ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿನ್ನೆ ನಾಳೆಗಳ ಬೆಸೆಯುವ ಕನಸು

Last Updated 31 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ  ಸ್ಥಾನಮಾನ ದೊರೆತ ಅಂಗವಾಗಿ ಕೇಂದ್ರ ಸರ್ಕಾರ ‘ಶಾಸ್ತ್ರೀಯ ಕನ್ನಡದ ಅತ್ಯುನ್ನತ ಅಧ್ಯಯನ ಕೇಂದ್ರ’ವನ್ನು ೨೦೧೨­–13ರಿಂದ ೨೦೧೬-–೧೭ರ ಅವಧಿಗೆ ₨ 10.23 ಕೋಟಿ  ಅನುದಾನದೊಂದಿಗೆ 2011ರ ಸೆಪ್ಟೆಂಬರ್‌­ನಲ್ಲಿ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಲ್ಲಿ ಸ್ಥಾಪಿಸಿತು.

ಅಲ್ಲದೆ ವಿಶ್ವವಿದ್ಯಾಲಯ ಧನ­ಸಹಾಯ ಆಯೋಗವು ಕಪಿಲಾ ವಾತ್ಸಾಯನ ಸಮಿತಿಯ ಸಲ­ಹೆಯ ಮೇರೆಗೆ ‘ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ’ ವನ್ನು ೨೦೧೦-–೧೧ರಿಂದ ೨೦೧೪-–೧೫ರ ಅವಧಿಗೆ ₨ 1.50  ಕೋಟಿ  ಅನುದಾನದೊಂದಿಗೆ ೨೦೧೧ರ ಏಪ್ರಿಲ್‌ನಲ್ಲಿ ಗುಲ್ಬ­ರ್ಗದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ಥಾಪಿ­ಸಿತು. ಇದು ಮಾರ್ಚ್ ೨೦೧೨ರಿಂದ ಕಾರ್ಯನಿರತವಾಗಿದೆ.

ಈ ಕೇಂದ್ರದ ಮುಖ್ಯ ಅಧ್ಯಯನ ಕ್ಷೇತ್ರಗಳು ಭಾಷಾ ಶಾಸ್ತ್ರ, ಶಾಸನ ಶಾಸ್ತ್ರ ಮತ್ತು ಹಸ್ತಪ್ರತಿ ಶಾಸ್ತ್ರ, ಶಾಸ್ತ್ರ ಗ್ರಂಥಗಳು, ಶಾಸ್ತ್ರೀಯ ಮತ್ತು ತೌಲನಿಕ ಸಾಹಿತ್ಯ, ಕನ್ನಡ ಭಾಷೆ ಮತ್ತು ಕರ್ನಾಟಕದ ಇತಿಹಾಸ, ಧಾರ್ಮಿಕ ಅಧ್ಯಯನಗಳು ಹಾಗೂ  ಅನುವಾದ. ಕೇಂದ್ರದ ಮುಖ್ಯ ಉದ್ದೇಶಗಳೆಂದರೆ- ಶಾಸ್ತ್ರೀಯ ಭಾಷೆಯ ಅಧ್ಯಯನ ಮುಂದುವರಿಕೆಗೆ ಆಸರೆಯಾಗುವಂತೆ ಅಧ್ಯ­ಯನ ಶಿಬಿರಗಳನ್ನು ನಡೆಸುವುದರ ಮೂಲಕ ಮುಂದಿನ ತಲೆಮಾರಿನ ಸಂಶೋಧಕರ ಕಾರ್ಯಪಡೆಯನ್ನು ಸಿದ್ಧ­ಗೊಳಿ­ಸುವುದು, ಶಾಸನಗಳು ಹಾಗೂ ಗ್ರಂಥಗಳ ದತ್ತಾಂಶ ಸಂಗ್ರಹ ಅಭಿವೃದ್ಧಿ, ಆಧುನಿಕ ಮಾಹಿತಿ ತಂತ್ರಜ್ಞಾನ ಬಳಸಿ ಕನ್ನಡ ಬೋಧನೆ ಮತ್ತು ಕಲಿಕೆಯನ್ನು ಸುಲಭಗೊಳಿಸುವುದು, ವಿಚಾರ ಸಂಕಿರಣಗಳು, ಕಾರ್ಯಶಿಬಿರ ನಡೆಸುವುದು ಇತ್ಯಾದಿ.

ಅಲ್ಲದೆ, ಓರಿಯಂಟಲ್ ಲೈಬ್ರರಿ ಮುಂತಾದೆಡೆ ಇರುವ ಹಸ್ತಪ್ರತಿಗಳು, ಶಾಸನಗಳು ಮುಂತಾದವುಗಳ ಅಧ್ಯಯನಕ್ಕೆ ಒತ್ತು, ಅಪ­ರೂಪದ ಬರಹಗಳನ್ನು ಪ್ರಕಟಿಸು­ವುದು, ಪಿಎಚ್‌.ಡಿ ಅಧ್ಯಯನಕ್ಕೆ ಅವಕಾಶ, ಶಾಸ್ತ್ರೀಯ ಕನ್ನಡದ ಪಠ್ಯಾಗಾರ ಅಭಿವೃದ್ಧಿ, ಮುಖ್ಯ ಅಧ್ಯಯನ ವಿಷಯಗಳ ಬಗ್ಗೆ ಚಿಂತಕರ ಚಾವಡಿ­ಯಂತೆ ಕಾರ್ಯ ನಿರ್ವಹಿಸುವುದು ಸಹ ಸೇರಿವೆ.  ಜೊತೆಗೆ ಸಲಹಾ ಸಮಿತಿ ಸಲಹೆ ಮಾಡುವ ಇತರ ಕಾರ್ಯ, ಯೋಜನೆಗಳನ್ನು ಕಾರ್ಯಗತಗೊಳಿಸುವುದೂ ಸೇರಿದೆ.

ಇದಕ್ಕೆ ಪೂರಕವಾಗಿ ಅನುಷ್ಠಾನಗೊಳಿಸುತ್ತಿರುವ ಕಾರ್ಯ­ಯೋಜನೆಗಳು ಇಂತಿವೆ: ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ -ಛಂದಸ್ಸು, ಶಾಸನಶಾಸ್ತ್ರ, ಹಸ್ತಪ್ರತಿ ಶಾಸ್ತ್ರ ಮತ್ತು ಗ್ರಂಥ ಸಂಪಾದನೆ, ನಿಘಂಟು ಶಾಸ್ತ್ರ, ಭಾಷಾ ಶಾಸ್ತ್ರ, ಇತಿಹಾಸ ಮತ್ತು ಧಾರ್ಮಿಕ ಅಧ್ಯಯನ, ತೌಲನಿಕ ಸಾಹಿತ್ಯಗಳಲ್ಲಿ ಕಾರ್ಯ­ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಶಿಕ್ಷಣ ಸಂಪ­ನ್ಮೂಲ ಸಿದ್ಧತೆಯ ಅಂಗವಾಗಿ ‘ಶಾಸ್ತ್ರೀಯ ಕನ್ನಡ: ವಿವರ­ಣಾ­ತ್ಮಕ ವಾಚಿಕೆ’ಯ ಸಿದ್ಧತೆ ನಡೆದಿದೆ. ‘ಶಾಸ್ತ್ರೀಯ ಕನ್ನಡ- ಬೋಧನಾ ವಿಧಾನ ನಿರೂಪಕ’, ‘ಶಾಸ್ತ್ರೀಯ ಕನ್ನಡ- ಬೋಧನಾ­, ­ಕಲಿಕಾ ವ್ಯಾಕರಣ’, ‘ಶಾಸ್ತ್ರೀಯ ಕನ್ನಡ- ಐತಿ­ಹಾ­ಸಿಕ ವ್ಯಾಕರಣ’ಗಳ ಸಿದ್ಧತೆ ಆಗುತ್ತಿದೆ.

ಸಂಶೋಧನಾ ಆಕರ­ಗಳಾಗಿ -ಶಾಸ್ತ್ರೀಯ ಕನ್ನಡದ ಶಾಸನಗಳ ದತ್ತಾಂಶ ಸಂಗ್ರಹ ನಡೆದಿದೆ. ಮುಖ್ಯ ಶಾಸ್ತ್ರೀಯ ಕನ್ನಡ ಗ್ರಂಥಗಳ ಪದ ವಿವರಣ ಕೋಶಗಳು ತಯಾ­ರಾ­ಗುತ್ತಿವೆ. ಸಂಶೋಧನೆಯ ಭಾಗವಾಗಿ- ಅಂತರ್‌­ಶಿಸ್ತೀಯ ಅಧ್ಯಯನ­ಗಳು ರೂಪುಗೊಳ್ಳುತ್ತಿವೆ. ಭಾಷಾ­ಭಿವೃದ್ಧಿ ಅಧ್ಯಯನ­ಗಳು, ಶಬ್ದ, ಪದ ಅಧ್ಯಯನಗಳು, ಭಾಷಾ ಸಂಪರ್ಕ ಅಧ್ಯಯನ, ಅನುವಾದ ಅಧ್ಯಯನ­ ಆದ್ಯತೆ ಪಡೆದಿವೆ. ಮಾಹಿತಿ ಸಂವಹನ­ಕ್ಕಾಗಿ ಅಂತ­ರ್ಜಾಲ ತಾಣದ ಬಳಕೆ, ಸೂಕ್ತ ಪ್ರಕಟಣೆಗಳನ್ನು ಹೊರ­ತರುವುದು ಇತ್ಯಾದಿ ನಡೆದಿವೆ.

ಕಾರ್ಯಶಿಬಿರಗಳ ಮೂಲಕ ನೂರಾರು ಯುವ ಸಂಶೋ­ಧ­ಕರಿಗೆ ತರಬೇತಿ ನೀಡಲಾಗಿದೆ. ‘ವಡ್ಡಾರಾಧನೆ’ ಮತ್ತು ‘ಕವಿರಾ­ಜ­ಮಾರ್ಗ’ದ ಗಣಕರೂಪಗಳು ಯೂನಿಕೋಡ್‌ನಲ್ಲಿ ಸಿದ್ಧವಾ­ಗಿವೆ. ‘ಶಾಸ್ತ್ರೀಯ ಕನ್ನಡ ವಾಚಿಕೆ’ಯನ್ನು ಸಿದ್ಧಪಡಿಸಿ ಕಾರ್ಯ­ಶಿಬಿರಗಳಲ್ಲಿ ಪಠ್ಯವನ್ನಾಗಿ ಬಳಸಲಾಗುತ್ತಿದೆ. ಐವರು ಸಂಶೋ­ಧನಾ ವಿದ್ಯಾರ್ಥಿಗಳು ಸಂಶೋಧನೆ ಮಾಡುತ್ತಿದ್ದಾರೆ. ‘ಶಾಸ್ತ್ರೀಯ ಕನ್ನಡ ಅಧ್ಯಯನ ಮಾಲೆ’ಯನ್ನು ಪ್ರಾರಂಭಿಸ­ಲಾಗಿದ್ದು ಐದು ಪುಸ್ತಕಗಳನ್ನು ಮೊದಲ ಕಂತಿನಲ್ಲಿ ಪ್ರಕಟಿಸ­ಲಾ­ಗಿದೆ. ಇನ್ನಷ್ಟು ಗ್ರಂಥಗಳು ಸಿದ್ಧತೆಯ ಹಂತದಲ್ಲಿವೆ.

ಪ್ರಸ್ತುತ ಚರ್ಚೆಯಲ್ಲಿರುವ ಹಾಗೂ ಬೆಂಗಳೂರಿನಲ್ಲಿ ಪ್ರಾರಂಭವಾಗಲಿರುವ ‘ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ’ದ ಬಗ್ಗೆ ಒಂದೆರಡು ಮಾತು: ಯುವ ಸಮುದಾಯವನ್ನು ನಿಜವಾದ ಅರ್ಥದಲ್ಲಿ ಶಾಸ್ತ್ರೀಯ ಭಾಷೆ ಅಧ್ಯಯನದಲ್ಲಿ ತೊಡಗುವಂತೆ ಮಾಡು­ವುದು ಕಷ್ಟದ ಕೆಲಸ. ಆದರೆ ಅದನ್ನು ಮಾಡಲೇ­ಬೇಕಾಗಿದೆ. ಭಾಷಾ ತಂತ್ರ­ಜ್ಞಾನ ಬಳಸಿ­ಕೊಂಡು ಶಾಸ್ತ್ರೀಯ ಕನ್ನಡ, ಕನ್ನಡದ ಆಳವಾದ ವಿಶ್ಲೇಷಣೆಯ ಅಗತ್ಯ­ವಿದೆ. ಮಾಡಲೇ­ಬೇಕಾದ ಕೆಲಸ ಬೆಟ್ಟ­ದಷ್ಟಿದೆ. ಆದರೆ ಕಲುಷಿತ ವ್ಯವಸ್ಥೆ ಕೈಕಟ್ಟು­ತ್ತದೆ. ಅಧ್ಯಯನ ಮತ್ತು ಸಂಶೋ­ಧನೆಗೆ ಬೇಕಾದ ಆಕರಗಳು ಒಂದೆಡೆ ಸುಲಭ­ವಾಗಿ ಲಭ್ಯವಿಲ್ಲ.

ಕೋಟ್ಯಂ­ತರ ರೂಪಾಯಿ ವೆಚ್ಚದ ಕಟ್ಟಡಗಳು, ಸಂಗ್ರಹಾಲಯಗಳ ಅಗತ್ಯವಿಲ್ಲ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಿಶ್ವದ ಯಾವುದೇ ಭಾಗದಿಂದ ಬೇಕಾದರೂ ಸುಲಭವಾಗಿ ಸಂಪರ್ಕಿಸಬಹುದಾದ ಡಿಜಿಟಲ್ ಗ್ರಂಥಾಲಯ, ವಸ್ತು ಸಂಗ್ರಹಾ­ಲಯ ಇತ್ಯಾದಿ ಆಯೋ­ಜಿಸಿ­ಕೊಳ್ಳಬೇಕು. ಬೆಂಗಳೂರಿ­ನಲ್ಲಿ ಕೇಂದ್ರ ಕಚೇರಿ­ಯಿದ್ದೂ ರಾಜ್ಯದ ಎಲ್ಲ ಭಾಗಗಳಲ್ಲಿ ಶಾಸ್ತ್ರೀಯ ಕನ್ನಡದ ಅಧ್ಯಯನ, ಸಂಶೋಧನೆ, ಪ್ರಸಾರವನ್ನು   ನಿರಂತರವಾಗಿ ನೂರಾರು ಜನ ಕೈಗೂಡಿಸಿ ನಡೆಸುವಂತಹ ಸ್ವತಂತ್ರ, ಸ್ವಾಯತ್ತ ಸಂಸ್ಥೆಯನ್ನು ರೂಪಿಸಬೇಕು.

ಶಾಸ್ತ್ರೀಯ ಭಾಷಾ ಅಧ್ಯಯನದ ಬಗ್ಗೆ ಆಳವಾದ ಚಿಂತನೆ ನಡೆಸಿರುವ ಶೆಲ್ಡನ್ ಪೊಲ್ಲಾಕ್ ಹೇಳಿದ ಒಂದು ಮಾತು ಈಗ ನೆನಪಿಗೆ ಬರುತ್ತಿದೆ: ‘ಭಾರತದಲ್ಲಿ ವಿಶ್ವವಿದ್ಯಾಲಯಗಳನ್ನು ಕಟ್ಟುತ್ತಿಲ್ಲ, ವಿಶ್ವವಿದ್ಯಾಲಯದ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ’. ಈ ವಾಕ್ಯವನ್ನು ‘ವಿಶ್ವವಿದ್ಯಾಲಯ’ ಪದದ ಬದಲು ‘ಸಂಸ್ಥೆ’ ಪದವನ್ನು ಬಳಸಿ ಬೇಕಾದರೂ ಓದಿಕೊಳ್ಳಬಹುದು.

(ಲೇಖಕರು ಗುಲ್ಬರ್ಗದ ಕರ್ನಾಟಕ ಕೇಂದ್ರೀಯ ವಿ.ವಿಯ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರು)

ದೇಸಿ ಶಬ್ದಕೋಶ ಬೇಕು
ಹಳಗನ್ನಡ ಕಾವ್ಯಗಳ ದೇಸಿ ಶಬ್ದ­ಕೋಶ ಸಿದ್ಧವಾಗ­ಬೇಕು, ಜೊತೆಗೆ ಅವುಗಳ ಜ್ಞಾತಿ ಶಬ್ದಗಳನ್ನು ಕೊಡ­ಬೇಕು. ಅವುಗಳ ದ್ರಾವಿಡ ಮೂಲ­ಗಳನ್ನು ಹುಡುಕಬೇಕು. ಕನ್ನಡದ ಮೇಲಿನ ಪ್ರಾಕೃತದ ಪ್ರಭಾವವನ್ನು ಗುರುತಿಸ­ಬೇಕು. ಕನ್ನಡದ ಸಂಸ್ಕೃತಿ ಕೋಶ ರಚನೆ ಆಗಬೇಕು.
–ಡಾ.ಎಂ.ಎಂ.ಕಲಬುರ್ಗಿ, ಹಿರಿಯ ಸಂಶೋಧಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT