ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದನವಾಳುವಿನಲ್ಲಿ ಸತ್ಯಾಗ್ರಹ

ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ
Last Updated 18 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮೈಸೂರು: ಶ್ರಮ ಸಂಸ್ಕೃತಿಯ ಪ್ರತೀಕವಾದ ಖಾದಿ ಮತ್ತು ಕೈಮಗ್ಗ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ‘ಫ್ರೆಂಡ್ಸ್ ಆಫ್ ದಿ ಹ್ಯಾಂಡ್‌ಲೂಮ್’ ಬಳಗದ ವತಿಯಿಂದ ನಂಜನಗೂಡು ತಾಲ್ಲೂಕು ಬದನವಾಳುವಿನಲ್ಲಿ ಏ. 19ರಂದು ಬದನವಾಳು ಸತ್ಯಾಗ್ರಹ ಮತ್ತು ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ ನಡೆಯಲಿದೆ.

ನಗರದ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಬುಧವಾರ ನಡೆದ ಸಭೆಯಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ, ‘ಬದನವಾಳು ಸತ್ಯಾಗ್ರಹ ಚಾರಿತ್ರಿಕ ಬೆಳವಣಿಗೆಯಾಗಲಿದೆ. ಸರ್ಕಾರ ತನ್ನ ಎದುರಿಗಿರುವ ಸಮಸ್ಯೆಗಳನ್ನು ಮೊದಲು ಪರಿಹರಿಸಲು ನೋಡುತ್ತದೆ ಹೊರತು ಉಳಿದ ಸಮಸ್ಯೆಗಳತ್ತ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಹೀಗಾಗಿ, ಸರ್ಕಾರವನ್ನು ದೂರಲು ಹೋಗುವುದಿಲ್ಲ. ಸಮಸ್ಯೆಗಳಿಗೆ ನಾವೇ ಮುಖಾಮುಖಿಯಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ‘ಬದನವಾಳು ಸತ್ಯಾಗ್ರಹ’ ನಡೆಸಲು ಹೆಜ್ಜೆ ಇಟ್ಟಿದ್ದೇವೆ’ ಎಂದು ತಿಳಿಸಿದರು.

‘ಮಾರ್ಚ್‌ 21ಕ್ಕೆ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಸತ್ಯಾಗ್ರಹಕ್ಕೆ ಚಾಲನೆ ದೊರಕಲಿದೆ. ಏ. 14ಕ್ಕೆ ಎಚ್‌.ಡಿ. ಕೋಟೆ, 15ರಂದು ಮೈಸೂರು, 16ರಂದು ಚಾಮರಾಜನಗರ ಹಾಗೂ ವಿವಿಧೆಡೆಯಿಂದ ಹೊರಡುವ ಪಾದಯಾತ್ರೆಗಳು ಏ. 18ರಂದು ತಗಡೂರು ತಲುಪಲಿವೆ. ಅಂದು ಹಿರಿಯರ ಸಮಾವೇಶ ನಡೆಯಲಿದೆ. ಏ.19ರಂದು ಬದನವಾಳುವಿನಲ್ಲಿ ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ ನಡೆಯಲಿದೆ’ ಎಂದು ಹೇಳಿದರು.

ಸಾಹಿತಿ ದೇವನೂರ ಮಹಾದೇವ ಮಾತನಾಡಿ, ‘ಸ್ವಾತಂತ್ರ್ಯ ಹೋರಾಟದ ಸಂದರ್ಭವಾಗಿದ್ದರೆ ಈ ಹೋರಾಟದ  ಕನಸನ್ನು ಬೆಸುಗೆ ಮಾಡಬಹುದಿತ್ತು. ಆದರೆ, ಈಗ ನಾವು ತಬ್ಬಲಿಗಳಂತೆ ನಿಂತಿದ್ದೇವೆ. ಯಂತ್ರ ನಾಗರಿಕತೆಯನ್ನು ಜಾಗರೂಕತೆಯಿಂದ, ಸಾಧ್ಯವಾದಷ್ಟೂ ಜನರಿಗೆ ನೋವಾಗದಂತೆ ಕಳಚಬೇಕೆಂದು ಸತ್ಯಾಗ್ರಹ ಕರೆ ನೀಡಲು ಹೊರಟಿದೆ. ಯಂತ್ರಗಳು ಮನುಷ್ಯನನ್ನು ಚರ್ಮದಂತೆ ಅಂಟಿಕೊಂಡಿವೆ. ಆ ಚರ್ಮವನ್ನು ನೋವಾಗದಂತೆ, ರಕ್ತ ಬರದಂತೆ ಕಳಚಬೇಕಿದೆ’ ಎಂದರು.

ಭಾರತೀಯ ಜನ ವಿಜ್ಞಾನ ಸಂಸ್ಥೆಯ ಯತಿರಾಜ್ ಮಾತನಾಡಿದರು. ಸತ್ಯಾಗ್ರಹದ ಲಾಂಛನವನ್ನು ಹೋರಾಟಗಾರ್ತಿ ಮೀರಾ ನಾಯಕ ಬಿಡುಗಡೆಗೊಳಿಸಿದರು. ಕಾರವಾರದ ಥಿಯೊ ಬಿ. ಸಿದ್ಧಿ, ತೆಲಂಗಾಣದ ಉಷಾ ರಾವ್ ಇದ್ದರು.

ಘೋಷಣೆಗಳು
* ಕೈಮಗ್ಗ ವಸ್ತ್ರವು ನಾಳಿನ ವಸ್ತ್ರ
* ಪಾರಂಪರಿಕ ಕೃಷಿಯು ನಾಳಿನ ಕೃಷಿ
* ಮಾತೃಭಾಷೆ ನಾಳಿನ ಭಾಷೆ
* ವಿಕೇಂದ್ರೀಕರಣವು ನಾಳಿನ ರಾಜಕಾರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT