ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಶಂಕರದಲ್ಲಿ ಮಕ್ಕಳ ನಾಟಕೋತ್ಸವದ ರಂಗು

Last Updated 10 ಜುಲೈ 2015, 19:30 IST
ಅಕ್ಷರ ಗಾತ್ರ

ನಗರದ ಪ್ರಮುಖ ರಂಗ ಚಟುವಟಿಕೆ ಕೇಂದ್ರವಾದ ರಂಗಶಂಕರವು ‘ಆಹಾ! ಅಂತರರಾಷ್ಟ್ರೀಯ ಮಕ್ಕಳ ನಾಟಕೋತ್ಸವ’ಕ್ಕೆ ಸಜ್ಜಾಗಿದೆ. ಜುಲೈ 12ರಿಂದ 19ರವರೆಗೆ ಎಂಟು ದಿನಗಳ ಕಾಲ ಈ ನಾಟಕೋತ್ಸವ ನಡೆಯಲಿದೆ.

2006ರಿಂದ ಪ್ರತಿವರ್ಷವೂ ರಂಗಶಂಕರ ಜುಲೈ ತಿಂಗಳಲ್ಲಿ ‘ಅಂತರರಾಷ್ಟ್ರೀಯ ಮಕ್ಕಳ ನಾಟಕೋತ್ಸವ’  ನಡೆಸಿಕೊಂಡು ಬಂದಿದೆ. ದೇಶ ವಿದೇಶಗಳ ಮತ್ತು ಭಾರತದ ಬೇರೆ ಬೇರೆ ರಾಜ್ಯಗಳ ನಾಟಕಗಳು ಪ್ರದರ್ಶಿತಗೊಳ್ಳುವುದು ಈ ನಾಟಕೋತ್ಸವದ ವಿಶೇಷತೆ. ಆದ್ದರಿಂದ ಇದು ಜಗತ್ತಿನ ಮಕ್ಕಳ ರಂಗಭೂಮಿಯಲ್ಲಾಗುತ್ತಿರುವ ಬದಲಾವಣೆಗಳನ್ನು ಅರಿತುಕೊಳ್ಳುವ ಕಿಟಕಿಯೂ ಹೌದು.

‘ಬೇರೆ ಬೇರೆ ದೇಶಗಳಲ್ಲಿ  ಅದ್ದೂರಿಯಾಗಿ ಮಕ್ಕಳ ನಾಟಕೋತ್ಸವ ನಡೆಯುತ್ತದೆ. ಜಪಾನ್‌ನಲ್ಲಿ ಒಂದು ತಿಂಗಳ ಕಾಲ ಅಂತರರಾಷ್ಟ್ರೀಯ ಮಕ್ಕಳ ನಾಟಕೋತ್ಸವ ನಡೆಯುತ್ತದೆ. ಜರ್ಮನಿಯಲ್ಲಿಯೂ ಆರು ದಿನಗಳ ಕಾಲ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಹಾಗೆ ನೋಡಿದರೆ ನಮ್ಮ ದೇಶದಲ್ಲಿಯೇ ಮಕ್ಕಳ ನಾಟಕೋತ್ಸವಗಳು ಕಡಿಮೆ. ಆದ್ದರಿಂದ ನಮ್ಮಲ್ಲಿಯೂ ಮಕ್ಕಳ ನಾಟಕೋತ್ಸವ ನಡೆಯುವಂತಾಗಬೇಕು.

ಆ ಮೂಲಕ ಇಲ್ಲಿನ ಜನರು ಹೊಸ ಹೊಸ ಮಕ್ಕಳ ನಾಟಕಗಳನ್ನುನೋಡುವಂತಾಗಬೇಕು ಎಂಬ ಉದ್ದೇಶ ಈ ನಾಟಕೋತ್ಸವದ ಹಿಂದಿದೆ’ ಎಂದು ವಿವರಿಸುತ್ತಾರೆ ರಂಗಶಂಕರದ ನಿರ್ದೇಶಕ ಎಸ್‌. ಸುರೇಂದ್ರನಾಥ್‌.ಜುಲೈ 12 (ಭಾನುವಾರ) ಉಡುಪಿಯ ಯಕ್ಷಗಾನ ಕಲಾ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಲಿರುವ ‘ವಾಲೀ ಮೋಕ್ಷ’ ಯಕ್ಷಗಾನದೊಂದಿಗೆ ಈ ನಾಟಕೋತ್ಸವ ಆರಂಭಗೊಳ್ಳಲಿದೆ. ಜುಲೈ 19ರಂದು ತಮಿಳುನಾಡಿನ ಕಾಂಚಿಪುರಂನ ಕಟ್ಟೈಕುತ್ತು ಯಂಗ್‌ ಪ್ರೊಫೆಷನಲ್ಸ್‌ ಕಂಪೆನಿಯ ವಿದ್ಯಾರ್ಥಿಗಳು ಪ್ರದರ್ಶಿಸಲಿರುವ ‘ದ್ರೌಪದಿ ಕುರವಂಚಿ’ ನಾಟಕಕೊಂದಿಗೆ ನಾಟಕೋತ್ಸವಕ್ಕೆ ತೆರೆ ಬೀಳಲಿದೆ.

ಈ ನಡುವೆ ಶ್ರೀಲಂಕಾದ ಪವರ್ ಆಫ್‌ ಪ್ಲೇ ತಂಡ, ದಕ್ಷಿಣ ಕೊರಿಯಾದ ಮಾನೇತ್ಸಂಗ್‌ ಸಾಹ್ವಾ ತಂಡ, ಇಟಲಿಯ ಕ್ಯಾಂಟಿಯೇರಿ ಟೀಟ್ರಾಲಿ ಕೊರೆಜ ತಂಡ, ನವದೆಹಲಿಯ ಕುಛ್‌ ಕುಛ್‌ ಪಪ್ಪೆಟ್‌ ಥಿಯೇಟರ್‌, ಮುಂಬೈನ ರಂಗ್‌ ಬಾಜ್‌ ತಂಡಗಳು ನಾಟಕವನ್ನು ಪ್ರದರ್ಶಿಸಲಿವೆ.

ಹಿರಿಯರು ಮಾಡುವ ಮಕ್ಕಳ ನಾಟಕಗಳು
ಇದು ಮಕ್ಕಳಿಗಾಗಿ ಮಾಡುವ ನಾಟಕೋತ್ಸವವೇ ಹೊರತು ಮಕ್ಕಳೇ ಮಾಡುವ ನಾಟಕೋತ್ಸವವಲ್ಲ. ಅಂದರೆ ಇಲ್ಲಿನ ನಾಟಕಗಳನ್ನು ಹಿರಿಯ ಕಲಾವಿದರೇ ಪ್ರಸ್ತುತಪಡಿಸುತ್ತಾರೆ. ಇದಕ್ಕೆ ಅಪವಾದವೆಂಬಂತೆ ಯಕ್ಷಗಾನ ಕಲಾಕೇಂದ್ರ ಮತ್ತು ಕಟ್ಟೈಕುತ್ತು ಯಂಗ್‌ ಪ್ರೊಫೆಷನಲ್ಸ್‌ ಕಂಪೆನಿಯ ಮಕ್ಕಳೇ ಪ್ರದರ್ಶಿಸುವ ನಾಟಕಗಳೂ ಇವೆ.

ಭಾಷೆಯ ಮಿತಿ ಇಲ್ಲ
ಇಲ್ಲಿನ ಮೊದಲ ಮತ್ತು ಕೊನೆಯ ನಾಟಕಗಳನ್ನು ಹೊರತುಪಡಿಸಿದರೆ ಉಳಿದ ನಾಟಕಗಳಿಗೆ ಭಾಷೆ ಇಲ್ಲ. ಹೀಗೆ ಭಾಷೆಯ ಮಿತಿಯನ್ನು ಮೀರಿದಾಗಲೇ ಮಕ್ಕಳಿಗೆ ಹೆಚ್ಚು ಪರಿಣಾಮಕಾರಿಯಾಗಿ ತಲುಪಲು ಸಾಧ್ಯ ಎಂಬ ಅಭಿಪ್ರಾಯ ಸಂಘಟಕರದು.‘ಸಾಮಾನ್ಯವಾಗಿ ಮಕ್ಕಳು ಎಂದ ತಕ್ಷಣ ನಾವು ಅವರಿಗೆ ನೀತಿ ಕತೆ ಹೇಳುವ ಧಾವಂತಕ್ಕೆ ಬೀಳುತ್ತೇವೆ. ಆದರೆ ಇಲ್ಲಿನ ನಾಟಕಗಳು ಅಂತಹ ಗುರಿ ಹೊಂದಿಲ್ಲ. ಮಕ್ಕಳಿಗೆ ಪ್ರಸ್ತುತ ಪರಿಸ್ಥಿತಿಯನ್ನು ಹೇಗೆ ಅರ್ಥಮಾಡಿಕೊಡಬೇಕು ಎಂಬ ಚಿಂತನೆಯಲ್ಲಿ ಹುಟ್ಟಿದ ನಾಟಕಗಳಿವು’ ಎನ್ನುವುದು ಸುರೇಂದ್ರನಾಥ್‌ ಅಭಿಪ್ರಾಯ.

ಮಕ್ಕಳಿಗಾಗಿ ವಿಶೇಷ ಪ್ರದರ್ಶನ
ಈ ನಾಟಕೋತ್ಸವದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನವೂ ಬೆಳಿಗ್ಗೆ 11ಕ್ಕೆ ಶಾಲಾ ಮಕ್ಕಳಿಗಾಗಿ ವಿಶೇಷ ಪ್ರದರ್ಶನವೂ ಇರುತ್ತದೆ. ನಗರದ ವಿವಿಧ ಶಾಲೆಗಳ ಮಕ್ಕಳು ಈ ಪ್ರದರ್ಶನದ ಪ್ರಯೋಜನ ಪಡೆಯಬಹುದು. ಹಾಗೆಯೇ ಅಂಗವಿಕಲ ಮತ್ತು ಬುದ್ಧಿಮಾಂದ್ಯ ಮಕ್ಕಳಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತದೆ.

ಇತರ ಚಟುವಟಿಕೆಗಳು
ನಾಟಕೋತ್ಸವ ಕೇವಲ ನಾಟಕ ಪ್ರದರ್ಶನಗಳಿಗಷ್ಟೇ ಸೀಮಿತವಲ್ಲ. ಬದಲಿಗೆ ರಂಗಶಂಕರದ ಆವರಣದಲ್ಲಿ ಮಕ್ಕಳಿಗಾಗಿಯೇ ವಿಶೇಷ ಗ್ರಾಮೀಣ ಆಟಗಳನ್ನೂ ಪ್ರದರ್ಶಿಸಲಾಗುತ್ತವೆ. ವಿವಿಧ ರೀತಿಯ ಮನರಂಜನಾ ಚಟುವಟಿಕೆಗಳು ನಡೆಯುತ್ತಿರುತ್ತವೆ.
ಅಲ್ಲದೇ ‘ಯಮ್ಮೀ ಕೌಂಟರ್‌’ ಎಂಬ ವಿಶಿಷ್ಟ ಕಾರ್ಯಕ್ರಮವನ್ನೂ ರೂಪಿಸಲಾಗಿದೆ. ಇಲ್ಲಿ 8ರಿಂದ 15 ವರ್ಷದೊಳಗಿನ ಮಕ್ಕಳು ತಾವೇ ತಯಾರಿಸಿದ ಲಘು ಉಪಹಾರಗಳನ್ನು ರಂಗಶಂಕರ ಕೆಫೆಯಲ್ಲಿ ಮಾರಾಟಕ್ಕೆ ಇಡಬಹುದು. ಇದಕ್ಕಾಗಿಯೇ ಪ್ರತ್ಯೇಕ ಕೌಂಟರ್‌ ಅನ್ನೂ ಪ್ರಾರಂಭಿಸಲಾಗುವುದು. ಅದನ್ನು ಮಕ್ಕಳೇ ನಡೆಸುತ್ತಾರೆ. ಆಸಕ್ತರು programming@rangashankara.in ಮೂಲಕ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

***
ಒಳ್ಳೆಯ ಪೀಳಿಗೆ ರೂಪಿಸುವ ಪ್ರಯತ್ನ
ನಮ್ಮದು ಇಷ್ಟು ದೊಡ್ಡ ದೇಶ. ಎಷ್ಟೊಂದು ಮಕ್ಕಳಿದ್ದಾರೆ. ಆದರೆ ನಾವು ನಮ್ಮ ಮಕ್ಕಳಿಗಾಗಿ ಏನು ಮಾಡಿದ್ದೇವೆ?ಒಂದು ಒಳ್ಳೆಯ ಪೀಳಿಗೆಯನ್ನು ರೂಪಿಸಬೇಕು ಅಂದರೆ ನಾವು ಅವರಿಗೆ ಒಳ್ಳೆಯ ಕಲೆಗಳನ್ನು ತೋರಿಸಬೇಕು. ನಾವು ರಂಗಭೂಮಿಯವರು. ನಮ್ಮ ಕೈಲಾಗುವುದು ಮಕ್ಕಳಿಗೆ ಒಳ್ಳೊಳ್ಳೆಯ ನಾಟಕಗಳನ್ನು  ತೋರಿಸುವುದು.

ಈ ನಾಟಕೋತ್ಸವದ ಉದ್ದೇಶವೂ ಅದೇ. ಬರೀ ಟೀವಿ, ಕಾರ್ಟೂನು, ಪಾಪ್‌ಕಾರ್ನ್‌, ಪಿಜ್ಜಾ, ಬರ್ಗರ್‌ಗಳಷ್ಟೇ ಬದುಕಲ್ಲ. ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಇಂತಹ ಅಪರೂಪದ ಒಳ್ಳೆಯ ನಾಟಕಗಳನ್ನೂ ತೋರಿಸಬೇಕು ಎನ್ನುವುದನ್ನು ಬೆಂಗಳೂರಿನ ಪೋಷಕರಿಗೆ ತಿಳಿಸುವುದೇ ಈ ನಾಟಕೋತ್ಸವದ ಉದ್ದೇಶ.
-ಆರುಂಧತಿ ನಾಗ್‌, ರಂಗಶಂಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT