ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ ಬ್ಲಾಗರ್‌ಗಳನ್ನು ರಕ್ಷಿಸಿ

Last Updated 6 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬ್ಲಾಗ್‌ಗಳ ಮೂಲಕ ಅನಿಸಿಕೆ ವ್ಯಕ್ತಪಡಿಸುವುದು ಬಾಂಗ್ಲಾ ದೇಶದಲ್ಲಿ ಈಗ ಅಪಾಯಕಾರಿ ಕೆಲಸ. ಬಾಂಗ್ಲಾದೇಶಿ-ಅಮೆರಿಕನ್ ಕಂಪ್ಯೂಟರ್ ಎಂಜಿನಿಯರ್, ಸೆಕ್ಯುಲರ್ ತತ್ವಗಳನ್ನು ಪಸರಿಸುವ ‘ಮುಕ್ತೊ-ಮೋನಾ’ ಎಂಬ ವೆಬ್‌ಸೈಟ್ ಸಂಸ್ಥಾಪಕ ಅವಿಜಿತ್ ರಾಯ್ ಎನ್ನುವವರನ್ನು ಢಾಕಾದ ಬೀದಿಯೊಂದರಲ್ಲಿ ಕೊಲ್ಲಲಾಯಿತು. ನಾಸ್ತಿಕ ವಾದದ ಬಗ್ಗೆ ಒಲವು ಇರುವ ಬ್ಲಾಗಿಗ ವಶಿಕುರ್ ರೆಹಮಾನ್ ಎಂಬುವರನ್ನು ಕಳೆದ ವಾರ ಕೊಲೆ ಮಾಡಲಾಯಿತು. ಧರ್ಮದ ಕುರಿತು ವಶಿಕುರ್ ಹೊಂದಿದ್ದ ನಿಲುವೇ ಅವರ ಸಾವಿಗೆ ಕಾರಣವಾಯಿತು.

1947ರಲ್ಲಿ ಬ್ರಿಟಿಷರು ಭಾರತದಿಂದ ಹೊರನಡೆದರು. 1971ರಲ್ಲಿ ಬಾಂಗ್ಲಾದೇಶದ ಉದಯವಾಯಿತು. ಈ ನಡುವಿನ ಅವಧಿಯಲ್ಲಿ ನಾವು ಪಾಕಿಸ್ತಾನದ ಭಾಗವಾಗಿದ್ದೆವು. ತೀವ್ರವಾದಿ ನಿಲುವುಗಳಿರುವ ವ್ಯಕ್ತಿಗಳಿಂದ ಪಾಕಿಸ್ತಾನದಲ್ಲಿ ಯಾವುದೇ ಕೆಟ್ಟ ಘಟನೆ ನಡೆದಾಗ, ‘ಅಂಥ ಘಟನೆ ನಮ್ಮಲ್ಲೇ ಸಂಭವಿಸುತ್ತಿತ್ತೇನೋ…’ ಎಂದು ಬಾಂಗ್ಲಾದವರಾದ ನಾವು ನಮ್ಮ ನಮ್ಮಲ್ಲೇ ಹೇಳಿಕೊಳ್ಳುತ್ತೇವೆ. ಪಾಕಿಸ್ತಾನದ ಒಂದು ಭಾಗವಾಗಿ ನಾವಿಲ್ಲವಲ್ಲ, ದೇವರೇ ನಿನಗೊಂದು ಥ್ಯಾಂಕ್ಸ್ ಎಂದೂ ನಾವು ಹೇಳಿಕೊಳ್ಳುತ್ತೇವೆ.

ಆದರೆ, ನಾವೀಗ ಪಾಕಿಸ್ತಾನದ ಬಗ್ಗೆ ಚಿಂತಿಸುವ ಬದಲು ನಮ್ಮ ದೇಶದ ಬಗ್ಗೆಯೇ ಚಿಂತಿಸಬೇಕಾಗಿದೆ. ಕಳೆದ ಎರಡು ವರ್ಷಗಳಲ್ಲಿ ಮೂರು ಬ್ಲಾಗರ್‌ಗಳ ಕೊಲೆಯನ್ನು ಕಂಡ ಬಾಂಗ್ಲಾದ ಬಗ್ಗೆ ನಾವು ಆಲೋಚಿಸಬೇಕಾಗಿದೆ. ವಿತರಕನಿಗೆ ಬಂದ ಕೊಲೆ ಬೆದರಿಕೆಗಳ ಕಾರಣ ಪುಸ್ತಕವೊಂದನ್ನು ಮಾರಾಟದಿಂದ ಹಿಂದಕ್ಕೆ ಪಡೆದ, ರಾಯ್‌ನಂಥ ಬರಹಗಾರರನ್ನು ಹಗಲಿನಲ್ಲೇ ಕೊಲೆ ಮಾಡುವ ಜನ ಇರುವ ದೇಶದ ಬಗ್ಗೆ ನಾವು ಈಗ ಚಿಂತಿಸಬೇಕಿದೆ. ರಾಯ್‌ ಕೊಲೆ ಆಳವಾದ ಸಂದೇಶವನ್ನು ನೀಡುತ್ತದೆ. ತಮ್ಮ ಒಂದು ಪುಸ್ತಕದ ಪ್ರಕಾಶನಕ್ಕೆ ರಾಯ್, ಢಾಕಾದ ಎಕುಶೆ ಪುಸ್ತಕ ಮೇಳಕ್ಕೆ ಬಂದಿದ್ದರು.

ಬಾಂಗ್ಲಾ ಸ್ವಾತಂತ್ರ್ಯ ಹೋರಾಟದ ಕೇಂದ್ರವಾಗಿದ್ದ ಢಾಕಾ ವಿಶ್ವವಿದ್ಯಾಲಯ ಮೈದಾನದಲ್ಲಿ ಈ ಮೇಳ ನಡೆಯುತ್ತದೆ. ಸ್ವಾತಂತ್ರ್ಯದ ಪರ ಇದ್ದ ಬುದ್ಧಿಜೀವಿಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮಾರಣಹೋಮಕ್ಕೂ ಮುನ್ನ ದಾಳಿ ನಡೆಸಲು 1971ರಲ್ಲಿ ಪಾಕಿಸ್ತಾನಿ ಸೇನೆ ತೀರ್ಮಾನ ಕೈಗೊಂಡ ಜಾಗವೂ ಇದೇ. ಫೆಬ್ರುವರಿ 26ರಂದು ರಾಯ್ ಅವರು ವಿಶ್ವವಿದ್ಯಾಲಯದ ಆವರಣದಿಂದ ಹೊರಬಂದು ಮನೆ ಕಡೆ ಹೋಗುತ್ತಿದ್ದರು. ಕತ್ತಿ ಹಿಡಿದಿದ್ದ ಕೊಲೆಗಡುಕರು ರಾಯ್ ಮತ್ತು ಅವರ ಪತ್ನಿಯ ಮೇಲೆ ಮುಗಿಬಿದ್ದಿದ್ದು ಆವಾಗಲೇ.

ಬ್ಲಾಗರ್ ರಜೀಬ್ ಹೈದರ್‌ರನ್ನು 2013ರಲ್ಲಿ ಅವರ ನಿವಾಸದ ಬಳಿಯೇ  ಕೊಲ್ಲಲಾಯಿತು. ಬಾಂಗ್ಲಾ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪಾಕ್‌ ಪರ ಇದ್ದ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಮರಣದಂಡನೆ ವಿಧಿಸಬೇಕು ಎಂಬ ಆಂದೋಲನದಲ್ಲಿ ಹೈದರ್ ಮುಂಚೂಣಿಯಲ್ಲಿದ್ದರು. ಈ ಮೂಲಭೂತವಾದಿಗಳು ಯುದ್ಧದ ಸಂದರ್ಭದಲ್ಲಿ ನಡೆಸಿದ ದೌರ್ಜನ್ಯ ಸಾಬೀತಾಗಿತ್ತು.

ಕೊಲೆಗೀಡಾದ ಮೂವರಲ್ಲಿ ರೆಹಮಾನ್ ಸೌಮ್ಯ ವ್ಯಕ್ತಿ.  ಅಷ್ಟೇನೂ ಶಿಕ್ಷಣ ಪಡೆದಿರಲಿಲ್ಲ. ಅವರು ರಾಯ್ ಅವ ರಂತೆ ಪುಸ್ತಕ, ಲೇಖನ ಬರೆದವರಲ್ಲ. ಅವರು ಹೆಚ್ಚು ಬರೆದಿದ್ದು ಫೇಸ್‌ಬುಕ್‌ನಲ್ಲಿ. ಅವರು ಮೂಲಭೂತವಾದಿ ಗಳ ಕೆಂಗಣ್ಣಿಗೆ ಗುರಿಯಾಗಿದ್ದು ಏಕೆ ಗೊತ್ತಾ? ಅವರದ್ದು ‘ಹೇಳಿ ಮಾಡಿಸಿದ ಕೊಲೆ’ ಎಂಬುದು ಪೊಲೀಸರ ನಂಬಿಕೆ. ರೆಹಮಾನ್ ಅವರು ‘ಇಸ್ಲಾಂನ ವಿರುದ್ಧ ಬರೆಯುತ್ತಿದ್ದ’ ಕಾರಣಕ್ಕೆ ಕೊಲೆ ಮಾಡಿದ್ದೇವೆ ಎಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಇಬ್ಬರು ಮದರಸಾ ವಿದ್ಯಾರ್ಥಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.

ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡ ಕಾರಣ ಈ ಮೂವರು ಕೊಲೆಯಾದರು. ರಾಯ್ ಮತ್ತು ರೆಹಮಾನ್ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕವೇ ಜೀವಬೆದರಿಕೆಯೂ ಬಂದಿತ್ತು. ಮೂಲಭೂತವಾದವನ್ನು ವಿರೋಧಿಸುವ, ಸೆಕ್ಯುಲರ್ ಮೌಲ್ಯಗಳನ್ನು ಪ್ರತಿಪಾದಿಸುವ, ನಾಸ್ತಿಕ ಎಂದು ಹೇಳಿಕೊಳ್ಳುವ ‘ಬಾಂಗ್ಲಾದೇಶಿ ನಾಸ್ತಿಕ ಬ್ಲಾಗರ್’ಗಳು ಯಾರು ಎಂಬುದನ್ನು ಕೊಲೆ ಮಾಡಿಸಿದ ವ್ಯಕ್ತಿ ಅಂತರ್ಜಾಲದ ಮೂಲಕವೇ ಶೋಧಿಸಿದ್ದಿರಬೇಕು. ರೆಹಮಾನ್ ಎಂಬ ವ್ಯಕ್ತಿಯ ಬಗ್ಗೆ ತಾವೆಂದೂ ಕೇಳಿರಲಿಲ್ಲ, ಅವರು ಬರೆದಿದ್ದನ್ನು ಓದಿರಲಿಲ್ಲ ಎಂದು ಕೊಲೆ ಮಾಡಿದವರು ಒಪ್ಪಿಕೊಂಡಿದ್ದಾರೆ.

ಕೊಲೆಗಡುಕರಿಗೆ ಈ ಮೂವರನ್ನು ಕೊಲ್ಲಲು ನಿರ್ದಿಷ್ಟ ಕಾರಣ ಇರಲಿಲ್ಲ, ವೈಯಕ್ತಿಕ ದ್ವೇಷವೂ ಇರಲಿಲ್ಲ. ಯಾರನ್ನು ಕೊಲ್ಲಬೇಕು ಎಂಬುದನ್ನು ಹೊಸ ತಂತ್ರಜ್ಞಾನದ ಮೂಲಕ ಹುಡುಕಲಾಯಿತು, ಆದರೆ ಸಿದ್ಧ ಮಾದರಿಗಳನ್ನು ಅನುಸರಿಸಿ ಕೊಲ್ಲಲಾಯಿತು.
ಶೇಖ್ ಹಸೀನಾ ನೇತೃತ್ವದ ಸರ್ಕಾರ ಮೂಲಭೂತವಾದಿಗಳ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಜರುಗಿಸಿದೆ. ಭಯೋತ್ಪಾದಕ ಸಂಘಟನೆಗಳನ್ನು ಸರ್ಕಾರ ನಿಷೇಧಿಸಿದೆ, ಜಾತ್ಯತೀತ ತತ್ವ ದೇಶದ ಆಧಾರ ಸ್ತಂಭ ಎಂಬುದನ್ನು ಒತ್ತಿ ಹೇಳಿದೆ.

ಆದರೆ ವಿರೋಧ ಪಕ್ಷಗಳ ಜೊತೆಗಿನ ತಿಕ್ಕಾಟವು ಹಸೀನಾ ಸರ್ಕಾರ ಗುರಿ ಕಳೆದುಕೊಳ್ಳುವಂತೆ ಮಾಡುತ್ತಿದೆ. ಈ ವರ್ಷ, ಇದುವರೆಗೆ ನೂರಕ್ಕೂ ಹೆಚ್ಚು ಜನ ಪ್ರತಿಭಟನೆಗಳಲ್ಲೇ ಸಾವನ್ನಪ್ಪಿದ್ದಾರೆ. ಹಿಂಸೆಯ ಈ ಸುಳಿಯಿಂದ ಹೊರಬರಬೇಕು ಎಂದಿದ್ದರೆ, ಬಾಂಗ್ಲಾದ ಮುಖ್ಯವಾಹಿನಿಯ ಧಾರ್ಮಿಕ ಪಕ್ಷಗಳು, ಅವುಗಳ ಜೊತೆ ಗುರುತಿಸಿಕೊಂಡಿರುವ ಸಂಘಟನೆಗಳು ಬ್ಲಾಗರ್‌ಗಳ ಕೊಲೆಗೆ ಕಾರಣರಾದವರ ವಿರುದ್ಧ ನಿಲುವು ತಾಳಬೇಕು. ಜಗತ್ತಿನ ಬೇರೆ ಬೇರೆ ಕಡೆ ಮುಸ್ಲಿಮರಿಗೆ ಅನ್ಯಾಯ ಆಗುತ್ತಿದೆ ಎಂದು ಹೇಳುವಾಗ ಈ ಪಕ್ಷಗಳಲ್ಲಿ ಯಾವ ಗಟ್ಟಿತನ ಇರುತ್ತದೆಯೋ, ಬ್ಲಾಗರ್‌ಗಳ ಮೇಲಿನ ದಾಳಿಯನ್ನು ಖಂಡಿಸುವಾಗಲೂ ಅದೇ ಗಟ್ಟಿತನ ಕಾಣಬೇಕು.

ಆದರೆ ಹಾಗೆ ಆಗುವುದಿಲ್ಲ ಎಂಬ ಆತಂಕ ನನಗಿದೆ. ಸೆಕ್ಯುಲರ್‌ವಾದಿಗಳು ಮತ್ತು ಇಸ್ಲಾಮಿಕ್‌ವಾದಿಗಳ ನಡುವೆ, ಧರ್ಮನಿಷ್ಠರು ಮತ್ತು ನಾಸ್ತಿಕರ ನಡುವೆ, ಜಮಾತ್-ಎ-ಇಸ್ಲಾಮಿ ಮತ್ತು ಅವಾಮಿ ಲೀಗ್ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಗುತ್ತಿರುವ ವಿಷಕಾರಿ ರಾಜಕೀಯ ಸಂದರ್ಭದ ಬಲಿಪಶುಗಳೂ ಹೌದು ಈ ಬ್ಲಾಗರ್‌ಗಳು. ರಾಯ್ ಕೊಲೆಯಾದ ತಿಂಗಳ ನಂತರ ಅವರ ಪತ್ನಿ ರಫಿದಾ ಬೋನ್ಯಾ ಅಹಮದ್, ಸರ್ಕಾರದ ಕ್ರಿಯಾಹೀನತೆಯನ್ನು ಖಂಡಿಸಿದರು.  ‘ಸರ್ಕಾರ ಈ ರೀತಿ ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರಲ್ಲಿ ಸಿನಿಕ ಭಾವವನ್ನು, ಭಯೋತ್ಪಾದಕರಲ್ಲಿ ತಾವು ಅದಮ್ಯರು ಎಂಬ ಭಾವವನ್ನು ಹೆಚ್ಚಿಸುತ್ತದೆ’ ಎಂದು ಅವರು ಹೇಳಿದರು.

ಈಗ ಅಲ್ಲಿ ಇನ್ನೊಂದು ಜೀವ ಬಲಿಯಾಗಿದೆ. ಕಣ್ಣಿಗೆ ಕಾಣದ ಶಕ್ತಿಗಳು ಕೆಲಸ ಮಾಡುತ್ತಿರುವುದು ವ್ಯಕ್ತವಾಗುತ್ತಿದೆ. ಈ ಹಂತದಲ್ಲಿ ಸರ್ಕಾರ ನಿರ್ಣಾಯಕವಾಗಿ ಕೆಲಸ ಮಾಡಬೇಕು. ಬಾಂಗ್ಲಾದೇಶದ ಆತ್ಮವನ್ನು ಉಳಿಸಿಕೊಳ್ಳುವ ಈ ಹೋರಾಟದಲ್ಲಿ ಪ್ರಗತಿಪರ ಧ್ವನಿಯು ಧರ್ಮಾಂಧರ ವಿರುದ್ಧ ಜಯ ಸಾಧಿಸಬೇಕು.

ಲೇಖಕರು ಮಾನವಶಾಸ್ತ್ರಜ್ಞೆ, ಕಾದಂಬರಿಕಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT