ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಪರತೆ ಪ್ರದರ್ಶಿಸಿ

Last Updated 29 ಮೇ 2014, 19:30 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯ (ಕೆಎಸ್‌ಆರ್‌ಪಿ) ಎಡಿಜಿಪಿ ಡಾ.ಪಿ.ರವೀಂದ್ರನಾಥ್‌ ವಿರುದ್ಧ ಸರ್ಕಾರ ಕೈಗೊಂಡ ಕ್ರಮ ಮತ್ತು ಅವರ ವರ್ಗಾವಣೆಯನ್ನು ವಿರೋಧಿಸಿ ಮೀಸಲು ಪಡೆಯ ಪೊಲೀಸರು ರಸ್ತೆ ತಡೆ ನಡೆಸಿದ್ದಾರೆ. ರಸ್ತೆಗಳಲ್ಲಿ ವಾಹನಗಳನ್ನು ತಡೆದು  ಟೈರ್‌ಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ಕಲ್ಲು ತೂರಾಟವೂ ನಡೆದಿದೆ. ಕಾನೂನು ಸುವ್ಯವಸ್ಥೆ ವಿಭಾ­ಗದ ಪೊಲೀಸರು ಪ್ರತಿಭಟನೆಕಾರರನ್ನು ಚದುರಿಸಲು ಬಂದಾಗ, ಮೀಸಲು ಪಡೆ ಪೊಲೀಸರು ಅವರ ಜತೆ ವಾಗ್ವಾದ ನಡೆಸಿದ್ದಲ್ಲದೆ, ಕೈ ಕೈ ಮಿಲಾ­ಯಿಸಿದ್ದೂ ಆಗಿದೆ.

ಪೊಲೀಸರ ಎರಡು ವಿಭಾಗಗಳ ಮಧ್ಯೆ ನಡೆದಿರುವ ಈ ಘರ್ಷಣೆಯಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ರೆಸ್ಟೊ­ರೆಂಟ್‌ ಒಂದರಲ್ಲಿ ಎಡಿಜಿಪಿ ರವೀಂದ್ರನಾಥ್‌ ಯುವತಿ­ಯೊಬ್ಬಳ ಫೋಟೊ ತೆಗೆದರೆಂಬ ಆರೋಪದ ಘಟನೆ ದೊಡ್ಡದಾಗಿ ಬೆಳೆದು, ಪರಸ್ಪರ ಇಲಾಖೆ­ಗಳ ನಡುವೆಯೇ ಅಪನಂಬಿಕೆ ಮತ್ತು ತಿಕ್ಕಾಟಕ್ಕೆ ಕಾರಣ­ವಾಗಿದೆ. ಇದು ರಾಜ್ಯದ ಪೊಲೀಸ್‌ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದರ ಸ್ಪಷ್ಟ ಸೂಚನೆ.

ಕಾನೂನು- ಸುವ್ಯವಸ್ಥೆಯನ್ನು ಕಾಪಾಡಬೇಕಾದ ಪೊಲೀಸರೇ ಹೀಗೆ ಸಾರ್ವಜನಿಕವಾಗಿ ಕಿತ್ತಾಡಿದರೆ, ಸಾರ್ವಜನಿಕರು ಯಾರ ಮೊರೆ ಹೋಗ­ಬೇಕು? ಈ ಪ್ರಕರಣವನ್ನು ದಕ್ಷವಾಗಿ ನಿಭಾಯಿಸುವಲ್ಲಿ ಸರ್ಕಾರ ಸೋತಿ­ರುವುದು ಸ್ಪಷ್ಟ. ಪ್ರಕರಣಕ್ಕೆ ಸಂಬಂಧಿಸಿ ಇಲಾಖೆಯ ಉನ್ನತ ಅಧಿಕಾರಿಗಳು ಇಲಾಖೆಯ ಹುಳುಕುಗಳನ್ನು ಬಹಿರಂಗವಾಗಿ ಚರ್ಚಿಸು­ವುದು ಇಲಾಖೆ­ಗಾಗಲೀ, ಅದನ್ನು ನಿಯಂತ್ರಿಸಬೇಕಾದ ಸರ್ಕಾರಕ್ಕಾಗಲೀ ಮರ್ಯಾದೆ ತಂದುಕೊಡುವ ಕೆಲಸವಲ್ಲ. ಎಡಿಜಿಪಿ ಹುದ್ದೆಯಲ್ಲಿರುವ ಅಧಿಕಾರಿ ತನ್ನನ್ನು ಬಂಧಿಸಿ ಎಂದು ನಗರ ಪೊಲೀಸ್‌ ಆಯುಕ್ತರಿಗೆ ಸವಾಲು ಹಾಕುವುದು, ಇಬ್ಬರೂ ಕಚೇರಿಯಲ್ಲೇ ಪರಸ್ಪರ ಕಚ್ಚಾಡುವುದು, ಅದನ್ನು ರಾಜ್ಯ ಸರ್ಕಾರ ಅಸಹಾಯಕವಾಗಿ ನೋಡುವುದು ಎಲ್ಲವೂ ಏನನ್ನು ಸೂಚಿಸುತ್ತದೆ? ಇಡೀ ಪ್ರಕರಣ ಹೀಗೆ ಬೀದಿರಂಪವಾಗದಂತೆ ತಡೆಯುವಲ್ಲಿ ಸರ್ಕಾರ ವಿಫಲ­ವಾಗಿರುವುದು ಮೇಲ್ನೋಟಕ್ಕೇ ಕಂಡುಬರುತ್ತದೆ.

ಸಮಾಜದಲ್ಲಿ ಶಾಂತಿ ಕದಡದಂತೆ ನೋಡಿಕೊಳ್ಳುವ ಪ್ರಾಥಮಿಕ ಕರ್ತವ್ಯ ಪೊಲೀಸರದ್ದು. ಆದರೆ ಪೊಲೀಸ್‌ ಇಲಾಖೆಯೊಳಗೇ ಅಶಾಂತಿ ಉಂಟು­ಮಾಡುವ ಸಾಕಷ್ಟು ಸಮಸ್ಯೆಗಳಿವೆ. ಪೊಲೀಸ್ ವ್ಯವಸ್ಥೆಯೊಳಗಿನ ಸಿಬ್ಬಂದಿ ಕೊರತೆ, ರಜೆಯಿಲ್ಲದೆ ದುಡಿಯಬೇಕಾದ ಸ್ಥಿತಿ, ಪೊಲೀಸರ ಮನಸೋ ಇಚ್ಛೆ ವರ್ಗಾ­ವಣೆ, ಮೇಲಧಿಕಾರಿಗಳ ಕಿರುಕುಳ, ಸಮಾಜದ್ರೋಹಿ ಶಕ್ತಿಗಳ ವಿರುದ್ಧ ಕಾದಾಡುವ ಸಂದರ್ಭದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಕೊರತೆ,  ಮಿತಿ ಮೀರಿದ ಭ್ರಷ್ಟಾಚಾರ, ರಾಜಕೀಯ ಹಸ್ತಕ್ಷೇಪ- ಹೀಗೆ ಹತ್ತು ಹಲವು ಕಿರಿಕಿರಿಗಳು ಪೊಲೀಸ್‌ ವ್ಯವಸ್ಥೆಯನ್ನು ಕಾಡುತ್ತಿರುವುದು ಕಟು ವಾಸ್ತವ.

ವರ್ಗಾವಣೆ ಹಾಗೂ ಬಡ್ತಿ ವಿಚಾರಗಳಲ್ಲಿ ಸ್ವಜನಪಕ್ಷಪಾತ ಹಾಗೂ ಜಾತಿ ರಾಜಕಾರಣ ಮೇಲುಗೈ ಸಾಧಿಸುವುದೂ ಸರ್ವವಿದಿತ. ರಾಜಕೀಯ ಕಾರಣ­ಗಳಿಗಾಗಿ ಪೊಲೀಸ್ ಅಧಿಕಾರಿಗಳನ್ನು ಕಾಲ್ಚೆಂಡು ಒದ್ದಂತೆ  ಬೇಕಾಬಿಟ್ಟಿ ವರ್ಗಾವಣೆ ಮಾಡುವ ರೀತಿಯನ್ನು ಹಿಂದಿನ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಟೀಕಿಸಿದ್ದುದನ್ನೂ ಇಲ್ಲಿ ಸ್ಮರಿಸಬಹುದು. ವೃತ್ತಿಪರತೆ, ಪಾರ­ದ­ರ್ಶಕತೆಗೆ ಪ್ರಾಧಾನ್ಯ ನೀಡಿ ಪೊಲೀಸ್ ವ್ಯವಸ್ಥೆಗೆ ಕಾಯಕಲ್ಪ ನೀಡ­ಬೇಕಾದುದು ಇಂದಿನ ತುರ್ತು ಅಗತ್ಯ ಎಂಬುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪೊಲೀಸ್‌ ಇಲಾಖೆಯನ್ನು ದಕ್ಷ ಹಾಗೂ ಶಿಸ್ತುಬದ್ಧವಾಗಿ­ರುವಂತೆ ರೂಪಿಸಲು ಕಠಿಣ ಕ್ರಮಗಳನ್ನೂ ಸರ್ಕಾರ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT