ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಶ್ರಿತರ ಬಗ್ಗೆ ಭೀತಿ, ಬಂದೂಕಿನತ್ತ ಪ್ರೀತಿ

ಭಯೋತ್ಪಾದಕ ಕೃತ್ಯಕ್ಕಿಂತಲೂ ಗುಂಡು ಹಾರಿಸಿಕೊಂಡು ಸಾಯುವವರ ಸಂಖ್ಯೆ ಅಮೆರಿಕದಲ್ಲಿ ಬಹಳ ಹೆಚ್ಚು
ಅಕ್ಷರ ಗಾತ್ರ

ಲೆಸ್‌ಬಾಸ್, ಗ್ರೀಸ್: ಅಮೆರಿಕದ ರಾಜಕಾರಣಿಗಳು ಕಳೆದ ಮೂರು ವಾರಗಳಿಂದ ಸಿರಿಯಾ ನಿರಾಶ್ರಿತರು ಒಡ್ಡಬಹುದಾದ ಅಪಾಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳ ಅವಧಿಯಲ್ಲಿ ಯಾವುದೇ ನಿರಾಶ್ರಿತ ವ್ಯಕ್ತಿ ಭಯೋತ್ಪಾದನಾ ದಾಳಿಯ ಮೂಲಕ ಒಬ್ಬನೇ ಒಬ್ಬ ಅಮೆರಿಕದ ವ್ಯಕ್ತಿಯನ್ನು ಕೊಂದಿಲ್ಲ.

ಹಾಗಿದ್ದರೂ ರಾಜಕಾರಣಿಗಳು ಸಿರಿಯಾ ನಿರಾಶ್ರಿತರ ವಿರುದ್ಧ ಕಿಡಿ ಕಾರುತ್ತಿದ್ದಾರೆ. ನಿರಾಶ್ರಿತರ ಬಗೆಗಿನ ಉನ್ಮಾದ ತೀವ್ರಗೊಂಡ ಇದೇ ಮೂರು ವಾರಗಳ ಅವಧಿಯಲ್ಲಿ ಅಮೆರಿಕದಲ್ಲಿ ಬಂದೂಕಿಗೆ ಬಲಿಯಾದವರ ಸಂಖ್ಯೆ ಎರಡು ಸಾವಿರ. ಸ್ಯಾನ್ ಬರ್ನಾರ್ಡಿನೊ, ಕ್ಯಾಲಿಫೋರ್ನಿಯಾ ಮತ್ತು ಕೊಲರಾಡೊ ಸ್ಪ್ರಿಂಗ್ಸ್‌ನ ಯೋಜಿತ ಸಂತಾನೋತ್ಪತ್ತಿ ಕ್ಲಿನಿಕ್‌ಗಳಲ್ಲಿ ನಡೆದ ಭಯೋತ್ಪಾದನಾ ದಾಳಿಗಳು ಕಣ್ಣಿಗೆ ರಾಚುತ್ತವೆ. ಆದರೆ ಬಂದೂಕಿನಿಂದಾಗಿ ಸಾಯುತ್ತಿರುವವರ ಸಂಖ್ಯೆಗೆ ಕೊನೆ ಇಲ್ಲದಂತೆ ಕಾಣಿಸುತ್ತಿದೆ. ಆತ್ಮಹತ್ಯೆ, ಕೊಲೆ ಮತ್ತು ಆಕಸ್ಮಿಕ ಗುಂಡು ಹಾರಾಟಗಳು ಸೇರಿ ಬಂದೂಕಿನಿಂದ ಸಾಯುವವರ ಸರಾಸರಿ ಸಂಖ್ಯೆ ಪ್ರತಿ ದಿನಕ್ಕೆ 92.

ರಾಜಕಾರಣಿಗಳು ಈ ಬೆದರಿಕೆಯನ್ನು ನಿಭಾಯಿಸಲು ಬಯಸುವುದೇ ಆಗಿದ್ದರೆ ಬಂದೂಕಿನಿಂದ ಉಂಟಾಗುವ ಸಾವಿನ ಪ್ರಮಾಣ ತಗ್ಗಿಸಲು ಗಂಭೀರವಾದ ನೀತಿಯನ್ನು ಅಭಿವೃದ್ಧಿಪಡಿಸಬೇಕು. ಹೌದು, ಭಯೋತ್ಪಾದನೆ ತಡೆ ಕ್ರಮಗಳೂ ಅಗತ್ಯವೇ ಆಗಿವೆ. ಆದರೆ ಜಗತ್ತಿನ ಅತ್ಯಂತ ದುರ್ಬಲ ಜನರನ್ನು ಬಲಿಪಶುಗಳಾಗಿಸುವ ಮೂಲಕ ಅದನ್ನು ಮಾಡಬಾರದು.

ಸಿರಿಯಾ ನಿರಾಶ್ರಿತರನ್ನು ಜಿಹಾದಿಗಳಾಗಿ ಚಿತ್ರಿಸಲಾಗುತ್ತಿದೆ. ಜೋಶ್ ಎಂಬ ಹೆಸರಿನ ಓದುಗರೊಬ್ಬರು ನನಗೆ ‘ಅವರು ನಮ್ಮನ್ನು ಕೊಲ್ಲಲು ಬಯಸುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದರು. ಆದರೆ ಈ ನಿರಾಶ್ರಿತರ ಜತೆ ಸಮಯ ಕಳೆದ ಯಾರೊಬ್ಬರಿಗೂ ಇಂತಹ ಲಕ್ಷಣಗಳನ್ನು ಅವರಲ್ಲಿ ಗುರುತಿಸಲು ಸಾಧ್ಯವಿಲ್ಲ. ರಬ್ಬರ್ ತೆಪ್ಪಗಳಲ್ಲಿ ಕಿಕ್ಕಿರಿದು ತುಂಬಿಕೊಂಡು ಅಪಾಯಕಾರಿ ಪ್ರಯಾಣ ಮುಗಿಸಿ ಬರುವ ಸಿರಿಯಾ ನಿರಾಶ್ರಿತರನ್ನು ಲೆಸ್‌ಬಾಸ್‌ನ ಕಡಲ ಕಿನಾರೆಯಲ್ಲಿ ನಿಂತು ನೇರವಾಗಿ ಭೇಟಿ ಮಾಡಿದರೆ ಇವರ ಬಗ್ಗೆ ಓದುಗರಲ್ಲಿ ಇರುವ ಕಾಠಿಣ್ಯ ಸ್ವಲ್ಪಮಟ್ಟಿಗೆ ಕಡಿಮೆ ಆಗಬಹುದು ಎಂದು ಅನಿಸುತ್ತದೆ. ಸಿರಿಯಾ ನಿರಾಶ್ರಿತರು ನಮ್ಮ ಹಾಗೆಯೇ ಮನುಷ್ಯರು. ಆದರೆ ತೋಯ್ದು ಹೋಗಿ, ಚಳಿಯಿಂದ ನಡುಗುತ್ತಾ, ಹಸಿವಿನಿಂದ ಕಂಗಾಲಾಗಿ ನಿಶ್ಶಕ್ತರಾಗಿರುವವರು ಎಂಬುದನ್ನು ಟೀಕಾಕಾರರು ನೋಡಬಹುದು.

ನನಗೇನೂ ತಿಳಿಯುವುದಿಲ್ಲ, ನಾನು ಬೋಳೆ ವ್ಯಕ್ತಿ ಎಂದು ನೀವು ಭಾವಿಸುವುದಾದರೆ ಈ 16 ವರ್ಷದ ಬಾಲಕನನ್ನು ನೀವು ಭೇಟಿಯಾಗಬಹುದು. ನಾನು ಈತನನ್ನು ಅಹ್ಮದ್ ಎಂದು ಕರೆಯುತ್ತೇನೆ. ಸಿರಿಯಾದ ಇಸ್ಲಾಮಿಕ್ ಸ್ಟೇಟ್‌ನ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಈ ಬಾಲಕ ನೆಲೆಸಿದ್ದ. ಐಎಸ್‌ನ  ಗೂಂಡಾಗಳು ಈತನನ್ನು ಹಿಗ್ಗಾಮುಗ್ಗಾ ಥಳಿಸಿದ ನಂತರ ಈತ ಪಶ್ಚಿಮದ ದೇಶಕ್ಕೆ ಪರಾರಿಯಾಗಲು ನಿರ್ಧರಿಸಿದ.

ಅಹ್ಮದ್ ತನ್ನ ಕುಟುಂಬವನ್ನು ಅಲ್ಲಿಯೇ ಬಿಟ್ಟು ಬಂದಿದ್ದಾನೆ. ಅವರನ್ನು ನೇರವಾಗಿ ಸಂಪರ್ಕಿಸುವುದಕ್ಕೂ ಆತನಿಗೆ ಭಯ ಇದೆ. ಯಾಕೆಂದರೆ ಅವರನ್ನು ಸಂಪರ್ಕಿಸಿದ್ದು ಐಎಸ್‌ಗೆ ಗೊತ್ತಾದರೆ ಕುಟುಂಬ ಸದಸ್ಯರೂ ತೊಂದರೆಗೆ ಸಿಕ್ಕಿಕೊಳ್ಳುತ್ತಾರೆ. ಕುಟುಂಬಕ್ಕೆ ತೊಂದರೆ ಆಗದಿರಲಿ ಎಂಬ ಕಾರಣಕ್ಕೆ ಈತನ ನಿಜವಾದ ಹೆಸರು ಅಥವಾ ತವರೂರನ್ನು ನಾನು ಬಹಿರಂಗಪಡಿಸುತ್ತಿಲ್ಲ. ಆದರೆ ಅಹ್ಮದ್ ಹೇಳಿರುವ ಕತೆ ನಿಜ ಎಂದು ವಲಸೆ ಬಂದಿರುವ ಈತನ ಸಂಬಂಧಿಕರು ದೃಢಪಡಿಸುತ್ತಾರೆ.

ಈ ಪ್ರದೇಶವನ್ನು ಐಎಸ್ ತನ್ನ ವಶಕ್ಕೆ ಪಡೆದುಕೊಂಡ ನಂತರ ಇಲ್ಲಿನ ಶಾಲೆಗಳನ್ನು ಮುಚ್ಚಲಾಗಿದೆ. ಹಾಗಾಗಿ ಅಹ್ಮದ್ ಅಲ್ಲಿನ ಔಷಧ ಅಂಗಡಿಯೊಂದರಲ್ಲಿ ಕೆಲಸ ಕಂಡುಕೊಂಡ. ಒಂದು ದಿನ ಅಂಗಡಿಯಲ್ಲಿ ಯಾವುದೋ ಒಂದು ಔಷಧ ಮುಗಿದು ಹೋಯಿತು. ಹಾಗಾಗಿ ಆ ಔಷಧ ಪಡೆದುಕೊಳ್ಳುವುದಕ್ಕಾಗಿ ಅಹ್ಮದ್ ಬೇರೊಂದು ಔಷಧ ಅಂಗಡಿಗೆ ಹೋದ. ಆದರೆ ಅದು ಮಹಿಳೆಯೊಬ್ಬರು ನಡೆಸುವ ಔಷಧದ ಅಂಗಡಿಯಾಗಿತ್ತು. ಅಲ್ಲಿ ಮಹಿಳಾ ಗ್ರಾಹಕರಿಗೆ ಮಾತ್ರ ಅವಕಾಶ ಇತ್ತು. ಹಾಗಾಗಿ ಅಹ್ಮದ್‌ನನ್ನು ಬಂಧಿಸಲಾಯಿತು.

‘ನಾನು ಮಹಿಳೆಯೊಂದಿಗೆ ಮಾತನಾಡಿದೆ ಎಂಬ ಕಾರಣಕ್ಕೆ ನನ್ನ ತಲೆ ಕಡಿಯಲು ಅವರು ಬಯಸಿದ್ದರು’ ಎಂದು ಘಟನೆಯನ್ನು ಅಹ್ಮದ್ ವಿವರಿಸುತ್ತಾನೆ. ನಂತರ ಅಹ್ಮದ್‌ನ ಬಿಡುಗಡೆಯಾಯಿತು. ಲೆಕ್ಕ ಹಾಕುವುದಕ್ಕೂ ಸಾಧ್ಯವಿಲ್ಲದಷ್ಟು ಶಿರಚ್ಛೇದಗಳನ್ನು ನಂತರ ಆತ ನೋಡಿದ್ದಾನೆ. ಪ್ರತಿ ಶುಕ್ರವಾರ ನಗರ ಮಧ್ಯದಲ್ಲಿ ಶಿರಚ್ಛೇದ ನಡೆಯುತ್ತದೆ. ಖಡ್ಗಧಾರಿ ಕೃತ್ಯ ಎಸಗುವುದನ್ನು ನೋಡುವುದಕ್ಕೆ ಬರುವಂತೆ ಪ್ರತಿಯೊಬ್ಬರನ್ನೂ ಬಲವಂತಪಡಿಸಲಾಗುತ್ತದೆ. ಶಿರಚ್ಛೇದಗೊಂಡ ದೇಹಗಳನ್ನು ಶಿಲುಬೆಗೇರಿಸಿದ ರೀತಿಯಲ್ಲಿ ಸ್ವಲ್ಪ ಸಮಯ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗುತ್ತದೆ.

‘ರಂಜಾನ್ ತಿಂಗಳಲ್ಲಿ ಯಾರಾದರೂ ಉಪವಾಸ ಮಾಡಿಲ್ಲ ಎಂಬುದು ತಿಳಿದರೆ ಅಂಥವರನ್ನು ಗೂಡಿನಲ್ಲಿ ಕೂಡಿಹಾಕಿ ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಅವರನ್ನು ಮೂರು ದಿನ ಉಪವಾಸ ಕೆಡವಲಾಗುತ್ತದೆ’ ಎಂದು ಅಹ್ಮದ್ ಹೇಳುತ್ತಾನೆ. ಪ್ರಾರ್ಥನೆ ತಪ್ಪಿಸಿಕೊಂಡ ಆರೋಪವನ್ನು ಅಹ್ಮದ್‌ನ ಮೇಲೆಯೂ ಹೊರಿಸಲಾಗಿದೆ. ಇದಕ್ಕಾಗಿ ಆತನಿಗೆ 20 ಛಡಿಯೇಟಿನ ಶಿಕ್ಷೆ ವಿಧಿಸಲಾಗಿದೆ. ಸೌದಿಯ ವ್ಯಕ್ತಿಯೊಬ್ಬ ಕುದುರೆ ಛಾಟಿಯಿಂದ ಅಹ್ಮದ್‌ನ 20 ಛಡಿಯೇಟಿನ ಶಿಕ್ಷೆಯನ್ನು ಜಾರಿಗೊಳಿಸಿದ್ದ.

ಆನಂತರ ಕುಟುಂಬದವರು ವಿಧಿ ಇದ್ದಂತೆ ಆಗಲಿ ಎಂದು ಆಶೀರ್ವದಿಸಿ ಅಹ್ಮದ್‌ನನ್ನು ಕಳುಹಿಸಿಕೊಟ್ಟಿದ್ದಾರೆ. ಇಲ್ಲದೇ ಹೋದರೆ ಆತನನ್ನು ಬಲವಂತವಾಗಿ ಐಎಸ್ ತನ್ನ ಸೇನೆಗೆ ಸೇರಿಸುವ ಭೀತಿ ಅವರನ್ನು ಕಾಡತೊಡಗಿತ್ತು.

ತೀವ್ರವಾದದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಪರಾರಿಯಾಗಿರುವ ಈ 16ರ ಬಾಲಕನಿಗೆ ನಾನು ಏನು ಹೇಳಬೇಕು? ಹಲವು ಅಮೆರಿಕನ್ನರು ಈತನ ಬಗ್ಗೆ ಭೀತರಾಗಿದ್ದಾರೆ ಎಂದು ಹೇಳಲೇ? ಸ್ಯಾನ್ ಬರ್ನಾರ್ಡಿನೊ ಹತ್ಯೆಗಳು ಸಿರಿಯಾ ನಿರಾಶ್ರಿತರ ಮೇಲಿನ ಶಂಕೆಯನ್ನು ಇನ್ನಷ್ಟು ಹೆಚ್ಚಿಸಿವೆ ಎನ್ನಲೇ? ಚುನಾವಣೆಯ ವರ್ಷದಲ್ಲಿ ರಾಜಕಾರಣಿಗಳು ಇಂತಹ ವಿಷಯಗಳನ್ನು ಹುಡುಕಿ ಮತದಾರರ ಮನಸ್ಸಲ್ಲಿ ಭೀತಿಯನ್ನು ಸಾಧ್ಯವಾದಷ್ಟು ಹೆಚ್ಚಿಸಲು ಯತ್ನಿಸುತ್ತಾರೆ ಎಂದು ಹೇಳಲೇ?

ಲೆಸ್‌ಬಾಸ್‌ನಲ್ಲಿ ಅಂತಹ ಭೀತಿ ಯಾರಲ್ಲಿಯೂ ಇದ್ದಂತೆ ತೋರುವುದಿಲ್ಲ. ಸಿರಿಯಾ ನಿರಾಶ್ರಿತರು ಕಡಲ ತಡಿಯಲ್ಲಿ ಬಂದು ಇಳಿಯುವಾಗ ಪ್ರಥಮ ಚಿಕಿತ್ಸೆ ಕಾರ್ಯಕರ್ತರಾಗಿ ಅವರನ್ನು ಎದುರುಗೊಳ್ಳುವವರು ಇಸ್ರೇಲಿ ವೈದ್ಯರು. ಇವರೆಲ್ಲರೂ ಇಸ್ರಾಏಡ್ ಎಂಬ ಇಸ್ರೇಲಿ ವೈದ್ಯಕೀಯ ಸಂಘಟನೆಗಾಗಿ ಕೆಲಸ ಮಾಡುವವರು. ಇದನ್ನು ಕಂಡು ಆಶ್ಚರ್ಯಚಕಿತರಾಗಿದ್ದೇವೆ ಎಂದು ನಿರಾಶ್ರಿತರು ಹೇಳುತ್ತಾರೆ. ಅವರಲ್ಲಿ ಇದು ಹರ್ಷವನ್ನೂ ಉಂಟು ಮಾಡಿದೆ.

‘ಅವರನ್ನು ನೋಡಿ ಬಹಳ ಸಂತಸವಾಗಿದೆ’ ಎಂದು ಜೀನ್ಸ್ ತೊಟ್ಟು, ಮೇಕಪ್ ಮಾಡಿಕೊಂಡು, ತಲೆಗೆ ಏನನ್ನೂ ಧರಿಸದೆ ಕೂದಲನ್ನು ಸ್ವಚ್ಛಂದವಾಗಿ ಬಿಟ್ಟಿರುವ 20ರ ಯುವತಿ ತಮಾರಾ ಹೇಳುತ್ತಾರೆ. ಯಹೂದಿಗಳು, ಮುಸ್ಲಿಮರು, ಕ್ರೈಸ್ತರು ಜತೆ ಜತೆಯಾಗಿ ಇರುವ, ಆಕೆ ಹಂಬಲಿಸಿದ್ದ ಶಾಂತಿ ಮತ್ತು ಸಹಿಷ್ಣುತೆಯ ಪರಿಸರ ಅಲ್ಲಿ ಇದೆ. ಇಸ್ರೇಲಿಗಳಿಂದ ನೆರವು ಪಡೆದುಕೊಳ್ಳುವಾಗ ಬಹಳಷ್ಟು ನಿರಾಶ್ರಿತರಿಗೆ ರೋಮಾಂಚನವೇ ಆಗುತ್ತದೆ ಎಂದು ಇಸ್ರಾಏಡ್‌ನಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುವ ಇಸ್ರೇಲಿ ವೈದ್ಯ ಐರಿಸ್ ಆಡ್ಲರ್ ಹೇಳುತ್ತಾರೆ.

‘ನಾವು ಬಹಳಷ್ಟು ನಿರಾಶ್ರಿತರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ಇಲ್ಲಿಗೆ ಬಂದು ಸೇರಿದ ನಂತರ ಹೆರಿಗೆ ಆದ ತಾಯಿಯೊಬ್ಬರ ಜತೆಗೂ ಸಂಪರ್ಕದಲ್ಲಿದ್ದೇವೆ’ ಎಂದು ಐರಿಸ್‌ ಆಡ್ಲರ್‌ ಹೇಳುತ್ತಾರೆ. ಇಸ್ರೇಲ್‌ ನೆರವು ಕಾರ್ಯಕರ್ತರ ಬಗ್ಗೆ ದ್ವೇಷ ವ್ಯಕ್ತವಾಗಿರುವುದು ನಿರಾಶ್ರಿತರಿಂದಲ್ಲ, ಬದಲಿಗೆ, ಯುರೋಪ್‌ನ ಕೆಲವು ಸ್ವಯಂಸೇವಕರಿಂದ ಎನ್ನುತ್ತಾರೆ ಐರಿಸ್‌.

ನಾವು ಅಮೆರಿಕನ್ನರು ಹೊರಗಿನ ಬೆದರಿಕೆಯನ್ನು ತಪ್ಪಾಗಿ ಗ್ರಹಿಸಿದ ಇತಿಹಾಸವನ್ನೇ ಹೊಂದಿದ್ದೇವೆ. 1938ರಲ್ಲಿ, ಮತ್ತೆ 1941ರಲ್ಲಿ ಯುರೋಪ್‌ನ ಯಹೂದಿ ಕುಟುಂಬವೊಂದು ಹತಾಶವಾಗಿ ಅಮೆರಿಕದಲ್ಲಿ ನಿರಾಶ್ರಿತ ಸ್ಥಾನ ಪಡೆಯಲು ಇನ್ನಿಲ್ಲದ ಯತ್ನ ನಡೆಸಿತ್ತು. ಅದು ಆ್ಯನ್‌ ಫ್ರಾಂಕ್‌ ಅವರ ಕುಟುಂಬ. ಇದೇ ರೀತಿ ಸಾವಿರಾರು ಕುಟುಂಬಗಳು ಯತ್ನಿಸಿದ್ದವು.  ನಂತರ ನಾಝಿಗಳು ಆ್ಯನ್‌ ಅವರನ್ನು ಹತ್ಯೆ ಮಾಡಿದರು. ಒಂದು ರೀತಿಯಲ್ಲಿ ಈ ಹತ್ಯೆಯಲ್ಲಿ ಅಮೆರಿಕ ಕೂಡ ಷಾಮೀಲಾದಂತೆ ಆಯಿತು.

‘ಐಎಸ್‌ನಂತಹ ಇಸ್ಲಾಮಿಕ್‌ ಉಗ್ರರಿಂದ ನಮಗೆ ದೊಡ್ಡ ಬೆದರಿಕೆ ಇದೆ. ಇದನ್ನು ನಾವು ಅತ್ಯಂತ ಚಾತುರ್ಯದಿಂದ ಎದುರಿಸಬೇಕು’ ಎಂದು ನಿರಾಶ್ರಿತರಿಗಾಗಿ ಕೆಲಸ ಮಾಡುತ್ತಿರುವ ಹ್ಯೂಮನ್‌ ರೈಟ್ಸ್‌ ವಾಚ್‌ನ ಪೀಟರ್‌ ಬೌಕಾರ್ಟ್‌ ಹೇಳುತ್ತಾರೆ.

‘ಐಎಸ್‌ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಿರುವ ಜನರನ್ನು ತಿರಸ್ಕರಿಸುವ ಮತ್ತು ಅವಮಾನಿಸುವ ಮೂಲಕ ಮಧ್ಯಪ್ರಾಚ್ಯದ ಬಹು ಭಾಗದ ಜನರ ಸಿಟ್ಟಿಗೆ ನಾವು ಕಾರಣವಾಗುತ್ತಿದ್ದೇವೆ. ಸಿರಿಯಾ ನಿರಾಶ್ರಿತರನ್ನು ತಿರಸ್ಕರಿಸುವ ಮೂಲಕ ಪಶ್ಚಿಮದ ವಿರುದ್ಧ ಐಎಸ್‌ ನಡೆಸುತ್ತಿರುವ ಅಪಪ್ರಚಾರಕ್ಕೆ ಗೆಲುವು ದೊರೆಯುವಂತೆ ನಾವು ಮಾಡುತ್ತಿದ್ದೇವೆ. ಅಪಪ್ರಚಾರದಲ್ಲಿ ಐಎಸ್‌ ಗೆಲ್ಲುವುದೇ ಇದರ ಅಂತಿಮ ಫಲಿತಾಂಶವಾಗಿದೆ’ ಎಂದು ಪೀಟರ್‌ ವಿಶ್ಲೇಷಿಸುತ್ತಾರೆ.

ನಮ್ಮ ಸುರಕ್ಷತೆಗೆ ಇರುವ ಬೆದರಿಕೆಯನ್ನು ನಿಭಾಯಿಸುವ ಇಚ್ಛೆ ಇದ್ದರೆ ರಾಜಕಾರಣಿಗಳು ದೂರದಿಂದ ಬಂದಿರುವ ನಿರಾಶ್ರಿತರ ಬದಲಿಗೆ ದೇಶದೊಳಗೇ ಇರುವ ಭಯೋತ್ಪಾದಕರು ಮತ್ತು ಬಂದೂಕುಗಳ ಬಗ್ಗೆ ಗಮನ ಹರಿಸುವುದು ಅಗತ್ಯ. ಭಯೋತ್ಪಾದನೆ ನಿಗಾ ಪಟ್ಟಿಯಲ್ಲಿರುವ ವ್ಯಕ್ತಿಗಳು ಬಂದೂಕು ಖರೀದಿ ಮಾಡುವುದನ್ನು ತಡೆಯಲು ಸೆನೆಟ್‌ ನಿರಾಕರಿಸಿರುವುದು ಅಸಂಗತವಾಗಿದೆ; ಶಂಕಿತ ಭಯೋತ್ಪಾದಕರು ವಿಮಾನ ಏರುವುದು ಸಾಧ್ಯವಿಲ್ಲ, ಆದರೆ ಅವರು ಅತ್ಯಾಧುನಿಕ ಬಂದೂಕುಗಳನ್ನು ಸುಲಭವಾಗಿ ಖರೀದಿಸಬಹುದು. ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿಗಳು ನಿರಾಶ್ರಿತರಲ್ಲಿ ಭೀತಿ ಸೃಷ್ಟಿಸುವುದನ್ನು ನಿಲ್ಲಿಸಬೇಕು. 9/11 ಘಟನೆಯ ನಂತರ 7.85 ಲಕ್ಷ ನಿರಾಶ್ರಿತರು ಅಮೆರಿಕದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಆದರೆ ಇವರಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಭಯೋತ್ಪಾದನೆ ದಾಳಿಯಲ್ಲಿ ಅಮೆರಿಕದ ಯಾವೊಬ್ಬ ವ್ಯಕ್ತಿಯನ್ನು ಕೊಂದ ಕೃತ್ಯದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿಲ್ಲ.

‘ನಾವೂ ಮನುಷ್ಯರೇ ಮತ್ತು ನಮಗೂ ಬದುಕುವ ಹಕ್ಕು ಇದೆ’ ಎಂದು ಇಲ್ಲಿನ ಶಿಬಿರದಲ್ಲಿ ಇರುವ, ವಕೀಲೆಯಾಗಲು ಬಯಸುತ್ತಿರುವ 18 ವರ್ಷ ವಯಸ್ಸಿನ ರಹಾಫ್‌ ಎಂಬ ಯುವತಿ ಹೇಳುತ್ತಾರೆ. ‘ನಾವು ಭಯೋತ್ಪಾದಕರಲ್ಲ, ನಾವು ಯುದ್ಧದಿಂದ ದೂರ ಓಡಿ ಬರುತ್ತಿರುವವರು. ನನ್ನ ಮಕ್ಕಳು ಶಾಂತ ಪರಿಸ್ಥಿತಿಯಲ್ಲಿ ಬದುಕುವುದನ್ನು ನಾನು ಬಯಸುತ್ತಿದ್ದೇನೆ’ ಎಂದು ಅವರು ಹೇಳುತ್ತಾರೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT