ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಸಾಹಿತ್ಯದ ತಾತ್ಸಾರ

ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ವಿಷಾದ
Last Updated 15 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಜ್ಞಾನ ಸಾಹಿತ್ಯದ ಬಗ್ಗೆ ತಾತ್ಸಾರ ಮನೋ­ಭಾವ ಮೂಡಿದೆ. ಯಾರಲ್ಲೂ ಬದ್ಧತೆ ಇಲ್ಲ. ಪಶ್ಚಿಮ ಬಂಗಾಳ ಹೊರತುಪಡಿಸಿ ದೇಶದ ಎಲ್ಲಾ ಕಡೆ ಈ ಸಮಸ್ಯೆ ಇದೆ’ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

ನಗರದ ನಯನ ಸಭಾಂಗಣದಲ್ಲಿ ಶನಿವಾರ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಬರಹಗಾರರ ಅಭಿಪ್ರಾಯ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸು­ವಂಥ ಸಾಹಿತ್ಯ ಸೃಷ್ಟಿಯಾಗಬೇಕಾಗಿದೆ. ಹೊಸ ಪ್ರಯೋಗಗಳು ನಡೆಯಬೇಕಾಗಿದೆ. ಇದು ಸಾಹಿತಿಗಳ ಕರ್ತವ್ಯ ಕೂಡ’ ಎಂದು ಅವರು ಸಲಹೆ ನೀಡಿದರು. ಉತ್ತಮ ಬಾಲ ಸಾಹಿತ್ಯಕ್ಕಾಗಿ ಅಕಾಡೆಮಿ ನೀಡಿದ 2014ನೇ ಸಾಲಿನ ‘ಬಾಲ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿದ ವಿವಿಧ ರಾಜ್ಯಗಳ 22 ಸಾಹಿತಿಗಳು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕಥೆಯ ಮೂಲಕ ನಿರೂಪಿಸಿ: ಆಂಗ್ಲ ಭಾಷೆಯ ಲೇಖಕಿ ಸುಭದ್ರ ಸೆನ್‌ ಗುಪ್ತಾ ಮಾತನಾಡಿ, ‘ಮಕ್ಕಳ ಸಾಹಿತ್ಯ ರಚಿಸುವ ಮೊದಲು ಮಕ್ಕಳ ಮಾತುಗಳನ್ನು ಆಲಿಸಬೇಕು. ಯಾವುದೇ ವಿಚಾರವನ್ನು ಕಥೆ ಹಾಗೂ ದೃಷ್ಟಾಂತಗಳ ಮೂಲಕ ನಿರೂಪಿಸಬೇಕು. ಈ ರೀತಿಯಲ್ಲಿ ಏನನ್ನು ನೀಡಿದರೂ ಮಕ್ಕಳು ಖಂಡಿತ ಒಪ್ಪಿಕೊಳ್ಳುತ್ತಾರೆ. ಮಕ್ಕಳ ಸಾಹಿತಿಗಳೆಂದರೆ ಕಥೆ ಹೇಳುವವರು’ ಎಂದರು.

‘ಇತಿಹಾಸವನ್ನು ಕೂಡ ಕಥೆ ರೀತಿ ಹೇಳಬೇಕು. ಆದರೆ, ಇಂದಿನ ಇತಿಹಾಸ ಪಠ್ಯಗಳು ಬೋರು ಹೊಡೆಸುತ್ತಿವೆ. ಇದೇ ಕಾರಣಕ್ಕಾಗಿ ಮಕ್ಕಳು ಆಸಕ್ತಿ ತೋರಿಸುತ್ತಿಲ್ಲ’ ಎಂದರು.

ಸಾಹಿತ್ಯದ ಮೂಲಕ ಮನಸ್ಸು ಅರಳಿಸಿ: ತೆಲುಗು ಭಾಷೆಯ ಮಕ್ಕಳ ಸಾಹಿತಿ  ದಾಸರಿ ವೆಂಕಟರಮಣ, ‘ಬೀಜಗಳಿಗೆ ಯಾವ ರೀತಿ ನೀರು, ಗೊಬ್ಬರ ಹಾಕಿ ಬೆಳೆಸುತ್ತೀರೊ ಹಾಗೇ ಮಕ್ಕಳಿಗಾಗಿ ಉತ್ತಮ ಸಾಹಿತ್ಯ ರಚಿಸಿ ಅವರ ಮನಸ್ಸು ಅರಳಿಸಬೇಕು. ಆದರೆ, ಮಕ್ಕಳ ಸಾಹಿತ್ಯವನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ. ಇದೊಂದು ಅಪಾಯಕಾರಿ ಬೆಳವ­ಣಿಗೆ’ ಎಂದು ಕಳವಳ ವ್ಯಕ್ತಪಡಿಸಿದರು.

ರಿಂಗ್‌ಟೋನ್‌ ಅಷ್ಟೇ ಕೇಳಿಸುತ್ತಿದೆ: ಮಲಯಾಳಿ ಸಾಹಿತಿ ಡಾ.ಕೆ.ವಿ. ರಾಮನಾಥನ್‌ ಮಾತನಾಡಿ, ‘ನಾವು ಬಾಲ್ಯದಲ್ಲಿ ಹಸಿರು ಲೋಕದ ನಡುವೆ ಬೆಳೆದೆವು. ಕಾಡು, ಪ್ರಾಣಿ ಪಕ್ಷಿಗಳು, ಚಿಟ್ಟೆ, ನದಿ, ಕೆರೆ ವಾತಾವರಣ ಮನಸ್ಸಿನ ಮೇಲೆ ಸಕಾರಾ­ತ್ಮಕ ಪರಿಣಾಮ ಬೀರುತಿತ್ತು. ಆದರೆ, ಈಗ ನಗರೀಕರಣ­ದಿಂದಾಗಿ ಇಂಥ ಲೋಕವೇ ನಾಶವಾಗಿದೆ. ಬದಲಾಗಿ ಯಾಂತ್ರಿಕ ಜೀವನವಾಗಿ ಮಾರ್ಪಟ್ಟಿದೆ. ಹಕ್ಕಿಗಳ ಚಿಲಿಪಿಲಿಯ ಜಾಗದಲ್ಲಿ ಮೊಬೈಲ್‌ ರಿಂಗ್‌ಟೋನ್‌ ಅಷ್ಟೇ ಕೇಳಿಸುತ್ತಿದೆ’ ಎಂದರು.

ಮಕ್ಕಳ ಸಾಹಿತ್ಯವೇ ಪ್ರೇರಣೆ: ಕನ್ನಡ ಸಾಹಿತಿ ಆನಂದ್‌ ವಿ.ಪಾಟೀಲ್, ‘ಮಕ್ಕಳ ಸಾಹಿತ್ಯದಿಂದಲೇ ಪ್ರಭಾವಿತನಾಗಿ ಬರೆಯಲು ಆರಂಭಿಸಿದೆ. ನಾನು ಬೆಳೆದು ಬಂದ ವಾತಾವರಣ ಕೂಡ ಅದಕ್ಕೆ ಪೂರಕವಾಗಿತ್ತು. ಜೊತೆಗೆ ಮೂರು ವರ್ಷಗಳ ಹಿಂದೆ ಆರಂಭಿಸಿದ ‘ಕನ್ನಡ ಮಕ್ಕಳ ಸಾಹಿತ್ಯ’ ಪತ್ರಿಕೆಯ ಮೂಲಕ ಮಕ್ಕಳೊಂದಿಗೆ ಸಂವಾದ ನಡೆಸಲು ಸಾಧ್ಯವಾಯಿತು. ಜೊತೆಗೆ ಮತ್ತಷ್ಟು ಸ್ಫೂರ್ತಿ ಒದಗಿಸಿತು’ ಎಂದರು.

ಪುಸ್ತಕ ಮುಟ್ಟುತ್ತಿಲ್ಲ: ತಮಿಳು ಲೇಖಕ ನಟರಸನ್‌, ‘ತಮಿಳುನಾಡಿನಲ್ಲಿ ಕೇವಲ ಶೇ 2ರಷ್ಟು ಮಕ್ಕಳು ಗ್ರಂಥಾಲಯಕ್ಕೆ ಹೋಗಿ ಓದುತ್ತಾರೆ. ಮಕ್ಕಳಲ್ಲಿ ಓದುವ ಅಭಿರುಚಿ ಮೂಡಿಸುವ ಯಾವುದೇ ಕೆಲಸ ನಡೆಯುತ್ತಿಲ್ಲ. ಪುಸ್ತಕ ಬರೆಯುವವರ ಸ್ಥಿತಿ ಬಲೂನ್‌ ಮಾರುವವ­ರಂತಾಗಿದೆ. ಸದಾ ಕಂಪ್ಯೂಟರ್‌, ಮೊಬೈಲ್‌, ಕಾರ್ಟೂನ್‌ ಲೋಕದಲ್ಲಿ ಮುಳುಗಿರುವ ಮಕ್ಕಳು ಬಲೂನ್‌ ಹಾಗೂ ಪುಸ್ತಕ ಖರೀದಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮಾತೃಭಾಷೆ ಪುಸ್ತಕ ಕಡಿಮೆ: ಕಾಶ್ಮೀರಿ ಸಾಹಿತಿ ಹಮೀದ್‌ ಸಿರಾಜ್‌ ಮಾತನಾಡಿ, ‘ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮಾತ್ರ ಪುಸ್ತಕ ಓದುವ ಸ್ಥಿತಿ ನಿರ್ಮಾಣವಾಗಿದೆ. ಡಾಕ್ಟರ್‌, ಎಂಜಿನಿ­ಯರ್‌ ಆಗಲು ಬೇಕಾದ ಸರಕುಗಳು ಪಠ್ಯ ಪುಸ್ತಕದ­ಲ್ಲಿವೆ. ಆದರೆ, ಉತ್ತಮ ವ್ಯಕ್ತಿಯಾಗಲು ಅನುವು ಮಾಡಿಕೊ­ಡು­ವಂಥ ವಿಷಯಗಳು ಪಠ್ಯದಲ್ಲಿಲ್ಲ. ಕಾಶ್ಮೀರಿ ಭಾಷೆಯಲ್ಲಿ ಮಕ್ಕಳ ಸಾಹಿತ್ಯದ ಬಗ್ಗೆ ಪುಸ್ತಕಗಳೇ ವಿರಳ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT