ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 95 ಅಂಕಕ್ಕೂ ವಿಜ್ಞಾನ ಕೋರ್ಸ್ ಪ್ರವೇಶ ದುಸ್ತರ

ಪಿಯುಸಿ ಪ್ರವೇಶ: ಕಾಲೇಜುಗಳ ಕಟ್‌ ಆಫ್‌ ಹೆಚ್ಚಳ
Last Updated 15 ಮೇ 2015, 19:53 IST
ಅಕ್ಷರ ಗಾತ್ರ

ಬೆಂಗಳೂರು: ಎಸ್ಸೆಸ್ಸೆಲ್ಸಿಯಲ್ಲಿ ಶೇ 95 ಅಂಕ ಗಳಿಸಿದರೂ ವಿದ್ಯಾರ್ಥಿಗಳಿಗೆ ಇಷ್ಟದ ಕಾಲೇಜಿನಲ್ಲಿ ಪಿಯುಸಿ ಪ್ರವೇಶ ಸಿಗುವ ನಂಬಿಕೆ ಇಲ್ಲ. ಕೆಲವು ಪ್ರತಿಷ್ಠಿತ ಕಾಲೇಜುಗಳು ವಿಜ್ಞಾನ ವಿಷಯ ಪ್ರವೇಶಕ್ಕೆ  ಕನಿಷ್ಠ ಶೇ 95 ಅಂಕದ ಮಿತಿಯನ್ನು ನಿಗದಿಪಡಿಸಿವೆ.

ರಾಜಧಾನಿಯಲ್ಲಿ ಪಿಯುಸಿ ಪ್ರವೇಶ ಪ್ರಕ್ರಿಯೆ ವೇಗ ಪಡೆದಿದ್ದು, ಪ್ರಮುಖ ಕಾಲೇಜುಗಳಲ್ಲಿ ಈಗಾಗಲೇ ಸಾವಿರಾರು ಅರ್ಜಿಗಳು ಬಿಕರಿಯಾಗಿವೆ.  ಈ ನಡುವೆ, ನಗರದ ಕೆಲವು ಪ್ರಮುಖ ಪದವಿಪೂರ್ವ ಕಾಲೇಜುಗಳು ಪ್ರವೇಶದ ಕಟ್‌ ಆಫ್‌ ಪ್ರಕಟಿಸಿವೆ. ಕಳೆದ ವರ್ಷದಂತೆ ಈ ವರ್ಷವೂ ವಿಜ್ಞಾನದ ಪಿಸಿಎಂಬಿ, ಪಿಸಿಎಂಸಿ, ಪಿಸಿಎಂಇ ವಿಷಯಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಈ ವಿ
ಷಯಗಳಲ್ಲಿ ಕಟ್ ಆಫ್‌ ಪ್ರಮಾಣ ಕಳೆದ ವರ್ಷಕ್ಕಿಂತ ಶೇ 1 ರಷ್ಟು ಜಾಸ್ತಿ ಆಗಿದೆ.

ಎಸ್ಸೆಸ್ಸೆಲ್ಸಿಯಲ್ಲಿ ಈ ವರ್ಷ ಶೇ 90 ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ ಭಾರಿ ಹೆಚ್ಚಳ ಆಗಿದೆ. ಇದರಿಂದ ಪ್ರಮುಖ ಕಾಲೇಜುಗಳಲ್ಲಿ ಸೀಟು ಪಡೆಯಲು ಪೈಪೋಟಿ ಜಾಸ್ತಿ ಆಗಿದೆ.

‘ಪ್ರತಿನಿತ್ಯ ಹತ್ತಾರು ಮಂದಿ ಸಚಿವರು ಹಾಗೂ ಶಾಸಕರ ಶಿಫಾರಸು ಪತ್ರಗಳನ್ನು ತರುತ್ತಿದ್ದಾರೆ. ಇದೊಂದು ರೀತಿಯ ಪೀಕಲಾಟ’ ಎಂದು ಆಡಳಿತ ಮಂಡಳಿಗಳ ಪ್ರಮುಖರು ಅಳಲು ತೋಡಿಕೊಳ್ಳುತ್ತಾರೆ.
ಶೇಷಾದ್ರಿಪುರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸಾವಿರ ಸೀಟುಗಳು ಇವೆ. ಮೂರು ದಿನಗಳಲ್ಲಿ 6 ಸಾವಿರ ಅರ್ಜಿಗಳು ಮಾರಾಟ ಆಗಿವೆ. ಇನ್ನೂ ಒಂದು ವಾರ ಕಾಲ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದುವರಿಯಲಿದೆ. ಮೇ 24ರ ವೇಳೆಗೆ ಮೊದಲ ಪಟ್ಟಿ ಪ್ರಕಟಿಸಲು ಆಡಳಿತ ಮಂಡಳಿ ಉದ್ದೇಶಿಸಿದೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸೀಟು ಪಡೆಯಲು ಪೈಪೋಟಿ ಜಾಸ್ತಿ ಆಗಿದೆ. ಕಟ್‌ ಆಫ್‌ ಪ್ರಮಾಣವೂ ಹೆಚ್ಚಲಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಟ್‌ ಆಫ್‌ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿನ ಸಡಿಲಿಕೆ ಮಾಡಲಾಗುವುದು’ ಎಂದು ಪ್ರಾಂಶುಪಾಲ ಡಾ.ಜಿ.ಕೆ. ಮಂಜುನಾಥ್‌ ತಿಳಿಸುತ್ತಾರೆ.

ಮಲ್ಲೇಶ್ವರದ ಎಂಇಎಸ್‌ ಕಾಲೇಜಿನಲ್ಲಿ ಪಿಸಿಎಂಇಗೆ ಕಳೆದ ವರ್ಷ ಕಟ್‌ ಆಫ್‌ ಪ್ರಮಾಣ ಶೇ 97.25 ಇತ್ತು. ಈ ವರ್ಷ ಶೇ 97.5ಕ್ಕೆ ಏರಿದೆ. ಎಲ್ಲ ವಿಷಯದಲ್ಲೂ ಇದೇ ಪ್ರಮಾಣದ ಏರಿಕೆ ಆಗಿದೆ ಎಂದು ಹೇಳುತ್ತಾರೆ ಕಾಲೇಜಿನ ಪ್ರಾಂಶುಪಾಲರು.  ಕಾಲೇಜಿನಲ್ಲಿ ಇದೇ 18ರ ವರೆಗೆ ಅರ್ಜಿ ಸ್ವೀಕರಿಸಲಾಗುವುದು. ಮೊದಲ ಪಟ್ಟಿಯನ್ನು ಮೇ 26ರಂದು ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡುತ್ತಾರೆ.

‘ಎರಡನೇ ದಿನದಲ್ಲಿ 3,500 ಅರ್ಜಿಗಳು ಮಾರಾಟ ಆಗಿವೆ. ಸೀಟಿಗಾಗಿ ಒತ್ತಡ ಜಾಸ್ತಿ ಆಗಿದೆ. ದಿನಕ್ಕೆ ಹತ್ತಾರು ಶಿಫಾರಸು ಪತ್ರಗಳು ಬರುತ್ತಿವೆ. ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ದೊಡ್ಡ ಸವಾಲು’ ಎಂದು ಪಿಇಎಸ್‌ ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಶೇಖರ್‌ ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT