ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳು ಬಹಳ ಸ್ವಾರ್ಥಿಗಳು: ಪ್ರೊ.ಮಾಲತಿ

Last Updated 3 ಮೇ 2015, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಹಿತಿಗಳು ನಿಜವಾಗಿ ಬಹಳ ಸ್ವಾರ್ಥಿಗಳು. ಅವರು ಯಾವ ಸಂಘಟನೆಗಳನ್ನು ಕಟ್ಟುವುದಿಲ್ಲ. ನಾನೇ ಹೆಚ್ಚು ಬರೆಯಬೇಕು. ನನಗೇ ಕೀರ್ತಿ, ಕಿರೀಟಗಳು ಬರಬೇಕು ಎಂಬ ಮನೋಭಾವ ಅನೇಕರಲ್ಲಿ ಇದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ  ಹೇಳಿದರು.

ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಾಹಿತಿ ನಾ.ಮೊಗಸಾಲೆ ಅವರ ‘ಮುಖಾಂತರ’ ಕಾದಂಬರಿಯೊಂದಿಗೆ ಮುಖಾಮುಖಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡ ಪ್ರೀತಿ ಮತ್ತು ಮುಂದಿನ ಪೀಳಿಗೆ ಬೆಳೆಸಬೇಕೆಂಬ ಆಸೆ ಅನೇಕ ಸಾಹಿತಿಗಳಿಗೆ ಇರುವುದೇ ಇಲ್ಲ. ಆದರೆ, ಮೊಗಸಾಲೆ ಅವರು ಕಾಂತಾವರದ ಕನ್ನಡ ಸಂಘದ ಮೂಲಕ ಯುವ ಬರಹಗಾರರನ್ನು ಬೆಳೆಸಿದ್ದಾರೆ. ಅವರೊಬ್ಬ ಕನ್ನಡದ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುವ ಕಳಕಳಿಯ ಕನ್ನಡಿಗ’ ಎಂದು ಶ್ಲಾಘಿಸಿದರು.

ವಿಮರ್ಶಕ ಡಾ.ಸಿ.ಎನ್‌.ರಾಮಚಂದ್ರನ್‌ ಮಾತನಾಡಿ, ‘ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ದೊಡ್ಡ ಸಂಸ್ಥೆಯಂತಿರುವ ಮೊಗಸಾಲೆ ಅವರು ಕುಗ್ರಾಮದಂತಿದ್ದ ಕಾಂತಾವರಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಿ ಅದನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಲು ಪ್ರೇರಕ ಶಕ್ತಿಯಾಗಿ ದುಡಿದರು. ಅವರು ಕಾದಂಬರಿಕಾರ, ಕವಿ, ಕತೆಗಾರರಾಗಿ ಮಾತ್ರವಲ್ಲದೇ ಅಂಕಣಕಾರರಾಗಿ ಕೂಡ ಜನಪ್ರಿಯರಾಗಿದ್ದಾರೆ’ ಎಂದು ಹೇಳಿದರು.

‘ಅತ್ಯಂತ ನಿಗೂಢವಾದ ಈ ಬದುಕನ್ನು ಯಾರೂ ನಿಯಂತ್ರಿಸಲು ಮತ್ತು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಕಾಲದ ಚಲನೆಯೊಡನೆ ವ್ಯಕ್ತಿಯ ಬದುಕಿನ, ಸಮಾಜದ ವರ್ತನೆ, ರೀತಿ ನೀತಿ, ನಂಬಿಕೆ ಇವೆಲ್ಲವೂ ಕೂಡಾ ಬದಲಾಗುತ್ತವೆ. ಈ ಬದಲಾವಣೆ ಸತತವಾಗಿ ನಡೆಯುತ್ತಲೇ ಇರುತ್ತದೆ ಎಂಬ ಈ ಎರಡು ಮುಖ್ಯ ಆಶಯಗಳು ಅವರ ಎಲ್ಲ ಕಾದಂಬರಿಗಳಲ್ಲಿ ಕಾಣುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಮಾತನಾಡಿ, ‘ಶೈಕ್ಷಣಿಕವಾಗಿ ಯಾವುದೇ ಉನ್ನತ ಪದವಿಗಳನ್ನು ಪಡೆಯದ ಮೊಗಸಾಲೆ ಅವರು ಒಬ್ಬ ವೈದ್ಯರಾಗಿದ್ದುಕೊಂಡೇ ವಿಶ್ವವಿದ್ಯಾಲಯಗಳು, ಕನ್ನಡ ಸಾಹಿತ್ಯ ಪರಿಷತ್ತು, ಪ್ರಾಧಿಕಾರಗಳಿಗೂ ಮೀರಿ ಸುಮಾರು 50 ವರ್ಷಗಳಿಂದ ಸತತವಾಗಿ  ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಯಾವ ಪಂಥ, ಚಳವಳಿ, ಗುಂಪಿಗೂ ಸೇರದ ಅವರು ಕಾಂತಾವರದಲ್ಲಿ ಕನ್ನಡ ಸಂಘ, ವರ್ಧಮಾನ ಪೀಠ ಕಟ್ಟುವ ಜತೆಗೆ ಕನ್ನಡದ ಪರಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಮುಖಾಂತರ’ ಕಾದಂಬರಿಯಲ್ಲಿ ಮೊಗಸಾಲೆ ಅವರ ಬಹುಮುಖ ದರ್ಶನ ಮಾತ್ರವಲ್ಲದೇ 150– 200 ವರ್ಷಗಳ ತುಳು ನಾಡಿನ ವ್ಯಕ್ತಿ, ಕುಟುಂಬ, ಸಮಾಜದ ಸ್ಥಿತ್ಯಂತರಗಳು ಮತ್ತು ಆರು ತಲೆಮಾರುಗಳ ತಲ್ಲಣಗಳನ್ನು ಕಾಣಬಹುದು. ಕಲ್ಪಿತ ಪಾತ್ರಗಳು ಮಾತ್ರವಲ್ಲದೇ ಆ ಕಾಲದ ತುಳುನಾಡಿನ ನಾನಾ ಬಗೆ ಕ್ಷೇತ್ರದ ಧುರೀಣರು ಜೀವಂತ ಪಾತ್ರವಾಗಿ ಕಾಣಿಸಿಕೊಳ್ಳುತ್ತಾರೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ರೂಂ ಕಟ್ಟಿಸಿ ಕೊಡುತ್ತೇನೆ
‘ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹೊರಗಡೆಯಿಂದ ಬಂದ ಸಾಹಿತಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆಗಾಗಿ ನಾಲ್ಕಾರು ಕೋಣೆ ಕಟ್ಟಬೇಕೆಂದು ಅಂದಿನಿಂದ ಹೇಳುತ್ತ ಬಂದರೂ ಯಾರೂ ಕೇಳಲೇ ಇಲ್ಲ. ಪರಿಷತ್ತಿನ ಹೆಸರಿನಲ್ಲಿ ಕೋಟಿ ಕೋಟಿ ಉಡಾಯಿಸುತ್ತೆವೆ. ನಾಲ್ಕಾರು ವಸತಿ ಕೋಣೆಗಳನ್ನು ಕಟ್ಟಿಸಿದರೇನು ಕಷ್ಟ. ಇಲ್ಲಿ ಕೋಣೆ ನಿರ್ಮಿಸುವುದಾದರೇ ನಾನೂ ಒಂದು ಕೋಣೆ ಕಟ್ಟಿಸಿ ಕೊಡುತ್ತೇನೆ’ ಎಂದು ಹರಿಹರಪ್ರಿಯ  ಅವರು ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT