ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಾದ್ಯಂತ ಬಿರುಸಿನ ಮತದಾನ, ಬಹುತೇಕ ಶಾಂತ

ಪಶ್ಚಿಮ ಬಂಗಾಳ: ಶೇಕಡಾ 72, ಜಾರ್ಖಂಡ್ ನಲ್ಲಿ ಬಾಂಬ್ ಸ್ಫೋಟ
Last Updated 17 ಏಪ್ರಿಲ್ 2014, 15:18 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಾದ್ಯಂತ 12 ರಾಜ್ಯಗಳ 121 ಲೋಕಸಭಾ ಕ್ಷೇತ್ರಗಳಿಗಾಗಿ ಗುರುವಾರ ನಡೆದ ಐದನೇ ಹಂತದ ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆದ ಬಗ್ಗೆ ವರದಿಗಳು ಬಂದಿವೆ. ದೇಶದಾದ್ಯಂತ ಶೇಕಡಾ 65ಕ್ಕೂ ಹೆಚ್ಚು ಮತದಾನವಾಗಿದೆ.

ಜಾರ್ಖಂಡ್ ನಲ್ಲಿ ಮಾವೋವಾದಿಗಳು ನಡೆಸಿದ ಹಿಂಸಾಚಾರದಲ್ಲಿ ಸಿಆರ್ ಪಿಎಫ್ ಯೋಧನೊಬ್ಬ ಗಾಯಗೊಂಡಿದ್ದು, 10 ಬಾಂಬ್ ಗಳನ್ನು ಸಿಡಿಸಿ ರೈಲ್ವೇ ಹಳಿಯೊಂದನ್ನು ಧ್ವಂಸಗೊಳಿಸಲಾಗಿದೆ.

ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯಲ್ಲಿ ಮಾವೋವಾದಿ ನಕ್ಸಲೀಯ ಹಾವಳಿಗೆ ತುತ್ತಾಗಿರುವ ಚಿತ್ರಕೊಂಡ ವಿಧಾನಸಭಾ ಕ್ಷೇತ್ರದಲ್ಲಿ 15 ಮತಗಟ್ಟೆಗಳಲ್ಲಿ ಶಾಂತಿಯುತ ಮರುಮತದಾನ ನಡೆದರೂ 8 ಮತಗಟ್ಟೆಗಳತ್ತ ಒಬ್ಬನೇ ಒಬ್ಬ ಮತದಾರನೂ ಸುಳಿಯಲಿಲ್ಲ. ಇದಕ್ಕೆ ಮಾವೋವಾದಿ ದಾಳಿಯ ಭೀತಿಯೇ ಕಾರಣ ಎಂದು ಹೇಳಲಾಗಿದೆ.

ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಗುರುವಾರ ಸಂಜೆ 5 ಗಂಟೆವರೆಗೆ ನಡೆದ ಮತದಾನದ ಶೇಕಡಾವಾರು ವಿವರ ಹೀಗಿದೆ:

ಬಿಹಾರ: ಶೇಕಡಾ 56 (5 ಗಂಟೆಗೆ)
ಪಶ್ಚಿಮ ಬಂಗಾಳ: ಶೇಕಡಾ 78.89.
ಜಾರ್ಖಂಡ್: ಶೇಕಡಾ 62.(5 ಗಂಟೆಗೆ).
ಮಧ್ಯ ಪ್ರದೇಶ: ಶೇಕಡಾ 54.41 (5 ಗಂಟೆಗೆ).
ಉತ್ತರ ಪ್ರದೇಶ ಶೇಕಡಾ 62.52 (5 ಗಂಟೆಗೆ).
ಮಹಾರಾಷ್ಟ್ರ: ಶೇಕಡಾ 54.67 (5 ಗಂಟೆಗೆ)
ಮಣಿಪುರ: ಶೇಕಡಾ 74 (5 ಗಂಟೆಗೆ).
ರಾಜಸ್ತಾನ: ಶೇಕಡಾ 63.25 (5 ಗಂಟೆಗೆ).
ಒಡಿಶಾ: ಶೇಕಡಾ 70 (5 ಗಂಟೆಗೆ).
ಕರ್ನಾಟಕ: ಶೇಕಡಾ 66 (5 ಗಂಟೆಗೆ).
ಜಮ್ಮು: ಶೇಕಡಾ 63 (3 ಗಂಟೆಗೆ).
ಛತ್ತೀಸ್ ಗಢ ಶೇಕಡಾ 63.44.

16.61 ಕೋಟಿ ಮತದಾರರ ಪೈಕಿ ಶೇಕಡಾ 30 ರಷ್ಟು ಮತದಾರರು ಮಧ್ಯಾಹ್ನದವರೆಗಿನ ಅವಧಿಯಲ್ಲಿ ಮತ ಚಲಾಯಿಸಿದ್ದರು. ನಂದನ್ ನೀಲೇಕಣಿ (ಕಾಂಗ್ರೆಸ್), ಮೇನಕಾ ಗಾಂಧಿ (ಬಿಜೆಪಿ), ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, (ಜೆಡಿ -ಎಸ್), ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಯ್ಲಿ (ಕಾಂಗ್ರೆಸ್), ಶ್ರೀಕಾಂತ್ ಜೆನಾ, ಸುಪ್ರಿಯಾ ಸುಲೆ ಮತ್ತು ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರಿ ಮಿಸಾ ಭಾರತಿ ಸೇರಿದಂತೆ ಹಲವಾರು ಗಣ್ಯರು ಸೇರಿದಂತೆ 1769 ಮಂದಿ ಅಭ್ಯರ್ಥಿಗಳ ಭವಿಷ್ಯ ಈದಿನ ಮತಪೆಟ್ಟಿಗೆಯೊಳಗೆ ಬಂಧಿಯಾಯಿತು.

ಚುನಾವಣೆ ನಡೆದ 121 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ  ಕೈಯಲ್ಲಿ ಹಾಲಿ 46 ಕ್ಷೇತ್ರಗಳಿದ್ದರೆ, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಕೈಯಲ್ಲಿ 43 ಕ್ಷೇತ್ರಗಳಿದ್ದವು. ಉಭಯ ಪಕ್ಷಗಳೂ ಈ ಕ್ಷೇತ್ರಗಳಲ್ಲಿ ತಮಗೇ ಗೆಲುವು ಎಂದು ಬೀಗುತ್ತಿದ್ದು ಈ ಕ್ಷೇತ್ರಗಳ ಭವಿಷ್ಯ ಮುಂದಿನ ಕೇಂದ್ರ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ.

ಉತ್ತರ ಪ್ರದೇಶದಲ್ಲಿ ಮುಂಜಾನೆ 11 ಗಂಟೆವರೆಗೆ ಶೇಕಡಾ 27.44 ರಷ್ಟು ಮತದಾರರು ಮತ ಚಲಾಯಿಸಿದ್ದರು. ಉತ್ತರ ಪ್ರದೇಶ ರಾಜ್ಯದಲ್ಲಿ ನಡೆದ ಎರಡನೇ ಹಂತದ ಮತದಾನದಲ್ಲಿ 11 ಸ್ಥಾನಗಳಿಗಾಗಿ ಚುನಾವಣೆ ನಡೆದಿದ್ದು ಮೇನಕಾ ಗಾಂಧಿ, ಸಂತೋಷ್ ಗ್ಯಾಂಗ್ವಾರ್, ಸಲೀಂ ಶೆರ್ವಾನಿ ಮತ್ತು ಬೇಗಂ ನೂರ್ ಬಾನೋ ಸೇರಿದಂತೆ 150 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳಿಗಾಗಿ ನಡೆದ ಏಕಹಂತದ ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆದು ಶೇಕಡಾ 65ರಷ್ಟು ಮತದಾನ ದಾಖಲಾಯಿತು.

ಯಡಿಯೂರಪ್ಪ, ಮೊಯ್ಲಿ ಮೊದಲಿಗರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (ಶಿವಮೊಗ್ಗ) ಮತ್ತು ವೀರಪ್ಪ ಮೊಯ್ಲಿ (ಚಿಕ್ಕಬಳ್ಳಾಪುರ) ಮತ ಚಲಾಯಿಸಿದ ಮೊದಲಿಗರಲ್ಲಿ ಸೇರಿದ್ದರು. 435 ಅಭ್ಯರ್ಥಿಗಳ ಹಣೆ ಬರಹ ನಿರ್ಧರಿಸಲಿರುವ ಚುನಾವಣೆಯಲ್ಲಿ ಒಟ್ಟು 4.62 ಕೋಟಿ ಮತದಾರರರು ಮತ ಚಲಾವಣೆ ಅರ್ಹತೆ ಹೊಂದಿದ್ದರು.

ಬಿಜೆಪಿಯು ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪ ಮಾಡಿ ದೂರು ಸಲ್ಲಿಸಿತ್ತು.

ಜಾರ್ಖಂಡ್ ನ ಕೆಲವು ಕಡೆಗಳಲ್ಲಿ ನಕ್ಸಲೀಯ ಹಿಂಸಾಚಾರದ ವರದಿಗಳನ್ನು ಹೊರತು ಪಡಿಸಿ ಬಹುತೇಕ ಕಡೆ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಜಾರ್ಖಂಡ್ ನ 6 ಲೋಕಸಭಾ ಸ್ಥಾನಗಳಿಗಾಗಿ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಮುಂಜಾನೆ 9 ಗಂಟೆವರೆಗೆ ಶೇಕಡಾ 12.74ರಷ್ಟು ಮತ ಚಲಾವಣೆಯಾಯಿತು.

ಮಾವೋವಾದಿಗಳು ರೈಲ್ವೈ ಹಳಿ ಸ್ಫೋಟಿಸಿದ್ದರಿಂದ ಬೊಕಾರೋ ಜಿಲ್ಲೆಯಲ್ಲಿ ರೈಲ್ವೇ ಸೇವೆ ಅಸ್ತವ್ಯಸ್ತಗೊಂಡಿತು.

ಮಾವೋವಾದಿಗಳು ಬೊಕಾರೋದ ದಾನಿಯಾ ರೈಲು ನಿಲ್ದಾಣ ಹಾಗೂ ಬಿಹಾರಿನ ಜಾಗೇಶ್ವರ ರೈಲು ನಿಲದ್ದಾಣದಲ್ಲಿ ರೈಲು ಹಳಿಗಳನ್ನು ಹಾನಿಪಡಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ ಸಿಂಗ್ ತಿಳಿಸಿದರು.

ಜಾರ್ಖಂಡ್ ನಲ್ಲಿ ಚುನಾವಣೆ ನಡೆದ ಗಿರಿಧ್ ಲೋಕಸಭಾ ಕ್ಷೇತ್ರದ ಪ್ರತೇಕ ಸ್ಥಳಗಳಲ್ಲಿ ಮಾವೋವಾದಿಗಳು 10 ಬಾಂಬ್ ಗಳನ್ನು ಸ್ಫೋಟಿಸಿದ್ದಾರೆ ಎಂದು ಗಿರಿಧ್ ನಿಂದ ಬಂದ ವರದಿ ತಿಳಿಸಿದೆ.

ಪಿರ್ಟಾಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಸ್ತೂರ್ ಬಳಿ ಏಳು ಬಾಂಬ್ ಗಳು ಬೆಳಗ್ಗೆ 8.30ರ ವೇಳೆಗೆ ಸ್ಫೋಟಿಸಿದವು. ಎಲ್ಲ ಭದ್ರತಾ ಸಿಬ್ಬಂದಿ ಹಾಗೂ ಚುನಾವಣಾ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕ್ರಾಂತಿ ಕುಮಾರ್ ಹೇಳಿದರು.

ನಕ್ಷಲ್ ಪೀಡಿತ ಛತ್ತೀಸ್ ಗಢದಲ್ಲಿ ಮೊದಲ ನಾಲ್ಕು ಗಂಟೆಗಳಲ್ಲಿ ಶೇಕಡಾ 30ರಷ್ಟು ಮತದಾನವಾಗಿತ್ತು.

ಒಡಿಶಾದಲ್ಲಿ ಮೊದಲ ಮೂರು ಗಂಟೆಗಳಲ್ಲಿ ಶೇಕಡಾ 15ರಷ್ಟು ಮತದಾರರು ಮತ ಚಲಾಯಿಸಿದರು. ಇಲ್ಲಿ ಲೋಕಸಭೆಯ 11 ಸ್ಥಾನಗಳಿಗೆ ಮತ್ತು 77 ವಿಧಾನಸಭಾ ಸ್ಥಾನಗಳಿಗೆ ಎರಡನೆಯ ಹಾಗೂ ಕೊನೆಯ ಹಂತದ ಮತದಾನ ನಡೆಯಿತು.

ಬಿಹಾರಿನಲ್ಲಿ ಮೊದಲ ಮೂರು ಗಂಟೆಗಳಲ್ಲಿ ಶೇಕಡಾ 14ರಷ್ಟು ಮತದಾನ ದಾಖಲಾಯಿತು.

ಪಶ್ಚಿಮ ಬಂಗಾಳದಲ್ಲಿ 10 ಗಂಟೆವರೆಗಿನ ಅವಧಿಯಲ್ಲಿ ಶೇಕಡಾ 29ರಷ್ಟು ಮತದಾನ ದಾಖಲಾಯಿತು. ರಾಜಸ್ತಾನದಲ್ಲಿ ಮಧ್ಯಾಹ್ನದವರೆಗೆ ಶೇಕಡಾ 30 ರಷ್ಟು ಮತದಾರರು ಮತ ಚಲಾಯಿಸಿದರೆ, ಮಹಾರಾಷ್ಟ್ರದಲ್ಲಿ ಮುಂಜಾನೆ 11 ಗಂಟೆವರೆಗೆ ಶೇಕಡಾ 18ರಷ್ಟು ಮತದಾರರು ಮತ ಚಲಾಯಿಸಿದರು. ಮಧ್ಯ ಪ್ರದೇಶದಲ್ಲಿ ಶೇಕಡಾ 11.46ರಷ್ಟು ಮತದಾನ ದಾಖಲಾಯಿತು.

ಈವರೆಗೆ ನಾಲ್ಕು ಹಂತಗಳಲ್ಲಿ 111 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು, ಏಪ್ರಿಲ್ 10ರಂದು 91 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈದಿನದ ಮತದಾನದೊಂದಿಗೆ 543 ಲೋಕಸಭಾ ಕ್ಷೇತ್ರಗಳ ಪೈಕಿ 232 ಸ್ಥಾನಗಳಿಗೆ ಚುನಾವಣೆ ಪೂರ್ಣಗೊಂಡಂತಾಯಿತು. ಉಳಿದ ನಾಲ್ಕು ಹಂತಗಳ ಚುನಾವಣೆ ಏಪ್ರಿಲ್ 24, 30, ಮೇ 7 ಹಾಗೂ 12ರಂದು ನಡೆಯಲಿದೆ.

ಮೇ 16ರಂದು ಮತಗಳ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT