ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ 12ನೇ ಸಮಗ್ರ ಪ್ರಶಸ್ತಿ

Last Updated 16 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಗುವಾಹಟಿ/ಶಿಲ್ಲಾಂಗ್: ಮೊದಲೇ ನಿರೀಕ್ಷಿಸಿದಂತೆ ಆತಿಥೇಯ ಭಾರತ  ತಂಡವು ಮಂಗಳವಾರ ಮುಕ್ತಾಯ ವಾದ 12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಭಾರತವು ಸತತ 12ನೇ ಬಾರಿ ಈ ಸಾಧನೆ ಮಾಡಿದೆ.

ಆತಿಥೇಯ ಕ್ರೀಡಾಪಟುಗಳು ಒಟ್ಟು 308 ಪದಕಗಳನ್ನು ಗೆದ್ದುಕೊಂಡಿದೆ. ಅದರಲ್ಲಿ 188 ಚಿನ್ನ, 99 ಬೆಳ್ಳಿ ಮತ್ತು 30 ಕಂಚಿನ ಪದಕಗಳು ಸೇರಿವೆ.  2010ರಲ್ಲಿ ನಡೆದಿದ್ದ ಕೂಟದಲ್ಲಿ ಭಾರತವು 175   ಪದಕಗಳನ್ನು ಜಯಿಸಿತ್ತು. 

ಈ ಬಾರಿಯ ಪದಕಗಳ ಪಟ್ಟಿಯಲ್ಲಿ  ಎರಡನೇ ಸ್ಥಾನ ಪಡೆದಿರುವ ಶ್ರೀಲಂಕಾ 186 (25 ಚಿನ್ನ, 63 ಬೆಳ್ಳಿ ಮತ್ತು 98 ಕಂಚು) ಪದಕಗಳು, ಮೂರನೇ ಸ್ಥಾನ ಪಡೆದ ಪಾಕಿಸ್ತಾನ 106 ಪದಕಗಳನ್ನು  (12 ಚಿನ್ನ, 37 ಬೆಳ್ಳಿ ಮತ್ತು 57 ಕಂಚು)  ತಮ್ಮದಾಗಿಸಿಕೊಂಡಿವೆ.

ಮೇರಿ, ಸರಿತಾಗೆ ಚಿನ್ನ: ಕೂಟದ ಅಂತಿಮ ದಿನವೂ ಭಾರತದ ಕ್ರೀಡಾ ಪಟುಗಳು ಪದಕಗಳ ಬೇಟೆಯಾಡಿದರು. ಮಹಿಳೆಯರ ಬಾಕ್ಸಿಂಗ್‌ನಲ್ಲಿ;  ಒಲಿಂಪಿಯನ್ ಎಂ.ಸಿ. ಮೇರಿ ಕೋಮ್  ಅವರು ಮಹಿಳೆಯರ ಬಾಕ್ಸಿಂಗ್‌ನ 51 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರು.  ಭುಜದ ಗಾಯದಿಂದಾಗಿ ಸುದೀರ್ಘ ವಿಶ್ರಾಂತಿ ಪಡೆದಿದ್ದ ಮೇರಿ ಕೋಮ್ ತಾವು ಬಾಕ್ಸಿಂಗ್ ರಿಂಗ್‌ಗೆ ಮರಳಿದ ಮೊದಲ ಸ್ಪರ್ಧೆಯಲ್ಲಿ ಜಯಭೇರಿ ಬಾರಿಸಿದರು. 

ಫೈನಲ್‌ನಲ್ಲಿ ಶ್ರೀಲಂಕಾದ ಅನೂಷಾ ಕೊಡಿಟುವಕ್ಕೂ ದಿಲ್‌ರುಕ್ಷಿ  ಅವರನ್ನು ಸೋಲಿಸಿದರು. ಕೇವಲ 90 ಸೆಕೆಂಡು ಗಳಲ್ಲಿ ಅವರು ತಮ್ಮ ಎದುರಾಳಿಯನ್ನು ನಾಕೌಟ್ ಮಾಡಿದರು.    ಐದು ಬಾರಿಯ ವಿಶ್ವ ಚಾಂಪಿಯನ್ ಮೇರಿ ನೀಡಿದ ಬಲಶಾಲಿ ಪಂಚ್‌ಗೆ ಆಯ ತಪ್ಪಿ ಬಿದ್ದ ಶ್ರೀಲಂಕಾ ಬಾಕ್ಸರ್‌ ಮಂಡಿಗೆ ಪೆಟ್ಟಾಯಿತು. ಪ್ರಥಮ ಚಿಕಿತ್ಸೆಯಿಂದ ಚೇತರಿಸಿಕೊಳ್ಳದ ಅವರು ಸ್ಪರ್ಧೆಯಿಂದ ಹಿಂದೆ ಸರಿದರು.

60 ಕೆಜಿ ವಿಭಾಗದಲ್ಲಿ  ಭಾರತದ ಸರಿತಾದೇವಿ ಕೂಡ  ಚಿನ್ನ ಗಳಿಸಿದರು.  ಏಷ್ಯನ್ ಕ್ರೀಡಾಕೂಟದಲ್ಲಿ ನಡೆದಿದ್ದ ವಿವಾದದ ನಂತರ ಒಂದು ವರ್ಷ ಅಮಾನತು ಶಿಕ್ಷೆಯನ್ನು ಸರಿತಾ ಎದುರಿಸಿದರು. ಅದರ ನಂತರ  ಅವರು ಈ ಕೂಟದಲ್ಲಿ ಸ್ಪರ್ಧಿಸಿದ್ದಾರೆ. ಫೈನಲ್‌ನಲ್ಲಿ ಅವರು ಶ್ರೀಲಂಕಾದ ಎಂ. ವಿದೂಷಿಕಾ ಪ್ರಬಾಧಿ ಅವರನ್ನು ಸೋಲಿಸಿದರು. ಸರಿತಾ 3–0 ಯಿಂದ ಜಯಿಸಿದರು.

ಏಷ್ಯನ್ ಕ್ರೀಡಾಕೂಟ ಪದಕವಿಜೇತ ಬಾಕ್ಸರ್ ಪೂಜಾ ಅವರು ಮಹಿಳೆಯರ ವಿಭಾಗದಲ್ಲಿ ಮತ್ತೊಂದು ಚಿನ್ನ ತಂದಿತ್ತರು. ಪೂಜಾ ಅವರು ನಿಲಾಂತಿ ಅಂದಾರವೀರ ಅವರನ್ನು ಕೇವಲ ಒಂದೇ ಬೌಟ್‌ನಲ್ಲಿ ಮಣಿಸುವ ಮೂಲಕ ನಾಕೌಟ್ ಜಯ ಪಡೆದರು.

ಜೂಡೊ ಪಟುಗಳ ಮಿಂಚು: ಭಾರತದ ಕ್ರೀಡಾಪಟುಗಳು ಜುಡೊ ಕ್ರೀಡೆ ಯಲ್ಲಿಯೂ ಪದಕಗಳನ್ನು ಗೆದ್ದರು. ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಜೂಡೊ ತಂಡವು ಎರಡು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಜಯಿಸಿತು.
ಪುರುಷರ 90 ಕೆಜಿ ವಿಭಾಗದಲ್ಲಿ ಅವತಾರ್ ಸಿಂಗ್ ಅವರು ಆಫ್ಘಾನಿ ಸ್ತಾನದ ಮೊಹಮ್ಮದ್ ಇಸ್ಮಾಯಿಲ್ ಕಾಕರ್ ಅವರನ್ನು ಹಣಿದು ಚಿನ್ನ ಗೆದ್ದರು. ಮಹಿಳೆಯರ 70 ಕೆಜಿ ವಿಭಾಗದಲ್ಲಿ ಪೂಜಾ ಪಾಕಿಸ್ತಾನದ ಬೀನಿಶ್ ಖಾನ್ ಅವರ ವಿರುದ್ಧ ಜಯಿಸಿದರು.

78 ಕೆಜಿಯೊಳಗಿನ ವಿಭಾಗದಲ್ಲಿ ಇದ್ದ ನಾಲ್ವರು ಸ್ಪರ್ಧಿಗಳಲ್ಲಿ 210 ಪಾಯಿಂಟ್‌ಗಳನ್ನು ಗಳಿಸಿದ ಪಾಕಿಸ್ತಾನದ ಫೌಜಿಯಾ ಮುಮ್ತಾಜ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಅರುಣಾ (200 ಪಾಯಿಂಟ್ಸ್) ಬೆಳ್ಳಿ ಪದಕ ಜಯಿಸಿದರು. ಪುರುಷರ 100 ಕೆಜಿ ವಿಭಾಗದ ಫೈನಲ್‌ನಲ್ಲಿ ಭಾರತದ ಶುಭಂ ಕುಮಾರ್ ಅವರು ಹುಸೇನ್ ಷಾ ವಿರುದ್ಧ ಸೋಲನುಭವಿಸಿದರು. 29 ಸೆಕೆಂಡು ಗಳಲ್ಲಿ  ಮುಗಿದ ಪಂದ್ಯದಲ್ಲಿ ಪಾಕ್‌ ಆಟಗಾರ ಚಿನ್ನದ ಪದಕ ಪಡೆದರು.

ಇದರೊಂದಿಗೆ ಭಾರತದ ಜೂಡೊ ತಂಡವು ಒಟ್ಟು ಒಂಬತ್ತು ಚಿನ್ನ, ಮೂರು ಬೆಳ್ಳಿ ಪದಕಗಳು ಸೇರಿದಂತೆ ಒಟ್ಟು 12 ಪದಕಗಳನ್ನು ಗೆದ್ದಿತು. ಪಾಕಿಸ್ತಾನ ಎರಡು ಚಿನ್ನ, ಎರಡು ಬೆಳ್ಳಿ, ಎಂಟು ಕಂಚು ಮತ್ತು ನೇಪಾಳ ಒಂದು ಚಿನ್ನ, ಎರಡು ಬೆಳ್ಳಿ, ಆರು ಕಂಚಿನ ಪದಕಗಳನ್ನು ಗಳಿಸಿ, ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದವು.

ಅನಾವರಣ: ಈಶಾನ್ಯ ರಾಜ್ಯಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಗಳ ವೈಭವ,   ಸಂಜೆಯ ಆಗಸದಲ್ಲಿ ಪಟಾಕಿಗಳ ಬೆಳಕಿನ ಚಿತ್ತಾರದೊಂದಿಗೆ  ಕ್ರೀಡಾಕೂಟಕ್ಕೆ ಭವ್ಯ ತೆರೆ ಬಿತ್ತು. ಕ್ರೀಡಾಕೂಟಕ್ಕೆ ಮುಕ್ತಾಯ ಘೋಷಿಸಿದ ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೊನೊವಾಲ್, ‘ಹಿಂದೆಂ ದಿಗಿಂತಲೂ ಈ ಬಾರಿಯ ಕೂಟವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಸುಮಾರು ನಾಲ್ಕು ಸಾವಿರ ಅಥ್ಲಿಟ್‌ಗಳು ಭಾಗವಹಿಸಿದ್ದರು. ಗುವಾಹಟಿ ಮತ್ತು ಶಿಲ್ಲಾಂಗ್‌ಗಳಲ್ಲಿ ಸ್ಪರ್ಧೆಗಳು ಉತ್ತಮ ರೀತಿಯಲ್ಲಿ ಆಯೋಜನೆಯಾದವು’ ಎಂದು ಶ್ಲಾಘಿಸಿದರು.

ಬಾಕ್ಸಿಂಗ್ ಸ್ಪರ್ಧೆಯ ಫೈನಲ್ ವಿಳಂಬ
ಭಾರತೀಯ ಅಮೆಚೂರ್ ಬಾಕ್ಸಿಂಗ್ ಫೆಡರೇಷನ್ (ಎಐಬಿಎ) ತಾತ್ಕಾಲಿಕ ಸಮಿತಿಯು ಸಂಭಾವನೆ ನೀಡುವಲ್ಲಿ ವಿಳಂಬ ಮಾಡಿದೆ ಎಂದು ಆರೋಪಿಸಿ ತಾಂತ್ರಿಕ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಲಿಲ್ಲ. ಆದ್ದರಿಂದ ಮಂಗಳವಾರ ಮಹಿಳೆಯರ ಬಾಕ್ಸಿಂಗ್ ಫೈನಲ್‌ 40 ನಿಮಿಷ ತಡವಾಗಿ ಆರಂಭವಾಯಿತು.

‘ತಾಂತ್ರಿಕ ಅಧಿಕಾರಿಗಳು ದಿನಭತ್ಯೆ  ಹೆಚ್ಚಳ ಮಾಡಬೇಕು ಇಲ್ಲದಿದ್ದರೆ ಪಂದ್ಯ ನಡೆಸಲು ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡುತ್ತಿದ್ದಾರೆ.   ಈ ಮೊದಲು ಅವರಿಗೆ   ₹ 3425 ನಿಗದಿಪಡಿಸಲಾಗಿತ್ತು. ಅದಕ್ಕಿಂತಲೂ ಹೆಚ್ಚಿನ ಭತ್ಯೆ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ, ಅವರೊಂದಿಗೆ ಮಾಡಿದ ಸಂಧಾನ ಮಾತುಕತೆ ಫಲಪ್ರದವಾಗಿದೆ. ಸಮಸ್ಯೆ ಬಗೆಹರಿದಿದೆ’ ಎಂದು ಶಿಲ್ಲಾಂಗ್‌ ಸಂಘಟನಾ ಸಮಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆರ್. ಕೆ. ಶರ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT