ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ರಚನೆಗೆ ಅಂತಿಮ ಕಸರತ್ತು

Last Updated 25 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಂಪುಟ ಸಹೋ­ದ್ಯೋಗಿ­ಗಳ ಹೆಸರನ್ನು ಅಂತಿಮ­ಗೊಳಿಸುವ ಕಸರತ್ತು ನಡೆದಿದೆ.

ಹೊಸ ಸರ್ಕಾರದ ಸಚಿವರ ಪಟ್ಟಿ ಯಾವುದೇ ಗಳಿಗೆಯಲ್ಲಿ ರಾಷ್ಟ್ರಪತಿ ಭವನಕ್ಕೆ ತಲುಪಲಿದೆ. ಎನ್‌ಡಿಎ ಸರ್ಕಾರ­ದಲ್ಲಿ ಯಾರು ಸಚಿವರಾಗು­ತ್ತಾರೆಂಬ ಸಂಗತಿ ಅತ್ಯಂತ ಕುತೂಹಲ ಕೆರಳಿಸಿದೆ. ಸಚಿವರಾಗಲು ತುದಿಗಾಲಲ್ಲಿ ನಿಂತಿರುವ ಆಕಾಂಕ್ಷಿಗಳು ಮೋದಿ ಅವರ ದೂರವಾಣಿ ಕರೆಗಾಗಿ ಕಾಯುತ್ತಿದ್ದಾರೆ.

ಸಂಪುಟ ರಚನೆ ಪ್ರಕ್ರಿಯೆಯನ್ನು ರಹಸ್ಯವಾಗಿ ಇಡಲಾಗಿದ್ದು, ಮೋದಿ ಅವರು ಮೂರು ದಿನಗಳಿಂದ ಬೀಡುಬಿಟ್ಟಿರುವ ಚಾಣಕ್ಯ ಪುರಿಯ ‘ಗುಜರಾತ್‌ ಭವನ’ದೊಳಗೆ ಏನು ನಡೆಯುತ್ತಿದೆ ಎಂದು ಯಾರಿಗೂ ಗೊತ್ತಿಲ್ಲ.

ಮೋದಿ, ಒಬ್ಬೊಬ್ಬರನ್ನೇ ಕರೆದು ಪ್ರತ್ಯೇಕವಾಗಿ ಸಮಾಲೋಚನೆ ನಡೆಸು­ತ್ತಿದ್ದಾರೆ. ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌, ಹಿರಿಯ ನಾಯಕ ಅರುಣ್‌ ಜೇಟ್ಲಿ ಜತೆ ಅವರು ಭಾನುವಾರವೂ ಮಾತುಕತೆ ನಡೆಸಿದರು. ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ಮೋದಿ ಅವರನ್ನು
ಭೇಟಿ ಮಾಡಿದ್ದರು. ಲೋಕಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದರೂ, ಸಂಪುಟದಲ್ಲಿ ಮಿತ್ರ ಪಕ್ಷಗಳಿಗೆ ಪ್ರಾತಿನಿಧ್ಯ ದೊರೆಯಲಿದೆ.

ಮಿತ್ರಪಕ್ಷಗಳ ಸದಸ್ಯ ಬಲ ಗಮನ­ದಲ್ಲಿಟ್ಟುಕೊಂಡು ಸಂಪುಟದಲ್ಲಿ ಪ್ರಾತಿ­ನಿಧ್ಯ ಕಲ್ಪಿಸುವ ಉದ್ದೇಶವನ್ನು ಮೋದಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ 18 ಸದಸ್ಯರನ್ನು ಹೊಂದಿರುವ ಶಿವಸೇನಾ, 16 ಸದಸ್ಯರಿರುವ ಟಿಡಿಪಿಗೆ ಸಂಪುಟ­ದಲ್ಲಿ ಹೆಚ್ಚಿನ ಸ್ಥಾನಗಳು ಸಿಗಲಿವೆ. ಸಂಪುಟ ಸೇರುವವರ ಹೆಸರನ್ನು ಮಿತ್ರಪಕ್ಷಗಳ ಮುಖಂಡರಿಂದ ಈಗಾಗಲೇ ಪಡೆಯಲಾಗಿದೆ.

  ಬಿಜೆಪಿ ಹಿರಿಯ ನಾಯಕರಾದ ರಾಜನಾಥ್‌ ಸಿಂಗ್, ಸುಷ್ಮಾ ಸ್ವರಾಜ್‌, ಅರುಣ್‌ ಜೇಟ್ಲಿ, ನಿತಿನ್‌ ಗಡ್ಕರಿ, ಮುರಳಿ ಮನೋಹರ ಜೋಶಿ, ವೆಂಕಯ್ಯ ನಾಯ್ಡು, ರವಿಶಂಕರ್‌ ಪ್ರಸಾದ್‌, ಎಲ್‌ಜೆಪಿ ನಾಯಕ ರಾಮ್ ವಿಲಾಸ್‌ ಪಾಸ್ವಾನ್‌, ಶಿವಸೇನಾದ ಅನಂತಗೀತೆ ಮತ್ತು ಟಿಡಿಪಿ ಅಶೋಕ್‌ ಗಜಪತಿರಾಜು ಸಂಪುಟ ಸೇರುವರೆಂದು ನಿರೀಕ್ಷಿಸಲಾಗಿದೆ.

ಡಿ.ವಿ.ಎಸ್‌ಗೂ ಸ್ಥಾನ?:  ಕರ್ನಾಟಕ­ದಿಂದ  ಡಿ.ವಿ.ಸದಾನಂದ­ಗೌಡ,  ಅನಂತ ಕುಮಾರ್ ಅವರೂ ಮೋದಿ ಕರೆಯ ನಿರೀಕ್ಷೆಯಲ್ಲಿದ್ದಾರೆ.  ಪಕ್ಷದ ಹಿರಿಯ ನಾಯಕರು ಮತ್ತು ಆರೆಸ್ಸೆಸ್‌ ಮುಖಂಡರು ಸದಾನಂದಗೌಡರು ಸಂಪುಟ ಸೇರುವ ಕುರಿತು ಸುಳಿವು ನೀಡಿದ್ದಾರೆಂದು ಉನ್ನತ ಮೂಲಗಳು ಖಚಿತಪಡಿಸಿವೆ. ಬಿ.ಎಸ್‌.ಯಡಿ­ಯೂರಪ್ಪ ಅವರಿಗೆ ಸದ್ಯಕ್ಕೆ ಸಚಿವ ಸ್ಥಾನ ಇಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

‘ಮೊದಲು ಭ್ರಷ್ಟಾಚಾರ ಆರೋಪ­ದಿಂದ ಮುಕ್ತರಾಗಿ ಹೊರಬನ್ನಿ. ಆಮೇಲೆ ನೋಡೋಣ’ ಎನ್ನುವ ಸಂದೇಶವನ್ನು ಯಡಿಯೂರಪ್ಪ ಅವರಿಗೆ ರವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಪಕ್ಷದಲ್ಲಿ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಸಂಪುಟ ಸೇರುವವರ ಪಟ್ಟಿಯಲ್ಲಿ ಹಿರಿಯ ಪತ್ರಕರ್ತ ಅರುಣ್‌ ಶೌರಿ ಹೆಸರೂ ಇತ್ತು. ಆರೆಸ್ಸೆಸ್‌ ನಾಯಕರು ಶೌರಿ ಸೇರ್ಪಡೆಗೆ ವಿರೋಧ
ಮಾಡಿ­ದ್ದಾರೆಂದು ಮೂಲಗಳು ಖಚಿತಪಡಿಸಿವೆ.

ಅಡ್ವಾಣಿಗೆ ಯಾವ ಹೊಣೆ?:  ಆಡಳಿತ ಪಕ್ಷದಲ್ಲಿ ಎಲ್.ಕೆ. ಅಡ್ವಾಣಿ ನಿರ್ವಹಿಸಲಿರುವ ಪಾತ್ರ ಕುರಿತು ಇನ್ನೂ ತೀರ್ಮಾನವಾಗಿಲ್ಲ. ಲೋಕಸಭೆ ಸ್ಪೀಕರ್‌ ಸ್ಥಾನ ಕೊಡುವಂತೆ ಅವರು ಮನವಿ ಮಾಡಿದ್ದರು. ಅವರ ಮನವಿಗೆ ಮನ್ನಣೆ ಸಿಕ್ಕಿದಂತೆ ಕಾಣುತ್ತಿಲ್ಲ. ಈ ಹುದ್ದೆಗೆ ಲೋಕಸಭೆಯ ಮಾಜಿ ಡೆಪ್ಯೂಟಿ  ಸ್ಪೀಕರ್‌ ಕರಿಯಾ ಮುಂಡಾ ಹಾಗೂ ಸುಮಿತ್ರಾ ಮಹಾಜನ್‌ ಅವರ ಹೆಸರು ಚಾಲ್ತಿಯಲ್ಲಿದೆ.

ಚಿಕ್ಕ ಸಂಪುಟ: ನರೇಂದ್ರ ಮೋದಿ ಸಂಪುಟ ಚಿಕ್ಕದಾಗಿರುತ್ತದೆ. ಒಂದೇ ಕಂತಿನಲ್ಲಿ ಎಲ್ಲ ಸಚಿವ ಸ್ಥಾನಗಳನ್ನು ತುಂಬುವುದಿಲ್ಲ. ಎರಡನೇ ಕಂತಿನಲ್ಲಿ ಸಂಪುಟ ವಿಸ್ತರಿಸುವ ಆಲೋಚನೆ ಅವರಿಗಿದೆ ಎಂದೂ ಮೂಲಗಳು ಹೇಳಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT