್ ಜೊತೆಗೆ ಸುಪ್ರೀಂ ಕೋರ್ಟಿಗೆ ಹೋಗಿದ್ದೆ. ಅಲ್ಲೊಂದು ಕೇಸು ನಡೆಯುತ್ತಿತ್ತು. ಲೋಹಿಯಾ ಸಮಾಜವಾದಿಗಳು ದೇಶದೆಲ್ಲೆಡೆ ಭೂ­ಗ್ರಹಣ ಚಳವಳಿಯನ್ನು ನಡೆಸಿದ್ದರು. ಮಧುಲಿ­ಮಯೆ ಈ ಚಳವಳಿಯಲ್ಲಿ ನಿರತರಾದು­ದ­ಕ್ಕಾಗಿ ಬಂದಿತ­ರಾಗಿ­ದ್ದರು. ಜಸ್ಟಿಸ್ ಹಿದಾಯ­ತುಲ್ಲಾ ಅವರ ಎದುರು ಕೇಸು ಇತ್ತು. ಪೈಜಾಮ ಮತ್ತು ಜುಬ್ಬಾದಲ್ಲಿದ್ದ ಮಧುಲಿಮಯೆ ತನ್ನ ಪರವಾಗಿ ಒಬ್ಬ ವಕೀಲನನ್ನೂ ಇಟ್ಟುಕೊಳ್ಳದೆ ತಾವೇ ವಾದಿಸಿದರು.

ಜಸ್ಟೀಸ್ ಹಿದಾಯತುಲ್ಲಾ ಗಂಭೀರವಾಗಿ ಮಧುಲಿಮಯೆ ಅವರನ್ನುದ್ದೇಶಿಸಿ ‘ನಿನ್ನನ್ನು ನಾನು ಬಿಡುಗಡೆ ಮಾಡುತ್ತೇನೆ’ ಎಂದರು. ಆದರೆ ಮಧುಲಿಮಯೆ ಅವರಿಗೆ ಬಿಡುಗಡೆ ಬೇಕಾಗಿರಲಿಲ್ಲ. ಭೂಗ್ರಹಣ ತಪ್ಪೇನೂ ಅಲ್ಲ ಎಂದು ನ್ಯಾಯಮೂರ್ತಿಗಳು ತೀರ್ಪು ನೀಡಬೇಕೆಂಬುದು ಅವರ ವಾದವಾಗಿತ್ತು.

‘ನೀವು ನ್ಯಾಯವಾದಿಗಳು ಯಾರದಾದರೂ ಆಸ್ತಿಯ ಹಕ್ಕು ಮೊಟಕಾದರೆ ಅದನ್ನು ರಕ್ಷಿಸಲು ಓಡಿ ಬರುತ್ತೀರಿ. ಆದರೆ ಜೀವನದ ಹಕ್ಕಿಗಾಗಿ ಯಾರೂ ಉಳದ ಭೂಮಿಯನ್ನು ಒಬ್ಬ ಹಸಿದ ರೈತ ತನ್ನ ಜೀವನೋಪಾಯಕ್ಕಾಗಿ ಬಳಸುವು­ದನ್ನು ನೀವು ನ್ಯಾಯಬಾಹಿರ ಎನ್ನುತ್ತೀರಿ. ಅಂದರೆ ನಮ್ಮ ರಾಜ್ಯಾಂಗ, ಜೀವಿಸುವ ಹಕ್ಕನ್ನು ಕೊಡುವುದಿಲ್ಲ ಎಂದಂತಾಯಿತಲ್ಲವೇ?’ ಎಂದು ಮಧುಲಿಮಯೆ ತಮ್ಮ ವಾದ ಮಂಡಿಸಿದಾಗ ಹಿದಾಯ­­ತುಲ್ಲಾ ನಸುನಗುತ್ತಲೆ ತಮ್ಮ ಮಿತಿ­ಯನ್ನು ಅವತ್ತು ಹೇಳಿಕೊಂಡದ್ದು ಇವತ್ತು ನನಗೆ ನೆನಪಾಗುತ್ತದೆ. ಜೀವಿಸುವ ಹಕ್ಕನ್ನು ಎಲ್ಲರಿಗೂ ಕೊಡುವುದಕ್ಕಾಗಿ ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿಯನ್ನು ಕೊಡುವ ವ್ಯವಸ್ಥೆ ಈಗ ಜಾರಿಗೆ ಬಂದಿದೆ. ಆದರೆ ಇದನ್ನು ನೋಡುವು­ದಕ್ಕೆ ಮಧುಲಿಮಯೆ ಅವರಾಗಲಿ, ಹಿದಾಯತು­ಲ್ಲಾ­ರಾಗಲಿ ಬದುಕಿಲ್ಲ.

ಆಮ್ ಆದ್ಮಿ ಪಾರ್ಟಿ ನಮಗೆಲ್ಲರಿಗೂ ಗೊತ್ತಿರುವ ಸತ್ಯವನ್ನು ಯಾವ ಮುಜುಗರವೂ ಇಲ್ಲದೆ ಜನರ ಮುಂದಿಡುತ್ತಿದೆ. ಕನಸಿನ ಮೊರೆ­ಹೊಕ್ಕು ಅಥವಾ ಸದ್ವರ್ತನೆಯ ಮೊರೆಹೊಕ್ಕು ಆಡುವ ಮಾತು, ಮಾಡುವ ಚರ್ಚೆ, ಸಂಸತ್‌­ನಲ್ಲಿ ನಡೆಸುವ ಕಿರುಚಾಟ,  ಇವೆಲ್ಲದರ ನಡುವೆ ಕಾನೂನು ಭಂಗವನ್ನು ಮಾಡಿ ಸತ್ಯವನ್ನು ಸ್ಥಾಪಿಸುವ ಕೇಜ್ರಿವಾಲರ ನವಗಾಂಧಿ ನೀತಿಗಳನ್ನು ನಾವು ಪರಿಶೀಲಿಸಬೇಕಾದರೆ ಇದರ ಹಿಂದೆ ಒಂದು ದೊಡ್ಡ ಪರಂಪರೆಯೇ ಇದೆ ಎಂಬು­ದನ್ನೂ ಅರ್ಥ ಮಾಡಿಕೊಳ್ಳಬೇಕು. ಹಲವು ತಪ್ಪು­ಗಳನ್ನು ಮಾಡಿದ ಸಣ್ಣವರು,  ಏನೋ ದೊಡ್ಡ­­ದನ್ನು ಮಾಡಲು ಹೋಗಿ ಸೋತ ಆದರ್ಶ­ವಾದಿಗಳೂ ಭಾರತದಲ್ಲಿ ಆಗಿ ಹೋಗಿದ್ದಾರೆ.

ಆಮ್ ಆದ್ಮಿ ಪಾರ್ಟಿ ಬಹಳ ಅರ್ಥಪೂರ್ಣ­ವಾದ ಚಳವಳಿ. ಆದರೆ ಅಷ್ಟೇ ಅರ್ಥಪೂರ್ಣ­ವಾದ ಪಕ್ಷವಾಗಲೂ ಸಮಯ ಬೇಕು, ಮಾತಿನ ಸಂಯಮ ಬೇಕು, ಮೌನದಲ್ಲಿ ಬೆಂದ ಕಾವೂ ಇರಬೇಕು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT