ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಸ ಶೈಲಿಯ ‘ಚಿರಕುಮಾರ ಸಭಾ’

ರಂಗಭೂಮಿ
Last Updated 3 ಜೂನ್ 2014, 19:30 IST
ಅಕ್ಷರ ಗಾತ್ರ

ನಗರದ ‘ರಂಗಶಂಕರ’ದಲ್ಲಿ ಇತ್ತೀಚೆಗೆ ಪ್ರದರ್ಶಿತವಾದ ಕುತೂಹಲಭರಿತ ನಾಟಕ ‘ಚಿರಕುಮಾರ ಸಭಾ’. ಅಭಿನಯಿಸಿದ್ದು ‘ಸಮಷ್ಟಿ’ ರಂಗತಂಡ. ಇದರ ಮೂಲ ಬಂಗಾಲಿ ರಚನೆ: ರವೀಂದ್ರನಾಥ ಟ್ಯಾಗೋರ್. ಕನ್ನಡಕ್ಕೆ ಅನುವಾದಿಸಿ ರೂಪಾಂತರ ಮಾಡಿದವರು ಬಿ. ಪುಟ್ಟಸ್ವಾಮಯ್ಯ.

ಹಲವು ದಶಕಗಳ ಹಿಂದಿನ ಯಶಸ್ವೀ ನಾಟಕವಿದು. ಇಂದಿಗೂ ಆಕರ್ಷಣೆ, ಕುತೂಹಲ ಕಾಪಾಡಿಕೊಂಡು ಬಂದ ರಂಗ ಪ್ರದರ್ಶನ ಇದು. ಈಗಿನ ಪೀಳಿಗೆಯವರಿಗೆ ಈ ಕಥಾವಸ್ತು ಹಳತೆನಿಸಿದರೂ, ಆಗಿನ ಕಾಲದ ಸಮಾಜಿಕ ಪರಿಸ್ಥಿತಿಯಲ್ಲಿ ಸಮಸ್ಯೆ ಎನಿಸಿದ್ದ ವರಾನ್ವೇಷಣೆ, ವರದಕ್ಷಿಣೆಗಳ ಸಮಸ್ಯೆಯನ್ನು ಚಿತ್ರಿಸುವ ಸರಸ ಶೈಲಿಯ ವಿನೋದ ನಾಟಕವಿದು.

ಕಥೆಯ ಪ್ರಸ್ತುತತೆಯನ್ನು ಬದಿಗಿಟ್ಟು ನೋಡಿದರೆ ನಾಟಕೀಯ ಅಂಶಗಳುಳ್ಳ ಶುದ್ಧಾಂಗ ನಟನಾ ಕೌಶಲದ ಪ್ರಸ್ತುತಿ ಇದು ಎನ್ನಲಡ್ಡಿಯಿಲ್ಲ. ನವಿರಾದ ಹಾಸ್ಯಲೇಪನ ಕಚಗುಳಿ ಇಡುತ್ತ,  ಎರಡು ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದು ಕೂರಿಸಿದ ‘ಚಿರಕುಮಾರ’ನ ಲೀಲೆಗಳು ಬೇಸರ ತರಿಸುವುದಿಲ್ಲ.

ಅಂದಿನ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಅವರ ಮದುವೆಗೆ ಎಷ್ಟು ಅಡ್ಡಿಯುಂಟಾಗುತ್ತಿತ್ತು ಎಂಬ ನಂಬಿಕೆಯ ಆಧಾರದ ಮೇಲೆ ಸಾಗುತ್ತದೆ ಈ ನಾಟಕ. ಬಂಗಾಲಿ ಕುಟುಂಬದ ಈ ಕಥೆಯಲ್ಲಿ ವೃದ್ಧೆ ಜಗತ್ತಾರಿಣಿಯ ಹಿರಿ ಮಗಳು ಪರು ಬಾಲ, ಬ್ರಹ್ಮಚಾರಿ ಸಭೆಯ ಸದಸ್ಯನಾಗಿದ್ದ ಅಕ್ಷಯ ಕುಮಾರನ ಪತ್ನಿ, ಎರಡನೇ ಮಗಳು ಶೈಲ, ಬಾಲ ವಿಧವೆ.

ಮೂರನೇ ಹಾಗೂ ನಾಲ್ಕನೇ ಮಕ್ಕಳಾದ ನೀರಬಾಲ ಮತ್ತು ನೃಪಬಾಲ ವಿದ್ಯೆ ಕಲಿತ ಬಾಲಕಿಯರು. ಈ ಕಾರಣದಿಂದಲೇ ಅವರ ಮದುವೆ ನಿಶ್ಚಯವಾಗಿಲ್ಲವೆಂಬ ಕೊರಗು ತಾಯಿಯದು. ಅವರಿಗೆ ಗಂಡು ಹುಡುಕಿ ತರಲು ಕಾಶಿಗೆ ತೆರಳುತ್ತಾಳೆ. ಈ ಮಧ್ಯೆ ‘ಚಿರಕುಮಾರ ಸಭೆ’ಯ ಕಟ್ಟಾ ಬ್ರಹ್ಮಚಾರಿಗಳಾದ ವಿಪಿನ್ ಬಾಬು ಮತ್ತು ಶ್ರೀಶ ಬಾಬು, ಹಾಗೂ ಚಂಚಲ ಮನಸ್ಸಿನ ಇನ್ನೊಬ್ಬ ಸದಸ್ಯ ಪೂರ್ಣಬಾಬು, ಅಧ್ಯಕ್ಷ ಚಂದ್ರಬಾಬುವಿನ ತಂಗಿಯ ಮಗಳು ನಿರ್ಮಲಳ ಮೇಲೆ ಕಣ್ಣು ಹಾಕುತ್ತಾರೆ.

ಬ್ರಹ್ಮಚಾರಿಗಳ ವಿಚಾರಗಳು ಒಂದೆಡೆಯಾದರೆ, ಬರೀ ಹೆಣ್ಣು ಪಾಳ್ಯವಾದ ಅಕ್ಷಯಕುಮಾರನ ಅತ್ತೆಮನೆಯಲ್ಲಿ ಪುಟ್ಟ ನಾದಿನಿಯರ ತುಂಟಾಟ, -ಚೇಷ್ಟೆ, ವಿನೋದಾವಳಿಗಳು ಇನ್ನೊಂದೆಡೆ. ತಂಗಿಯರಿಗೆ ಒಳ್ಳೆಯ ವರಗಳನ್ನು ಗೊತ್ತುಮಾಡಲು ವಿಧವೆ ಶೈಲಾ ಪುರುಷ ವೇಷದಲ್ಲಿ ‘ಚಿರಕುಮಾರರ ಸಭೆ’ ಸೇರಿದಾಗ ಉಂಟಾಗುವ ಗೊಂದಲ, ತಮಾಷೆಗಳು, ಸಭೆಯ ಆ ಇಬ್ಬರು ಕಟ್ಟಾ ಬ್ರಹ್ಮಚಾರಿಗಳನ್ನು ಎಡೆಬಿಡದೆ ಕಾಡುವ ಮದುವೆ ದಲ್ಲಾಳಿಯ ಪ್ರಸಂಗಗಳು ಹಾಸ್ಯಪೂರ್ಣವಾಗಿವೆ.

ಅನಂತರ ಅಕಸ್ಮಾತ್ ಆ ಬ್ರಹ್ಮಚಾರಿಗಳ ಕಣ್ಣಿಗೆ ಶೈಲಾಳ ತಂಗಿಯರಾದ ಆ ಹುಡುಗಾಟದ ಇಬ್ಬರು ಬಾಲಕಿಯರು ಗೋಚರಿಸಿ, ಅವರ ಮನಸ್ಸುಗಳು ಅಲ್ಲೋಲ ಕಲ್ಲೋಲವಾಗಿ ಅವರು ಮೋಹಿತರಾಗಿ ಪಡುವ ಪಾಡು ಒಂದೆರಡಲ್ಲ, ಇತ್ತ ಸಭೆಯಲ್ಲಿದ್ದ ನಿರ್ಮಲಾ, ಪುರುಷ ವೇಷಧಾರಿ ಶೈಲಾಳಲ್ಲಿ ಅನುರಕ್ತಳಾಗುವುದು, ಅದನ್ನು ಕಂಡು ಅವಳಲ್ಲಿ ಮೋಹಿತನಾಗಿದ್ದ ಪೂರ್ಣಬಾಬು ವಿಲಪಿಸುವುದು, ಈ ಮಧ್ಯೆ ಹೊಸ ವೃದ್ಧ ಸದಸ್ಯ ರಸಿಕದಾದಾ ಸೃಷ್ಟಿಸುವ ಅವಾಂತರಗಳು ನಗೆಯುಕ್ಕಿಸುತ್ತವೆ.

ಇವೆಲ್ಲ ‘ಕಾಮಿಡಿ ಆಫ್ ಎರರ್ಸ್’. ಕಡೆಯಲ್ಲಿ ವೃದ್ಧೆ ಜಗತ್ತಾರಿಣಿ ಹುಡುಕಿ ತರುವ (ಈಗಾಗಲೇ ಬಾಲಕಿಯರು ಬ್ರಹ್ಮಚಾರಿಗಳನ್ನು ಇಷ್ಟಪಡುತ್ತಿರುವರು) ಬೇಡದ ಇಬ್ಬರು ವರಗಳನ್ನು ದಾರಿ ತಪ್ಪಿಸಿ, ಬರಲಿದ್ದ  ಅಪಾಯ ನಿವಾರಿಸಿಕೊಳ್ಳುವಲ್ಲಿ ಎಲ್ಲವೂ ಸುಖಾಂತ್ಯ. ಇವೆಲ್ಲಕ್ಕೂ ಮಾಸ್ಟರ್ ಪ್ಲಾನ್ ರೂಪಿಸುವ ಹಿನ್ನಲೆಯಲ್ಲಿದ್ದ  ಅಕ್ಷಯಬಾಬು, ರಸಿಕದಾದಾ ಮತ್ತು ಶೈಲಳ ಕೈವಾಡ, ತಂತ್ರಗಾರಿಕೆ ಕುತೂಹಲ ಹುಟ್ಟಿಸುವ ನಾಟಕೀಯ ಆಕರ್ಷಣೆ.

ಕಥೆ ಅಂಥ ಗಹನ ಎನಿಸದಿದ್ದರೂ ಅದರ ಪ್ರಸ್ತುತಿ ಇಲ್ಲಿ ಗಮನಾರ್ಹ. ನಾಟಕದ ಓಟವೂ ಅಷ್ಟೇ ಪ್ರಿಯವಾಗುತ್ತದೆ. ರಂಗಸಜ್ಜಿಕೆಗಳು ಸನ್ನಿವೇಶಕ್ಕೆ ಅನುಗುಣವಾಗಿ ಕ್ಷಿಪ್ರವಾಗಿ ಬದಲಾಗುವ ಪರಿ ಜಾಣ್ಮೆಯಿಂದ ಕೂಡಿತ್ತು. ನಟರ ಅಭಿನಯ, ಓಡಾಟಗಳೊಂದಿಗೆ ರಂಗದ ಮೇಲಿನ ವಸ್ತುಗಳೆಲ್ಲ ಕಣ್ಮರೆಯಾಗುತ್ತ, ಜಾಗ ಬದಲಿಸುತ್ತ, ಹೊಸ ಸನ್ನಿವೇಶ, ಜಾಗಗಳನ್ನು ರೂಪಾಂತರಗೊಳಿಸುತ್ತ ರಂಗ ಸಜ್ಜುಗೊಳಿಸುವ ಬಗೆ ತುಂಬ ಅಚ್ಚುಕಟ್ಟಾಗಿ ಶಿಸ್ತಿನಿಂದ ಕೂಡಿತ್ತು. ರಂಗತಾಲೀಮು ಎದ್ದು ಕಾಣುತ್ತಿತ್ತು.

ಇಂಥ ಒಬ್ಬ ನಟ ಚೆನ್ನಾಗಿ ಅಭಿನಯಿಸಿಲ್ಲವೆಂದು ಹೇಳುವಂತೆಯೇ ಇರಲಿಲ್ಲ. ಪ್ರತಿಯೊಬ್ಬರೂ ಸೊಗಸಾಗಿ ಅಭಿನಯಿಸಿದರು. ಬಹಳ ಪುಟ್ಟ ಪಾತ್ರವೆನಿಸಿದರೂ ಮದುವೆಯ ದಲ್ಲಾಳಿಯ (ಸಿ. ರಾಘವೇಂದ್ರ ಪ್ರಸಾದ್) ಮಾತಿನ ಧಾಟಿ, ಆಂಗಿಕ ಅಭಿನಯ, ಮ್ಯಾನರಿಸಂ ವಿಶಿಷ್ಟವಾಗಿ ಗಮನ ಸೆಳೆಯಿತು. ಮನೆ ಅಳಿಯ ಅಕ್ಷಯಕುಮಾರನಾಗಿ (ಕೆ.ಪರಮೇಶ್ವರ್) ಅವರದು ಪಳಗಿದ ನಟನೆ.

ಅವರ ಸ್ಪಷ್ಟೋಕ್ತಿ, ಭಾವ-ಭಂಗಿ, ಬಾಡಿ ಲ್ಯಾಂಗ್ವೇಜ್ ಅತ್ಯುತ್ತಮವಾಗಿತ್ತು. ಅಷ್ಟೇ ಉತ್ತಮ ಅಭಿನಯ ನೀಡಿದ ರಸಿಕ ದಾದಾ (ಗಂಗಾಧರ್ ಕರೀಕೆರೆ) ಅವರ ನಡೆ-–ನುಡಿ ನವಿರು ಹಾಸ್ಯವನ್ನು ಸೃಷ್ಟಿಸಿತ್ತು. ನೀರಬಾಲ (ಸೌಮ್ಯಶ್ರೀ ಜೈನ್), ನೃಪಬಾಲ (ಪಲ್ಲವಿ ಪಿ. ಜಾಧವ್) ಅವಳಿ ಜವಳಿಯಂತಿದ್ದ ಬಾಲೆಯರ ಚೂಟಿತನ, ಕುಣಿತ-, ತುಂಟಾಟ, ಲವಲವಿಕೆಗಳು ಮನಸೂರೆಗೊಂಡವು, ಅವರಿಬ್ಬರ ಮಿಂಚಿನ ಸಂಚಾರ ರಂಗದ ಮೇಲೆ ಪಾದರಸ ಹರಡಿದಂತೆ ಭಾಸವಾಗುತ್ತಿತ್ತು.

ವಿಪಿನ್‌ ಬಾಬು (ಹರಿಹರಕುಮಾರ್) ಶ್ರೀಶ ಬಾಬು (ಪದ್ಮಪ್ರಸಾದ್ ಜೈನ್) ಅವರ ಅಭಿನಯವೇ ಆಗಲಿ, ಇಬ್ಬರು ವರಗಳ (ಎಂ.ಶ್ರೀಧರ್, ಪ್ರದೀಪ್) ಅಭಿನಯ, ಅಸ್ಖಲಿತ ಭಾಷೆಯಾಗಲಿ ಎಲ್ಲಿಯೂ ಕೊರತೆಯೆನಿಸದೆ ಸಹಜಾಭಿನಯಕ್ಕೆ ಒತ್ತು ನೀಡಿತ್ತು. ಶೈಲ (ಧನ್ಯಾ ಬಡಿಗೇರ್) ನಿರ್ಮಲಾ (ಸವಿತಾ), ಜಗತ್ತಾರಿಣಿ (ಜಿ.ಎ.ಸುಮಾ), ಚಂದ್ರಬಾಬು (ರೇಣುಕಾ ಪ್ರಸಾದ್) ಮತ್ತು ಪುರಬಾಲಾ (ತನುಜಾ ರುದ್ರಯ್ಯ) ಹಾಗೂ ಪೂರ್ಣಬಾಬು (ಹರೀಶ್ ರುದ್ರಯ್ಯ) ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದರು.

ರಂಗದ ಮೇಲೆ ಒಂದು ಅದ್ಭುತ ಲೋಕ ಸೃಷ್ಟಿಸಿದ ನಿರ್ದೇಶಕ ನೀನಾಸಂ ಪದವೀಧರ ಮಂಜುನಾಥ ಎಲ್. ಬಡಿಗೇರರ ಶ್ರಮ ವ್ಯಕ್ತವಾಗಿತ್ತು. ನಾಟಕದ ಸ್ಪಷ್ಟ ಪರಿಕಲ್ಪನೆಯನ್ನು ಸಾಕ್ಷಾತ್ಕರಿಸಿಕೊಂಡ ನಿರ್ದೇಶಕ ಯಶಸ್ವಿಯಾಗಿ, ಪ್ರೇಕ್ಷಕನ ಕರತಾಡನಕ್ಕೆ ಪಾತ್ರರಾದರು. ಯಾವುದನ್ನೂ ಇಲ್ಲಿ ಹೆಸರಿಸದೆ ಬಿಡುವಂತೆಯೇ ಇಲ್ಲ.

ಇಂಪಾದ ಸಂಗೀತ, ಹಾಡು (ಗಜಾನನ ಹೆಗಡೆ) ನಾಟಕದ ಜೀವಾಳವಾಗಿತ್ತು. ಅದರೊಂದಿಗಿನ ಕುಣಿತದ ಹೆಜ್ಜೆಗಳು, ನರ್ತನ ಕಣ್ಣಿಗೆ ಹಬ್ಬ, ಪುಲಕಸ್ಪರ್ಶಿ. ಪಾತ್ರ, ಸನ್ನಿವೇಶದ ತೀವ್ರತೆಯನ್ನು ಮನಗಾಣಿಸಿದ ನೆರಳು-ಬೆಳಕಿನ ಸಂಯೋಜನೆಯ (ರವೀಂದ್ರ ಪೂಜಾರಿ) ಗುಣಮಟ್ಟ ಶ್ಲಾಘನೀಯ. ಹೀಗೆ ‘ಚಿರಕುಮಾರ ಸಭಾ’ ಪ್ರತಿಯೊಂದು ಅಂಶಗಳಲ್ಲೂ ಪೂರ್ಣಾಂಕ ಪಡೆದು ಒಂದು ಅನನ್ಯ ಅನುಭೂತಿ ನೀಡಿತೆಂದರೆ ಅತಿಶಯೋಕ್ತಿಯಲ್ಲ. ಪ್ರತಿಭಾ ಸಂಗಮವೇ ಇಲ್ಲಿ ಮೇಳವಿಸಿತ್ತು.
-–

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT