ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರಿಗೆ ವೈದ್ಯಕೀಯ ನೊಬೆಲ್‌

ನಾರ್ವೆ ವಿಜ್ಞಾನಿ ದಂಪತಿಗೆ ಒಲಿದ ಗೌರವ
Last Updated 6 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಸ್ಟಾಕ್‌ಹೋಂ (ಎಪಿ): ಮಿದುಳಿನ ಕರಾರುವಾಕ್ಕಾದ ಆಂತರಿಕ ಸಂಚಾರ ಮಾರ್ಗದರ್ಶನ ವ್ಯವಸ್ಥೆ (ಜಿಪಿಎಸ್‌) ನಿಗೂಢ ಕಾರ್ಯವೈಖರಿ ಕುರಿತ ಸಂಶೋಧನೆಗಾಗಿ ನಾರ್ವೆಯ ದಂಪತಿ ಸೇರಿದಂತೆ ಮೂವರು ವಿಜ್ಞಾನಿಗಳಿಗೆ ಪ್ರಸಕ್ತ ಸಾಲಿನ ವೈದ್ಯಕೀಯ ನೊಬೆಲ್‌ ಪ್ರಶಸ್ತಿ ದೊರೆತಿದೆ.

ನಾರ್ವೆಯಲ್ಲಿ ಸೋಮವಾರ ಪ್ರಕಟಿಸಲಾದ 2014ನೇ ಸಾಲಿನ  ವೈದ್ಯಕೀಯ ಕ್ಷೇತ್ರದ  ನೊಬೆಲ್‌ ಪ್ರಶಸ್ತಿಗೆ ಬ್ರಿಟನ್‌ ಮೂಲದ ಅಮೆರಿಕ ವಿಜ್ಞಾನಿ ಜಾನ್‌ ಓ’ ಕೀಫ್‌ ಮತ್ತು ನಾರ್ವೆ ದಂಪತಿ   ಎಡ್ವರ್ಡ್‌ ಮೊಸೆರ್‌ ಹಾಗೂ ಮೇ ಬ್ರಿಟ್‌ ಮೊಸೆರ್‌ ಅವರನ್ನು ಆಯ್ಕೆ ಮಾಡಲಾಗಿದೆ.
ಕರೊಲಿನಸ್ಕಾ ಸಂಸ್ಥೆಯಲ್ಲಿಪ್ರಶಸ್ತಿ ಪ್ರಕಟಿಸಿದ ನೊಬೆಲ್‌ ಪ್ರಶಸ್ತಿ ಸಮಿತಿ,  ಮಿದುಳಿನಲ್ಲಿರುವ ಆಂತರಿಕ ಸ್ಥಾನಿಕ ವ್ಯವಸ್ಥೆಗೆ (ಜಿಪಿಎಸ್‌) ಕಾರಣವಾಗುವ ಜೀವಕೋಶಗಳನ್ನು ಪತ್ತೆ ಹಚ್ಚಿದ್ದಕ್ಕಾಗಿ ಈ ಮೂವರಿಗೆ ನೊಬೆಲ್‌ ನೀಡಲಾಗಿದೆ ಎಂದು ಹೇಳಿದೆ.

ನಮ್ಮ ಸುತ್ತಮುತ್ತಲಿನ  ಸಂಕೀರ್ಣ ಪರಿಸರದಲ್ಲಿ ಮಿದಳು ಅದು ಹೇಗೆ ಕರಾರುವಾಕ್ಕಾಗಿ ಪಥವನ್ನು ಗುರುತಿ­ಸುತ್ತದೆ ಎಂಬ ಒಗಟನ್ನು   ಮೂವರು ಬಿಡಿಸಿಟ್ಟಿದ್ದಾರೆ.  ಶತಮಾನಗಳಿಂದ ಮಿದುಳಿನ ಮಾರ್ಗಸೂಚಿ ವ್ಯವಸ್ಥೆ  ವಿಜ್ಞಾನಿಗಳು ಮತ್ತು ತತ್ವಜ್ಞಾನಿಗಳಿಗೆ ಬಿಡಿಸಲಾಗದ ಕಗ್ಗಂಟಾಗಿತ್ತು. ಅದಕ್ಕೀಗ ಈ ಸಂಶೋಧನೆಯಿಂದ ಸಮರ್ಪಕ ಉತ್ತರ ದೊರೆತಿದೆ.

ಇಲಿಗಳ ಮಿದುಳಿನ ನರಮಂಡಲದ ಮೇಲೆ ಸಂಶೋಧನೆ ಕೈಗೊಂಡಿದ್ದ ಕೀಫ್‌ ಮೆದುಳಿನ ಸ್ಥಾನಿಕ ವ್ಯವಸ್ಥೆ ಭಾಗವಾದ ಅಂಗವನ್ನು 1971ರಲ್ಲಿಯೇ ಪತ್ತೆ ಹಚ್ಚಿದ್ದರು. ಅದಾದ ಮೂರು  ದಶಕಗಳ ನಂತರ ಮೊಸೆರ್‌ ದಂಪತಿ  2005ರಲ್ಲಿ ಮಿದುಳಿನ ಜಿಪಿಎಸ್‌ ವ್ಯವಸ್ಥೆಯ ನಿರ್ವಹಿಸುವ ಮತ್ತೊಂದು ಪ್ರದೇಶ­ವನ್ನು ಪತ್ತೆಹಚ್ಚಿದ್ದರು. ಮಿದುಳಿನಲ್ಲಿ ಎರಡು ವಿಭಿನ್ನ ನರಕೋಶಗಳಿಂದ ಒಂದು ಸ್ಥಾನಿಕ ವ್ಯವಸ ನಿರ್ಮಾಣವಾ­ಗುವುದನ್ನು ಕಂಡು ಹಿಡಿದಿದ್ದರು. ಮರೆಗುಳಿ ಕಾಯಿಲೆ (ಅಲ್‌ ಜೈಮರ್‌ ) ಸೇರಿದಂತೆ ಅನೇಕ ನರ ಸಂಬಂಧಿ ಕಾಯಿಲೆಗಳ ಚಿಕಿತ್ಸೆ ಮತ್ತು  ಔಷಧ ಸಂಶೋಧನೆಗೆ  ಇದು ನೆರವಾಗಲಿದೆ.

ಪ್ರಶಸ್ತಿ  ಒಂದು ಮಿಲಿಯನ್‌ ಡಾಲರ್‌ (ಅಂದಾಜು ಆರು ಕೋಟಿ ರೂಪಾಯಿ ) ನಗದು ಪುರಸ್ಕಾರವನ್ನು ಒಳಗೊಂಡಿದ್ದು ಪ್ರಶಸ್ತಿ ಮೊತ್ತವನ್ನು ಮೊರೆಸ್‌ ದಂಪತಿ ಹಾಗೂ ಕೀಫ್‌ ಸಮನಾಗಿ ಹಂಚಿಕೊಳ್ಳಲಿದ್ದಾರೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಶಾಂತಿ ಮತ್ತು ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿಗಳು ಇದೇ ವಾರಾಂತ್ಯದಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. ಮುಂದಿನ  ವಾರ ಅರ್ಥಶಾಸ್ತ್ರ ಕ್ಷೇತ್ರದ ನೊಬೆಲ್ ಪ್ರಶಸ್ತಿ ಪ್ರಕಟವಾಗ­ಲಿದೆ. ಸ್ಟಾಕ್‌ಹೋಂನಲ್ಲಿ ಡಿಸೆಂಬರ್‌ 10ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT