ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷ್ಯ ಚಿತ್ರದಲ್ಲಿ ವಿವರಣೆಗಿಂತ ಒಳನೋಟ ಮುಖ್ಯ

ಹೆಗ್ಗೋಡು ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಮತ
Last Updated 8 ಅಕ್ಟೋಬರ್ 2014, 9:48 IST
ಅಕ್ಷರ ಗಾತ್ರ

ಸಾಗರ: ಸಾಕ್ಷ್ಯಚಿತ್ರಗಳಲ್ಲಿ ವಿವರಣೆಗಳಿಗಿಂತ ಒಳನೋಟವಿರಬೇಕು. ಮಾಹಿತಿಯೆಲ್ಲ ಅಂತರ್ಜಾಲದಲ್ಲೇ ದೊರಕುತ್ತದೆ. ಒಳ ಸೂಕ್ಷ್ಮಗಳನ್ನು ಚಿತ್ರಿಸಲು ಸಾಕ್ಷ್ಯಚಿತ್ರ ಪೂರಕ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ತಿಳಿಸಿದರು.

ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಮಂಗಳವಾರ ಪ್ರದರ್ಶನಗೊಂಡ ‘ಅನಂತಮೂರ್ತಿ ಆತ್ಮ ವೃತ್ತಾಂತವಲ್ಲ. ಒಂದು ಕಲ್ಪನೆ’ ಸಾಕ್ಷ್ಯ ಚಿತ್ರದ ಕುರಿತು ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

‘ನನ್ನ ಮಾತು ನನಗೆ ಕೇಳಿಸಿದರೆ, ನಾನು ಅದೃಷ್ಟವಂತ’ ಎಂಬ ಅನಂತಮೂರ್ತಿ ಅವರ ಮಾತು ಅವರ ಕುರಿತು ಸಾಕ್ಷ್ಯ ಚಿತ್ರ ನಿರ್ದೇಶಿಸಲು ಸ್ಫೂರ್ತಿ ನೀಡಿತು. ಅವರ ಕಥೆ, ಪದ್ಯಗಳನ್ನು ವಿಮರ್ಶಿಸದೇ, ಅವುಗಳನ್ನು ಯಥಾವತ್ತಾಗಿ ತೆಗೆದುಕೊಳ್ಳಲಾಗಿದೆ. ಅವರ ಪದ್ಯಗಳಿಗೆ ಚಿತ್ರಣ ಕಟ್ಟಿ ಕೊಡಲಾಗಿದೆ ಎಂದರು.

ಹಳತನ್ನು ಬಿಡಲಾರದ, ಹೊಸತನ್ನು ಸ್ವೀಕರಿಸ ಲಾರದ ತೊಳಲಾಟ ಅನಂತ ಮೂರ್ತಿ ಅವರ ಕೃತಿಗಳಲ್ಲಿವೆ. ನಮ್ಮನ್ನು ನಾವು ಪ್ರಶ್ನಿಸುವ ಮಾದರಿ ಗಳನ್ನು ಜೀವದ್ರವ್ಯವಾಗಿ ಇಟ್ಟು ಕೊಂಡು ದೃಶ್ಯಗಳನ್ನು ಸಂಯೋಜಿ ಸಲಾಗಿದೆ ಎಂದು ವಿವರಿಸಿದರು.

ಯಾವಾಗ ಒಂದು ಕೃತಿ ಪೂರ್ಣವಾಗಿ ಅರ್ಥವಾಯಿತು ಎಂಬ ಭಾವನೆ ಬರುತ್ತದೆಯೋ ಆಗ ಅದರ ಸ್ವಾರಸ್ಯ ಹೊರಟು ಹೋಗುತ್ತದೆ. ಒಂದು ಕೃತಿ ಕಾಲ ಕಾಲಕ್ಕೆ ಬೆಳೆಯುತ್ತ ಹೋಗಬೇಕು ಎಂಬ ಅನಂತಮೂರ್ತಿ ಅವರ ಮಾತುಗಳನ್ನು ನೆನಪಿನಲ್ಲಿಟ್ಟು ಕೊಂಡೆ ಅದಕ್ಕೆ ತಕ್ಕಂತೆ ಸಾಕ್ಷ್ಯ ಚಿತ್ರ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಾಕ್ಷ್ಯಚಿತ್ರವೊಂದರಲ್ಲಿ ಅದರ ನಿರ್ದೇಶಕರೆ ಒಂದು ಪಾತ್ರವಾಗಿ ಕಾಣಿಸಿಕೊಂಡ ವಿಶಿಷ್ಟತೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅನಂತಮೂರ್ತಿ ಅವರ ಘಟಶ್ರಾದ್ಧ ಕಥೆಯ ಹಂದರ, ವಸ್ತು ವಿಷಯ ಒಟ್ಟಾಗಿ ನನ್ನ ಮೇಲೆ ಗಾಢ ಪ್ರಭಾವ ಬೀರಿತ್ತು. ಜೊತೆಗೆ ಇದರ ಕಥೆ ಅದರ ಕಾಲವನ್ನು ಮೀರಿ ಎಲ್ಲಾ ಕಾಲಕ್ಕೂ ಸಲ್ಲುತ್ತದೆ ಎಂದು ಅನಿಸಿದ್ದರಿಂದ ಮತ್ತು ಚಿತ್ರಕಥೆಗೆ ವಿವರಗಳು ಸಾಕಷ್ಟು ಸಿಕ್ಕಿದ್ದರಿಂದ ಅದನ್ನು ಸಿನಿಮಾ ಮಾಡಿದ್ದೇವು. ಹೀಗೆ ಪ್ರಭಾವ ಬೀರಿದ್ದನ್ನು ಚಿತ್ರದಲ್ಲಿ ಪಾತ್ರವಾಗಿ ಹೇಳಿಕೊಂಡಿದ್ದೇನೆ ಎಂದರು.

ಈ ಸಾಕ್ಷ್ಯಚಿತ್ರ ನೋಡಿದವರು ಈವರೆಗೆ ಅನಂತಮೂರ್ತಿ ಓರ್ವ ಲೇಖಕ ಎಂದೆಷ್ಟೆ ಭಾವಿಸಿದ್ದೇವು. ಆದರೆ ಈಗ ಅವರೊಬ್ಬ ತತ್ವಜ್ಞಾನಿ ಕೂಡ ಹೌದು ಎಂಬ ಅಭಿಪ್ರಾಯ ಮೂಡುತ್ತಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ ಎಂದು ತಿಳಿಸಿದ ಗಿರೀಶ್‌ ಕಾಸರವಳ್ಳಿ ಚಿತ್ರ ನೋಡಿದ ಯುವ ತಲೆಮಾರಿಗೆ ಅನಂತಮೂರ್ತಿ ಅವರ ಕೃತಿಗಳನ್ನು ಮತ್ತೆ ಓದಬೇಕು ಅನಿಸಿದರೆ ಚಿತ್ರ ಮಾಡಿದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT