ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗೆ ಬೇಕು ಕನ್ನಡ–ಇಂಗ್ಲಿಷ್ ನಿಘಂಟು

Last Updated 3 ಮೇ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ವಿ.ಕೃಷ್ಣ ಅವರ ಕನ್ನಡ– ಇಂಗ್ಲಿಷ್ ನಿಘಂಟು ಶಾಲಾ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಅದನ್ನು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ನಿಘಂಟು ತಜ್ಞ ಪ್ರೊ. ಜಿ.ವೆಂಕಟಸುಬ್ಬಯ್ಯ ಹೇಳಿದರು.

ಕರ್ನಾಟಕ ಸಾಹಿತ್ಯ ಪರಿಷತ್ತು  ಪ್ರಕಟಿಸಿರುವ ವಿ.ಕೃಷ್ಣ ಅವರ ‘ಕನ್ನಡ–ಇಂಗ್ಲಿಷ್ ನಿಘಂಟು’ವಿನ ಮೂರು ಸಂಪುಟಗಳನ್ನು ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ಈ ನಿಘಂಟಿನಲ್ಲಿ ವಿ.ಕೃಷ್ಣ ಅವರು 1.6 ಲಕ್ಷ ಪದಗಳಿಗೆ ವಿವರಣೆ ನೀಡುವ ಕೆಲಸ ಮಾಡಿದ್ದಾರೆ. ಮೂರು ಸಂಪುಟ ಮತ್ತು 4,750 ಪುಟಗಳ ಈ ನಿಘಂಟು  ಪ್ರತಿ ಹಂತದಲ್ಲೂ ವಿದ್ಯಾರ್ಥಿಗಳ ನೆರವಿಗೆ ಬರುತ್ತದೆ. ಶಾಲೆಗಳ ಗ್ರಂಥಾಲಯದಲ್ಲಿ ಇಂತಹ ನಿಘಂಟುಗಳು ಇರಲೇಬೇಕು.  ಹೀಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಈ ನಿಘಂಟುಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕು’ ಎಂದು ಅವರು ಒತ್ತಾಯಿಸಿದರು.

‘ಮತ ಪ್ರಚಾರಕ್ಕಾಗಿ ರಾಜ್ಯಕ್ಕೆ ಬಂದರೂ, ಕಿಟೆಲ್‌ ಅವರು ಕನ್ನಡ ಕಲಿತು, ಕನ್ನಡದ ಮೊದಲ ಶಬ್ದಕೋಶ
ವನ್ನು ರಚಿಸಿದರು. ಆದರೆ ಅದರಲ್ಲಿ ಕೆಲವೇ ಪದಗಳು ಇದ್ದವು. ನಾನು ರೂಪಿಸಿದ್ದ ನಿಘಂಟಿನಲ್ಲೂ 700 ಪದಗ
ಳಿಗೆ ಅರ್ಥ ನೀಡಿದ್ದೆ. ಕೃಷ್ಣ ಅವರ ನಿಘಂಟಿನಲ್ಲಿ 1.6 ಲಕ್ಷ ಪದಗಳಿವೆ. ಇದರ ಮುದ್ರಣ ಸಾವಿರ ಪ್ರತಿಗಳಿಗಷ್ಟೇ ಸೀಮಿತವಾಗದೆ, 10 ಸಾವಿರ ಪ್ರತಿಗಳು ಮುದ್ರಣವಾಗಲಿ’ ಎಂದು ಅವರು ಆಶಿಸಿದರು.

ನಿಘಂಟನ್ನು ಕುರಿತು ಮಾತನಾಡಿದ  ಸಾಹಿತಿ ಪ್ರೊ.ಅ.ರಾ.ಮಿತ್ರ, ‘ಶಾಲೆಗಳು ನಿಘಂಟುಗಳನ್ನು ಖರೀದಿಸುವುದನ್ನು ಕಡ್ಡಾಯಗೊಳಿಸಬೇಕು. ವಿದ್ಯಾರ್ಥಿಗಳು ಪ್ರತಿನಿತ್ಯ ಎರಡು ಪದಗಳ ಅರ್ಥ ತಿಳಿಯುವಂತಾಗಬೇಕು’ ಎಂದರು.
‘ಕನ್ನಡಕ್ಕೆ ಒಂದು ನಿಖರ ನಿಘಂಟನ್ನು ನೀಡಬೇಕೆಂಬ ಸಂಕಲ್ಪ ಕೃಷ್ಣ ಅವರಲ್ಲಿ ಇದ್ದುದ್ದರಿಂದಲೇ ಕನ್ನಡ– ಇಂಗ್ಲಿಷ್ ನಿಘಂಟು ರೂಪುಗೊಂಡಿದೆ. ನಿಘಂಟು ರಚನೆ, ಸಂಪಾದನೆ ಮತ್ತು ಪ್ರಕಟಣೆಗೆ ಸರ್ಕಾರದಿಂದ ಯಾವುದೇ ನೆರವು ದೊರೆತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕುರ್ಚಿಯ ಮೇಲೆ ಕುಳಿತ ತಕ್ಷಣ ಸರ್ಕಾರಿ ಅಧಿಕಾರಿಗಳಿಗೆ ದರ್ಪ ಬರುತ್ತದೆ. ಇದರಿಂದ ಅಭಿವೃದ್ಧಿ ಕಾರ್ಯ
ಗಳಿಗೇ ಕಂಟಕ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.‌ಸಾಹಿತಿ ಗೊ.ರು. ಚನ್ನಬಸಪ್ಪ, ‘ಸರ್ಕಾರ ಜಾಹೀರಾತುಗಳಿಗೆ ವೆಚ್ಚ ಮಾಡುವ ಹಣವನ್ನು ಈ ಕಾರ್ಯಕ್ಕೆ ನೀಡಬಹುದಿತ್ತು. ನಿಘಂಟು ಮುದ್ರಣಕ್ಕೆ ನೆರವಾಗಲು ಸರ್ಕಾರದ ಬಳಿ ಹಣ ಇಲ್ಲ ಎಂಬುದು ನಾಚಿಕೆಗೇಡು’ ಎಂದರು.

ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಮಾತನಾಡಿ, ‘ಕೃಷ್ಣ ಅವರು ಹೊರತಂದಿರುವ ನಿಘಂಟು ಕನ್ನಡ ಸಾಹಿತ್ಯ ಲೋಕಕ್ಕೆ ಅಗತ್ಯವಾಗಿ ಬೇಕಿತ್ತು. 1894ರಲ್ಲಿ ಕಿಟಲ್ ಅವರು ಹೊರತಂದಿದ್ದ ನಿಘಂಟನ್ನು ₨15 ಕೊಟ್ಟು ಖರೀದಿಸಿದ್ದೆ. ಅಂದಿನ ₨15 ಇಂದಿನ ₨ 4– 5 ಸಾವಿರಗಳಿಗೆ ಸಮ’ ಎಂದರು.

ಹೇಳಿದ್ದು 45 ಲಕ್ಷ, ಕೊಟ್ಟದ್ದು 5 ಲಕ್ಷ
ಕೃಷ್ಣ ಅವರ ‘ಕನ್ನಡ–ಇಂಗ್ಲಿಷ್ ನಿಘಂಟು’ ಮುದ್ರಣ ಕಾರ್ಯಕ್ಕೆ ಹೆಚ್ಚಿನ ಮೊತ್ತ ನೀಡಲು ಒಪ್ಪಿದ್ದ ಸರ್ಕಾರ, ಕಡಿಮೆ ಹಣ ನೀಡಿತು ಎಂದು ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ವೀರಣ್ಣ  ಆರೋಪಿಸಿದರು.

‘ನಿಘಂಟು ಮುದ್ರಣಕ್ಕೆ ಸರ್ಕಾರ ಮೊದಲು ₨ 45 ಲಕ್ಷ ನೀಡಲು ಒಪ್ಪಿತ್ತು.  ಆದರೆ ಕೊನೆ ಗಳಿಗೆಯಲ್ಲಿ ₨ 5 ಲಕ್ಷ ಮಾತ್ರ ಮಂಜೂರು ಮಾಡಿತು. ಬೇರೆ–ಬೇರೆ ಮೂಲಗಳಿಂದ ಕಷ್ಟಪಟ್ಟು ಉಳಿದ ಹಣವನ್ನು ಹೊಂದಿಸಿ, ನಿಘಂಟು ಮುದ್ರಣ ಕಾರ್ಯ ನಡೆಸಬೇಕಾಯಿತು’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT