ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ಮಾರ್ಪಡಿಸುವ ಮಾಂತ್ರಿಕ ತಂತ್ರಜ್ಞಾನ

ವಿಜ್ಞಾನ ಲೋಕದಿಂದ

ಜೀವ ವಿಕಾಸದ ಹಾದಿಯಲ್ಲಿ ಅದೆಷ್ಟೋ ಜೀವಿಗಳು ನಾಮಾವಶೇಷವಾಗಿದ್ದರೂ ಮನುಷ್ಯ ಮಾತ್ರ ತನ್ನ ಅಸ್ತಿತ್ವವನ್ನು ಬಲು ಸುರಕ್ಷತೆಯಿಂದ ಕಾಪಾಡಿಕೊಂಡು ಬಂದಿದ್ದಾನೆ. ಇತರ ಜೀವಿಗಳ ನಡುವೆ ತನ್ನನ್ನು ತಾನು ರಕ್ಷಿಸಿಕೊಳ್ಳುವುದಷ್ಟೇ ಅಲ್ಲದೇ ತನ್ನ ಬುದ್ಧಿ ಬಲದಿಂದ ಇಡೀ ಪ್ರಕೃತಿಯ ಮೇಲೆಯೇ ಪ್ರಭುತ್ವವನ್ನು ಸಾಧಿಸಹೊರಟಿದ್ದಾನೆ.

ತನಗೆ ಗೊತ್ತಿಲ್ಲದಿದ್ದನ್ನು ಕೇಳಿ ತಿಳಿದುಕೊಳ್ಳುವ ಮತ್ತು ತಾನರಿತುಕೊಂಡ ಮಾಹಿತಿಯನ್ನು ಇತರರೊಡನೆ ಹಂಚಿಕೊಳ್ಳುವ ಸಾಮರ್ಥ್ಯವನ್ನು ಮನುಷ್ಯನಷ್ಟು ಪರಿಣಾಮ ಕಾರಿಯಾಗಿ ಬೇರೆ ಜೀವಿಗಳು ಬಳಸಲಾರದೆ ಹೋದವು. ಸನ್ನೆಗಳ ಮೂಲಕ ಆರಂಭ ಗೊಂಡಿರ ಬಹುದಾದ ಈ ಸಂವಹನ ಕ್ರಿಯೆಯು ಕ್ರಮೇಣ ಧ್ವನಿಯ ಹಾಗೂ ಮಾತುಗಳ ಮೂಲಕ ಕೊನೆಗೆ ಆಡುಭಾಷೆಯ ರೂಪ ಪಡೆಯಿತು.

ಮಾತಿಲ್ಲದ ಬದುಕನ್ನು ನಮಗೆ ಕಲ್ಪಿಸಿಕೊಳ್ಳಲೂ ಅಸಾಧ್ಯ. ಅಭಿವ್ಯಕ್ತಿ ಮಾಧ್ಯಮಗಳ ಪೈಕಿ ಹಳತಾಗಿರುವ ರೇಡಿಯೊ ಪಾಲಿಗೆ ಮಾತೇ ಬಂಡವಾಳ. ದೃಶ್ಯಮಾಧ್ಯಮಗಳಲ್ಲಿಯೂ ಸಹ ಮಾತಿಗೆ ಅದರದ್ದೇ ಆದ ಮಹತ್ವವಿದೆ. ಚಲನಚಿತ್ರಗಳ ಬಗ್ಗೆ ಹೇಳುವುದಾದರೆ, ಚಿತ್ರೀಕರಣದ ಸಮಯದಲ್ಲಿ ನಟರು ಸಂಭಾಷಣೆಯನ್ನು ಒಪ್ಪಿಸುತ್ತಾರಾದರೂ ಕಡೆಯಲ್ಲಿ ತೆರೆಯ ಮೇಲೆ ದೃಶ್ಯಗಳೊಂದಿಗೆ ನಾವು ಆಲಿಸುವ ಧ್ವನಿ ಡಬ್ಬಿಂಗ್ ಮಾಡಿದ ಮಾತುಗಳಾಗಿರುತ್ತವೆ.

ಸಂಭಾಷಣೆ ಇರುವ ದೃಶ್ಯದಲ್ಲಿ ಪಾತ್ರಗಳ ತುಟಿಗಳ ಚಲನೆಗೆ ಮಿಳಿತವಾಗುವಂತೆ ಡಬ್ ಮಾಡಿದ ಮಾತುಗಳನ್ನು ಹೊಂದಿಸಲಾಗುತ್ತದೆ. ಕೆಲವೊಮ್ಮೆ ಈ ಹೊಂದಾಣಿಕೆ ಹಳಿ ತಪ್ಪುವ ಸಾಧ್ಯತೆಗಳಿರುತ್ತವೆ. ಇದನ್ನು ನೀವೂ ಗಮನಿಸಿರಬಹುದು. ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲು ‘ವಾಯ್ಸ್ ವಾರ್ಪಿಂಗ್’ ಅಥವಾ ‘ಧ್ವನಿ ವಕ್ರೀಕರಣ’ ಎಂಬ ವಿಶೇಷ ತಂತ್ರಜ್ಞಾನ ವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಮಲಯಾಳಂನಂತಹ ಭಾಷೆಗೆ ಹೋಲಿಸಿದರೆ ಕನ್ನಡ ಭಾಷೆ ಮಾತನಾಡಲು ಬಹಳ ಸುಲಭವೆಂದೇ ಹೇಳಬಹುದು. ಮಾತನಾಡಲು ಕ್ಲಿಷ್ಟವಾಗಿರುವಂಥ ಹೊಸ ಭಾಷೆಯನ್ನು ಕಲಿಯಬೇಕೆಂದಿದ್ದರೆ ಅಥವಾ ಶಾಸ್ತ್ರೀಯ ಸಂಗೀತದ ಸಂಕೀರ್ಣ ರಾಗಗಳನ್ನು ಅರಗಿಸಿಕೊಳ್ಳಬೇಕೆಂದಿದ್ದಲ್ಲಿ ಈ ‘ಧ್ವನಿ ವಕ್ರೀಕರಣ’ ತಂತ್ರಜ್ಞಾನ  ಸಹಾಯಕಾರಿಯಾಗಬಹುದು.

ರೇಡಿಯೊ ಮತ್ತು ದೂರದರ್ಶನಗಳಲ್ಲಿ ನಿರ್ದಿಷ್ಟ ಸಮಯದ ಪರಿಮಿತಿಯಲ್ಲಿ ಬಿತ್ತರಿಸ ಬೇಕಾದ ಜಾಹೀರಾತುಗಳನ್ನು ಪರಿಣಾಮಕಾರಿಯಾಗಿ ಸಿದ್ಧಗೊಳಿಸುವ ಕೆಲಸವು ಸಹ ಈ ತಂತ್ರಜ್ಞಾನದಿಂದಾಗಿ ಅಗ್ಗವಾಗಬಹುದು. ಅಷ್ಟಕ್ಕೂ ಏನಿದು ‘ಧ್ವನಿ ವಕ್ರೀಕರಣ’ ತಂತ್ರಜ್ಞಾನ. ಇದನ್ನು ತಿಳಿದುಕೊಳ್ಳುವುದಕ್ಕೆ ಮೊದಲು ಧ್ವನಿ ಹೇಗೆ ಹೊರಹೊಮ್ಮುತ್ತದೆ ಎಂಬುದರ ಅರಿವು ಅಗತ್ಯ.

ನಾವಾಡುವ ಮಾತು ನಮ್ಮ ಬಾಯಿಂದಲೇ ಹೊರಬರುವುದು ನಿಜವಾದರೂ ಅದಕ್ಕೆ  ಅಂತಿಮ ರೂಪ ಬರಲು ನಮ್ಮ ಶರೀರದ ಅನೇಕ ಅಂಗಗಳ ಸಮ್ಮಿಳಿತ ಸಕ್ರಿಯತೆಯೇ ಕಾರಣ. ‘ಹೌದಾ?’ ಎಂದು ಬಾಯಿ ಬಿಟ್ಟಿರೇನು? ಹೌದು. ನಾವಾಡುವ ಪ್ರತೀ ಮಾತು, ಹಾಡುವ ಹಾಡು, ಗೆಳೆಯರೊಡನೆ ಹಂಚಿಕೊಂಡ ನಗು, ಎಲ್ಲವೂ ಹುಟ್ಟುವುದು ನಮ್ಮ ಶ್ವಾಸಕೋಶದಲ್ಲಿ! ಒಂದರ ಹಿಂದೊಂದರಂತೆ ಶ್ವಾಸಕೋಶದಿಂದ ಹೊರಡುವ ಗಾಳಿಯ ತುಣುಕುಗಳು ಶ್ವಾಸನಾಳದ ಮೂಲಕ ಮೇಲೇರಿ ಧ್ವನಿ ಪೆಟ್ಟಿಗೆಗೆ ಬಂದು ಬಡಿಯುತ್ತವೆ.

ಸೆಕೆಂಡಿಗೆ ಹಲವು ನೂರು ಬಾರಿ ಬಂದೆರಗುವ ಗಾಳಿಯ ತುಣುಕುಗಳ ಆ ಹೊಡೆತಕ್ಕೆ ಕಂಪಿಸುವ ಧ್ವನಿ ಪೆಟ್ಟಿಗೆಯು ಕ್ಷೀಣ ಸ್ವರವನ್ನು ಹೊಮ್ಮಿಸುತ್ತದೆ. ಈ ದುರ್ಬಲ ಸ್ವರವು ಗಂಟಲು, ಮೂಗು ಹಾಗು ಬಾಯಿಯ ಒಳಭಾಗಗಳ ಮೂಲಕ ಬಲ ಪಡೆದು ಎಲ್ಲರಿಗೂ ಸ್ಫುಟವಾಗಿ ಕೇಳಿಸುವಂಥ ಧ್ವನಿಯಾಗಿ ಹೊರಹೊಮ್ಮುತ್ತದೆ.

ಹೀಗೆ ಹುಟ್ಟುವ ಧ್ವನಿಯನ್ನು ಧ್ವನಿಗ್ರಾಹಕದ ಮೂಲಕ ಗಣಕೀಕೃತ ಗೊಳಿಸಲಾಗುತ್ತದೆ. ಈ ರೂಪದಲ್ಲಿರುವ ಧ್ವನಿಯ ಮಟ್ಟ, ಅದರ ವೇಗ ಮುಂತಾದ ಲಕ್ಷಣಗಳನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸುವ ತಂತ್ರಜ್ಞಾನವೇ ‘ಧ್ವನಿ ವಕ್ರೀಕರಣ’. ಈ ತಂತ್ರಜ್ಞಾನದ ಮೂಲಕ ಮಾತುಗಾರನ ಗುರುತಿಗೆ, ಮಾತಿನ ಸ್ಪಷ್ಟತೆಗೆ ಧಕ್ಕೆ ಬಾರದಂತೆ ಮಾತಿನ ವೇಗವನ್ನು ಹೆಚ್ಚು ಅಥವಾ ಕಡಿಮೆಗೊಳಿಸಬಹುದು.

ಇದರಿಂದ ಕಷ್ಟಕರವಾದ ಉಚ್ಚಾರಣೆ ಇರುವ ಮಾತಿನ ವೇಗವನ್ನು ತಗ್ಗಿಸುವುದರ ಮೂಲಕ ಅದನ್ನು ಅರ್ಥಮಾಡಿಕೊಳ್ಳು ವುದು ಬಲು ಸುಲಭ. ಅಥವಾ ಸಮಯದ ಮಿತಿಯನ್ನು ಹೊಂದಿಸಿ ಅದಷ್ಟರಲ್ಲಿ ಎಲ್ಲ ಮಾತುಗಳನ್ನು ಸೇರ್ಪಡೆಗೊಳಿಸುವುದೂ ಸಾಧ್ಯ. ‘ಧ್ವನಿ ವಕ್ರೀಕರಣ’ದ ಇನ್ನೊಂದು ಉಪಯೋಗವೆಂದರೆ ಮಾತಿನ ವೇಗವನ್ನು ಬದಲಾಯಿಸದೇ ಗಂಡಸಿನ ಧ್ವನಿಯನ್ನು ಹೆಂಗಸಿನ ಧ್ವನಿಯನ್ನಾಗಿ ಸುವಂಥ, ವಯಸ್ಕನ ಮಾತನ್ನು ಮಗುವಿನ ಮಾತನ್ನಾಗಿ ಬಿಂಬಿಸುವ ಸಾಮರ್ಥ್ಯ. ಹಾಗೆಯೇ ಅದರ ಅದಲು-ಬದಲು ಕೂಡ. ಇದನ್ನು ‘ವಾಯ್ಸ್ ಮಾರ್ಫಿಂಗ್’ ಎನ್ನುತ್ತಾರೆ.

‘ಈ ತಂತ್ರಜ್ಞಾನದ ಉಪಯೋಗ ಗಳು ಬಹಳಷ್ಟಿದೆ. ಮಾತನಾಡಲು ತೊಂದರೆ ಇರುವ ಮಕ್ಕಳಿಗೆ ಪದಗಳ ಸರಿಯಾದ ಉಚ್ಚಾರಣೆಯನ್ನು ಕಲಿಯಲು ಇದು ನೆರವಾಗುತ್ತದೆ. ಅಂತೆಯೇ ಶ್ರವಣ ದೋಷ ಇರುವ ವೃದ್ಧರಿಗೂ ಮಾತುಗಳನ್ನು ನಿಧಾನವಾಗಿ ಅರ್ಥೈಸಿಕೊಳ್ಳಲು ಈ ತಂತ್ರಜ್ಞಾನ ಸಹಾಯವಾಗಬಲ್ಲದು.

ಬೇರೆಯ ತಂತ್ರಜ್ಞಾನಗಳಿಗಿಂತ ನಾವು ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನವು ಉತ್ತಮ ಫಲಿತಾಂಶ ನೀಡಿದೆ. ಅಲ್ಲದೇ ಇದಕ್ಕೆ ಯಾವುದೇ ಭಾಷೆಯ ನಿರ್ಬಂಧವೂ ಇಲ್ಲ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನವನ್ನು ಸ್ಮಾರ್ಟ್ ಫೋನ್‌ ಗಳಲ್ಲೂ ಬಳಸಲು ಸಾಧ್ಯವಾಗು ವಂತೆ ವಿನ್ಯಾಸಗೊಳಿಸಿ ಸಮಾಜದ ಹೆಚ್ಚಿನ ಜನರಿಗೆ ಸೌಲಭ್ಯ ದೊರಕಿಸುವ ಉದ್ದೇಶ ಇದೆ’ ಎನ್ನುತ್ತಾರೆ ಸಂಶೋಧನಾ ತಂಡದ ಮುಖ್ಯಸ್ಥ ಪ್ರೊ. ಚಂದ್ರಶೇಖರ ಸೀಲಮಂತುಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT