ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖವಾಡ ಕಳಚಿ ಬೀಳುತ್ತಿದೆಯೇ?

Last Updated 11 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

‘ಎಂಟುನೂರು ವರ್ಷಗಳ ನಂತರ ದೆಹಲಿಯಲ್ಲಿ ಆಡಳಿತ ಹಿಂದೂಗಳ ಕೈಗೆ ಸಿಕ್ಕಿದೆ’ ಎಂದು  ವಿಶ್ವ ಹಿಂದೂ ಪರಿಷತ್‌ನ ಮುಖಂಡ ಅಶೋಕ ಸಿಂಘಾಲ್ ಸಂಭ್ರಮಿಸಿದ ಬೆನ್ನಲ್ಲೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮುಖ­ವಾಡ­ಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ.

ಇದಕ್ಕೆ ಇತ್ತೀಚಿನ ನಿದರ್ಶನ­ವೆಂಬಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌, ಭಗವದ್ಗೀತೆಗೆ ರಾಷ್ಟ್ರೀಯ ಧರ್ಮ­ಗ್ರಂಥದ ಪವಿತ್ರ ಸ್ಥಾನ–ಮಾನ ನೀಡಬೇಕೆಂಬ ಪ್ರಸ್ತಾಪ­ವನ್ನು ಮುಂದಿಟ್ಟಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯ­ಮಂತ್ರಿ ಮಮತಾ ಬ್ಯಾನರ್ಜಿ, ‘ನಮ್ಮದು ಜಾತ್ಯತೀತ ರಾಷ್ಟ್ರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವೇ ನಮಗೆ ಪವಿತ್ರ ಗ್ರಂಥ’ ಎಂಬುದಾಗಿ ಇದಕ್ಕೆ ಸಮಂಜಸ ಪ್ರತಿಕ್ರಿಯೆ ನೀಡಿದ್ದಾರೆ.

ದೇಶ– ವಿದೇಶಗಳ ರಾಜಕೀಯ ನಾಯಕರ ಸೌಹಾರ್ದ ಭೇಟಿಯ ಸಂದರ್ಭದಲ್ಲಿ ತಮ್ಮತಮ್ಮ ದೇಶಗಳ ಉತ್ಕೃಷ್ಟ ಕಲಾ­­ಕೃತಿಗಳನ್ನು, ಸಾಹಿತ್ಯ– ಧರ್ಮಗ್ರಂಥಗಳನ್ನು ವಿಶ್ವಾಸ ಪೂರ್ವಕವಾಗಿ ಕೊಡುವುದು ಸರ್ವೇ ಸಾಮಾನ್ಯ.  ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ಭಗವದ್ಗೀತೆಯ ಪ್ರತಿಯನ್ನು ನೀಡಿದ್ದೂ ಈ ಹಿನ್ನೆಲೆಯಲ್ಲೇ. ಆದರೆ ಸುಷ್ಮಾ ಅವರು ಇದಕ್ಕೆ ವಿಪರೀತ ಅರ್ಥ ಕಲ್ಪಿಸಿದ್ದಾರೆ.

ಇಂಥ ರಾಷ್ಟ್ರೀಯ ಗ್ರಂಥದ ಗೌರವಕ್ಕೆ ಪಾತ್ರವಾಗಬಹುದಾದ ಶ್ರೇಷ್ಠ ಕೃತಿಗಳು ಎಲ್ಲಾ ಭಾಷೆ, ಎಲ್ಲಾ ಧರ್ಮಗಳಲ್ಲೂ ಇವೆ. ಸುಷ್ಮಾ ಅವರು ಹೇಳುವ ಪ್ರಕಾರ ವಿಶ್ವದ ಹಲವಾರು ಸಮಸ್ಯೆ­ಗಳಿಗೆ ಗೀತೆಯ ತತ್ವಗಳಿಂದ ಪರಿಹಾರ ಸಿಗುತ್ತದೆ ಎಂಬುದು ವಿವಾದಾಸ್ಪದ. ಗೀತೆಯಲ್ಲಿ  ಶ್ರೀಕೃಷ್ಣ ಬೋಧಿಸಿರುವ ‘ಸಂಪೂರ್ಣ ಶರಣು ಬಾ’ ಎಂಬ ತತ್ವವಾಗಲೀ,  ಯುದ್ಧಕ್ಕೆ ವಿಮುಖನಾದ ಅರ್ಜು­ನ­ನನ್ನು ಯುದ್ಧಕ್ಕೆ ಮರಳಿ ಹುರುದುಂಬಿ­ಸು­ವು­ದಾಗಲೀ, ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡು ಎಂಬ ಊಳಿ­ಗ­ಮಾನ್ಯ ವ್ಯವಸ್ಥೆಯನ್ನು ಪ್ರತಿಪಾದಿಸುವ ವಿಚಾರವಾಗಲೀ  ಮೌಢ್ಯದಿಂದ ಕೂಡಿದ ಮನುಷ್ಯ ವಿರೋಧಿ ಸಂಗತಿಗಳು.

ಇಂಥ ಸಂಗತಿಗಳು ಗೀತೆಯಲ್ಲಿ ಇರುವ ಒಳ್ಳೆಯ ಅಂಶಗಳ ಜೊತೆಜೊತೆಗೆ ಹಾಸುಹೊಕ್ಕಾಗಿವೆ. ಈ ವಿವಾದಾ­ತ್ಮಕ ವಿಷಯಗಳನ್ನು ಜನಸಾಮಾನ್ಯರ ಮನಸ್ಸುಗಳಿಗೆ ತುಂಬ­ಬೇಕೇಕೆ? ಇದು ಇಷ್ಟಕ್ಕೇ ಮುಗಿಯದೆ ಪಿ.ಎಂ.ಕೆ.ಯ ಎಸ್‌. ರಾಮ­ದಾಸ್‌ ಹೇಳಿದಂತೆ ಪವಿತ್ರ ಬೈಬಲ್‌– ಕುರಾನ್‌ ಅನ್ನು ಅಳ­ವಡಿಸ­ಬೇಕೆಂದು ಆಯಾ ಧರ್ಮದವರು ಪಟ್ಟು ಹಿಡಿ­ದರೆ ಆಗ ಶಾಲೆಗಳೆಲ್ಲಾ ಮತ– ಧರ್ಮದ ಮಠ ಕೇಂದ್ರ­ಗ­ಳಾಗ­ಬೇಕಾದೀತು. ಕಾಲ ಬದಲಾಗಿದೆ.

ಭಗವ­ದ್ಗೀತೆ ಎಂದಾ-­ಕ್ಷಣ ಸ್ವಯಂ ಭಗವಂತನ ಬಾಯಿಂದಲೇ ಬಂದ ನುಡಿ, ಆದ್ದ­ರಿಂದ ಗೀತೆ ಪವಿತ್ರ ಗ್ರಂಥ­ವೆಂದು ಕುರುಡಾಗಿ ನಂಬು­ವವರು ಇದನ್ನು ವೈಚಾರಿಕ ವಿಶ್ಲೇಷಣೆಗೆ ಒಳಪ­ಡಿ­ಸಿದ ಹಲವಾರು ವಿದ್ವಾಂಸರ ಅಭಿ­ಪ್ರಾಯ­ಗಳನ್ನು ಗಮನಿಸ­ಬೇಕು. ನಮ್ಮದು ಧರ್ಮನಿರಪೇಕ್ಷ, ಜಾತ್ಯತೀತ ಗಣರಾಜ್ಯ­ವಾದ್ದರಿಂದ ಯಾರೂ ಯಾರೊಬ್ಬರ ಮೇಲೂ ಕಡ್ಡಾಯ­ವಾಗಿ ಯಾವ ಮತ–ಧರ್ಮದ ಗ್ರಂಥ­ಗಳನ್ನೂ ಹೇರಲು ಅವಕಾಶವಿಲ್ಲ.
–ಪ್ರೊ.ಎನ್‌.ವಿ. ಅಂಬಾಮಣಿಮೂರ್ತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT