ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮುಖಿ ಹಸ್ತಪ್ರತಿ ಕಥನ

Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹಸ್ತಪ್ರತಿ ಸಂಕಥನ
ಲೇ: ಡಾ. ವೀರೇಶ ಬಡಿಗೇರ
ಬೆಲೆ: ರೂ. 160
ಪ್ರ: ಮಯ ಪ್ರಕಾಶನ, ಕಮಲಾಪುರ

ಬಿಬ್ಲಿಯೋಥಿಕಾ ಕರ್ನಾಟಿಕಾ ಸರಣಿಯ ಕೃತಿಗಳ ಪ್ರಕಟಣೆಗೆ ಮೊದಲು ಬಹುಶಃ ಗ್ರಂಥ ಸಂಪಾದನೆಯ ಬಗೆಗಾಗಲೀ, ಹಸ್ತಪ್ರತಿಗಳ ಬಗೆಗಾಗಲೀ ಕೆಲವು ಆಸಕ್ತ ವಿದ್ವಾಂಸರ ಹೊರತಾಗಿ ಇತರರಿಗೆ ಹೆಚ್ಚಿನ ಪ್ರವೇಶವಿರಲಿಲ್ಲ ಎನಿಸುತ್ತದೆ. ಡಿ.ಎಲ್. ನರಸಿಂಹಾಚಾರ್ ಅವರ ‘ಗ್ರಂಥ ಸಂಪಾದನ ಶಾಸ್ತ್ರ’ ಪ್ರಕಟವಾದ ನಂತರ ಹಸ್ತಪ್ರತಿಗಳು ಮತ್ತು ಅವುಗಳ ಸಂಪಾದನ ವಿಧಾನವು ಎಲ್ಲರ ಗಮನಕ್ಕೆ ಬಂದಿರುವ ಸಾಧ್ಯತೆಗಳಿವೆ.

ಮೊದಲಿಗೆ ಮೈಸೂರಿನ ಓರಿಯಂಟಲ್ ಲೈಬ್ರರಿ, ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ, ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಕನ್ನಡ ಪೀಠ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಮತ್ತು ಕೆಲವು ಆಸಕ್ತ ಮಠಗಳು ತಮ್ಮ ಸಂಗ್ರಹದಲ್ಲಿದ್ದ ಹಸ್ತಪ್ರತಿಗಳ ಬಗ್ಗೆ ಕಾರ್ಯೋನ್ಮುಖರಾಗಿ ಹಲವು ಮಹತ್ವದ ಕೃತಿಗಳು ಬೆಳಕಿಗೆ ಬರಲು ಕಾರಣವಾಗಿವೆ. ಕೆಲವು ವರ್ಷಗಳಿಂದೀಚೆಗೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ಈ ನಿಟ್ಟಿನಲ್ಲಿ ಸಾರ್ಥಕ ಕೆಲಸ ಮಾಡುತ್ತಿದೆ.

ಡಾ. ವೀರೇಶ ಬಡಿಗೇರ ಅವರ ‘ಹಸ್ತಪ್ರತಿ ಸಂಕಥನ’ವು ಹಸ್ತಪ್ರತಿಶಾಸ್ತ್ರ ಕ್ಷೇತ್ರದಲ್ಲಿ ಆಗಿರುವ, ಆಗುತ್ತಿರುವ ಮತ್ತು ಆಗಬೇಕಾದ ಅಧ್ಯಯನಗಳತ್ತ ಗಮನ ಸೆಳೆಯುತ್ತದೆ. ವಸಾಹತುಶಾಹಿ ಅಧ್ಯಯನ ವಿಧಾನವು ಭಾರತದಲ್ಲಿ ಕಣ್ಮರೆಯಾದಂತಿದ್ದ ಪುರಾತತ್ವ ಮತ್ತು ಸಾಂಸ್ಕೃತಿಕ ಅಧ್ಯಯನ ದತ್ತ ದೃಷ್ಟಿ ಹರಿಸಲು ಕಾರಣವಾಯಿತು. ಪಾಶ್ಚಾತ್ಯರ ಅಪೇಕ್ಷೆ ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ಈ ಅಧ್ಯಯನ ನಡೆಯಿತು.

ಹತ್ತೊಂಬತ್ತು ಲೇಖನಗಳನ್ನು ಮೂರು ಪ್ರತ್ಯೇಕ ವಿಭಾಗಗಳಲ್ಲಿ ವಿಂಗಡಿಸಿ, ಓದುಗರಿಗೆ ಒದಗಿಸಿರುವ ಬಡಿಗೇರರ ಶ್ರಮ ಮತ್ತು ಅಚ್ಚುಕಟ್ಟುತನವನ್ನು ಪ್ರತಿಯೊಂದು ಲೇಖನದಲ್ಲೂ ಕಾಣಬಹುದು. ಆಧುನಿಕತೆಯು ನಿರೀಕ್ಷಿಸುವ ಹಲವು ಮಾದರಿಗಳನ್ನು ಹೊರತುಪಡಿಸಿ, ಇಂದಿಗೆ ಕೇವಲ ಜ್ಯೋತಿಷ್ಯ, ಪ್ರಶ್ನಶಾಸ್ತ್ರ, ನಿಧಿಶಾಸ್ತ್ರ ಮತ್ತು ಜಲಶಾಸ್ತ್ರಗಳಿಗೆ ಸಂಬಂಧಿಸಿದ ಹಸ್ತಪ್ರತಿಗಳನ್ನು ಕುರಿತ ಆಸಕ್ತಿ ಮತ್ತು ನಿರೀಕ್ಷೆಗಳನ್ನು ಅಲ್ಲಗಳೆದರೂ ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ಹಸ್ತಪ್ರತಿಗಳಿಂದ ಆಗಿರುವ ಉಪಕಾರವನ್ನು ಮರೆಯುವಂತಿಲ್ಲ.

ಕಾಗದದ ಬಳಕೆಗೆ ಮೊದಲು ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ, ಶ್ರುತಿ ಮತ್ತು ಸ್ಮೃತಿಯನ್ನು ಹೊರತುಪಡಿಸಿದ ಯಾವುದೇ ಕೃತಿಯು ಬರಹದ ಮೂಲಕ ಲಭ್ಯವಾಗಿದ್ದುದು ಭೂರ್ಜ್ವ ಪತ್ರ, ತಾಡೋಲೆ, ಓಲೆಗರಿ ಅಥವಾ ಕಡತಗಳ ಮೂಲಕ ಮಾತ್ರ ಎಂದು ತಿಳಿದಿದೆ. ನೀರು, ಬೆಂಕಿ, ತೈಲಗಳ ಸಂಪರ್ಕ ಮಾತ್ರವಲ್ಲದೆ, ಇನ್ನೂ ಹಲವು ಕಾರಣಗಳಿಂದ ಹಾಗೂ ನಿರಾಸಕ್ತಿ ಮತ್ತು ಬೇಜವಾಬ್ದಾರಿಯಿಂದಲೂ ಹಾಳಾಗಿರುವ ಮತ್ತು ಹಾಳಾಗುವ ಹಸ್ತಪ್ರತಿಗಳನ್ನು ರಕ್ಷಿಸುವ ಮತ್ತು ಅಧ್ಯಯನ ಮಾಡಿ, ಅಪರೂಪದ ಅಪ್ರಕಟಿತ ಕೃತಿಗಳ ಪ್ರಕಟಣೆ ಮತ್ತು ಲಭ್ಯ ಗ್ರಂಥಗಳ ಪಾಠ ಪರಿಷ್ಕರಣೆಗೆ ಅವಕಾಶ ಮಾಡಿಕೊಳ್ಳುವ ಸಲುವಾಗಿ ಹಸ್ತಪ್ರತಿಗಳನ್ನು ಕುರಿತ ತಿಳಿವಳಿಕೆ ಅವಶ್ಯಕ.

ಹಸ್ತಪ್ರತಿಗಳ ಬಗೆಗಿನ ಪ್ರಾಥಮಿಕ ತಿಳಿವಳಿಕೆ ಮತ್ತು ಈ ನಿಟ್ಟಿನಲ್ಲಿ ಈವರೆಗೆ ಆಗಿರುವ ಅಧ್ಯಯನಗಳ ಒಂದು ಪಕ್ಷಿನೋಟವನ್ನು ಮೊದಲ ಭಾಗದಲ್ಲಿ ಕಾಣಬಹುದು. ಕೆಲವು ಪ್ರದೇಶಗಳಲ್ಲಿ ಆಗಿರುವ ಹಸ್ತಪ್ರತಿಗಳ ಸಂಗ್ರಹಣೆ, ಲಿಪಿಕಾರರು ಮತ್ತು ಪೋಷಕರನ್ನು ಕುರಿತ ಲೇಖನಗಳು ಈವರೆಗೆ ಆಗಿರುವ ಕೆಲಸಗಳ ಮಾಹಿತಿ ನೀಡುತ್ತವೆ. ‘ವಸಾಹತುಶಾಹಿ ಅಧಿಕಾರಿಗಳ ಹಿತಾಸಕ್ತಿಗೆ ಪ್ರಯೋಜನ’ಕಾರಿಯಾದ ಯಾವುದೇ ಅಧ್ಯಯನದ ಪ್ರಾಥಮಿಕ ತಿಳಿವಳಿಕೆಯು ಅಗತ್ಯ. ಈ ನಿಟ್ಟಿನಲ್ಲಿ ಮೊದಲ ಭಾಗದ ಏಳು ಲೇಖನಗಳು ಮುಖ್ಯ ಮಾಹಿತಿ ನೀಡುತ್ತವೆ. ಹಸ್ತಪ್ರತಿಗಳ ಅಧ್ಯಯನದ ಆರಂಭಘಟ್ಟದಲ್ಲಿ ಶ್ರಮಿಸಿದ ವಿದ್ವಾಂಸರು ಮತ್ತು ಹಸ್ತಪ್ರತಿಗಳ ಸಂಗ್ರಹದ ಸ್ಥೂಲ ವಿಚಾರಗಳು ಈ ಲೇಖನಗಳಲ್ಲಿವೆ. ಕವಿರಾಜಮಾರ್ಗದ ಹಸ್ತಪ್ರತಿ ದೊರೆತ ಗುಲ್ಬರ್ಗಾ ಜಿಲ್ಲೆಯ ಹಸ್ತಪ್ರತಿ ಸಂಪತ್ತಿನ ಬಗ್ಗೆ ವಿಷಯ ಸಂಗ್ರಹಿಸುವ ಹೊತ್ತಿನಲ್ಲಿ ಅಲ್ಲಿನ ಲಿಪಿಕಾರರ ಬಗ್ಗೆ ವಿವರವಾದ ಮಾಹಿತಿ ಸಂಗ್ರಹಿಸಿ ದಾಖಲಿಸಿದ್ದಾರೆ.

ಎರಡನೆಯ ಭಾಗದಲ್ಲಿನ ನಾಲ್ಕು ಲೇಖನಗಳು ಹಲವು ಕುತೂಹಲಕಾರಿ ವಿಷಯಗಳನ್ನು ಪ್ರ್ಸಸ್ತಾಪಿಸಿವೆ. ವಿಚಾರವಾದಿಗಳ ಪ್ರಶ್ನೆಗೆ ಅವಕಾಶಗಳಿರುವ ಫಲಜ್ಯೋತಿಷ್ಯ, ಪ್ರಶ್ನಶಾಸ್ತ್ರ, ನಿಧಿ, ಜಲಶಾಸ್ತ್ರ ಇತ್ಯಾದಿ ವಿಷಯಗಳು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಪ್ರಶ್ನಾರ್ಹವಾಗಿದ್ದರೂ, ಲೇಖಕರು ಇವು ಅಲೌಕಿಕವೇನಲ್ಲ ಎಂದು ತಿಳಿಸುತ್ತಲೇ, ಇವು ಮನುಷ್ಯನ ಭಾವನೆಗಳನ್ನು ದೃಢಗೊಳಿಸುವ ಒಂದು ಮನೋವೈಜ್ಞಾನಿಕ ಪ್ರಕ್ರಿಯೆ ಎಂದಿದ್ದಾರೆ. ಒಂದೆಡೆ ಮಿಥ್ಯಾಜ್ಞಾನ ಎಂದು, ಮತ್ತೊಂದೆಡೆ ಮನೋವಿಜ್ಞಾನ ಎಂದು ಪರಿಗಣಿಸುವುದು ಎಷ್ಟರ ಮಟ್ಟಿಗೆ ತಾರ್ಕಿಕ ಎಂಬ ಪ್ರಶ್ನೆಗೆ ಇಂತಹ ಅಭಿಪ್ರಾಯಗಳು ಅವಕಾಶ ಕಲ್ಪಿಸುತ್ತವೆ. ಹಲವು ಮಹತ್ವದ ಚರ್ಚೆಗಳಿಗೆ ಅವಕಾಶವಿರುವ ಲೇಖನಗಳು ಈ ಸಂಕಲನದಲ್ಲಿವೆ.

ಗ್ರಂಥಸಂಪಾದನೆಯನ್ನು ಸಾಹಿತ್ಯ ಅಧ್ಯಯನಕ್ಕಿಂತ ಸಾಮಾಜಿಕ, ಸಾಂಸ್ಕೃತಿಕ ಅಧ್ಯಯನವನ್ನಾಗಿ ಪರಿಭಾವಿಸಲು ಅಪೇಕ್ಷೆ ಪಡುವ ಲೇಖಕರು ಈ ನಿಟ್ಟಿನಲ್ಲಿ ಆಗಿರುವ ಕೆಲವು ಮಹತ್ವದ ಅಧ್ಯಯನಗಳತ್ತ ಬೆರಳು ತೋರಿದ್ದಾರೆ. ಒಂದು ಹಂತದಲ್ಲಿ ಕಾಣುವ ಹಸ್ತಪ್ರತಿಗಳ ಕೊರತೆಗೆ ಕಾರಣಗಳನ್ನು ಹುಡುಕುವ ಹೊತ್ತಿನಲ್ಲಿ ಹಲವು ಚರ್ಚೆಗಳಿಗೆ ಅವಕಾಶ ಕಲ್ಪಿಸುವ ಲೇಖಕರು, ಹಸ್ತಪ್ರತಿಗಳ ಪಠ್ಯಗಳು ಹಲವು ಬಾರಿ ಸಾಮ್ರಾಜ್ಯಶಾಹಿ ಧೋರಣೆಗಳಾಗುವುದನ್ನು ಸ್ಪಷ್ಟಪಡಿಸಿದ್ದಾರೆ. ಹಸ್ತಪ್ರತಿ/ಹಸ್ತಪ್ರತಿಗಳ ಪಠ್ಯವು ಹಲವು ಆಯಾಮಗಳ ವಿಚಾರ ವಿನಿಮಯಕ್ಕೆ ಕಾರಣವಾಗುವುದು ಇಲ್ಲಿನ ಲೇಖನಗಳಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಿಗೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT