ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್ ವುಮನ್ ಸಿಂಡ್ರೋಮ್ ನಿಮಗಿದೆಯೇ?

Last Updated 4 ಜನವರಿ 2013, 19:59 IST
ಅಕ್ಷರ ಗಾತ್ರ

ನಿತ್ಯ ರುಚಿಕರ ಆಹಾರ ತಯಾರಿಸುವ ಪಾಕ ಪ್ರವೀಣೆ,
ಗಂಡನ ಬೇಕು-ಬೇಡ ಗಮನಿಸುವ ಮುದ್ದಿನ ಮಡದಿ,
ಮಕ್ಕಳನ್ನು ಲಾಲಿಸಿ-ಪಾಲಿಸಿ ಬೆಳೆಸುವ ಪ್ರೀತಿಯ ಅಮ್ಮ,
ಕಂಪೆನಿಯ ಕೆಲಸಕ್ಕಾಗಿ ಅವಿರತ ದುಡಿಯುವ ನಿಷ್ಠಾವಂತ ಉದ್ಯೋಗಿ, ಬಂಧು-ಬಾಂಧವರ, ಸ್ನೇಹಿತರ ಕಾಳಜಿ ವಹಿಸುವ ಸ್ನೇಹಮಯಿ...


ಅಬ್ಬಬ್ಬಾ ಅದೆಷ್ಟು ಪಾತ್ರಗಳು! ಈ ಎಲ್ಲ ಪಾತ್ರಗಳನ್ನು ಎಲ್ಲ ದಿನವೂ ಪರಿಪೂರ್ಣವಾಗಿ ಒಬ್ಬರೇ ನಿಭಾಯಿಸಲು ಸಾಧ್ಯವೇ? ಸಾಧ್ಯವಿಲ್ಲ. ಆದರೆ ಸಾಧ್ಯ ಎಂದು ಭಾವಿಸಿ ತಮ್ಮ ಸ್ವಂತ ಆರೋಗ್ಯವನ್ನು, ಭಾವನೆಗಳನ್ನು ಬಲಿಕೊಟ್ಟು ಹೆಣಗುವವರು `ಸೂಪರ್ ವುಮನ್'! 

ಹೀಗೆ ಹತ್ತು ಹಲವು ಅಥವಾ ಒಂದೇ ಪಾತ್ರದಲ್ಲಿ ಅತಿಯಾಗಿ, ಪರಿಪೂರ್ಣವಾಗಿ ಎಲ್ಲವನ್ನೂ ಸಾಧಿಸುತ್ತೇನೆ ಎಂದು ಹೊರಟ ಪರಿಣಾಮವಾಗಿ ನಾನಾ ರೀತಿಯ ದೈಹಿಕ ಅನಾರೋಗ್ಯ, ಮಾನಸಿಕ ಒತ್ತಡದಂತಹ ಲಕ್ಷಣಗಳು ಕಾಣಿಸಿಕೊಂಡಾಗ ಅದನ್ನು `ಸೂಪರ್ ವುಮನ್ ಸಿಂಡ್ರೋಮ್' (ಅತಿಮಾನುಷ ಸ್ತ್ರೀ ರೋಗ ಲಕ್ಷಣ ಸಮೂಹ) ಎಂದು ಕರೆಯಲಾಗುತ್ತದೆ.

ಈ ರೀತಿಯ ತೊಂದರೆಯಿಂದ ಬಳಲುವ ಮಹಿಳೆಯರು ಸಾಮಾನ್ಯವಾಗಿ ಕರ್ತವ್ಯಕ್ಕೆ ಅತಿ ಮಹತ್ವ ನೀಡುವ, ಯಾವಾಗಲೂ ಸರಿಯಾದುದನ್ನೇ ಮಾಡಬೇಕೆಂಬ ಆಸೆ ಉಳ್ಳವರಾಗಿರುತ್ತಾರೆ. ಆದರೆ ವಿಷಾದದ ಸಂಗತಿಯೆಂದರೆ, ಎಲ್ಲರಿಗೂ ಎಲ್ಲವನ್ನೂ ಸರಿಯಾಗಿ ಮಾಡುವ ಭರದಲ್ಲಿ ತಮ್ಮನ್ನು ತಾವು ಮರೆಯುತ್ತಾರೆ. ಕೈಯಾರೆ ತಮ್ಮ ಇಷ್ಟಾನಿಷ್ಟಗಳನ್ನು ಗಮನಿಸಲು ಸಮಯವಿಲ್ಲ, ಶಕ್ತಿಯೂ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳುತ್ತಾರೆ.
ಮಹಿಳೆಯೊಬ್ಬಳು ತಾನು `ಸೂಪರ್ ವುಮನ್' ಆಗಬೇಕೆಂದು ಬಯಸಲು, ಕಷ್ಟಪಡಲು ಕೆಲವು ಮುಖ್ಯ ಕಾರಣಗಳು ಹೀಗಿವೆ.

-ಒಳ್ಳೆಯವರಾಗಬೇಕೆಂಬ ಬಯಕೆ
-ಇತರರನ್ನು ಮೆಚ್ಚಿಸಲು
-ಎಲ್ಲರ ಗಮನ ಸೆಳೆಯಲು, ಪ್ರಶಂಸೆ ಗಳಿಸಲು
-ಎಲ್ಲವನ್ನೂ ಮಾಡಬಲ್ಲೆ ಎಂಬ ಅತಿಯಾದ ನಂಬಿಕೆ
-ಮಹತ್ತಾದುದನ್ನು ಸಾಧಿಸುತ್ತಿದ್ದೇನೆ ಎಂಬ ತೃಪ್ತಿಗಾಗಿ
-ಯಾವುದೇ ಜವಾಬ್ದಾರಿಗೆ ನಕಾರ ಹೇಳಲು ಅಸಮರ್ಥತೆ
-ಕುಗ್ಗಿದ ಆತ್ಮಾಭಿಮಾನ

ಏಕಾಏಕಿ ಆರಂಭವಾಗುವ ಸಮಸ್ಯೆ ಇದಲ್ಲ. ಸಹಜವಾಗಿಯೇ ಪ್ರತಿ ಮಹಿಳೆಗೂ ಸಾಧಾರಣ ಮಟ್ಟ ಮೀರಿ ಎಲ್ಲವನ್ನೂ ಉತ್ತಮವಾಗಿ ನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾಗಬೇಕು ಎಂಬ ಬಯಕೆ ಇರುತ್ತದೆ. ಆದರೆ ಅದು ಮಿತಿ ಮೀರಿದಾಗ ಖಂಡಿತಾ ಅಪಾಯಕಾರಿ. ಮೊದಲು ಮನೆಯಲ್ಲಿ ಎಲ್ಲ ಕೆಲಸವನ್ನೂ ತಾನೇ ಮಾಡುವುದು, ನಂತರ ಮಕ್ಕಳ ಸಂಪೂರ್ಣ ಜವಾಬ್ದಾರಿ, ಆಫೀಸಿನಲ್ಲಿ ಬಿಡುವಿಲ್ಲದ ದುಡಿತ...

ಹೀಗೆ ಒಂದರ ನಂತರ ಇನ್ನೊಂದು ಕೆಲಸ. ಎಲ್ಲದರಲ್ಲೂ `ಪರಿಪೂರ್ಣತೆಯ' ಹಂಬಲ!  ಯಾವಾಗ ಪ್ರತಿ ಪಾತ್ರಕ್ಕೂ ನ್ಯಾಯ ಒದಗಿಸಲು ಆಗದೆ, ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗುವುದಿಲ್ಲವೋ ಆಗ ನಿರಾಸೆ ಉಂಟಾಗುತ್ತದೆ. ಸ್ವಸಾಮರ್ಥ್ಯದ ಬಗ್ಗೆ ಅಪನಂಬಿಕೆ ಮೂಡುತ್ತದೆ. ಮನಸ್ಸು ಕುಗ್ಗಿ ದೇಹದ ಮೇಲೆ ಪರಿಣಾಮ ಬೀರುತ್ತದೆ. ಸಂಬಂಧಗಳೂ ಹದಗೆಡುತ್ತವೆ.  ತಮಗರಿವಿಲ್ಲದೆಯೇ `ಸೂಪರ್ ವುಮನ್' ಎಂಬ ಸುಳಿಗೆ ಸಿಕ್ಕಿ ಕಂಗಾಲಾಗುತ್ತಾರೆ.
ಎಲ್ಲವನ್ನೂ ಸರಿಯಾಗಿ, ನಿಗದಿತ ಸಮಯದಲ್ಲಿ ಮಾಡಿ ಮುಗಿಸುವ ತೀವ್ರ ಒತ್ತಡ ಮಹಿಳೆಯ ಮೇಲೆ ಇರುವುದರಿಂದ ಕಂಡುಬರುವ ಕೆಲವು ಲಕ್ಷಣಗಳು:

-ದೈಹಿಕ ಲಕ್ಷಣಗಳು
-ಮಾನಸಿಕ ಲಕ್ಷಣಗಳು
-ಮಾಂಸಖಂಡಗಳ ಬಿಗಿತ
-ಸಿಡುಕು-ಕೋಪ
-ಅರೆ ತಲೆನೋವು
-ಏಕಾಗ್ರತೆಯ ಕೊರತೆ
-ಬಾಯಿಹುಣ್ಣು
-ಆಗಾಗ್ಗೆ ಅಳು-ಜಗಳ
-ಏರಿದ ರಕ್ತದೊತ್ತಡ
-ಸದಾ ಉದ್ವೇಗ-ಆತಂಕ
-ನಿದ್ರಾಹೀನತೆ
-ನಕಾರಾತ್ಮಕ ಚಿಂತನೆ
-ಹೊಟ್ಟೆನೋವು
-ಹಾಸ್ಯಪ್ರಜ್ಞೆಯ ಕೊರತೆ

ಈ ಎಲ್ಲ ಸಮಸ್ಯೆಗಳು ಕಂಡುಬಂದರೂ `ಸೂಪರ್ ವುಮನ್' ಆಗುವ ಹಟಕ್ಕೆ ಬಿದ್ದ ಸಾವಿರಾರು ಮಹಿಳೆಯರು ತಮಗಾಗುವ ದೈಹಿಕ- ಮಾನಸಿಕ ಸಮಸ್ಯೆ ಎದುರಿಸಲು ಅಂಗಡಿಗಳಲ್ಲಿ ಸಿಗುವ ಮಾತ್ರೆ (ನೋವು ನಿವಾರಕಗಳು, ನಿದ್ದೆ ಗುಳಿಗೆಗಳು) ಸೇವಿಸುವುದು ಮತ್ತು ಆಹಾರವನ್ನು ಪರಿಹಾರವನ್ನಾಗಿ ಬಳಸುತ್ತಾರೆ ಎಂದು ಅಮೆರಿಕದಲ್ಲಿ ನಡೆದ ಸಂಶೋಧನೆಗಳಿಂದ ತಿಳಿದುಬಂದಿದೆ. ಇದು ಸಮಸ್ಯೆಯನ್ನು ಹೆಚ್ಚಿಸುತ್ತದೆ ಹೊರತು ಪರಿಹಾರ ದೊರಕಿಸಿಕೊಡುವುದಿಲ್ಲ.

ಇಂದಿನ ಮಹಿಳೆಗೆ ಬಹು ಪಾತ್ರಗಳನ್ನು ವಹಿಸುವುದು, ನಿಭಾಯಿಸುವುದು ಅನಿವಾರ್ಯ. ಜನ್ಮಜಾತವಾಗಿಯೇ ವಿವಿಧ ರೀತಿಯ ಜವಾಬ್ದಾರಿ ನಿರ್ವಹಿಸುವ ಸಾಮರ್ಥ್ಯವೂ ಆಕೆಗಿದೆ. ಗಂಡ, ಮಕ್ಕಳು, ಮನೆ, ಕಚೇರಿ ಇವೆಲ್ಲವನ್ನೂ ಬಿಟ್ಟು ಓಡುವುದು ಪಲಾಯನವಾದ ಆದೀತು.  ಹಾಗೆಂದು ಎಲ್ಲವನ್ನೂ ತಾನೊಬ್ಬಳೇ ಪರಿಪೂರ್ಣವಾಗಿ ಮಾಡಬಲ್ಲೆ, ಮಾಡಬೇಕು ಎಂಬ ಸ್ವನಿರೀಕ್ಷೆಯನ್ನು ಇಟ್ಟುಕೊಳ್ಳುವುದೂ ತಪ್ಪು. ಏಕೆಂದರೆ ಮಹಿಳೆಯೂ ಮನುಷ್ಯಳೇ! ಆಕೆಗೆ ತನ್ನದೇ ಆದ ಸಾಮರ್ಥ್ಯಗಳು ಇರುವಂತೆಯೇ ಇತಿ ಮಿತಿಗಳೂ ಇವೆ. ಅದನ್ನು ಬೇರೆಯವರು ಅರ್ಥ ಮಾಡಿಕೊಳ್ಳುವುದರ ಜತೆಗೆ ಸ್ವತಃ ಆಕೆಯೂ ಅರ್ಥ ಮಾಡಿಕೊಳ್ಳಬೇಕು.

ಈ `ಸೂಪರ್ ವುಮನ್ ಸಿಂಡ್ರೋಮ್' ನಿಂದ ಹೊರಬರಬೇಕಾದರೆ ಮಹಿಳೆಯ ಮನೋಭಾವದಲ್ಲಿ ಬದಲಾವಣೆ ಆಗಲೇಬೇಕು.

ಯಾರೂ ಪರಿಪೂರ್ಣರಲ್ಲ
ಮನುಷ್ಯರೆಂದ ಮೇಲೆ ಪರಿಪೂರ್ಣರಲ್ಲ ಎಂಬುದು ಸರಳ ಸತ್ಯ.  ಹಾಗೆಯೇ ಎಲ್ಲ ಕೆಲಸವನ್ನು ಎಲ್ಲ ಸಮಯದಲ್ಲಿ, ಎಲ್ಲ ದಿನಗಳಲ್ಲಿ ಪರಿಪೂರ್ಣವಾಗಿ ಮಾಡಲು ಯಾರಿಗೂ ಸಾಧ್ಯವಿಲ್ಲ. ಕುಂದು ಕೊರತೆ ಸಹಜ ಎಂಬ ವಾಸ್ತವವನ್ನು ಸ್ವೀಕರಿಸಬೇಕು. ಈ ಧೋರಣೆ ಬೆಳೆಸಿಕೊಂಡಾಗ ಮಾತ್ರ ಸದಾ ಹೆಚ್ಚಿನದನ್ನು ನಿರೀಕ್ಷಿಸುವುದು, ತನ್ನೊಂದಿಗೇ ಸ್ಪರ್ಧೆ ನಡೆಸುವುದು ಕಡಿಮೆಯಾಗಿ, ಮಾಡಿದ ಕೆಲಸಕ್ಕೆ ತೃಪ್ತಿ ಸಿಗುತ್ತದೆ. ಉದಾಹರಣೆಗೆ ಪಾಯಸ ಮಾಡಿದಾಗ ಸಿಹಿ ಹೆಚ್ಚಾದರೆ `ನನ್ನಿಂದ ಹೀಗಾಯಿತಲ್ಲಾ' ಎಂದು ಕೊರಗುವ ಅವಶ್ಯಕತೆ ಇಲ್ಲ. ಅಡುಗೆ ಮಾಡುವ ಎಲ್ಲರಿಗೂ ಒಂದಲ್ಲ ಒಂದು ಬಾರಿ ಹೀಗಾಗುವುದು ಸಹಜ.

ರಾಜಿ ಮಾಡಿಕೊಳ್ಳುವುದು
ಯಾವ ಕೆಲಸ ಹೆಚ್ಚು ಮುಖ್ಯ ಮತ್ತು ತನ್ನಿಂದ ಸಾಧ್ಯ ಎಂಬುದನ್ನು ಗಮನಿಸಿ ಅದಕ್ಕೆ ಒತ್ತು ನೀಡಬೇಕು. ನೆಂಟರ ಮನೆಯ ಗೃಹಪ್ರವೇಶಕ್ಕೆ ಹೋಗಬೇಕು, ಆಫೀಸಿನಲ್ಲಿ ಹೆಚ್ಚುವರಿ ಕೆಲಸವಿದೆ. ಎರಡನ್ನೂ ಹೇಗಾದರೂ ಮುಗಿಸುತ್ತೇನೆ ಎನ್ನುವುದರ ಬದಲು ಅಗತ್ಯ ಇರುವ ಆಫೀಸಿನ ಕೆಲಸ ಮುಗಿಸಿ, ಬಿಡುವಾದಾಗ ನೆಂಟರ ಮನೆಗೆ ಹೋಗಬಹುದು.

ಇತರರ ಸಹಾಯ
ಮಕ್ಕಳ ಜವಾಬ್ದಾರಿ, ಅಡುಗೆ, ಕಚೇರಿ ಎಲ್ಲವನ್ನೂ ಒಬ್ಬರೇ ವಹಿಸಿಕೊಂಡು ಹೆಣಗಾಡುವ ಬದಲು,  ಸಂದರ್ಭಕ್ಕೆ ಅನುಗುಣವಾಗಿ ಪತಿ/ ಬಂಧುಗಳು/ ಸಹೋದ್ಯೋಗಿಗಳ ನೆರವು ಪಡೆಯುವುದು. ಯಾವುದೇ ಕೆಲಸ ತನ್ನಿಂದ ಸಾಧ್ಯವಿಲ್ಲ ಅಥವಾ ನಿಭಾಯಿಸಲು ಕಷ್ಟ ಅನ್ನಿಸಿದಾಗ ಆತ್ಮೀಯರೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಬಹುದು. `ಹೇಗೋ ಏನೋ, ಹಲ್ಲು ಕಚ್ಚಿ ಮಾಡಿಯೇ ಸಿದ್ಧ' ಎಂಬ ಧೋರಣೆ ಸರಿಯಲ್ಲ.

ಅಗತ್ಯಗಳ ಪಟ್ಟಿ ಮಾಡುವುದು
ಮಾಡುವುದಾದರೆ ಸಾವಿರದೆಂಟು ಕೆಲಸಗಳು ಕಾಯುತ್ತಿರುತ್ತವೆ. ಅದಕ್ಕೆ ಕೊನೆಯೆಂಬುದೇ ಇಲ್ಲ. ಇಂದಿಗೆ ಯಾವುದು ಅಗತ್ಯವೋ ಅದನ್ನು ಮೊದಲು ಮುಗಿಸಿ ನಂತರ ಸಮಯ, ಶಕ್ತಿ ಇದ್ದಲ್ಲಿ ಮುಂದಿನದಕ್ಕೆ ಹೋಗುವುದು ಒಳ್ಳೆಯದು. 

`ಇಲ್ಲ' ಎನ್ನಿ
ಅದೆಷ್ಟೋ ಬಾರಿ ಮಹಿಳೆಗೆ `ಇಲ್ಲ' ಎಂದು ಹೇಳಲು ಸಾಧ್ಯವಾಗುವುದಿಲ್ಲ. ಇದರಿಂದ ಹಲವಾರು ಸಮಸ್ಯೆಗಳಿಗೆ ದಾರಿಯಾಗುತ್ತದೆ. `ಇಲ್ಲ' ಎಂದು ಹೇಳಲು ಅಹಂ, ಬೇರೆಯವರು ಏನು ತಿಳಿದುಕೊಂಡಾರು ಎಂಬ ಅಂಜಿಕೆ ಅಡ್ಡ ಬರುತ್ತದೆ. ಸಾಮರ್ಥ್ಯ ಮೀರಿ ಎಲ್ಲವನ್ನೂ ಒಪ್ಪಿಕೊಂಡು, ಯಾವುದನ್ನೂ ಸರಿಯಾಗಿ ಮಾಡಲಾರದೇ ಹೈರಾಣಾಗುತ್ತಾಳೆ. ಅದರ ಬದಲು ತನ್ನ ಶಕ್ತಿ- ಸಾಮರ್ಥ್ಯಕ್ಕೆ ಮೀರಿದ್ದನ್ನು ಯಾರಾದರೂ ಕೇಳಿದಾಗಲೇ ನಯವಾಗಿ, ದೃಢವಾಗಿ `ಇಲ್ಲ' ಎಂದು ನಿರಾಕರಿಸುವುದು ಸೂಕ್ತ.

ತನಗಾಗಿ ಸಮಯ
ಎಲ್ಲರನ್ನೂ ಖುಷಿಪಡಿಸುವ ಜವಾಬ್ದಾರಿ ಹೊತ್ತ ಮಹಿಳೆಗೆ ತನ್ನ ಬಗ್ಗೆಯೇ ಅರಿವಿರುವುದಿಲ್ಲ. ತನ್ನ ಆರೋಗ್ಯ ಸರಿಯಿದ್ದರೆ, ತಾನು ಸಂತೋಷಪವಾಗಿದ್ದರೆ ಇಡೀ ಕುಟುಂಬಕ್ಕೆ, ಸಮಾಜಕ್ಕೆ ಹೆಚ್ಚಿನದನ್ನು ನೀಡಲು ಸಾಧ್ಯ ಎಂಬ ಸತ್ಯವನ್ನು ಆಕೆ ನಿರ್ಲಕ್ಷಿಸುತ್ತಾಳೆ. ಹೀಗಾಗದಂತೆ ಒಂದಿಷ್ಟು ಸಮಯವನ್ನು ತನಗಾಗಿಯೇ ಮೀಸಲಿಡಬೇಕು. ಸರಿಯಾದ ಆಹಾರ, ನಿದ್ದೆ, ವ್ಯಾಯಾಮದ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು.

ಇಷ್ಟಪಟ್ಟು ಮಾಡಿ
ಯಾವುದೇ ಕೆಲಸ ಮಾಡುವಾಗ ಖುಷಿಯಿಂದ ಇಷ್ಟಪಟ್ಟು ಮಾಡಿದಾಗ ಹೊರೆ ಎನಿಸುವುದಿಲ್ಲ. ಆದ ಕೆಲಸದ ಬಗ್ಗೆ, ನಿರ್ವಹಿಸಿದ ಜವಾಬ್ದಾರಿಯ ಬಗ್ಗೆ ಸಂತೃಪ್ತಿ ತಾಳುವುದೂ ಮುಖ್ಯ. ಯಾವಾಗಲೂ `ಇನ್ನೂ ಸರಿಯಾಗಿ ಮಾಡಬೇಕಿತ್ತು' ಎಂಬ ಗೊಣಗಾಟ ಅನಗತ್ಯ ಒತ್ತಡವನ್ನು ಸೃಷ್ಟಿಸುತ್ತದೆ.

ಹೀಗೆ ಜೀವನ ನಿಧಾನವಾಗಿ ಕ್ರಮಿಸಬೇಕಾದ ಪಯಣ; ಪುರುಸೊತ್ತಿಲ್ಲದೇ ಓಡಿ ಮುಗಿಸುವ ಓಟದ ಸ್ಪರ್ಧೆಯಲ್ಲ ಎಂಬುದನ್ನು ಅರಿತರೆ ನೆಮ್ಮದಿಯಿಂದ ಬಾಳಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT