ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರದ ಕೆಳಗೆ ಪಾಠ, ತಪ್ಪಲಿಲ್ಲ ಮಕ್ಕಳ ಸಂಕಟ!

ಅಮೃತಾಪುರ ಸರ್ಕಾರಿ ಶಾಲೆ ದುಸ್ಥಿತಿ, 65 ಮಕ್ಕಳಿಗೆ ಒಂದೇ ಕೊಠಡಿ
Last Updated 5 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಅಮೃತಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 65 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ, ಅಷ್ಟೂ ವಿದ್ಯಾರ್ಥಿಗಳಿಗೆ ಇಲ್ಲಿ ಇರುವುದು ಒಂದೇ ಕೊಠಡಿ!.

ಒಂದರಿಂದ ಐದನೇ ತರಗತಿವರೆಗಿನ ಮಕ್ಕಳು ಇಲ್ಲಿ ಓದುತ್ತಿದ್ದು, ಇರುವ ಒಂದೇ ಕೊಠಡಿಯಲ್ಲಿ ಎಲ್ಲ ಮಕ್ಕಳನ್ನು ಕೂರಿಸಲಾಗುವುದಿಲ್ಲ. ಆದ್ದರಿಂದ ಶಿಕ್ಷಕರು ಮಕ್ಕಳನ್ನು ನಿತ್ಯ ಶಾಲೆಯ ಕಾಂಪೌಂಡ್‌ನಲ್ಲಿ ಮರದ ಕೆಳಗೆ ಕೂರಿಸಿ ಪಾಠ ಮಾಡುತ್ತಾರೆ. ಶಾಲೆಯಲ್ಲಿ ನಾಲ್ವರು ಶಿಕ್ಷಕರಿದ್ದು, ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕೂರಿಸಿಕೊಂಡು ಪಾಠ ಮಾಡಲಾರದ ಸ್ಥಿತಿ ಇದೆ. ನಲಿ–ಕಲಿ ತರಗತಿಗೆ ಮಾತ್ರ ಒಂದು ಕೊಠಡಿ ಇದ್ದು, ಒಬ್ಬ ಶಿಕ್ಷಕ ಪಾಠ ಮಾಡಬಹುದು.

ಮನವಿಪತ್ರ ಕಸದ ಬುಟ್ಟಿಗೆ!: 1958ರಲ್ಲಿ ಈ ಶಾಲೆ ಆರಂಭವಾಗಿದೆ. ಇಲ್ಲಿದ್ದ ನಾಲ್ಕು ಕೊಠಡಿಗಳಲ್ಲಿ ಮೂರು ಕೊಠಡಿಗಳು ಶಿಥಿಲಗೊಂಡಿದ್ದವು. ಈಚೆಗೆ ಸುರಿದ ಮಳೆಯಿಂದ ಮರವೊಂದು ಕೊಠಡಿ ಮೇಲೆ ಬಿದ್ದಿತ್ತು. ರಾತ್ರಿ ವೇಳೆ ಮರ ಬಿದ್ದಿದ್ದರಿಂದ ದೊಡ್ಡ ಅನಾಹುತ ತಪ್ಪಿತ್ತು.

‘ಶಿಥಿಲಗೊಂಡಿದ್ದ ಮೂರು ಕೊಠಡಿಗಳನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನನ್ನ ಸ್ವಂತ ಖರ್ಚಿನಿಂದಲೇ ನೆಲಸಮಗೊಳಿಸಿದ್ದೇನೆ. ಈ ಹಣವನ್ನು ಯಾರು ಕೊಡುತ್ತಾರೆ? ಶಾಲೆಗೆ ಹೊಸ ಕೊಠಡಿ ಮಂಜೂರು ಮಾಡಿ ಎಂದು ಎಂಟು ವರ್ಷಗಳಿಂದಲೂ ಶಿಕ್ಷಣ ಇಲಾಖೆಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೆ, ಇದುವರೆಗೆ ಹೊಸಕೊಠಡಿ ನಿರ್ಮಿಸಿಲ್ಲ. ಮನವಿಪತ್ರಗಳನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಕೆ.ಸಿ.ದೇವೇಂದ್ರಪ್ಪ.

‘ಪ್ರತಿ ಶಾಲೆಗಳ ಸ್ಥಿತಿಯ ಬಗ್ಗೆಯೂ ಶಿಕ್ಷಣ ಇಲಾಖೆಯಲ್ಲಿ ಮಾಹಿತಿ ಇರುತ್ತದೆ. ಪ್ರತಿ ವರ್ಷ ಶಿಕ್ಷಕರು ಕೊಠಡಿಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ಇದನ್ನು ನೋಡಿ ಅಧಿಕಾರಿಗಳು ಕೊಠಡಿಗಳನ್ನು ಕೊಡಬೇಕು. ಇದನ್ನು ಗಮನಿಸದೆ ಸಾಕಷ್ಟು ಕೊಠಡಿ ಇರುವ ಶಾಲೆಗಳಿಗೇ ಮತ್ತೆ ಹೊಸ ಕೊಠಡಿ ಮಂಜೂರು ಮಾಡುತ್ತಾರೆ. ಪ್ರಭಾವಿಗಳು ಇರುವ ಗ್ರಾಮಗಳಿಗೆ ಅನಗತ್ಯವಾಗಿ ಕೊಠಡಿ ಕೊಡುತ್ತಾರೆ. ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳಲ್ಲೂ ಹೆಚ್ಚು ಕೊಠಡಿಗಳು ಇರುವ ಉದಾಹರಣೆಗಳು ಸಾಕಷ್ಟಿವೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT