ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನಪ್ರೀತಿಯ ಉಪಾಧ್ಯ

Last Updated 5 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಳಗಾವಿಯ ಸಾಹಿತ್ಯ ಪರಿಸರದಲ್ಲಿ ರವಿ ಉಪಾಧ್ಯ ತಮ್ಮ ಹೆಸರಿಗೆ ತಕ್ಕಂತೆ ಬೆಳಕಿನ ಕಿಡಿಯಂತಿದ್ದ ಹಿರಿಯ ಕವಿ.   

ಹಿರಿಯರನ್ನೂ ಕಿರಿಯರನ್ನೂ ಏಕರೀತಿಯ ಪ್ರೀತಿಯಿಂದ ಆವರಿಸಿಕೊಳ್ಳುತ್ತಿದ್ದ ರವಿ ಉಪಾಧ್ಯ ಕವಿತೆಯನ್ನೂ ಬದುಕನ್ನೂ ಒಟ್ಟಿಗೆ ನೋಡಿದ ಸಹೃದಯಿ. ವ್ಯಕ್ತಿತ್ವದ ಸರಳತೆಯನ್ನು ತಮ್ಮ ಬರಹದಲ್ಲೂ ರೂಪಿಸಿಕೊಂಡ ಅಪರೂಪದ ಲೇಖಕ ಅವರು. ಬೆಳಗಾವಿಯಲ್ಲಿ ಒಬ್ಬ ಒಳ್ಳೆಯ ಕವಿ ಯಾರು? ಎಂದು ಯಾರಾದರೂ ಕೇಳಿದರೆ, ಸಹಜವಾಗಿ ರವಿ ಉಪಾಧ್ಯ ಅವರತ್ತ ಬೆರಳು ಮಾಡಲಾಗುತ್ತಿತ್ತು. ಆ ರವಿ ಅವರೀಗ ನಮ್ಮ ನಡುವಿಲ್ಲ. ಆ ಮಟ್ಟಿಗೆ ಬೆಳಗಾವಿ ಸಾಹಿತ್ಯ ಪರಿಸರದಲ್ಲಿ ಇದೀಗ ಒಂದು ಬಗೆಯ ಸೂರ್ಯಾಸ್ತದ ವಾತಾವರಣ.

ತನ್ನನ್ನು ಸುಟ್ಟುಕೊಂಡು ಬೆಳಕು ನೀಡುವ ಹಣತೆಯ ರೂಪಕ ರವಿ ಅವರ ಬದುಕಿಗೆ ಹೇಳಿಮಾಡಿಸಿದಂತಿದೆ. ಕುಟುಂಬದ ನೈತಿಕ ಬೆಂಬಲ ಕಳೆದುಕೊಂಡ ಅವರು ಸಾಹಿತ್ಯದ ಮೂಲಕವೇ ಬದುಕಿನ ಚೆಲುವನ್ನು ಹೆಚ್ಚಿಸಿಕೊಳ್ಳಲು ಹಂಬಲಿಸಿದರು. ಸಾಹಿತ್ಯಿಕ ರಾಜಕಾರಣದ ಕಾವಿಗೆ ಸ್ವತಃ ಸಿಲುಕಿದರೂ, ಇತರರ ಪಾಲಿಗೆ ತಾವು ತಂಪಾಗಿಯೇ ಪರಿಣಮಿಸಿದ್ದು ಅವರ ವ್ಯಕ್ತಿತ್ವದ ವಿಶೇಷ. ಹೀಗಾಗಿ ಅವರೆಂದರೆ ಅವರನ್ನು ಸುಟ್ಟವರಿಗೂ ಪ್ರೀತಿ. ಬೆಳಗಾವಿಯ ಸಾಹಿತ್ಯಿಕ ವಲಯದಲ್ಲಿ ಆರೋಗ್ಯಕರ ಮನೋಭಾವ ರೂಪುಗೊಳ್ಳುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು.

ಕಾವ್ಯದ ಪದರಗಳು, ವಿಮರ್ಶಾ ಧ್ವನಿ, ಸಾಮಾಜಿಕ ಬಿರುಕುಗಳಾದ ಬಡತನ, ಹಸಿವು, ಶೋಷಣೆ ಹಾಗೂ ಇದನ್ನು ಬಂಡವಾಳ ಮಾಡಿಕೊಂಡ ಸಾಹಿತಿಗಳ ವೈಚಾರಿಕ ವ್ಯಭಿಚಾರದ ಮುಖಗಳನ್ನು ಎಲ್ಲಿ ಯಾರು ಮಾತಿಗೆ ಸಿಕ್ಕರೂ ತೆರೆದಿಡುತ್ತಿದ್ದ ಅವರ ಮಾತುಗಳಲ್ಲಿ ಸಾಹಿತ್ಯ ಹೊಂದಿರಬೇಕಾದ ಸಾಮಾಜಿಕ ಎಚ್ಚರದ ಧ್ವನಿ ಇಣುಕುತ್ತಿತ್ತು. ಇಂಥ ಸಂವೇದನಾಶೀಲ, ಅಪರೂಪದ ಬರಹಗಾರ ಬೆಳಗಾವಿ ಸಾಹಿತ್ಯ ಭವನದಿಂದ ಸಾಹಿತ್ಯಕ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಮನೆಗೆ ಮರಳುವಾಗ ಎದುರಿಗೆ ಬಂದ ಬೈಕೊಂದರ ಹೊಡೆತದಿಂದ ಆಸ್ಪತ್ರೆ ಸೇರಿದವರು; ಬದುಕಿನ ಕೊನೆಯ ಹಂತದಲ್ಲೂ ವಿಲಿವಿಲಿ ಒದ್ದಾಡಿ ಕೊನೆಯುಸಿರೆಳೆದರು. ಮಣ್ಣಿನ ವಾಸನೆಯ ಒಬ್ಬ ಒರಿಜಿನಲ್ ಕವಿಯನ್ನು ಕಳೆದುಕೊಂಡ ಸಂಕಟ ಬೆಳಗಾವಿಯ ಪರಿಸರದ್ದು.

ರವಿ ಉಪಾಧ್ಯ  ಎರಡು ವರ್ಷದ ಮಗುವಾಗಿದ್ದಾಗಿನಿಂದಲೇ ಪೋಲಿಯೊ ಆಕ್ರಮಣಕ್ಕೆ ಸಿಲುಕಿದವರು. ಬಹುಶಃ ಎಲ್ಲವನ್ನೂ ನಗು ನಗುತ್ತಲೇ ಸ್ವೀಕರಿಸುವ ಮನೋಭಾವ ಬಾಲ್ಯದ ಪೋಲಿಯೊ ಆಘಾತದಿಂದಲೇ ಅವರಿಗೆ ಒದಗಿರಬೇಕು. ಸಂಕಟಗಳ ನಡುವೆಯೂ ‘ನನ್ನ ದಾರಿಗೆ ನಾನು ಬದ್ಧ’ ಎನ್ನುವ ಪುಟ್ಟ, ಸ್ಪಷ್ಟ ನಡೆ ಅವರದಾಗಿತ್ತು.

ತಮ್ಮ ಅಂಗವಿಕಲತೆಗೆ ಹಳಹಳಿಸಿ ಇನ್ನೊಬ್ಬರಿಗೆ ಭಾರವಾಗುವುದನ್ನು ರವಿ ಅವರು ಎಂದೂ ಇಷ್ಟಪಡಲಿಲ್ಲ. ಸಾಧ್ಯವಾದಷ್ಟು ಸ್ವಾವಲಂಬಿಯಾಗಿ ಜೀವಿಸಿದ ಅವರು ತಮ್ಮ ಬರಹವನ್ನು ವೈಯಕ್ತಿಕ ಸಂಕಷ್ಟಗಳಿಗೆ ಸೀಮಿತಗೊಳಿಸದೆ, ಸಮಾಜದ ನೋವಿನ ನಾಡಿ ಮಿಡಿತಕ್ಕೂ ಅಕ್ಷರರೂಪ ನೀಡಿದ್ದು ವಿಶೇಷ. ಸಮಾಜದ ನೋವಿಗೆ ಸುಸಂಸ್ಕೃತ ಮನಸ್ಥಿತಿಯಿಂದ ಸ್ಪಂದಿಸದ ಬರಹ ಬರಹವೇ ಅಲ್ಲ  ಎನ್ನುವುದು ಅವರ ನಂಬಿಕೆಯಾಗಿತ್ತು.

ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ರವಿ ಉಪಾಧ್ಯರು ಸರ್ಕಾರದಿಂದ ಮಾಸಿಕಧನದ ಸಹಾಯವೇನಾದರೂ ದೊರೆಯಬಹುದೇ ಎಂದು ಬಯಸಿದ್ದರು. ಕಳೆದ ಕೆಲವು ವರ್ಷಗಳಿಂದ ಕನ್ನಡ ಸಂಸ್ಕೃತಿ ಇಲಾಖೆಗೆ ಅರ್ಜಿ ಗುಜರಾಯಿಸಿದ್ದು ಪ್ರಯೋಜನವಾಗಿರಲಿಲ್ಲ. ‘ಸಂಸ್ಕೃತಿ ಇಲಾಖೆ’ ಸಹಾಯ  ಕಡೆಗೂ ದೊರೆಯಲಿಲ್ಲ. ‘ಅದು ದೊರೆಯದಂತೆ ನಾ ನೀಡಿದ ಅನ್ನ ತಿಂದವರೇ ದ್ರೋಹ ಬಗೆದರು’ ಎಂದು ಅನೇಕ ಸಲ ಅವರು ಅಳಲು ತೋಡಿಕೊಂಡಿದ್ದರು.

ಚಿಕ್ಕೋಡಿ ತಾಲ್ಲೂಕಿನ ಬೇಡಿಕಿಹಾಳದಲ್ಲಿ ಆಂಗ್ಲಭಾಷಾ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿದ್ದ ಅವರು, ತಮ್ಮದೇ ಆದ ಭಾರತಿ ಪ್ರಿಂಟಿಂಗ್ ಪ್ರೆಸ್‌ನ ನಿರ್ವಹಣೆಯಿಂದ ಕೈ ಸುಟ್ಟುಕೊಂಡಿದ್ದರು. ಯು.ಆರ್.  ಅನಂತಮೂರ್ತಿ, ಜಿ.ಎಸ್. ಶಿವರುದ್ರಪ್ಪ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಚಂಪಾ, ಕಣವಿ, ಸಿದ್ಧಲಿಂಗಯ್ಯ ಅವರಂತಹ ಸಾಹಿತಿಗಳ ಒಡನಾಟ ಅವರಿಗಿತ್ತು. ಬೆಳಗಾವಿಯ ಇನ್ನೊಬ್ಬ ಹಿರಿಯ ಸಾಹಿತಿ ಚಂದ್ರಕಾಂತ ಕುಸನೂರರು ಉಪಾಧ್ಯರ 40 ಕವಿತೆಗಳನ್ನು ಇಂಗ್ಲಿಷ್‌ಗೆ ಅನುವಾದಗೊಳಿಸಿದ್ದಾರೆ.

ಬೆಳಗಾವಿ ಸಾಂಸ್ಕೃತಿಕ ವಲಯ ಇತ್ತೀಚೆಗೆ ಬಡವಾಗಿದೆ ಎಂದು ಯುವ ಬರಹಗಾರರ ಬಳಿ ರವಿ ಉಪಾಧ್ಯರು ಹೇಳುತ್ತಿದ್ದುದು, ಯುವಪೀಳಿಗೆಗೆ ಅವರ ಜವಾಬ್ದಾರಿ ನೆನಪಿಸುವ ಪ್ರಯತ್ನದಂತಿತ್ತು. ಬೆಳಗಾವಿ ಗಡಿಯಲ್ಲಿದ್ದು ನಾಲ್ಕು ಭಾಷೆಗಳ ತಿಳಿವಳಿಕೆ ಹೊಂದಿದ್ದ ಅವರು ಅನೇಕ ವೇದಿಕೆಗಳನ್ನು ಹುಟ್ಟುಹಾಕಿ ಬೆಳಗಾವಿಯಲ್ಲಿ ಕನ್ನಡದ ಅರ್ಥಪೂರ್ಣ ಚಟುವಟಿಕೆಗಳಿಗೆ ಕಾರಣರಾಗಿದ್ದರು.

ಸುಮಾರು 50 ವರ್ಷಗಳ ಬರವಣಿಗೆಯ ಅವಧಿಯಲ್ಲಿ ರವಿ ಅವರು 30 ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ. 1975ರಲ್ಲಿ ಪ್ರಕಟಗೊಂಡ ‘ಪರಿಧಿ’ ಅವರ ಮೊದಲ ಕಾವ್ಯ ಸಂಕಲನ. ‘ನಾಕು-ನಲ್ವತ್ತು’, ‘ಕಳಕಳಿ’, ‘ನಿನ್ನ ರೂಪಿಸಲು ಕೂತಂತೆ’, ‘ಸೂರ್ಯ ಕೊಲೆಯಾಗಿದ್ದಾನೆ’, ‘ದಿಲ್ಲಿ ಮತ್ತು ಪಾರಿವಾಳ’, ‘ಖಜುರಾಹೊ’, ‘ಬಿಸಲು ಮತ್ತು ಮಳೆ’ ಅವರ ಪ್ರಮುಖ ಕವನಸಂಕಲನಗಳು. ಅವರ ಬಹಳಷ್ಟು ಕವಿತೆಗಳು ಅರ್ಥದ ಪದರುಗಳನ್ನು ಬಿಚ್ಚಿಕೊಳ್ಳುತ್ತ, ಒಂದೇ ಓದಿಗೆ ನಿಲುಕಲಾರದವು. ಕಾವ್ಯದಲ್ಲಿ ತಮ್ಮ ಇಡೀ ಬದುಕನ್ನೇ ಕನ್ನಡೀಕರಿಸಿದ್ದಾರೆ; ಶೋಷಿಕ ಸಮಾಜವನ್ನು ಬೆತ್ತಲುಗೊಳಿಸಿದ್ದಾರೆ. ‘ಮಾರ್ದನಿ’, ‘ಅಪೂರ್ವ ವಿನ್ಯಾಸ’, ‘ಶಬ್ದಗಂಧ ಗುಣ’ ಅವರ ವಿದ್ವತ್ ಕೃತಿಗಳು.

ಅಪ್ರಕಟಿತ ಕವಿತೆಗಳು, ವಿಮರ್ಶಾ ಬರಹಗಳು ರವಿಯವರ ಮನೆಯಲ್ಲಿ ಈಗಲೂ ರಾಶಿಯಾಗಿವೆ. ಮೌಲಿಕ ಕೃತಿಗಳನ್ನು ರಚಿಸಿದರೂ ಅವರಿಗೆ ದೊರೆಯಬೇಕಾದ ಮರ್ಯಾದೆ ದೊರೆಯಲಿಲ್ಲ. ರವಿ ಉಪಾಧ್ಯರ ಬಗೆಗಿನ ಸಾಂಸ್ಕೃತಿಕ ಲೋಕದ ಕುರುಡುಗಣ್ಣನ್ನು ನೋಡುವಾಗ, ಅಂಗವೈಕಲ್ಯ ಇದ್ದದ್ದು ರವಿ ಅವರಿಗೋ ಅಥವಾ ಸಾಂಸ್ಕೃತಿಕ ಲೋಕಕ್ಕೋ ಎಂದು ಸಹೃದಯರಿಗೆ ಅನ್ನಿಸಿದರೆ ಆಶ್ಚರ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT