ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರ ಇಂದು ಅಸ್ತಿತ್ವಕ್ಕೆ

ದೇಶದ 15ನೇ ಪ್ರಧಾನಿಯಾಗಿ ಪ್ರಮಾಣವಚನ, ಸಮಾರಂಭಕ್ಕೆ ವೈಮಾನಿಕ ಕಣ್ಗಾವಲು
Last Updated 25 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆಯಲಿರುವ ಐತಿಹಾಸಿಕ ಸಮಾರಂಭ­ದಲ್ಲಿ ನರೇಂದ್ರ ಮೋದಿ ಅವರು ದೇಶದ 15ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಸಾರ್ಕ್‌ ದೇಶಗಳ ನಾಯಕರು  ಸೇರಿ­ದಂತೆ ಸುಮಾರು 4,000 ಅತಿಥಿಗಳು ಕಾರ್ಯ­ಕ್ರಮ­ದಲ್ಲಿ ಭಾಗವಹಿಸುತ್ತಿ­ದ್ದಾರೆ. ರಾಷ್ಟ್ರಪತಿ ಭವನದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ಸಂಖ್ಯೆಯಲ್ಲಿ ಗಣ್ಯರು  ಸೇರುತ್ತಿರು­ವುದು ಮತ್ತೊಂದು ವಿಶೇಷ. ಇಲ್ಲಿ ಇದುವರೆಗೆ ನಡೆದ ಸಮಾರಂಭ­ಗಳಲ್ಲಿ ಹೆಚ್ಚೆಂದರೆ 1,200 ರಿಂದ 2,000 ಗಣ್ಯರು ಮಾತ್ರ ಭಾಗವಹಿ­ಸಿದ್ದರು.

ಬಿಗಿ ಭದ್ರತೆ:  ಗಣರಾಜ್ಯೋತ್ಸವದ ಪಥ­ಸಂಚಲ­ನಕ್ಕೆ ಯಾವ ರೀತಿ ಭದ್ರತೆ ಒದಗಿಸಲಾಗುತ್ತ­ದೆಯೋ ಅದೇ ಮಾದರಿ­­ಯಲ್ಲಿ  ಮೋದಿ ಅಧಿಕಾರ ಸ್ವೀಕಾರ ಸಮಾರಂಭಕ್ಕೂ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ವೈಮಾನಿಕ ಕಣ್ಗಾವಲು ಸೇರಿದಂತೆ ರಾಷ್ಟ್ರಪತಿ ಭವನ ಹಾಗೂ ಸುತ್ತಲಿನ ಪ್ರದೇಶದಲ್ಲಿ  ಸರ್ಪ­ಗಾವಲು ಹಾಕಲಾ­ಗಿದೆ. ಸುಮಾರು 6,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ನಿರ್ಗಮಿತ ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾ­ಧ್ಯಕ್ಷ ರಾಹುಲ್‌ ಗಾಂಧಿ, ವಿವಿಧ ಪಕ್ಷಗಳ ಮುಖಂ­ಡರು, ವಿವಿಧ ರಾಜ್ಯಗಳ ಮುಖ್ಯಮಂತ್ರಿ­ಗಳ ಸಮ್ಮುಖ­ದಲ್ಲಿ ಮೋದಿ ಅಧಿಕಾರ ಸ್ವೀಕರಿಸಲಿ­ದ್ದಾರೆ.

ಹೀರಾಬೆನ್‌ ಉಪಸ್ಥಿತಿ?: ಮೋದಿ ಅವರ ತಾಯಿ ಹೀರಾಬೆನ್‌ ಕೂಡ ಕಾರ್ಯಕ್ರಮದಲ್ಲಿ ಭಾಗ­ವಹಿ­ಸುವ ನಿರೀಕ್ಷೆ ಇದೆ. ಭಾರತದ ಪ್ರಧಾನಿ ಪ್ರಮಾಣ ವಚನ ಸಮಾರಂಭಕ್ಕೆ ಸಾರ್ಕ್‌ ರಾಷ್ಟ್ರಗಳ ಮುಖ್ಯಸ್ಥ­ರನ್ನು ಆಹ್ವಾನಿಸಿರುವುದು ಇದೇ ಮೊದಲು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸಂಪ್ರದಾಯವನ್ನು ಮುಂದು­ವರಿಸುವ ನಿಟ್ಟಿನಲ್ಲಿ ಮೋದಿ ಅವರು ರಾಷ್ಟ್ರಪತಿ ಭವನದ ಮುಂದಿನ ಪ್ರಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ವಾಜಪೇಯಿ ಅವರಿ­ಗಿಂತ ಮೊದಲು ಚಂದ್ರಶೇಖರ್‌ ಅವರು ಇಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಇಂಥ ಸಮಾರಂಭಗಳು ಸಾಮಾನ್ಯ­ವಾಗಿ ರಾಷ್ಟ್ರಪತಿ ಭವನದ ಐತಿಹಾಸಿಕ ದರ್ಬಾರ್‌ ಸಭಾಂಗಣದಲ್ಲಿ ನಡೆಯು­ತ್ತವೆ. ಆದರೆ, ಅಲ್ಲಿ ಸುಮಾರು 500 ಜನರಿಗೆ ಮಾತ್ರ ಸ್ಥಳಾವಕಾಶವಿದೆ. ಆದ್ದರಿಂದ ಮೋದಿ ಪ್ರಮಾಣವಚನ ಸಮಾರಂಭವನ್ನು ರಾಷ್ಟ್ರಪತಿ ಭವನದ ಮುಂದಿನ ಪ್ರಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ.

ರಾಜಘಾಟ್‌ಗೆ ಭೇಟಿ: ಮೋದಿ ಅವರು ಸೋಮ­ವಾರ ಬೆಳಿಗ್ಗೆ 7 ಗಂಟೆಗೆ ರಾಜಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ
ಪುಷ್ಪ ನಮನ ಸಲ್ಲಿಸುವರು.

ರಾಷ್ಟ್ರಪತಿ ಭವನದಲ್ಲಿ ವಿಶೇಷ ಭಕ್ಷ್ಯ: ಗುಜರಾತ್‌ನ ಜನಪ್ರಿಯ ‘ಕೇಲಾ ಮೇಥಿ ನು ಶಾಕ್‌’, ಬಾಯಲ್ಲಿ ನೀರು ಬರಿಸುವ ತಮಿಳು­ನಾಡಿನ ‘ಚಿಕನ್‌ ಚೆಟ್ಟಿನಾಡ್‌’, ಪಂಜಾಬ್‌ನ ‘ದಾಲ್‌ ಮಖಾನಿ’, ಬಂಗಾಳದ ‘ಪೊಟೊಲ್‌ ದೊರ್ಮಾ’.... - ಸಮಾ­ರಂಭದಲ್ಲಿ ಪಾಲ್ಗೊಳ್ಳುತ್ತಿರುವ ವಿದೇಶಿ ಗಣ್ಯರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಏರ್ಪಾಟು ಮಾಡಿರುವ ಖಾಸಗಿ ಔತಣ­ಕೂಟದಲ್ಲಿ ಈ ಎಲ್ಲ ಖಾದ್ಯಗಳನ್ನು ಉಣಬಡಿಸ­ಲಾಗುತ್ತದೆ. ಸಿಗಡಿ ಸುಕ್ಕಾ, ಮಟನ್‌ ಟಿಕ್ಕಾ, ತಂದೂರಿ ಆಲೂ,   ಅರಬಿ ಕಬಾಬ್‌,  ಮಾವಿನ ಶ್ರೀಖಂಡ, ಗುಜರಾತಿ ಢೋಕ್ಲಾ... ಇತ್ಯಾದಿ ವಿಧ ವಿಧ ಭಕ್ಷ್ಯಗಳನ್ನು ಗಣ್ಯರು ಸವಿಯಲಿದ್ದಾರೆ.

ನೇರ ಪ್ರಸಾರ: 11 ಪ್ರಾದೇಶಿಕ ಭಾಷೆಗಳಲ್ಲಿ ಪ್ರಮಾಣ­ವಚನ ಸಮಾರಂಭದ ನೇರ ಪ್ರಸಾರ ಮಾಡಲು ದೂರದರ್ಶನ ನಿರ್ಧರಿಸಿದೆ.

75 ವಿದೇಶಿ ಗಣ್ಯರು
ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌, ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ, ಜಾಫ್ನಾ ಮೇಯರ್‌  ಯೋಗೇಶ್ವರಿ ಪಾತ್‌ಕುನರಾಜಾ, ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್‌ ಕರ್ಜೈ, ಭೂತಾನ್‌ ಪ್ರಧಾನಿ  ತ್ಸೆರಿಂಗ್‌ ಟೊಬ್‌ಗೆ, ನೇಪಾಳ ಪ್ರಧಾನಿ ಸುಶೀಲ್‌ ಕೊಯಿರಾಲ, ಮಾಲ್ಡೀವ್ಸ್‌ ಅಧ್ಯಕ್ಷ ಅಬ್ದುಲ್ಲಾ ಯಮೀನ್‌ ಅಬ್ದುಲ್‌ ಗಯೂಮ್‌, ಬಾಂಗ್ಲಾದೇಶದ ಸ್ಪೀಕರ್‌ ಶಿರಿನ್‌ ಚೌಧರಿ, ಮಾರಿಷಸ್‌ ಪ್ರಧಾನಿ ನವೀನ್‌ಚಂದ್ರ ರಾಮ್‌ಗೂಲಮ್‌ ಅವರು ಸಮಾರಂಭದಲ್ಲಿ ಭಾಗವಹಿ­ಸಲಿದ್ದಾರೆ.

ನಾರ್ವೆ, ಉಕ್ರೇನ್‌, ನೈಜೀರಿಯಾ, ಕೀನ್ಯಾ, ತೈವಾನ್‌, ಗಯಾನಾ, ಡೆನ್ಮಾರ್ಕ್‌, ಇಸ್ರೇಲ್‌, ಆಸ್ಟ್ರೇಲಿಯಾ, ಹಾಂಕಾಂಗ್‌ ಸೇರಿದಂತೆ ಸುಮಾರು 90 ವಿದೇಶಿ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಈ ಪೈಕಿ 75 ಮಂದಿ ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದಾರೆ.

ಸಿದ್ದರಾಮಯ್ಯ, ಜಯಾ, ಚಾಂಡಿ, ನವೀನ್‌ ಗೈರು
ಸಮಾ­ರಂಭಕ್ಕೆ ಕಾಂಗ್ರೆಸ್‌ನ ಮುಖ್ಯಮಂತ್ರಿ­ಗಳಾದ ಸಿದ್ದ­ರಾಮಯ್ಯ, ಉಮ್ಮನ್‌ ಚಾಂಡಿ (ಕೇರಳ) ಸೇರಿದಂತೆ ನಾಲ್ವರು ಮುಖ್ಯಮಂತ್ರಿ­ಗಳು ಗೈರು ಹಾಜರಾಗಲಿದ್ದಾರೆ. ತಮಿಳು­ನಾಡು ಮುಖ್ಯ­ಮಂತ್ರಿ ಜಯಲಲಿತಾ, ಒಡಿಶಾ ಮುಖ್ಯ­ಮಂತ್ರಿ ನವೀನ್‌ ಪಟ್ನಾ­ಯಕ್‌ ಕೂಡ ಸಮಾ­ರಂಭಕ್ಕೆ ಬರುತ್ತಿಲ್ಲ. ಪಶ್ಚಿಮಬಂಗಾಳದ ಮಮತಾ ಬ್ಯಾನರ್ಜಿ ನಿಲುವು ಏನೆಂಬುದು ಖಚಿತವಾಗಿಲ್ಲ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT