ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಪಂಪ ಪ್ರಶಸ್ತಿ ಪ್ರದಾನಕ್ಕೆ ವಿರೋಧ

Last Updated 21 ಮೇ 2014, 19:30 IST
ಅಕ್ಷರ ಗಾತ್ರ

ಶಿರಸಿ (ಉತ್ತರ ಕನ್ನಡ): ಹಿರಿಯ ಕವಿ ಕಯ್ಯಾರ ಕಿಞಣ್ಣ ರೈ ಅವರಿಗೆ ಬೆಂಗಳೂರಿನಲ್ಲಿ ಪಂಪ ಪ್ರಶಸ್ತಿ ಪ್ರದಾನ ಮಾಡುವ ಸರ್ಕಾರದ ನಿಲುವಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಬನವಾಸಿ ಘಟಕ, ಕದಂಬ ಕನ್ನಡ ಸಂಘ, ಬನವಾಸಿ ವಲಯ ಅಭ್ಯುದಯ ಸಮಿತಿ ಸರ್ಕಾರದ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿವೆ.

1996ರಿಂದಲೂ ಈ ಪ್ರಶಸ್ತಿಯನ್ನು ಬನವಾಸಿಯಲ್ಲಿ ನಡೆಯುವ ಕದಂ­ಬೋತ್ಸವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತಿದೆ. 17 ವರ್ಷಗಳಲ್ಲಿ ನಾನಾ ಕಾರಣಕ್ಕಾಗಿ ಐವರು ಸಾಹಿತಿ­ಗಳನ್ನು ಹೊರತುಪಡಿ­ಸಿದರೆ ಉಳಿದ­ವರು ಬನವಾಸಿ­ಯಲ್ಲಿಯೇ ಪ್ರಶಸ್ತಿ ಸ್ವೀಕರಿಸಿದ್ದಾರೆ.

2 ವರ್ಷಗಳಿಂದ ನಿಂತು­ಹೋಗಿದ್ದ ಕದಂಬೋತ್ಸವವನ್ನು ರಾಜ್ಯ ಸರ್ಕಾರ ಈ  ವರ್ಷ ಜನವರಿಯಲ್ಲಿ ನಡೆಸಿತು. 2012 ಹಾಗೂ 2013ನೇ ಸಾಲಿನ ಪಂಪ ಪ್ರಶಸ್ತಿಯನ್ನು ಇದೇ ಕಾರ್ಯಕ್ರಮದಲ್ಲಿ ಪ್ರದಾನ ಮಾಡುವು­ದಾಗಿ ಹೇಳಿದ್ದ ಸರ್ಕಾರ, ಕೊನೆಯ ಕ್ಷಣದಲ್ಲಿ 2012ನೇ ಸಾಲಿನ ಪ್ರಶಸ್ತಿಯನ್ನು ಮಾತ್ರ ಘೋಷಿಸಿತು.

ಪ್ರಶಸ್ತಿಗೆ ಭಾಜನರಾದ ವಿದ್ವಾಂಸ ಡಿ.ಎನ್‌. ಶಂಕರ ಭಟ್ಟ ಪ್ರಶಸ್ತಿ ಸ್ವೀಕರಿ­ಸಲು ಬನವಾಸಿಗೆ ಬಾರದ ಕಾರಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳು ಅವರ ಮನೆಗೆ ತೆರಳಿ ಪ್ರಶಸ್ತಿ ನೀಡಿ ಗೌರವಿಸಿದ್ದರು.
‘ಪ್ರಸ್ತುತ ಘೋಷಿಸಿರುವ ಪ್ರಶಸ್ತಿ­ಯನ್ನು ಇದೇ 23ರಂದು ಬೆಂಗಳೂ­ರಿನಲ್ಲಿ ಪ್ರದಾನ ಮಾಡಲು ಸಿದ್ಧತೆ ನಡೆ­ದಿದೆ.

ಕದಂಬೋತ್ಸವಕ್ಕೆ ಶಂಕರ ಭಟ್ಟ ಅವರನ್ನು ಕರೆತರಲು ವಿಫಲವಾದ ಸರ್ಕಾರ ಈಗ ಬನವಾಸಿಯನ್ನು ಕಡೆ­ಗಣಿಸಿ ಪ್ರಶಸ್ತಿ ಪ್ರದಾನವನ್ನು ಬೆಂಗಳೂ­ರಿಗೇ ವರ್ಗಾಯಿಸುವ ಯತ್ನ ನಡೆಸಿದೆ’ ಎಂದು ಬನವಾಸಿ ಮಧುಕೇಶ್ವರ ದೇವಾ­ಲಯದ ಅಧ್ಯಕ್ಷ ಟಿ.ಜಿ.ನಾಡಿಗೇರ ಟೀಕಿಸಿದರು.
‘ಸಾಹಿತಿಗಳು ಇದ್ದಲ್ಲಿಗೇ ತೆರಳಿ ಪ್ರಶಸ್ತಿ ನೀಡುವ ದಯನೀಯ ಸ್ಥಿತಿ ಸರ್ಕಾರಕ್ಕೆ ಬರಬಾರದು.

ಪ್ರಶಸ್ತಿ ಸ್ವೀಕರಿಸುವವರು ಸಹ ಬನವಾಸಿಯ ಪವಿತ್ರ ಮಣ್ಣಿನ­ಲ್ಲಿಯೇ  ಸ್ವೀಕರಿಸಬೇಕು. ಬೆಂಗಳೂರಿ­ನಲ್ಲಿ ಪ್ರಶಸ್ತಿ ಪ್ರದಾನ ಮಾಡು­ವುದನ್ನು ಪ್ರಜ್ಞಾವಂತರು ವಿರೋ­ಧಿ­ಸಬೇಕು. ಸರ್ಕಾರದ ನಿಲುವು ಪಂಪನ ಅಭಿಮಾನಿಗಳಿಗೆ ನೋವು ತಂದಿದೆ’ ಎಂದು ಅವರು ವಿಷಾದಿಸಿದರು.
‘ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುವುದಾದರೆ ಸರ್ಕಾರದ ಪ್ರತಿಷ್ಠಿತ ಕದಂಬೋತ್ಸವ ಅರ್ಥ ಕಳೆದು­ಕೊಳ್ಳು­ತ್ತದೆ.

ಬನವಾಸಿಯಲ್ಲಿ ಪ್ರಶಸ್ತಿ ಪ್ರದಾನ ಮಾಡುವಂತೆ ಒತ್ತಡ ಸೃಷ್ಟಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ವಿಫಲರಾ­ದಂತೆ ಕಾಣುತ್ತದೆ’ ಎಂದು ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಸದಸ್ಯೆ ಪ್ರೊ. ವಿಜಯನಳಿನಿ ರಮೇಶ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT