ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಾಹಿತ್ಯಕ್ಕೊಂದು ಮುಕ್ತ ವೇದಿಕೆ

Last Updated 7 ಸೆಪ್ಟೆಂಬರ್ 2015, 19:48 IST
ಅಕ್ಷರ ಗಾತ್ರ

ಪ್ರಥಮ್‌ ಬುಕ್ಸ್‌ ಕಳೆದ ಹನ್ನೊಂದು ವರ್ಷಗಳಿಂದ ಮಕ್ಕಳ ಸಾಹಿತ್ಯದ ಪುಸ್ತಕಗಳನ್ನೇ ಪ್ರಕಟಿಸುತ್ತಾ ಬಂದಿರುವ ವಿಶಿಷ್ಟ ಪ್ರಕಾಶನ ಸಂಸ್ಥೆ. ಲಾಭದ ಉದ್ದೇಶವನ್ನು ಮುಖ್ಯವಾಗಿ ಇರಿಸಿಕೊಳ್ಳದೇ ಹೊಸ ಪೀಳಿಗೆಗೆ ಉತ್ತಮ ಸಾಹಿತ್ಯವನ್ನು ಒದಗಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಕೈಗೊಂಡಿರುವ ಯೋಜನೆಗಳು ಗಮನಾರ್ಹ.

ಸಾಮಾನ್ಯವಾಗಿ ಎಲ್ಲ ಪ್ರಕಾಶನ ಸಂಸ್ಥೆಗಳೂ ತಾವು ಪ್ರಕಟಿಸಿದ ಪುಸ್ತಕಗಳ ಹಕ್ಕುಗಳನ್ನು ಕಾಯ್ದಿರಿಸಿಕೊಂಡಿರುತ್ತವೆ. ಆದರೆ ಪ್ರಥಮ್‌ ಬುಕ್ಸ್‌ ಇದಕ್ಕೆ ವಿರುದ್ಧ. ಕಳೆದ ಐದು ವರ್ಷಗಳಲ್ಲಿ ತಾನು ಪ್ರಕಟಿಸಿದ ಯಾವುದೇ ಮಕ್ಕಳ ಸಾಹಿತ್ಯ ಪುಸ್ತಕಗಳ ಹಕ್ಕುಗಳನ್ನೂ ಈ ಸಂಸ್ಥೆ ಕಾಯ್ದಿರಿಸಿಕೊಂಡಿಲ್ಲ. ಅವುಗಳನ್ನು ಯಾರು ಬೇಕಾದರೂ ಓದಿ, ತಮ್ಮ ಭಾಷೆಗೆ ಅನುವಾದಿಸಬಹುದು. ಮಾರ್ಪಾಡು ಮಾಡಿಕೊಂಡು ಹೊಸ ಕಥೆ ಕಟ್ಟಬಹುದು.

ಸ್ಟೋರಿ ವೀವರ್‌’ ಎಂಬ ಹೊಸ ವೇದಿಕೆ
ಪ್ರಥಮ್‌ ಬುಕ್ಸ್‌ ತನ್ನ ದಾರಿಯಲ್ಲಿ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಇದೀಗ ‘ಸ್ಟೋರಿ ವೀವರ್‌’ ಎಂಬ ಬಹುಭಾಷಾ ಮಕ್ಕಳ ಪುಸ್ತಕಗಳ ಮುಕ್ತ ಸಂಪನ್ಮೂಲ ವೇದಿಕೆಯನ್ನು ರೂಪಿಸಿದೆ.

ಈ ಜಾಲತಾಣದಲ್ಲಿ ಮಕ್ಕಳ ಕಥೆಗಳನ್ನು ಪ್ರಕಟಿಸಲಾಗುತ್ತದೆ. ಈ ಕಥೆಗಳು ಕೂಡ ಪೂರ್ಣಪ್ರಮಾಣದಲ್ಲಿ ಹಕ್ಕು ಮುಕ್ತವಾಗಿರುತ್ತವೆ. ಅಂದರೆ ಈ ಕಥೆಗಳನ್ನು ಯಾರು ಬೇಕಾದರೂ ಓದಬಹುದು. ಒಂದೊಮ್ಮೆ ಆ ಕಥೆ ನಿಮ್ಮ ಭಾಷೆಯಲ್ಲಿ ಲಭ್ಯವಿಲ್ಲದಿದ್ದರೆ ನೀವೇ ಅದನ್ನು ನಿಮ್ಮ ಭಾಷೆಗೆ ಭಾಷಾಂತರಿಸಬಹುದು. ಜಾಲತಾಣದಲ್ಲಿಯೇ ಭಾಷಾಂತರದ ಸಾಧನಗಳನ್ನೂ ಒದಗಿಸಲಾಗಿದೆ.

‘ಈಗ ಕೊಂಕಣಿ ಭಾಷೆಯನ್ನೇ ತೆಗೆದುಕೊಳ್ಳಿ. ಅಲ್ಲಿ ಮಕ್ಕಳ ಸಾಹಿತ್ಯಕ್ಕೆ ಸಾಕಷ್ಟು ಬೇಡಿಕೆ ಇದೆ. ಆದರೆ ಆ ಭಾಷೆಯಲ್ಲಿ ಸಾಕಷ್ಟು ಮಕ್ಕಳ ಸಾಹಿತ್ಯ ಪ್ರಕಟವಾಗುತ್ತಿಲ್ಲ. ನಮ್ಮ ಈ ವೇದಿಕೆಯಲ್ಲಿ ಪ್ರಕಟಿಸುವ ಯಾವ ಭಾಷೆಯ ಕಥೆಗಳನ್ನಾದರೂ ಕೊಂಕಣಿ ಬರುವವರು ಆ ಭಾಷೆಗೆ ಭಾಷಾಂತರಿಸಬಹುದು. ಇದರಿಂದ ಆ ಭಾಷೆಯ ಮಕ್ಕಳಿಗೆ ಹೆಚ್ಚು ಕಥೆಗಳು ದೊರೆಯುತ್ತವೆ. ಬರೀ ಕೊಂಕಣಿ ಒಂದೇ ಅಲ್ಲ, ಎಲ್ಲ ಭಾಷೆಗಳಿಗೂ ಇದು ಅನ್ವಯವಾಗುತ್ತದೆ’ ಎಂದು ಸ್ಟೋರಿ ವೀವರ್‌ನ ಮಹತ್ವದ ಬಗ್ಗೆ ನಿದರ್ಶನ ಸಮೇತ ವಿವರಿಸುತ್ತಾರೆ ಪ್ರಥಮ್‌ ಬುಕ್ಸ್‌ ಡಿಜಿಟಲ್‌ ಪ್ರಾಜೆಕ್ಟ್ಸ್‌ ವಿಭಾಗದ ಮುಖ್ಯಸ್ಥೆ ಪೂರ್ವಿ ಷಾ.

ಚಿತ್ರಲೋಕವೂ ಇದೆ
ಬರೀ ಕಥೆಗಳಷ್ಟೇ ಅಲ್ಲ, ಈ ಜಾಲತಾಣದಲ್ಲಿ ಸುಮಾರು ಎರಡು ಸಾವಿರ ಚಿತ್ರಗಳನ್ನೂ ಲಗತ್ತಿಸಲಾಗಿದೆ. ಆ ಚಿತ್ರಗಳನ್ನು ನೋಡಿಕೊಂಡೇ ಹೊಸ ಕತೆಗಳನ್ನು ರಚಿಸುವ ಅವಕಾಶವೂ ಇಲ್ಲಿದೆ. ಓದುಗರೇ ಕತೆಗಾರರೂ ಆಗಲು ಅವಕಾಶ ನೀಡುವ ವಿನೂತನ ವೇದಿಕೆಯಿದು.

ಅಲ್ಲದೇ ಈ ಜಾಲತಾಣಗಳಲ್ಲಿ ಪ್ರಕಟವಾದ ಕತೆಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಓದಬಹುದು. ಮುದ್ರಿಸಿ ಬೇರೆಯವರಿಗೆ ಹಂಚಬಹುದು. ಈ ಎಲ್ಲವೂ ಸಂಪೂರ್ಣ ಉಚಿತವಾಗಿರುತ್ತವೆ. ಈ ಮುಕ್ತ ವೇದಿಕೆಯಲ್ಲಿ ಕಥೆಗಳು ‘ಕ್ರಿಯೆಟಿವ್‌ ಕಾಮನ್ಸ್‌’ ಲೈಸನ್ಸ್‌ ಅಡಿಯಲ್ಲಿ ವಿಶ್ವದಾದ್ಯಂತ ಎಲ್ಲರಿಗೂ ಲಭ್ಯವಾಗುವಂತಿವೆ. ಅಲ್ಲದೇ ಮೊಬೈಲ್‌ ಮೂಲಕವೂ ನೋಡಲು ಅನುಕೂಲವಾಗುವಂತೇ ವಿನ್ಯಾಸಗೊಳಿಸಲಾಗಿದೆ.

ಸಂವಾದದ ವೇದಿಕೆಯೂ ಹೌದು
‘ಸ್ಟೋರಿ ವೀವರ್‌’ನಲ್ಲಿ ಹಲವಾರು ವಿಭಾಗಗಳಿವೆ. ಸಂವಾದ–ಚರ್ಚೆಗಾಗಿಯೇ ಪ್ರತ್ಯೇಕ ವಿಭಾಗವನ್ನು ಕಲ್ಪಿಸಲಾಗಿದೆ. ಇದರಲ್ಲಿ ಓದುಗರು ಪ್ರಶ್ನೆಗಳನ್ನು ಕೇಳಬಹುದಾಗಿದೆ. ಚರ್ಚೆ ನಡೆಸಬಹುದಾಗಿದೆ. ಇದು ಸಮಾನ ಮನಸ್ಕರ ಓದುಗರ ನಡುವೆಯೇ ಸಂವಾದವನ್ನು ಹುಟ್ಟು ಹಾಕಿ ಹೊಸ ಹೊಳಹುಗಳನ್ನು ಪಡೆದುಕೊಳ್ಳಲು ಅನುಕೂಲವಾಗುವಂತಿದೆ.

ಯಾರು ಬರೆಯುತ್ತಾರೆ?
ಸಾಮಾನ್ಯವಾಗಿ ಎಲ್ಲ ಲೇಖಕರೂ ತಾವು ಬರೆದ ಕೃತಿಗಳ ಹಕ್ಕುಗಳನ್ನು ತಾವೇ ಕಾಯ್ದಿರಿಸಿಕೊಳ್ಳುತ್ತಾರೆ. ಸ್ಟೋರಿ ವೀವರ್‌ಗೆ ಮೂಲ ಕತೆಗಳನ್ನು ಯಾರು ಬರೆಯುತ್ತಾರೆ? ಎಂಬ ಸಂದೇಹವನ್ನು ಎದುರಿಗಿಟ್ಟರೆ, ಪೂರ್ವಿ ಹೀಗೆ ವಿವರಿಸುತ್ತಾರೆ...

‘ಪ್ರಥಮ್‌ ಬುಕ್ಸ್‌ ಕಳೆದ ಹನ್ನೊಂದು ವರ್ಷಗಳಲ್ಲಿ ಲೇಖಕ ಬಳಗದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಅವರಲ್ಲಿ ಅನೇಕ ಲೇಖಕರು ಮುಕ್ತ ಹಕ್ಕಿನ ಅಡಿಯಲ್ಲಿ ತಮ್ಮ ಕಥೆಗಳನ್ನು ಪ್ರಕಟಿಸಲು ಒಪ್ಪಿಕೊಂಡಿದ್ದಾರೆ.’

‘ಬಹಳಷ್ಟು ಜನರಿಗೆ ತಮ್ಮ ಮಕ್ಕಳು ಎಂಥ ಕತೆಗಳನ್ನು ಬಯಸುತ್ತಾರೆ ಎಂದು ತಿಳಿದಿರುತ್ತದೆ. ಹಾಗೆಯೇ ಆ ಕಥೆಗಳ ಕುರಿತಾದ ಪರಿಕಲ್ಪನೆಯೂ ಅವರಲ್ಲಿರುತ್ತದೆ. ಆದರೆ ಅವುಗಳಿಗೆ ಸೂಕ್ತವಾದ ಚಿತ್ರಗಳಿರುವುದಿಲ್ಲ. ನಾವಿಲ್ಲಿ ಏನು ಮಾಡಿದ್ದೇವೆಂದರೆ ಕಥೆಗೆ ಅಗತ್ಯವಿರುವ ಸಾಕಷ್ಟು ಸಲಕರಣೆಗಳನ್ನು ಜಾಲತಾಣದಲ್ಲಿ ಒದಗಿಸಿದ್ದೇವೆ. ಅವುಗಳನ್ನು ಬಳಸಿಕೊಂಡು ಜನರಿಗೆ ತಮ್ಮ ವಾತಾವರಣಕ್ಕೆ ಅನುಗುಣವಾದಂತಹ, ತಮ್ಮ ಮಕ್ಕಳ ಅವಶ್ಯಕತೆಗೆ ತಕ್ಕಂತಹ ಕಥೆಗಳನ್ನು ರಚಿಸಿಕೊಳ್ಳಲು ಪ್ರೇರೇಪಿಸುತ್ತೇವೆ. ಇದರಿಂದ ಈ ವೇದಿಕೆಯಲ್ಲಿಯೇ ಅನೇಕ ಹೊಸ ಕಥೆಗಳು ಹುಟ್ಟುತ್ತವೆ’ ಎನ್ನುತ್ತಾರೆ ಪೂರ್ವಿ.

ಈಗ ಸ್ಟೋರಿ ವೀವರ್‌ನಲ್ಲಿ ದೇಶ ವಿದೇಶದ 26 ಭಾಷೆಗಳ 800 ಪುಸ್ತಕಗಳು ಲಭ್ಯ ಇವೆ. 14 ಭಾರತೀಯ ಭಾಷೆ ಮತ್ತು 12 ವಿದೇಶಿ ಭಾಷೆಯ ಕಥೆಗಳು ಇಲ್ಲಿವೆ.

ಕನ್ನಡದ ಕಥೆಗಳೂ ಇವೆ
ಸ್ಟೋರಿ ವೀವರ್‌ನಲ್ಲಿ ಕನ್ನಡದ ಸಾಕಷ್ಟು ಕಥೆಗಳೂ ಲಭ್ಯ. ವೆಂಕಟ್ರಮಣ ಗೌಡ, ಈಶ್ವರ ದೈತೋಟ, ಕೆ.ಪಿ. ಭಟ್‌, ಜಯಶ್ರೀ ದೇಶಪಾಂಡೆ, ಶೈಲಾ ಮಣಿಪಾಲ, ಎ.ಎಸ್‌. ಚಂದ್ರಮೌಳಿ ಮುಂತಾದವರು ಬೇರೆ ಬೇರೆ ಭಾಷೆಯ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಎಲ್ಲ ಅಡೆತಡೆಗಳನ್ನೂ ನಿವಾರಿಸಿ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿಯೇ ಜಗತ್ತಿನ ಕಥೆಗಳನ್ನು ಓದುವ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದೊಂದಿಗೆ ಆರಂಭಿಸಲಾದ ಈ ವೇದಿಕೆಯು ಮುಂದಿನ ದಿನಗಳಲ್ಲಿ ಮಕ್ಕಳ ಸಾಹಿತ್ಯ ರಚನೆ ಮತ್ತು ಪ್ರಕಟಣೆಯ ಹೊಸ ದಾರಿಯನ್ನು ತೆರೆಯಲಿದೆ ಎಂಬ ವಿಶ್ವಾಸ ಪ್ರಥಮ್‌ ಬುಕ್ಸ್‌ಗೆ ಇದೆ.

ಕಥೆಯೊಂದು ಹೆಣೆಯಿರಿ
ಇದನ್ನೊಂದು ಅಭಿಯಾನದ ರೂಪದಲ್ಲಿ ಮುನ್ನಡೆಸಲು ಪ್ರಥಮ್‌ ಬುಕ್ಸ್‌ ಸಜ್ಜುಗೊಂಡಿದೆ. ಅಂತರರಾಷ್ಟ್ರೀಯ ಸಾಕ್ಷರತಾ ದಿನವಾದ ಇಂದು (ಮಂಗಳವಾರ) ಈ ಅಭಿಯಾನಕ್ಕೆ ವಿಧ್ಯುಕ್ತ ಚಾಲನೆ ದೊರಕಲಿದೆ. ಈ ಸಂದರ್ಭದಲ್ಲಿ ಪ್ರಥಮ್‌‌ ಬುಕ್ಸ್‌ ‘ಕಥೆಯೊಂದು ಹೆಣೆಯಿರಿ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಾಹಿತಿಗಳಾದ ಅನುಷ್ಕಾ ರವಿಶಂಕರ್‌, ಸೌಮ್ಯಾ ರಾಜೇಂದ್ರನ್‌ ಮತ್ತು ರೋಹಿಣಿ ನಿಲೇಕಣಿ, ರುಕ್ಮಿಣಿ ಬ್ಯಾನರ್ಜಿ ಮೊದಲಾದವರು ‘ಸ್ಟೋರಿ ವೀವರ್‌’ಗಾಗಿ ವಿಶೇಷ ಕಥೆಗಳನ್ನು ಬರೆಯಲಿದ್ದಾರೆ. ಪ್ರಿಯಾ ಕುರಿಯನ್‌, ಸೌಮ್ಯಾ ಮೆನನ್‌ನಂಥ ಕಲಾವಿದರು ಈ ಕಥೆಗಳಿಗೆ ಪೂರಕವಾದ ಚಿತ್ರಗಳನ್ನು ರಚಿಸಲಿದ್ದಾರೆ.

ಆ ಕಥೆಗಳನ್ನು  ತಮ್ಮ ಭಾಷೆಗೆ ಭಾಷಾಂತರ ಮಾಡಲು ಓದುಗರಿಗೆ ಅವಕಾಶ ಕಲ್ಪಿಸಲಾಗುತ್ತದೆ.  ಅನುಷ್ಕಾ ರವಿಶಂಕರ್‌ ಅವರ ‘ಇಟ್ಸ್‌ ಆಲ್‌ ದಿ ಕ್ಯಾಟ್ಸ್‌ ಫಾಲ್ಟ್‌’ ಎಂಬ ಕಥೆಯಿಂದ ಕಾರ್ಯಕ್ರಮ ಚಾಲನೆಗೊಳ್ಳಲಿದೆ.

ಒಟ್ಟು 800 ಕಥೆಗಳು ಮಂಗಳವಾರ ಓದುಗರಿಗೆ ಲಭ್ಯವಾಗಲಿವೆ. 150 ಮೂಲ ಕತೆಗಳಿರುತ್ತವೆ. ಪ್ರತಿ ಕಥೆಯೂ ಹಲವು ಭಾಷೆಗಳಲ್ಲಿ ಲಭ್ಯವಿರುವುದರಿಂದ 150 ಕಥೆಗಳ 800 ಆವೃತ್ತಿಗಳು ಲಭ್ಯವಿರುತ್ತವೆ.
ಜಾಲತಾಣದ ವಿಳಾಸ: www.storyweaver.org.in

ಪುಸ್ತಕ ಪ್ರಕಟಣೆಯಲ್ಲಿ ಹೊಸ ಕ್ರಾಂತಿ
ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿಯೇ ಸಾಕಷ್ಟು ಕಥೆಗಳನ್ನು ಒದಗಿಸುವುದು ನಮ್ಮ ಉದ್ದೇಶ. ಭಾರತದಲ್ಲಿ ಅನೇಕ ಭಾಷೆಗಳಿವೆ. ಆದರೆ ಆ ಭಾಷೆಗಳಲ್ಲೆಲ್ಲ ಒಳ್ಳೆಯ ಮಕ್ಕಳ ಪುಸ್ತಕಗಳು ಲಭ್ಯವಿಲ್ಲ. ಈ ತೊಡಕನ್ನು ನಿವಾರಿಸುವ ನಿಟ್ಟಿನಲ್ಲಿ ಮುಖ್ಯ ವಾಹಿನಿಯ ಪ್ರಕಾಶಕ ಸಂಸ್ಥೆಗಳು ಅಷ್ಟೊಂದು ಗಮನ ಹರಿಸಿಲ್ಲ. ಆದರೆ ಪ್ರಥಮ್‌ ಬುಕ್ಸ್‌ ಅಂಥ ಪ್ರಯತ್ನಕ್ಕೆ ಮುಂದಾಗಿದೆ. ಮಕ್ಕಳನ್ನು ತಲುಪಲು ಎಷ್ಟೆಲ್ಲ ಮಾರ್ಗಗಳು ಇವೆಯೋ ಅವೆಲ್ಲವನ್ನೂ ಬಳಸಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶ. ಡಿಜಿಟಲ್‌ ರೂಪವೂ ಕೂಡ ಅಂತಹ ಪರಿಣಾಮಕಾರಿ ದಾರಿಗಳಲ್ಲೊಂದು. ‘ಸ್ಟೋರಿ ವೀವರ್‌’ ಅಂತಹ ಒಂದು ದಾರಿ. ಈ ಮುಕ್ತ ವೇದಿಕೆ ಪುಸ್ತಕ ಪ್ರಕಟಣೆಯಲ್ಲಿ ಒಂದು ಕ್ರಾಂತಿಯನ್ನೇ ಮಾಡಬಹುದು ಎಂಬುದು ನಮ್ಮ ನಂಬಿಕೆ.
– ಸುಜಾನ್‌ ಸಿಂಗ್‌, ಪ್ರಥಮ್‌ ಬುಕ್ಸ್‌ನ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT