ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಮ್ಮೆ ವಿಶ್ವ ಆರ್ಥಿಕ ಬಿಕ್ಕಟ್ಟು?

ರಿಸರ್ವ್‌ ಬ್ಯಾಂಕ್‌ ಗವರ್ನರ್‌ ರಘುರಾಂ ರಾಜನ್ ಎಚ್ಚರಿಕೆ
Last Updated 26 ಜೂನ್ 2015, 19:30 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ವಿವಿಧ ದೇಶಗಳು ಅನುಸರಿಸುತ್ತಿರುವ ಸ್ಪರ್ಧಾತ್ಮಕ ಹಣ ಕಾಸು ನೀತಿಯಿಂದ ಜಾಗತಿಕ ಅರ್ಥ ವ್ಯವಸ್ಥೆಯು ಮತ್ತೊಮ್ಮೆ 1930ರಲ್ಲಿ ಕಂಡಂತಹ ಆರ್ಥಿಕ ಕುಸಿತ ಎದುರಿಸ ಬೇಕಾಗಿ ಬರಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ರಘುರಾಂ ರಾಜನ್‌ ಎಚ್ಚರಿಕೆ ನೀಡಿದ್ದಾರೆ.

ಲಂಡನ್‌ ಬಿಜಿನೆಸ್‌ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ‘ಕೇಂದ್ರ ಬ್ಯಾಂಕುಗಳ ದೃಷ್ಟಿಕೋನ’ ವಿಷಯವಾಗಿ ಮಾತನಾಡಿದ ಅವರು, ಮತ್ತೊಮ್ಮೆ ಜಾಗತಿಕ ಆರ್ಥಿಕ ಕುಸಿತ ಎದುರಾಗುವ ಆತಂಕ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಮತ್ತು ಅಭಿವೃದ್ಧಿ ಶೀಲ ದೇಶಗಳಲ್ಲಿ ಕೇಂದ್ರ ಬ್ಯಾಂಕುಗಳು  ಅಳವಡಿಸಿಕೊಂಡಿರುವ ಆರ್ಥಿಕ ನೀತಿಯ ಬಗ್ಗೆ ಪರಾಮರ್ಶೆ ಮತ್ತು ಚರ್ಚೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಜಾಗತಿಕ ಆರ್ಥ ವ್ಯವಸ್ಥೆ ಚೇತರಿಕೆಗೆ ಉತ್ತಮ ಪರಿಹಾರ ಕಂಡು ಕೊಳ್ಳ ಬೇಕಿದೆ. ಜಾಗತಿಕ ಮಟ್ಟದಲ್ಲಿ ಯಾವ ರೀತಿಯ ಆರ್ಥಿಕ ನೀತಿ ರೂಪಿಸಬೇಕು ಮತ್ತು ಕೇಂದ್ರ ಬ್ಯಾಂಕುಗಳು ಯಾವುದಕ್ಕೆ ಅವಕಾಶ ನೀಡಬೇಕು ಎನ್ನುವ ಬಗ್ಗೆ ವಿಸ್ತೃತ ಚರ್ಚೆಯನ್ನು ಆರಂಭಿಸಲು ಇದು ಸೂಕ್ತ ಸಮಯ ಎನ್ನುವುದು ನನ್ನ ಅಭಿಪ್ರಾಯ’ ಎಂದು ಹೇಳಿದ್ದಾರೆ.

‘ಹೊಸ ಆರ್ಥಿಕ ನೀತಿ ಹೇಗಿರ ಬೇಕು? ಎಂದು ಅಂದಾಜು ಮಾಡುವ ಸಾಹಸಕ್ಕೆ ನಾನು ಮುಂದಾಗುವುದಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಗಂಭೀರ ಚರ್ಚೆ ಆಗಬೇಕಿದೆ. ಸಂಶೋ ಧನೆ ಮತ್ತು  ಕಾರ್ಯವಿಧಾನದ ಬಳಿಕ ಅದಕ್ಕೆ ಒಮ್ಮತ  ಮೂಡಿಸಬೇಕಿದೆ’ ಎಂದರು.

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಳಿಕ ಕೇಂದ್ರ ಬ್ಯಾಂಕುಗಳು ಉತ್ತಮ ಕೆಲಸವನ್ನೇ ಮಾಡಿವೆ. ಆದರೆ ಅಭಿವೃದ್ಧಿ ಸಾಧಿಸುವ ಭರದಲ್ಲಿ ಆರ್ಥಿಕ ಹಿಂಜರಿತಕ್ಕೆ ಕಾರಣವಾಗುವ ನೀತಿಗಳನ್ನು ಅನುಸರಿ ಸದಂತೆ ಎಚ್ಚರ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕೇಂದ್ರ ಬ್ಯಾಂಕುಗಳಿಗೆ ಕರೆ ನೀಡಿದ್ದಾರೆ.

ಹೂಡಿಕೆಗೆ ಉತ್ತೇಜನ ಅಗತ್ಯ: ಭಾರತದ ಬಗ್ಗೆ ಹೇಳುವುದಾದರೆ, ಆರ್ಥಿಕ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಬಂಡವಾಳ ಹೂಡಿಕೆಯ ಅಗತ್ಯವಿದೆ. ಇದಕ್ಕಾಗಿ ಸಾಲದ ಮೇಲಿನ ಬಡ್ಡಿದರ ಇನ್ನಷ್ಟು ತಗ್ಗಬೇಕಿದೆ ಎಂದು ರಾಜನ್‌ ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಪ್ರಗತಿ ಸಾಧಿಸುವ ಹಾದಿ ಯಲ್ಲಿ ಸಾಕಷ್ಟು ಒತ್ತಡ ಇದೆ. ಇದು ಕೇಂದ್ರ ಬ್ಯಾಂಕುಗಳ ಕಾರ್ಯವೈಖರಿ ಮೇಲೆ ಹೆಚ್ಚು ಒತ್ತಡ ತಂದಿದೆ ಎಂದೂ ಅವರು ಪರಿಸ್ಥಿತಿಯ ಚಿತ್ರಣ ನೀಡಿದ್ದಾರೆ.

ರಾಜನ್‌ ಹೇಳಿಕೆ ನಿಜವಾಗಿತ್ತು
ಹಿಂದೆಯೂ ಒಮ್ಮೆ (2005ರಲ್ಲಿ) ರಾಜನ್‌ ಜಾಗತಿಕ ಆರ್ಥಿಕ ಬಿಕ್ಕಟ್ಟು ಉಂಟಾಗುವ ಬಗ್ಗೆ ಮುನ್ಸೂಚನೆ ನೀಡಿದ್ದರು. ಅದು ನಿಜವೂ ಆಗಿತ್ತು.

ರಾಜನ್‌ ಅಂದಾಜು ಮಾಡಿದ್ದಂತೆಯೇ ಯೂರೋಪ್‌ ಸೇರಿದಂತೆ ಪಶ್ಚಿಮದ ದೇಶಗಳು 2008ರಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದವು.
ಉತ್ತಮ ಅಡಿಪಾಯದ ಮೇಲಿರುವ ಆರ್ಥಿಕ ನೀತಿ ಮತ್ತು ಬ್ಯಾಂಕ್‌ಗಳಲ್ಲಿನ ಜಿಗುಟು ಸಾಲ ವಿತರಣೆ ಪ್ರಕ್ರಿಯೆಯೇ  ಭಾರತ ವನ್ನು ಈ ಸಂಕಷ್ಟದಿಂದ ರಕ್ಷಿಸಿತ್ತು ಎಂದೇ ವಿಶ್ಲೇಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT