ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಮತ್ತು ಅಸ್ಪೃಶ್ಯತೆ

ಅಕ್ಷರ ಗಾತ್ರ

ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿದೆ. ಹಳ್ಳಿಗರಿಗೆ ಇದೊಂದು ಪ್ರಮುಖ ಘಟನೆ ಎಂಬುದರಲ್ಲಿ ಎರಡು ಮಾತಿಲ್ಲ. ನಮ್ಮ ನಾಡಿನಲ್ಲಿ ಗ್ರಾಮೀಣ  ಪ್ರದೇಶವೆಂದರೆ ಅದೊಂದು ಸಾಮಾಜಿಕ– ಆರ್ಥಿಕ ಘಟಕ. ಅನೇಕ ಜಾತಿ, ಉಪಜಾತಿಗಳಿಂದ ಕೂಡಿದ ಹಾಗೂ ನಾನಾ ಸ್ತರದ ಸಂಪತ್ತಿನ ವಿಂಗಡಣೆಯಿಂದ ಕೂಡಿದ ಒಂದು ಜೀವನವ್ಯವಸ್ಥೆ  ಅಲ್ಲಿ ಕಂಡುಬರುತ್ತದೆ.

ಮೇಲ್ನೋಟಕ್ಕೆ ಇದು ವೈವಿಧ್ಯದಿಂದ ಕೂಡಿರುವಂತೆ ಕಂಡರೂ ಅದರ ಅಂತರಂಗ ತರತಮಭೇದಗಳ ಅಸಮಾನತೆಯೇ ಆಗಿದೆ. ಮೇಲು ಕೀಳುಗಳೆಂಬ ಶ್ರೇಣೀಕೃತ ಜಾತಿ ವ್ಯವಸ್ಥೆ ಇಲ್ಲಿದೆ. ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳು ಅನೇಕ ಬಗೆಯ ವೈರುಧ್ಯಗಳನ್ನು ಗ್ರಾಮೀಣ ಬದುಕಿನಲ್ಲಿ, ತನ್ಮೂಲಕ ನಗರ ಪ್ರದೇಶದಲ್ಲಿ ಹುಟ್ಟುಹಾಕಿವೆ.

ಹಿಂದೂ ಧರ್ಮ ಜಗತ್ತಿನ ಇತರ ಧರ್ಮಗಳಂತೆ ಏಕವ್ಯಕ್ತಿ ಕೇಂದ್ರಿತ ಅಲ್ಲ; ಏಕತಾನತೆಯಿಂದಲೂ ಕೂಡಿಲ್ಲ. ಈ ಅಂಶ ಸಕಾರಾತ್ಮಕವಾಗಿ ಕಂಡುಬಂದರೂ ಅಸ್ಪೃಶ್ಯತೆಯಂಥ ಹೀನ ಆಚರಣೆಯನ್ನೂ ತನ್ನೊಳಗೆ ಹುದುಗಿಸಿಕೊಂಡಿದೆ ಎಂಬುದೂ ಅಷ್ಟೇ ಸತ್ಯ. ಇಂಥ ಆಚರಣೆಯ ವಿರುದ್ಧ ಬಸವಣ್ಣ ಮೊದಲಾಗಿ ಅನೇಕ ಕ್ರಾಂತಿಕಾರಕ ವ್ಯಕ್ತಿಗಳು ಧ್ವನಿ ಎತ್ತಿರುವ ಇತಿಹಾಸ ನಮ್ಮಲ್ಲಿದೆ. ಆದರೂ, ಒಟ್ಟು ಸಾಮಾಜಿಕ ವ್ಯವಸ್ಥೆಯಲ್ಲಿ ಹೇಳಿಕೊಳ್ಳುವಂಥ ಮಹತ್ತರ ಬದಲಾವಣೆಗಳೇನೂ ಆಗಿಲ್ಲ. ಅಸ್ಪೃಶ್ಯತಾ ಆಚರಣೆ ಇಂದಿಗೂ ತನ್ನ ಕಬಂಧ ಬಾಹುಗಳನ್ನು ಚಾಚಿಯೇ ಇದೆ.

ತರಾವರಿ ಜಾತಿಗಳು ಮತ್ತು ಅವುಗಳ ಆಚರಣೆ, ಜೀವನ ವಿಧಾನ, ಸಂಸ್ಕೃತಿ ಈ ಒಂದೊಂದಕ್ಕೂ ಭಿನ್ನತೆ ಇದೆ. ಆದರೆ ಅವು ಇತಿಹಾಸದ ಯಾವುದೋ ಒಂದು ಕಾಲಘಟ್ಟದಲ್ಲಿ ಮೊಳಕೆಯೊಡೆದು ಕ್ರಮೇಣ ಚಿಗುರಿ, ಇಂದು ಹೆಮ್ಮರವಾಗಿ ನಿಂತಿವೆ ಎಂಬುದೂ ಸತ್ಯ. ಇವುಗಳೊಂದಿಗೆ ಅನೇಕ ಬಗೆಯ ಮೌಢ್ಯಗಳೂ ಮನೆಮಾಡಿಕೊಂಡಿವೆ. ಇವೆಲ್ಲದರ ಹಿಂದೆ ಬಡತನ ಮತ್ತು ಅಜ್ಞಾನ ವಿಜೃಂಭಿಸುತ್ತಿದೆ.  ಅಸ್ಪೃಶ್ಯತೆ ಹೆಡೆಯೆತ್ತಿ ನಿಂತಿದೆ.

ಇತರ ಜಾತಿಗಳಲ್ಲಿ ಒಬ್ಬರನ್ನೊಬ್ಬರು ಮುಟ್ಟಿಸಿಕೊಳ್ಳುವಷ್ಟರ ಮಟ್ಟಿಗೆ ಸಹ್ಯತೆ ಇದೆ. ಆದರೆ ದಲಿತರನ್ನು ಸಹಿಸಿಕೊಳ್ಳುವುದಕ್ಕೆ ಸಿದ್ಧವಿರದ ಘನ ಮೌಢ್ಯದ ಮತ್ತು ಅಮಾನವೀಯ ಅಸ್ಪೃಶ್ಯತೆ ಆಚರಣೆ ಇಂದಿಗೂ ಗ್ರಾಮೀಣ ವಲಯದಲ್ಲಿ ಜೀವಂತವಾಗಿದೆ (ಅಲ್ಲಲ್ಲಿ ಈ ಆಚರಣೆ ಸಡಿಲವಾಗುತ್ತಿರುವುದು ಇತ್ತೀಚಿನ ಬೆಳವಣಿಗೆ). ದಲಿತರ ದೇವಾಲಯ ಪ್ರವೇಶ ಸಾಧ್ಯವಾಗಿಲ್ಲ. ಗ್ರಾಮೀಣ ಭಾಗದ ಹೋಟೆಲುಗಳಲ್ಲಿ ಪ್ರವೇಶ ಮತ್ತು ತಿಂಡಿ-ತೀರ್ಥಗಳ ಸರಬರಾಜಿನಲ್ಲಿ ಸಹಜತೆ ಇಲ್ಲ. ಊರಿನ ಕೆರೆ ನೀರನ್ನು ಸಹಜವಾಗಿ ಬಳಸಲಾಗುತ್ತಿಲ್ಲ. ಊರೊಟ್ಟಿನ ಕೆಲಸ ಕಾರ್ಯಗಳಲ್ಲಿ ದಲಿತರು ಭಾಗವಹಿಸುವುದು ಕಂಡುಬರುತ್ತದಾದರೂ ಇತರ ಜಾತಿಗಳೊಂದಿಗೆ ಸಮಾನತೆ ಇಲ್ಲ; ಊರಿನಲ್ಲಿ ನಡೆಯುವ ದೇವರ ಉತ್ಸವಗಳಲ್ಲಿ ಅವರದೇನಿದ್ದರೂ ಪರಂಪರಾಗತ ತಮಟೆ ಬಾರಿಸುವ ಕಾಯಕ. ಆದರೆ, ದಲಿತರ ಕೇರಿಗಳಿಗೆ ಈ ಉತ್ಸವ ಬರುವುದಿಲ್ಲ, ಮೆರವಣಿಗೆ ಹೋಗುವುದಿಲ್ಲ. ಪೂಜಾರಿಗಳು ಅವರಿಂದ ಹಣ್ಣು ಕಾಯಿ ಸ್ವೀಕರಿಸುವುದಿಲ್ಲ. ಅಷ್ಟೇ ಅಲ್ಲ, ಮೇಲ್ಜಾತಿಯ ಯಾವ ಪೂಜಾರಿಯೂ ಅಸ್ಪೃಶ್ಯರ ಮನೆಯ ಮದುವೆ, ಗೃಹಪ್ರವೇಶ ಮುಂತಾದ ಶುಭ ಕಾರ್ಯಗಳಲ್ಲಿ ಭಾಗವಹಿಸುವುದಿಲ್ಲ. ಸಹಪಂಕ್ತಿ ಭೋಜನವಂತೂ ಇಲ್ಲವೇ ಇಲ್ಲ.

ಇಂಥ ಅನೇಕ ಸಂಗತಿಗಳು ಗ್ರಾಮೀಣ ವಲಯಗಳಲ್ಲಿ ಸಹಜ ಆಚರಣೆಗಳಾಗಿವೆ. ಇದೇ ಸರಿ ಎಂಬ ಮನಸ್ಥಿತಿ ಬಹುಪಾಲು ಗ್ರಾಮೀಣ ದಲಿತೇತರರಲ್ಲಿ ಇನ್ನೂ ಪ್ರಬಲ ನಂಬಿಕೆಯಾಗಿದೆ. ಈ ಬಗೆಯ ನಡವಳಿಕೆಗಳನ್ನು ಕಿಂಚಿತ್ತೂ ಪ್ರಶ್ನಿಸದೆ, ಇದನ್ನೇ ಒಪ್ಪಿಕೊಂಡು ಗ್ರಾಮೀಣ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿಕೊಳ್ಳುವುದು ಅಜ್ಞಾನದ ಮಾತು. ಆದ್ದರಿಂದ ಈ ವಾತಾವರಣವನ್ನು ಭೇದಿಸಬೇಕಾದ ಅನಿವಾರ್ಯ ಇದ್ದೇ ಇದೆ.

21ನೇ ಶತಮಾನದ ಪ್ರಾರಂಭದಲ್ಲಿರುವ ಈ ಜಗತ್ತಿನಲ್ಲಿ ಇನ್ನೂ ಅಸ್ಪೃಶ್ಯತೆಯ ಅವಿವೇಕದ ಆಚರಣೆಗಳಿರುವುದು ಅಮಾನವೀಯ ಮತ್ತು ನಾಚಿಕೆಗೇಡು. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು 10ನೇ ಶತಮಾನದಲ್ಲೇ ಪಂಪ ಹೇಳಿರುವಂಥ ಉದಾತ್ತದ ಮಾತು ಮತ್ತು ‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ’ ಎಂಬ ಬಸವಣ್ಣನ ದಿವ್ಯ ತಿಳಿವಳಿಕೆಯ ಮಾತಿದ್ದರೂ ಆ ಬಗ್ಗೆ ಪರಿವೆಯೇ ಇಲ್ಲದೆ ಕೇವಲ ಜಾತಿ ಕೂಪಗಳಲ್ಲಿ ಅಡಗಿ ಕುಳಿತು ‘ಜಾತಿ ಪಾವಿತ್ರ್ಯ’ವನ್ನು ಉಳಿಸುತ್ತೇವೆಂದು ಮಠಾಧೀಶರೂ, ಜಾತಿ ಮುಖಂಡರೂ ಆಗಿಂದಾಗ್ಗೆ ಪ್ರಲಾಪಿಸುತ್ತಾರೆ.

ಇಂತಹ ವಾಸ್ತವಿಕ ಪರಿಸ್ಥಿತಿಯಲ್ಲಿ ನಮ್ಮ ಗ್ರಾಮಗಳ ನೈಜ ಅಭಿವೃದ್ಧಿ ಎಷ್ಟು ಸಾಧ್ಯ ಎಂಬುದು ಯೋಚಿಸಬೇಕಾದ ಸಂಗತಿ. ಈ ಸಂದರ್ಭದಲ್ಲಿ, ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯೂ ‘ನಾನು ಜಾತೀಯತೆ ಮಾಡುವುದಿಲ್ಲ. ಅಸ್ಪೃಶ್ಯತಾ ಆಚರಣೆಯ ವಿರುದ್ಧ ಧ್ವನಿ ಎತ್ತುತ್ತೇನೆ’ ಎಂಬ ಮನಸ್ಥಿತಿ  ಹೊಂದಿರುವುದು ಆರೋಗ್ಯಕರವಾದುದು. ಸಾಧ್ಯವಾದರೆ, ಈ ಘೋಷಣಾ ವಾಕ್ಯವನ್ನು ತಮ್ಮ ಪ್ರಚಾರ ಕರಪತ್ರಗಳಲ್ಲಿ ಅಚ್ಚು ಹಾಕಿಸುವ ಮೂಲಕ, ಹೊಸದೊಂದು ನೋಟವನ್ನು ಗ್ರಾಮೀಣ ಪ್ರದೇಶಗಳಲ್ಲಿ ಆಂಶಿಕವಾಗಿಯಾದರೂ ಬಿತ್ತಲು ಪ್ರಯತ್ನಿಸುವುದು ಸರಿಯಾದ ಕ್ರಮ.

ಭಾರತೀಯರಾದ ನಾವು ನಾನಾ ಕಾರಣಗಳಿಂದ, ನಾನಾ ಜಾತಿ ಗುಂಪುಗಳಾಗಿ ಒಡೆದು ‘ಜಾತಿಕೆಟ್ಟು ಹೋಗಿದ್ದೇವೆ’. ನಮ್ಮ ನಿಜವಾದ ಜಾತಿ ‘ಮನುಷ್ಯ ಜಾತಿ’. ವಿಶ್ವಮಾನವತೆ ನಮ್ಮ ಧರ್ಮ. ವಿಶ್ವಮಾನವರಾಗಿ ಅರಳಬೇಕಾದುದು ಮಾನವತೆಯ ಮರ್ಮ. ಕನಕದಾಸ, ಕುವೆಂಪು ಅವರು ಹೇಳಿದ್ದು ಇದನ್ನೇ.  ಅಂಬೇಡ್ಕರ್ ಪ್ರತಿಪಾದಿಸಿದ್ದೂ ಇದನ್ನೇ. ಹೀಗಾಗಿ ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ನುಡಿಯಂತೆ ನಡೆದು ನೈಜ ಗ್ರಾಮೀಣ ಬದುಕಿಗೆ ಮುನ್ನುಡಿ ಬರೆಯಬೇಕು. ಅದಕ್ಕೊಂದು ಅಪೂರ್ವ ಅವಕಾಶ ಈ ಗ್ರಾಮ ಪಂಚಾಯಿತಿ ಚುನಾವಣೆ. ಹೊಸತನದ ಹೂವು ಅರಳಿಸಲು ಗ್ರಾಮೀಣರು ಈ ಅವಕಾಶವನ್ನು ಬಳಸಿಕೊಳ್ಳಬೇಕು. ‘ನಾವೆಲ್ಲರೂ ಒಂದು’ ಎಂಬ ಭಾರತವನ್ನು ಕಟ್ಟಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT