ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ ಮೋದಿ ಪ್ರಮಾಣ

ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆ , ಸರ್ಕಾರ ರಚಿಸಲು ರಾಷ್ಟ್ರಪತಿ ಆಹ್ವಾನ
Last Updated 20 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ತಂದುಕೊಟ್ಟಿರುವ ನರೇಂದ್ರ ಮೋದಿ ಅವರನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಮಂಗಳವಾರ ಅಧಿಕೃತವಾಗಿ ನೂತನ ಪ್ರಧಾನಿಯಾಗಿ ನಿಯೋಜಿಸಿದರು.

ರಾಷ್ಟ್ರಪತಿ ಭವನದಲ್ಲಿ ಇದೇ 26ರಂದು ಸಂಜೆ ಆರು ಗಂಟೆಗೆ ನಡೆಯುವ ಸಮಾ­ರಂಭ­ದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಲಿ­ದ್ದಾರೆ.
ಬಿಜೆಪಿ ಮತ್ತು ಎನ್‌ಡಿಎ ನಾಯಕರಾಗಿ ಚುನಾಯಿತರಾದ ಬಳಿಕ ನರೇಂದ್ರ ಮೋದಿ ಅವರು, ರಾಷ್ಟ್ರಪತಿ ಭವನಕ್ಕೆ ತೆರಳಿ ಪ್ರಣವ್‌ ಮುಖರ್ಜಿ ಅವರನ್ನು ಭೇಟಿ ಮಾಡಿದರು. ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿ­ಕೊಂಡು ಅಭಿನಂದಿಸಿದ ರಾಷ್ಟ್ರ­ಪತಿಗಳು, ಅಧಿಕೃತವಾಗಿ ಪ್ರಧಾನಿಯಾಗಿ ನೇಮಕ ಮಾಡಿದ ಪತ್ರವನ್ನು ಮೋದಿ ಅವರಿಗೆ ಹಸ್ತಾಂತರಿಸಿದರು.

‘ನಿಮ್ಮ ಸಂಪುಟ ಸೇರುವ ಸಚಿವರ ಪಟ್ಟಿ ಕೊಡಿ’ ಎಂದು ಮೋದಿ ಅವರನ್ನು ರಾಷ್ಟ್ರಪತಿ ಕೇಳಿದರು. ಪ್ರಣವ್‌ ಮುಖರ್ಜಿ ಅವರನ್ನು ಭೇಟಿ ಮಾಡಿ ಹೊರಬಂದ ಮೋದಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. 

‘ನಾನು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಚರ್ಚೆ ಮಾಡಿದೆ. ನನ್ನನ್ನು ಅಧಿಕೃತವಾಗಿ ಪ್ರಧಾನಿ ಆಗಿ ನೇಮಿಸಿದ ಪತ್ರವನ್ನು ನೀಡಿದ್ದಾರೆ. 26ರಂದು ಸಂಜೆ ಆರು ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ’ ಎಂದರು.

ಮೋದಿ ಜತೆ ಕೆಲ ಹಿರಿಯ ಬಿಜೆಪಿ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಸದ್ಯಕ್ಕೆ ರಾಜ­ನಾಥ್‌ ಸಿಂಗ್‌, ಅರುಣ್‌ ಜೇಟ್ಲಿ, ಸುಷ್ಮಾ ಸ್ವರಾಜ್‌, ನಿತಿನ್‌ ಗಡ್ಕರಿ, ವೆಂಕಯ್ಯ ನಾಯ್ಡು ಸಂಪುಟ ಸೇರುವ ಸಾಧ್ಯತೆ ಇದೆ.

ಬಿಜೆಪಿ ಮುಖಂಡರಿಗೆ ಮಹತ್ವದ ಖಾತೆಗಳನ್ನು ಹಂಚಿಕೆ ಮಾಡುವ ಆಲೋಚನೆಯನ್ನು  ನೂತನ ಪ್ರಧಾನಿ ಹೊಂದಿದ್ದಾರೆ ಎಂದು ಉನ್ನತ ಮೂಲ­ಗಳು ತಿಳಿಸಿವೆ.

ಶಿವಸೇನೆ, ತೆಲುಗು ದೇಶಂ, ಎಲ್‌ಜೆಪಿ, ಶಿರೋಮಣಿ ಅಕಾಲಿದಳ ಸೇರಿದಂತೆ ಬಿಜೆಪಿಯ ಎಲ್ಲ ಮಿತ್ರ ಪಕ್ಷಗಳಿಗೂ ಸದಸ್ಯರ ಸಂಖ್ಯಾಬಲಕ್ಕೆ ಅನುಗುಣವಾಗಿ ಸಚಿವ ಸ್ಥಾನ ಕೊಡುವ ಚಿಂತನೆಯನ್ನು ಮೋದಿ ಹೊಂದಿದ್ದಾರೆ. ಮಿತ್ರ ಪಕ್ಷಗಳ ನಾಯಕರಿಂದ ಸಂಪುಟ ಸೇರುವವರ ಪಟ್ಟಿ ಪಡೆಯಲಿದ್ದಾರೆ. ಮೋದಿ ಅವರಿಗೆ ನಿಕಟವಾಗಿರುವ ರಾಜ್ಯಸಭೆ ಸದಸ್ಯ ನರೇಶ್‌ ಗುಜ್ರಾಲ್‌ ಸಂಪುಟ ಸೇರುವ ಸಾಧ್ಯತೆ ಇದೆ. ನರೇಶ್‌ ಮೇಲ್ಮನೆಯಲ್ಲಿ ಅಕಾಲಿದಳ­ವನ್ನು ಪ್ರತಿನಿಧಿಸಿದ್ದಾರೆ.

ಉನ್ನತ ಮೂಲಗಳು ಹೇಳುವಂತೆ ರಾಜನಾಥ್‌ ಅವರಿಗೆ  ಗೃಹ, ಅರುಣ್‌ ಜೇಟ್ಲಿ (ಹಣಕಾಸು), ಸುಷ್ಮಾ ಸ್ವರಾಜ್‌ ಅವರಿಗೆ ಆರೋಗ್ಯ ಖಾತೆ ಹೊಣೆಗಾರಿಕೆ ಜತೆ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಗೂ ವಿಶೇಷ ಆಮಂತ್ರಿತರಾಗುವ ಸಂಭವವಿದೆ. ಮುರಳಿ ಮನೋಹರ ಜೋಷಿ (ಮಾನವ ಸಂಪನ್ಮೂಲ ಅಥವಾ ರಕ್ಷಣೆ), ನಿತಿನ್‌ ಗಡ್ಕರಿ (ಮೂಲ ಸೌಕರ್ಯ ಅಥವಾ ರೈಲ್ವೆ) ಮತ್ತು ವೆಂಕಯ್ಯ ನಾಯ್ಡು ಅವರಿಗೆ ಕೃಷಿ ಖಾತೆ ಸಿಗುವ ಸಾಧ್ಯತೆ ಇದೆ.

ಎರಡನೆ ಕಂತು:  ಪ್ರಧಾನಿ ಅವರ ಜತೆ ಕೆಲವೇ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎರ­ಡನೇ ಕಂತಿನಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಪುಟ ವಿಸ್ರರಣೆ ಆಗಲಿದೆ. ಮೋದಿ ಅವರ ಮಂತ್ರಿಮಂಡಲ ಸೇರಲಿರುವ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಉದ್ದವಾಗಿದೆ.

ಈಗ ತಮ್ಮ ಉತ್ತರಾಧಿಕಾರಿ ಆಯ್ಕೆ­ಗಾಗಿ ಅಹಮದಾ­ಬಾದಿಗೆ ತೆರಳಿರುವ ಮೋದಿ, 22ರಂದು ದೆಹಲಿಗೆ ಹಿಂತಿರುಗಿದ ಬಳಿಕ ಬಿಜೆಪಿ ಹಿರಿಯ ನಾಯಕರು, ಮಿತ್ರ ಪಕ್ಷಗಳ ಮುಖಂಡರ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ತೀರ್ಮಾನವಾಗದ ಅಡ್ವಾಣಿ ಹೊಣೆಗಾರಿಕೆ:  ಪಕ್ಷದ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರಿಗೆ ಏನು ಹೊಣೆಗಾರಿಕೆ ಕೊಡಬೇಕು ಎಂದು ಇನ್ನೂ ತೀರ್ಮಾನ­ವಾಗಿಲ್ಲ. ಲೋಕಸಭೆ ಸ್ಪೀಕರ್‌ ಹುದ್ದೆ ಮೇಲೆ ಅವರು ಕಣ್ಣಿಟ್ಟಿದ್ದಾರೆ. ಸ್ಪೀಕರ್‌ ಹುದ್ದೆಯನ್ನು ಅಡ್ವಾಣಿ ಅವರಿಗೆ ಕೊಡ­ಬಾರದು ಎಂದು ಮೋದಿ ಅವರಿಗೆ ಕೆಲವು ಆತ್ಮೀಯರು ಸಲಹೆ ಮಾಡಿ­ದ್ದಾರೆ. ಅಡ್ವಾಣಿ ಪಾತ್ರದ ಬಗ್ಗೆ ಇನ್ನೂ ತೀರ್ಮಾನ­ವಾಗಿಲ್ಲ.

ಮೋದಿ ಸಂಪುಟ ಸೇರುವವರ ಪಟ್ಟಿ­ಯಲ್ಲಿ ರಾಜ್ಯದ ಮುಖಂಡರಾದ ಬಿ.ಎಸ್‌.ಯಡಿಯೂರಪ್ಪ, ಡಿ.ವಿ.ಸದಾನಂದ­ಗೌಡ, ಅನಂತ ಕುಮಾರ್‌, ರಮೇಶ್‌ ಜಿಗಜಿಣಗಿ ಸೇರಿದಂತೆ ಅನೇಕರ ಹೆಸರಿವೆ. ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರ ಆರೋಪವಿರುವ ಹಿನ್ನೆಲೆಯಲ್ಲಿ ಮೋದಿ ಅವರೇ ಅಂತಿಮ ನಿರ್ಧಾರ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ವಿವರಿಸಿವೆ.

ಸೆಂಟ್ರಲ್‌ ಹಾಲ್‌ನಲ್ಲಿ ಭಾವುಕ ಕ್ಷಣಗಳು...
ನವದೆಹಲಿ (ಪಿಟಿಐ):  ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳ­ವಾರ ಮೊಟ್ಟ ಮೊದಲ ಬಾರಿ ಸಂಸತ್‌ ಭವನಕ್ಕೆ ಕಾಲಿಟ್ಟಾಗ ಭಾವಪರವಶರಾದರು.

ಒಳಗೆ ಬಂದವರೇ ಹಿರಿಯ ನಾಯಕ ಅಡ್ವಾಣಿ ಅವರ ಪಾದಮುಟ್ಟಿ ನಮಸ್ಕರಿ­ಸಿದರು. ಅದಕ್ಕೆ ಪ್ರತಿಯಾಗಿ ಅಡ್ವಾಣಿ ಅವರು ಮೋದಿ ಅವರನ್ನು ಪ್ರೀತಿಯಿಂದ ಆಲಿಂಗಿಸಿಕೊಂಡರು.

‘ನಾನು ಗುಜರಾತ್‌ ಮುಖ್ಯಮಂತ್ರಿ­ಯಾಗುವವರೆಗೆ ವಿಧಾನಸಭೆ ಪ್ರವೇಶಿಸಿ­ರಲಿಲ್ಲ. ಅದೇ ರೀತಿ ಈಗ ಮೊದಲ ಬಾರಿ ಸಂಸತ್‌ ಭವನ ಪ್ರವೇಶಿಸಿದ್ದೇನೆ’ ಎಂದು ಮೋದಿ ನುಡಿದರು.

‘ಈ ಶುಭ ಕ್ಷಣದಲ್ಲಿ ನಮ್ಮೊಂದಿಗೆ ಅಟಲ್‌ ಬಿಹಾರಿ ವಾಜಪೇಯಿ ಕೂಡ ಇರಬೇಕಿತ್ತು. ಆಗ ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ಬರುತ್ತಿತ್ತು’ ಎಂದೂ ಹೇಳಿದರು.

‘ಮೋದಿ ಕೃಪೆಯಿಂದ ಪಕ್ಷ ಅಭೂತ­ಪೂರ್ವ ಗೆಲುವು ಸಾಧಿಸಿದೆ’ ಎಂಬ ಅಡ್ವಾಣಿ ಹೇಳಿಕೆಗೆ ಪ್ರತಿಕ್ರಿಯಿಸುವಾಗ ಅವರು ಗದ್ಗದಿತರಾದರು. ಏನು ಮಾತನಾಡಬೇಕು ಎಂದು ಅರೆಕ್ಷಣ ತೋಚದೆ  ಭಾಷಣ ನಿಲ್ಲಿಸಿ ನೀರು ಕುಡಿದು ಸುಧಾರಿಸಿಕೊಂಡರು.   ಈ ಸಂದರ್ಭದಲ್ಲಿ ಮೋದಿ ಏನನ್ನು ಹೇಳಲು ಹೊರಟಿದ್ದಾರೆ ಎಂದು ಅನೇಕರು ಅಚ್ಚರಿಪಟ್ಟರು. ರವಿಶಂಕರ್‌ ಪ್ರಸಾದ್‌ ಸೇರಿದಂತೆ ಹಲವರ ಕಣ್ಣಾಲಿಗಳು ತುಂಬಿ ಬಂದವು. ‘ಮೋದಿ ಕೃಪೆಯಿಂದ ಎನ್ನುವ ಶಬ್ದವನ್ನು ಅಡ್ವಾಣಿ ಅವರು ಬಳಸಬಾರದಿತ್ತು... ಎಂದು ವಿವರಣೆ ಕೊಟ್ಟಾಗ ಸಂದೇಹಗಳು ದೂರ­ವಾದವು.

ಇನ್ನೊಂದೆಡೆ, ಅಡ್ವಾಣಿ ಕೂಡ ಭಾವುಕರಾಗಿ ಮಾತನಾಡಿದರು. ‘ಇತಿ­ಹಾಸ­ದಲ್ಲಿ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿ­ಯಾ­ಗಲು ಅವಕಾಶ ಮಾಡಿಕೊಟ್ಟಿದ್ದ­ಕ್ಕಾಗಿ ನಾನು ಪಕ್ಷ ಹಾಗೂ ಮೋದಿ ಅವರಿಗೆ ಆಭಾರಿಯಾಗಿದ್ದೇನೆ’ ಎನ್ನು­ವಾಗ ಅವರ ಕಣ್ಣಲ್ಲಿ ನೀರಿತ್ತು.

‘ಹೊಸ ಶಕೆಯ ಉದಯ’ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ನುಡಿದರು.  ಪಂಡಿತ್‌ ದೀನ್‌ದಯಾಳ್‌ ಉಪಾಧ್ಯಾಯ ಅವರ ಬಲಿಷ್ಠ ಹಾಗೂ ಸ್ವಾವಲಂಬಿ ಭಾರತದ ಕನಸು ನನಸಾ­ಗುತ್ತಿರುವುದಕ್ಕೆ ಖಷಿಯಾಗುತ್ತಿದೆ’ ಎಂದೂ  ಹೇಳಿದರು.

ಸಂಭ್ರಮ...ಒಟ್ಟಾರೆ ಇಡೀ ಸೆಂಟ್ರಲ್‌ ಹಾಲ್‌ನಲ್ಲಿ ಹಬ್ಬದ ವಾತಾವರಣ ಇತ್ತು. ಪಕ್ಷದ ವಕ್ತಾರೆ ನಿರ್ಮಲಾ ಸೀತಾ­ರಾಮನ್‌, ಮೇನಕಾ ಗಾಂಧಿ, ಸುಮಿತ್ರಾ ಮಹಾಜನ್‌ ಮತ್ತಿತರರಲ್ಲಿ ಸಂಭ್ರಮ ಎದ್ದು ಕಾಣುತ್ತಿತ್ತು.

ತಾಯಿ ಸೇವೆ ಮಾಡುವುದು ‘ಕೃಪೆ’ಯಲ್ಲ...
‘ಮೋದಿ ಅವರ ಕೃಪೆಯಿಂದ ಬಿಜೆಪಿ ಅಭೂತಪೂರ್ವ ವಿಜಯ ಸಾಧಿಸಿದೆ’ ಎಂದು ಅಡ್ವಾಣಿ ಹೇಳಿದ್ದಕ್ಕೆ ಭಾವುಕ­ರಾಗಿ ಪ್ರತಿಕ್ರಿಯಿಸಿದ ಮೋದಿ, ‘ದಯ­ವಿಟ್ಟು ‘‘ಕೃಪೆ’’ ಎನ್ನುವ ಶಬ್ದ ಬಳಸಬೇಡಿ. ಭಾರತದಂತೆ ಪಕ್ಷ ಕೂಡ ನನ್ನ ತಾಯಿ. ತಾಯಿಯ ಸೇವೆ ಮಾಡು­ವುದು ‘‘ಕೃಪೆ’’ಯಾಗುವು­ದಿಲ್ಲ. ಹಾಗೆ ನೋಡಿದರೆ ಪಕ್ಷದ ‘‘ಕೃಪೆ’’ಯಿಂದಲೇ ನನಗೆ ದೇಶ ಸೇವೆ ಮಾಡುವ ಅವಕಾಶ ಸಿಕ್ಕಿದೆ’ ಎಂದರು.

(ಅಡ್ವಾಣಿಜಿ  ನೆ ಏಕ್‌ ಶಬ್ದ್‌ ಕಹಾ, ಔರ್‌್ ಮೈ ಅಡ್ವಾಣಿಜಿ ಸೆ ಪ್ರಾರ್ಥನಾ ಕರೂಂಗಾ ಕಿ, ವೋ ಇಸ್‌್ ಶಬ್ದ್‌್ ಕಾ ಇಸ್ತೆಮಾಲ್‌್ ನಾ ಕರೆ. ಉನ್ಹೋನೆ ಕಹಾ ಕಿ, ನರೇಂದ್ರಭಾಯ್‌ ನೆ ಕೃಪಾ ಕಿ. ಕ್ಯಾ ಮಾ ಕಿ ಸೇವಾ ಕಭಿ ಕೃಪಾ ಹೋ ಸಕ್ತಿ ಹೈ? ಕತಯಿ ನಹೀಂ ಹೋ ಸಕ್ತಿ ಹೈ? ಜೈಸೆ ಭಾರತ್‌್ ಮೇರಿ ಮಾ ಹೈ, ವೈಸೆ ಹಿ ಭಾಜಪಾ ಭಿ ಮೇರಿ ಮಾ ಹೈ. ಔರ್‌್ ಇಸ್‌ಲಿಯೆ ಬೇಟಾ ಕಭಿ ಮಾ ಪರ್‌್ ಕೃಪಾ ನಹಿ ಕರ್ತಾ, ಸಿರ್ಫ್‌್ ಸಮರ್ಪಿತ್‌್ ಭಾವ್‌್ ಸೆ ಮಾ ಕಿ ಸೇವಾ ಕರ್ತಾ ಹೈ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT