ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಲೋಕ: ಮರೆಯಾಯಿತೇ ಪ್ರಜಾಸತ್ತೆ?

Last Updated 12 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಸಾಹಿತ್ಯ ಚಟುವಟಿಕೆಗಳು ಸಂಘರ್ಷದ ತಾಣವಾಗುತ್ತಿರುವುದು ಹೊಸ­ದೇ­ನಲ್ಲ. ವೈಚಾರಿಕ ತಿಕ್ಕಾಟಗಳು, ಅಭಿಪ್ರಾಯ ಭೇದಗಳು, ಅಕಾಡೆಮಿಕ್ ಆದ ಆರೋಗ್ಯ­ಪೂರ್ಣ ಚರ್ಚೆಗಳು ಕನ್ನಡ ಸಾಹಿತ್ಯದ ಇತಿಹಾಸ­ದಲ್ಲಿ ಹಾಸು ಹೊಕ್ಕಾಗಿವೆ. ಈ ತಿಕ್ಕಾಟಗಳೇ ಕನ್ನಡ ಸಾಹಿತ್ಯದಲ್ಲಿ ಹೊಸ ಚಳವಳಿಗಳನ್ನು ಹುಟ್ಟು­ಹಾಕಿ ಕನ್ನಡ ಇತಿಹಾಸವನ್ನು ಶ್ರೀಮಂತ­ಗೊಳಿಸಿವೆ. ಇವು ಆಯಾ ಕಾಲಘಟ್ಟದ ಅನಿ­ವಾರ್ಯ ಅಗತ್ಯಕ್ಕೆ ಹುಟ್ಟಿ, ಅಕ್ಷರಗಳಲ್ಲಿ ಅಭಿವ್ಯಕ್ತಿ­ಯಾಗಿ, ಸಾಹಿತ್ಯ ಲೋಕದಲ್ಲಿ ಹೊಸ ಸಂಚ­ಲನ­ಗಳನ್ನು ಉಂಟುಮಾಡಿದ್ದರೂ ಅಲ್ಲಿ ವೈಯಕ್ತಿಕ ದ್ವೇಷ, ಅಸೂಯೆ, ಗುಂಪುಗಾರಿಕೆ­ಯಂತಹ  ಕ್ಷುಲ್ಲಕ ಸಾಹಿತ್ಯ ರಾಜಕೀಯ ಎಲ್ಲೂ ತಲೆ­ಹಾಕಿರ­ಲಿಲ್ಲ. ಆ ಬೆಳವಣಿಗೆಗಳನ್ನು ಮುಕ್ತ ಮನಸ್ಸು ಹಾಗೂ ವೈಚಾರಿಕ ನೆಲೆಯಲ್ಲಿ ಸ್ವೀಕರಿಸಲಾಗಿತ್ತು.

ರಭಸವಾಗಿ ಹರಿಯುವ ನದಿಯಂತೆ ಭಾಷೆ­ಯಲ್ಲಿ ಹೊಸ ಪ್ರಯೋಗ, ಹೊಸ ವಿಚಾರಗಳ ಪ್ರಸ್ತಾಪ, ಹೊಸ ಚಿಂತನೆ, ಆಲೋಚನೆಗಳು ಕನ್ನಡ ಸಾಹಿತ್ಯ ಲೋಕಕ್ಕೆ ಹರಿದು ಬರುತ್ತಿದ್ದ ಆ ಸಂದರ್ಭ ಸುವರ್ಣಯುಗವಾಗಿತ್ತು. ನಾಡಿನ ಬೇರೆ ಬೇರೆ ಭಾಗಗಳಿಂದ, ಮೂಲೆ ಮೂಲೆ­ಗಳಿಂದ ತಮ್ಮ ಜಾತಿ, -ಮತಗಳ ಜಗತ್ತನ್ನು ತಮ್ಮದೇ ಉಪಭಾಷೆಗಳಲ್ಲಿ ಈ ಎಲ್ಲ ಲೇಖಕರು ಪರಿಚಯಿಸಿದ್ದು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಒಂದು ಅವರ್ಣನೀಯ, ಅನುಪಮ ಆನಂದದ ಕಾಲ­ಘಟ್ಟ ಎಂದರೆ ಉತ್ಪ್ರೇಕ್ಷೆಯಲ್ಲ. ಆ ಕಾಲ­ಘಟ್ಟ­­ದಲ್ಲಿ ಬರೆದ ಬರಹಗಾರರೇ ಧನ್ಯರು. ಏಕೆಂ­ದರೆ ಅವರನ್ನು ಕುತೂಹಲದಿಂದ, ಬೆರಗಿನಿಂದ ನೋಡುವ ದೊಡ್ಡ ಓದುಗ ವರ್ಗ ಅವರಿಗಿದ್ದಂತೆ ವಿದ್ವತ್‌ ಲೋಕವೂ ಅವರನ್ನು ಅದೇ ದೃಷ್ಟಿ­ಯಿಂದ ಗಮನಿಸುತ್ತಿತ್ತು ಹಾಗೂ ಅವರ  ಸಾಹಿತ್ಯ­ವನ್ನು ಓದುತ್ತಿತ್ತು. ಆ ಕಾಲ ಹೇಗೆ ಮರೆಯಾಯಿತು? ಏಕೆ ಮರೆಯಾಯಿತು?

ಇಂದು ಸಾಹಿತ್ಯ ಸಂದರ್ಭದ ಎಲ್ಲ ಪ್ರಮುಖ ಚಟುವಟಿಕೆಗಳೂ ಗೊಂದಲದ ಸುತ್ತಲೇ ನಡೆ­ಯುತ್ತವೆ. ಅಧ್ಯಕ್ಷರ ಆಯ್ಕೆಯಿಂದ ಮೊದ­ಲ್ಗೊಂಡು ಗೋಷ್ಠಿಗಳಲ್ಲಿ ಭಾಗವಹಿಸುವವರ ಪಟ್ಟಿ­ಯವರೆಗೆ, ಪ್ರಶಸ್ತಿ, ಪಾರಿತೋಷಕಗಳನ್ನು ಕೊಡಮಾಡುವವರೆಗೆ ಎಲ್ಲವೂ ಗೊಂದಲವೇ. ಅದು ಅಲ್ಲಿಗೇ ನಿಲ್ಲುವುದಿಲ್ಲ. ಆನಂತರವೂ ಮುಂದುವರಿಯುತ್ತದೆ.

ಹಾಗೆ ನೋಡಿದರೆ ಕನ್ನಡಕ್ಕೆ ಈ ಕಾಲಘಟ್ಟ ಬಹಳ ಮಹತ್ವದ್ದಾಗುತ್ತದೆ. ಅನೇಕ ಹೊಸ ಬರಹ­ಗಾರರನ್ನು ಇದು ಸೃಷ್ಟಿಸುತ್ತಿದೆ. ಯಾವುದೇ ‘ಇಸಂ’ಗಳಿಗೆ ಒಳಗಾಗದೇ ನಿಷ್ಠುರ­ವಾಗಿ ಬರೆಯಬಲ್ಲ ದಾರ್ಷ್ಟ್ಯವನ್ನೂ ಈ ಕಾಲದ ಬರಹಗಾರರು ತೋರಿಸುತ್ತಿದ್ದಾರೆ. ಆದರೆ ಹರಿದು ಹಂಚಿಹೋಗುವ ಜಾಯಮಾನ­ವೊಂದು ಬೆಳೆಯದಿದ್ದರೆ... ಎಂಬ ವಿಷಾದವನ್ನೂ ಅದೇ ಪ್ರಮಾಣದಲ್ಲಿ ಬೆಳೆಸುತ್ತಿದ್ದಾರೆ.

ಈ ಬೆಳವಣಿಗೆ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಪ್ರಜಾಸತ್ತಾತ್ಮಕ ಧೋರಣೆಗೆ ಪ್ರತಿರೋಧವಾಗಿ ಕಾಣಿಸುತ್ತಿರುವುದು ನಿಜಕ್ಕೂ ಅಪಾಯಕಾರಿ. ಬರಹ ಸೃಜನಶೀಲ ಮಾತ್ರವಲ್ಲ ಅದು ಸಾಮಾ­ಜಿಕ ಧೋರಣೆಗಳನ್ನು, ರೀತಿ, ನೀತಿಗಳನ್ನು ನಿರೂ­ಪಿ­ಸುವ ಹಾಗೂ ರೂಪಿಸುವ ಪ್ರಬಲ, ಪ್ರಬುದ್ಧ ಮಾಧ್ಯಮ ಎಂಬುದು ನನ್ನ ನಂಬಿಕೆ. ಈ ಮಾಧ್ಯ­ಮ­ದ ಬಳಕೆಯನ್ನು ಯಾರೇ ಮಾಡಿ­ದರೂ ಅತಿ ಎಚ್ಚರ­­ದಿಂದಲೇ ಮಾಡಬೇಕು. ಈ ಎಚ್ಚರ ಸಾಹಿ­ತ್ಯಕ್ಕೆ ಒದಗುವ ವಸ್ತು-ವಿಷಯ, ಪಾತ್ರಗಳು, ಭಾಷೆ ಮೊದ­ಲಾದ ಎಲ್ಲ ಪರಿಕರಗಳಲ್ಲೂ ಉದ್ದೇ­ಶ­­ಪೂ­ರ್ವ­ಕವಾಗಿ ಬಳಕೆಯಾಗಬೇಕು. ಈ ವಿವೇ­ಚನೆ ಆಯಾ ಬರಹಗಾರರ ಬರಹವನ್ನು, ಅವರ ವ್ಯಕ್ತಿ­ತ್ವ­­ವನ್ನು, ಅವರ ವಿಚಾರಗಳನ್ನು ನಿರ್ಧ­ರಿ­ಸು­ತ್ತದೆ. ಆದರೆ ಅದೇ ಅಂತಿಮವಲ್ಲ ಎಂಬುದೂ ಸತ್ಯ.

ಇಂತಹ ಕಾರಣದಿಂದಲೇ ಮಹಿಳಾ ಸಾಹಿತ್ಯ ಎಂಬ ಪ್ರಕಾರ ಬೇಡ ಎಂಬ ಕೂಗು ಕೂಡ ಇರುವುದು. ಒಬ್ಬ ಮಹಿಳೆ ತನ್ನ ಜಗತ್ತಿನ ಬಗ್ಗೆ ಗಟ್ಟಿಯಾಗಿ ಬರೆಯಬಲ್ಲಂತೆ ಒಬ್ಬ ಪುರುಷ ಬರೆಯಲಾರನೇನೊ. ಅದರಂತೆ ಒಬ್ಬ ಪುರುಷ ತನ್ನ ಜಗತ್ತನ್ನು ಕಟ್ಟಿಕೊಟ್ಟಂತೆ ಮಹಿಳೆ ಅವನ ಜಗತ್ತನ್ನು ಕಟ್ಟಲಾರಳೇನೊ. ಯಾವುದೇ ಸಾಹಿತ್ಯ ಹುಟ್ಟುವುದು ಮೂಲವಾಗಿ ಅವರವರ ಅನುಭವದ ನೆಲೆಗಟ್ಟಿನಲ್ಲಿ, ಅದರ ವಿಸ್ತಾರದಲ್ಲಿ, ಅದರ ಬೆಳವಣಿಗೆಯಲ್ಲಿ ಹಾಗೂ ಅದರ ಸಮರ್ಥ ಅಭಿವ್ಯಕ್ತಿಯಲ್ಲಿ. ಹಾಗಿರುವಾಗ ಗೊಂದಲಗಳನ್ನು ಸೃಷ್ಟಿಸುವ ಕಾರಣವಾದರೂ ಏನು? ಸಾಹಿತ್ಯ ಸ್ವಂತ ಹಿತಾಸಕ್ತಿಗಳ, ಗುಂಪು­ಗಾರಿಕೆಯ ತಾಣವಾಗಿ ಬೆಳೆದಿರುವುದೇ ಇದಕ್ಕೆ ಮುಖ್ಯ ಕಾರಣವಾಗಿ ಕಾಣಬಹುದು.

ಲೇಖಕನ ಕೃತಿಯ ಬಗ್ಗೆ ವಾದ -ವಿವಾದಗಳು ಇರಲೇಬೇಕು. ಅದನ್ನು ಒಬ್ಬ ಉತ್ತಮ ಲೇಖಕ ಕೂಡ ಬಯಸುತ್ತಾನೆ. ಅದು ಅವನ ಹಾಗೂ ಸಾಹಿತ್ಯ ಎರಡರ ಬೆಳವಣಿಗೆಗೂ ನೆರವಾಗುತ್ತದೆ. ಸಾಹಿತ್ಯಕವಾದ ಅಭಿಪ್ರಾಯ ಭೇದಗಳ ಚರ್ಚೆ ಇರುವ ಆರೋಗ್ಯಪೂರ್ಣ ವಾತಾವರಣ ನಿರ್ಮಾಣ­ವಾದರೆ ಅದು ಯಾವುದೇ ಭಾಷೆಯ ಸುಯೋಗ. ಸಾಹಿತ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೊಂದಿ­ರುವುದು ಈ ಕ್ಷೇತ್ರದಲ್ಲೂ ಇರಲೇ­ಬೇಕಾದ ಪ್ರಜಾಸತ್ತಾತ್ಮಕ ನೆಲೆಗಟ್ಟಿನ ಅಗತ್ಯ ಹಾಗೂ ಔಚಿತ್ಯವನ್ನು ಹೇಳುತ್ತದೆ. ಆದರೆ ಇಂದಿನ ಸಾಹಿತ್ಯ ಸಂದರ್ಭದಲ್ಲಿ ನಡೆಯುವ ಚಟು­ವಟಿಕೆಗಳು ಈ ಸಾಹಿತ್ಯ ಪ್ರಜಾಪ್ರಭುತ್ವ­ವನ್ನೇ ಮೊಟಕುಗೊಳಿಸುತ್ತಿವೆ. ವ್ಯಕ್ತಿ ಸ್ವಾತಂತ್ರ್ಯ­ವನ್ನು ಕಸಿದುಕೊಳ್ಳುತ್ತ  ಮೂಲಭೂತವಾದದತ್ತ ಹೊರಳುತ್ತಿವೆಯೇನೋ ಎಂಬ ಆತಂಕಕಾರಿ ಪರಿಸರವನ್ನು ಸೃಷ್ಟಿಸುತ್ತಿವೆ.

ಬರಹಗಾರ ಒಂದು ಕೃತಿಯನ್ನು ಹೊರತಂದ ನಂತರ ಅದು ಓದುಗನದ್ದು ಎಂಬ ಮಾತಿದೆ. ಅದನ್ನು ಪ್ರತಿ ಓದುಗನೂ ಅವನದೇ ಆದ ರೀತಿಯಲ್ಲಿ ವಿಶ್ಲೇಷಿಸಬಹುದು. ತಾನೇ ಕಾಣದ ತನ್ನ ಕೃತಿಯ ಬೇರೆ ಬೇರೆ ಆಯಾಮಗಳನ್ನು ಬರಹ­ಗಾರ ಓದುಗನ ಮೂಲಕ ಪಡೆದು ಸುಖಿಸು­ತ್ತಾನೆ. ಆದರೆ ಓದುಗರು ಕಾಣುವ ಎಲ್ಲ ಆಯಾಮಗಳ ಹೊಣೆಗಾರಿಕೆಯನ್ನೂ ಅವನು ಹೊರಬೇಕಾಗುತ್ತದೆ ಎಂಬ ಅಪೇಕ್ಷೆಯಾಗಲಿ, ಆರೋಪವಾಗಲಿ ಎಷ್ಟು ಸರಿ?
ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಪ್ರಜಾಸತ್ತೆಗೆ ಕುಂದುಂಟಾಗದಿರಲಿ. ವ್ಯಕ್ತಿಗಿಂತ ಸಾಹಿತ್ಯ ದೊಡ್ಡದಾಗಲಿ ಎಂಬುದು ಎಲ್ಲ ಕನ್ನಡಿಗರ ಮನದಾಳದ ಕರೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT