ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ಅನುಕರಣೆ ಸಾಕು; ರೈತರು ಸಂಘಟಿತರಾಗಬೇಕು

ವಾರದ ಸಂದರ್ಶನ
Last Updated 4 ಜುಲೈ 2015, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ರೈತರ ಆತ್ಮಹತ್ಯಾ ಸರಣಿ ಮುಂದುವರಿದಿದೆ. ಕೃಷಿ ವೆಚ್ಚ ಜಾಸ್ತಿ, ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಕೊರತೆ, ಸರ್ಕಾರದ ನಿಲುವು, ಮಾರ್ಗದರ್ಶನದ ಕೊರತೆ ಮತ್ತಿತರ ಕಾರಣಗಳಿಂದಾಗಿ ಹತಾಶರಾಗುತ್ತಿರುವ ರೈತರ ಸಂಖ್ಯೆ ಹೆಚ್ಚಿದೆ. ರಾಜ್ಯದಲ್ಲಿ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳು ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಯಲ್ಲಿ ತೊಡಗಿವೆ. ಆದರೆ, ರೈತರ ನೋವಿಗೆ ವಿ.ವಿ.ಗಳು ಸ್ಪಂದಿಸುತ್ತಿಲ್ಲ, ಮಾರ್ಗದರ್ಶನ ನೀಡುತ್ತಿಲ್ಲ ಎಂಬ ಆರೋಪ ಇದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ  ಕುಲಪತಿ ಡಾ. ಎಚ್‌.ಶಿವಣ್ಣ ಅವರು ಕೃಷಿ ಕ್ಷೇತ್ರದ ಸಮಸ್ಯೆಗಳು, ಪರಿಹಾರೋಪಾಯಗಳು, ವಿಶ್ವವಿದ್ಯಾಲಯಗಳ ಪಾತ್ರದ ಕುರಿತು ಇಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

*ರೈತರ ಆತ್ಮಹತ್ಯೆಗೆ ಕಾರಣ ಏನು?
ಇತ್ತೀಚಿನ ದಿನಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಿದೆ. ವಾರದಲ್ಲಿ 15 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಡೀ ವ್ಯವಸ್ಥೆಯ‌ಬಗ್ಗೆ ರೈತರು ಹತಾಶರಾಗಿದ್ದಾರೆ. ಕೂಲಿಗಳು ಸಿಗುತ್ತಿಲ್ಲ. ಇದರಿಂದ ಸಕಾಲಕ್ಕೆ ಬಿತ್ತನೆ ಆಗುತ್ತಿಲ್ಲ. ಉತ್ಪಾದನಾ ವೆಚ್ಚ ಜಾಸ್ತಿ ಆಗಿದೆ. ಅದಕ್ಕೆ ತಕ್ಕಂತೆ ಆದಾಯ ಬರುತ್ತಿಲ್ಲ.

ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಆತ್ಮಹತ್ಯೆಯೇ ಪರಿಹಾರ ಎಂದು ರೈತರು ಭಾವಿಸುತ್ತಿದ್ದಾರೆ. ಕುಟುಂಬ ಸದಸ್ಯರ ಸ್ಥಿತಿಯ ಬಗ್ಗೆಯೂ ಯೋಚಿಸದೆ ಆತ್ಮಹತ್ಯೆಯ ಹಾದಿ ತುಳಿಯುತ್ತಾರೆ. ಆತ್ಮಹತ್ಯೆ ಮಾಡಿಕೊಂಡಾಗ ರೈತ ಕುಟುಂಬಕ್ಕೆ ಸರ್ಕಾರ ಸ್ವಲ್ಪ ಹಣ ನೀಡುತ್ತದೆ. ಇವುಗಳಿಂದಾಗಿ ಸಮಸ್ಯೆ ಸಂಕೀರ್ಣವಾಗುತ್ತದೆಯೇ ಹೊರತು ಉತ್ತರ ಸಿಗುವುದಿಲ್ಲ.

ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಪೈಕಿ ಕಬ್ಬು ಬೆಳೆಗಾರರೇ ಜಾಸ್ತಿ. ಒಂದು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲು ₹1.10 ಲಕ್ಷ ಖರ್ಚಾಗುತ್ತದೆ. ಈಗ ಒಂದು ಟನ್‌ಗೆ ಕಬ್ಬಿನ ಗರಿಷ್ಠ ಬೆಲೆ ₹2500. ಸಾಮಾನ್ಯವಾಗಿ ಒಂದು ಎಕರೆಯಲ್ಲಿ ಇಳುವರಿ ಬರುವುದು 50 ಟನ್‌. ಆದಾಯದ ಲೆಕ್ಕ ಹಾಕಿದರೆ ಸಿಗುವುದು  ₹1.25 ಲಕ್ಷ. ಖರ್ಚು ಕಳೆದರೆ ರೈತರಿಗೆ ಏನೂ ಉಳಿಯುವುದಿಲ್ಲ. ಹೀಗಾಗಿ ರೈತರು ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಕಬ್ಬಿನ ಮೌಲ್ಯವರ್ಧನೆ ಆಗಬೇಕು. ಉಪ ಉತ್ಪನ್ನಗಳನ್ನು ಬಳಸಬೇಕು. ಇದಕ್ಕೆ ಸರ್ಕಾರ ಉತ್ತೇಜನ ನೀಡಬೇಕು. ಈ ಮೂಲಕ ರೈತರಿಗೆ ಕನಿಷ್ಠ ಟನ್‌ಗೆ ₹3 ಸಾವಿರ ದೊರಕುವ ಸ್ಥಿತಿ ನಿರ್ಮಾಣವಾಗಬೇಕು.

*ಆತ್ಮಹತ್ಯೆ ಸಮೂಹಸನ್ನಿ ರೀತಿ ಆಗಿದೆಯಲ್ಲ...
ರೈತರಲ್ಲಿನ ಕೆಲವು ದೋಷಗಳಿಂದಾಗಿ ಸಮಸ್ಯೆ ಬಿಗಡಾಯಿಸುತ್ತಿದೆ. ಒಬ್ಬ ರೈತನ ಗೆಲುವನ್ನು ಮತ್ತೊಬ್ಬ ರೈತ ಅನುಸರಿಸುತ್ತಾನೆ. ಸೋಲಿನಲ್ಲೂ ಇದೇ ರೀತಿ ಮಾಡುತ್ತಾನೆ. ಈ ವರ್ಷ ಒಬ್ಬ ರೈತನಿಗೆ ಟೊಮೆಟೊ ಬೆಳೆಯಲ್ಲಿ ಒಳ್ಳೆಯ ಬೆಲೆ ಸಿಕ್ಕಿತು ಅಂದಿಟ್ಟುಕೊಳ್ಳೋಣ. ಮರುವರ್ಷ ಇಡೀ ಊರಿನ ಗದ್ದೆಗಳಲ್ಲಿ ಕಾಣುವುದು ಟೊಮೆಟೊ ಗಿಡಗಳೆ. ಬೇಡಿಕೆಗಿಂತ ಪೂರೈಕೆ ಪ್ರಮಾಣ ಹೆಚ್ಚಿದಾಗ ತನ್ನಿಂದತಾನೇ ಬೆಲೆ ಕುಸಿಯುತ್ತದೆ. ಬೆಳೆಗಾರರಿಗೆ ಮೂರು ಕಾಸು ಸಿಗುವುದಿಲ್ಲ.  ಟೊಮೆಟೊಗಳೆಲ್ಲ ರಸ್ತೆ ಪಾಲಾಗುತ್ತವೆ. ರೈತರು ನಷ್ಟ ಅನುಭವಿಸುತ್ತಾರೆ. ಇದು ರೈತರ ತಪ್ಪಿನಿಂದ ಉದ್ಭವಿಸುವ ಸಮಸ್ಯೆ. ಇಂತಹ ಪ್ರವೃತ್ತಿಯನ್ನು ರೈತರು ಮೊದಲು ಬಿಡಬೇಕು.

ಇದಕ್ಕೆ ದೊಡ್ಡ ಮಟ್ಟದ ಬುದ್ಧಿವಂತಿಕೆ ಬೇಕಿಲ್ಲ. ಮಳೆ ಪ್ರಮಾಣ, ಮಾರುಕಟ್ಟೆ ಸ್ಥಿತಿಗತಿ ಮತ್ತಿತರ ವಿಷಯಗಳ ಬಗ್ಗೆ ಗಮನ ಹರಿಸಿ ಬಿತ್ತನೆ ಮಾಡಿದರೆ ಸಮಸ್ಯೆಗೆ ಉತ್ತರ ಸಿಗುತ್ತದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಇಂತಹುದೇ ಸಮಸ್ಯೆ ಉದ್ಭವಿಸಿದೆ. ಕಣ್ಣು ಹರಿಸಿದಷ್ಟು ದೂರ ಕಾಣುವುದು ಕಬ್ಬಿನ ಬೆಳೆಯೇ. ಬೆಲೆ ಕುಸಿದ ಕೂಡಲೇ ರೈತರು  ಉತ್ಸಾಹ ಕಳೆದುಕೊಳ್ಳುತ್ತಾರೆ. ಇದರ ಬದಲು ಸಮಗ್ರ ಕೃಷಿ ಪದ್ಧತಿ ಬಗ್ಗೆ ಗಮನ ಹರಿಸಬೇಕು.

*ರೈತರ ಸೋಲಿನಲ್ಲಿ ಮಧ್ಯವರ್ತಿಗಳ ಪಾಲು ದೊಡ್ಡದು ಇದೆಯಲ್ಲ....
ಹೆಚ್ಚಿನ ಸಂದರ್ಭಗಳಲ್ಲಿ  ಲಾಭವನ್ನು ಮಧ್ಯವರ್ತಿಗಳೇ ದೋಚಿಕೊಳ್ಳುತ್ತಾರೆ. ಇಳುವರಿ ಬಂದ ಕೂಡಲೇ ರೈತರಿಗೂ ಮಾರಾಟ ಮಾಡುವ ಆತುರ. ಇದರಿಂದ ಸಂಕಷ್ಟಕ್ಕೆ ಸಿಲುಕುವುದು ಅವರೇ. ಮಂಡ್ಯ ಜಿಲ್ಲೆಯ ಪಾಂಡವಪುರದ ರಸ್ತೆ ಬದಿಯಲ್ಲಿ ಪ್ರತಿದಿನ ಎಳನೀರಿನ ಹತ್ತಾರು ಲಾರಿಗಳು ನಿಂತಿರುವುದನ್ನು ಕಾಣುತ್ತೇವೆ. ರೈತರು ಎಳನೀರು ಕೊಯ್ದು  ಲಾರಿಯಲ್ಲಿ ತುಂಬಿಸಿಕೊಂಡು ಬರುತ್ತಾರೆ. ರೈತರಿಗಾಗಿ ಮಧ್ಯವರ್ತಿಗಳು ಕಾಯುತ್ತಾ ಇರುತ್ತಾರೆ. ಒಂದು ಎಳನೀರಿಗೆ ರೈತರಿಗೆ ಸಿಗುವುದು ಅಬ್ಬಬ್ಬಾ ಎಂದರೆ ಆರೇಳು ರೂಪಾಯಿ. ಮಧ್ಯವರ್ತಿಗಳು ಅದನ್ನು ಬೆಂಗಳೂರಿಗೆ ತಂದು ₹25ಕ್ಕೆ ಮಾರಾಟ ಮಾಡುತ್ತಾರೆ.

ಎಳನೀರು ಒಂದು ವಾರ ಇಟ್ಟರೂ ಹಾಳಾಗುವುದಿಲ್ಲ. ಆದರೆ, ಹೆಚ್ಚಿನ ರೈತರಿಗೆ ತಾಳ್ಮೆ ಇಲ್ಲ. ಇದೇ ದೊಡ್ಡ ಸಮಸ್ಯೆ. ರೈತರ ಹಿತ ಕಾಯುವ ಸಹಕಾರ ಸಂಸ್ಥೆಗಳೂ ವಿರಳವಾಗಿವೆ. ಹಾಲು ಉತ್ಪಾದಕರ ಹಿತ ಕಾಯಲು ಕೆಎಂಎಫ್‌ ಇದೆ. ಹೀಗಾಗಿ ಉತ್ಪಾದಕರ ಬದುಕು ಹಸನಾಗಿದೆ. ಬೇರೆ ಯಾವ ಕೃಷಿಗೂ ಇಂತಹ ಒಂದೇ ಒಂದು ಸಹಕಾರ ಸಂಸ್ಥೆ ಇಲ್ಲ. ಕಬ್ಬು, ಭತ್ತ, ರಾಗಿ, ಜೋಳ ಸೇರಿದಂತೆ ಎಲ್ಲ ಬೆಳೆಗಳಿಗೂ ಸಹಕಾರ ಸಂಸ್ಥೆಗಳು ಹುಟ್ಟಿಕೊಳ್ಳಬೇಕು.

*ಈಗಿನ ಸಮಸ್ಯೆ ಪರಿಹಾರಕ್ಕೆ ರೈತರು ಏನು ಮಾಡಬೇಕು? ‌
ಮೊದಲು ರೈತರು ಸಂಘಟಿತರಾಗಬೇಕು. ಗ್ರಾಮ ಮಟ್ಟ, ಹೋಬಳಿ ಮಟ್ಟದಲ್ಲಿ ಸಣ್ಣ ಗುಂಪುಗಳನ್ನು ರಚಿಸಿಕೊಳ್ಳಬೇಕು. ಅವರೇ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಿ ಮಾರಾಟ ಮಾಡಬೇಕು. ಆಗ ವೈಜ್ಞಾನಿಕ ಬೆಲೆಯೂ ಸಿಗುತ್ತದೆ, ಮಧ್ಯವರ್ತಿಗಳ ಕಾಟವೂ ತಪ್ಪುತ್ತದೆ.

*ರೈತರು ದಿಕ್ಕೇ ತೋಚದ ಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲೇ ನೀವೆಲ್ಲ (ವಿ.ವಿ.ಗಳು) ಮೌನ ತಾಳಿರುವುದು ಸರಿಯೇ?
ಇಲ್ಲ ಇಲ್ಲ. ನಾವು ಮೌನ ತಾಳಿಲ್ಲ. ಇದು ಕ್ಲಿಷ್ಟಕರ ಸಂಗತಿ. ಸಮಸ್ಯೆಯನ್ನು ಎಲ್ಲ ಆಯಾಮಗಳಲ್ಲಿ ನೋಡಬೇಕಿದೆ. ಕಬ್ಬಿನ ಸಮಸ್ಯೆ ಬಗ್ಗೆ ತಳ ಹಂತದಲ್ಲಿ ಅಧ್ಯಯನ ಮಾಡುತ್ತಿದ್ದೇವೆ. ವಾರದಲ್ಲಿ ಪ್ರಾಧ್ಯಾಪಕರು, ತಜ್ಞರ ಸಭೆ ಕರೆದು ಸಲಹೆಗಳನ್ನು ಪಡೆಯಲಿದ್ದೇವೆ. 15 ದಿನಗಳೊಳಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ.

*ಕೃಷಿ ವಿಶ್ವವಿದ್ಯಾಲಯಗಳು ದ್ವೀಪಗಳಾಗಿವೆ. ಸಂಶೋಧನೆ ವಿ.ವಿ.ಗಳ ಕ್ಯಾಂಪಸ್‌ ದಾಟಿ ಹೋಗುತ್ತಿಲ್ಲ ಎಂಬ ಆರೋಪ ಇದೆಯಲ್ಲ...
ಈ ಮಾತಿನಲ್ಲಿ ಸ್ವಲ್ಪ ಸತ್ಯಾಂಶವೂ ಇದೆ. ಕೆಲವು ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ವ್ಯಾಪಕ ಸಂಶೋಧನೆಗಳು ನಡೆದಿವೆ. ಇವುಗಳನ್ನು ರೈತರಿಗೆ ತಲುಪಿಸಲು ವಿಸ್ತರಣಾ ಚಟುವಟಿಕೆಗಳು ನಡೆಯಬೇಕು. ಈ ಕೆಲಸ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಈ ಹಿಂದೆ ಗ್ರಾಮ ಸೇವಕರು ಇದ್ದರು. ಅವರು ಗ್ರಾಮದ ಪ್ರತಿ ಮನೆಗೆ ತೆರಳಿ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಈಗ ಬೆರಳೆಣಿಕೆಯ ಗ್ರಾಮ ಸೇವಕರು ಇದ್ದಾರೆ.   ಅವರು ವಿಶ್ವವಿದ್ಯಾಲಯ ಹಾಗೂ ಕೃಷಿಕರ ನಡುವಿನ ಸೇತುವೆ. ಸೇತುವೆಯೇ ಇಲ್ಲದಿದ್ದರೆ ವಿಸ್ತರಣೆ ನಡೆಯುವುದು ಹೇಗೆ?

*ಕೃಷಿ ಮೇಳಗಳು ದಿಕ್ಕು ತಪ್ಪುತ್ತಿವೆಯಲ್ಲ...
ಇತ್ತೀಚಿನ ವರ್ಷಗಳಲ್ಲಿ ನಗರ ಪ್ರದೇಶದವರೇ ಮೇಳಕ್ಕೆ ಬರುತ್ತಿದ್ದಾರೆ. ಇದಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕಾರುಗಳ ಸಂಖ್ಯೆಯೇ ಸಾಕ್ಷಿ. ಸಂಚಾರ ನಿರ್ವಹಣೆಯೇ ದೊಡ್ಡ ಸವಾಲಾಗಿದೆ. ಆದರೆ, ಇಲ್ಲಿ ಒಂದು ವಿಷಯ ಗಮನಿಸಬೇಕು. ರಾಜ್ಯದ ಇತರ ಭಾಗದಲ್ಲಿ ನಡೆಯುವ ಕೃಷಿ ಮೇಳಕ್ಕೂ ಬೆಂಗಳೂರಿನ ಕೃಷಿ ಮೇಳಕ್ಕೂ ವ್ಯತ್ಯಾಸ ಇದೆ. ನಗರದ ಜನರನ್ನು ಬಿಟ್ಟು ಕೃಷಿ ಮೇಳ ಮಾಡುವ ಹಾಗಿಲ್ಲ. ರಾಜಧಾನಿಯಲ್ಲಿ ಇರುವವರಲ್ಲಿ ಶೇ 75 ಮಂದಿ ಹಳ್ಳಿಯಿಂದ ಬಂದವರೇ.  ಮೇಳಕ್ಕೆ ಭೇಟಿ ನೀಡಿದ 10 ಜನರಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಮತ್ತೆ ಕೃಷಿಯ ಕಡೆಗೆ ಒಲವು ತೋರಿದರೂ ಸಾಕು.

*ಪುಟ್ಟ ಇಸ್ರೇಲ್‌ ದೇಶ ಕೃಷಿಯಲ್ಲಿ ಅಗಾಧ ಸಾಧನೆ ಮಾಡಿದೆ. ಆದರೆ, ಈ ವಿಷಯದಲ್ಲಿ ನಾವು ಎಡವಿದ್ದೇವೆ. ಇದಕ್ಕೆ ಕಾರಣ ಏನು?
ಇಸ್ರೇಲ್‌ನಲ್ಲಿ ಒಂದು ಪ್ರದೇಶದಲ್ಲಿ ವಾರ್ಷಿಕ 30 ಮಿ.ಮೀ. ಮಳೆಯಾಗುತ್ತಿದೆ.    ಆ ದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ ಆಗಿದೆ. ನಮ್ಮಲ್ಲಿ ವಾರ್ಷಿಕ 1500 ಮಿ.ಮೀ. ಮಳೆಯಾಗುತ್ತಿದೆ. ಬೇಜವಾಬ್ದಾರಿತನ ಮತ್ತಿತರ ಕಾರಣಗಳಿಂದಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ.

ದೇಶದ ಮೂರು ಕಡೆಯೂ ಸಮುದ್ರ ಇದೆ. ಸಮುದ್ರದ ಆಸುಪಾಸಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಆದರೆ, ಕೃಷಿ ಬಳಕೆಗೆ ಸಿಗುವ ನೀರಿನ ಪ್ರಮಾಣ ಶೇ 5ರಷ್ಟು. ಇದರಲ್ಲಿ ಶೇ 75ರಷ್ಟು ನೀರು ಕಬ್ಬು ಹಾಗೂ ಭತ್ತದ ಬೆಳೆಗೆ ಬಳಕೆಯಾಗುತ್ತಿದೆ. ಒಂದು ಕೆ.ಜಿ. ಭತ್ತ ಬೆಳೆಯಲು ಕನಿಷ್ಠ 5 ಸಾವಿರ ಲೀಟರ್‌ ನೀರು ಬೇಕು. ಏರೋಬಿಕ್‌ ಭತ್ತಕ್ಕೆ 3 ಸಾವಿರ ಲೀಟರ್‌ ನೀರು ಸಾಕು. ಕಡಿಮೆ ನೀರು ಬಳಕೆಯ ಸಾಕಷ್ಟು ಉತ್ತಮ ತಳಿಗಳು ಲಭ್ಯ ಇವೆ. ಇವುಗಳನ್ನು ಬೆಳೆಯಬೇಕು. ಪರ್ಯಾಯ ಬೆಳೆಗಳ ಬಗ್ಗೆಯೂ ಚಿಂತನೆ ನಡೆಸಬೇಕು.

*ಈ ಹಿಂದೆ ರೈತ ಚಳವಳಿಗಳು ಸರ್ಕಾರವನ್ನು ನಡುಗಿಸುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ರೈತರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿವೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು?
ರೈತ ಸಂಘಟನೆಗಳು ವಿಘಟನೆ ಹೊಂದಿವೆ. ಒಗ್ಗಟ್ಟು ಮಾಯವಾಗಿದೆ. ರೈತ ಮುಖಂಡರಿಗೆ ಹಾಗೂ ರೈತರಿಗೆ ಮಾಹಿತಿ ಕೊರತೆ ಇದೆ. ಹೀಗಾಗಿ ಅವರ ಕೂಗು ಸರ್ಕಾರವನ್ನು ತಲುಪುತ್ತಿಲ್ಲ.

*ಕೃಷಿ ವಿ.ವಿ.ಯಲ್ಲಿ ಏನೆಲ್ಲ ಬದಲಾವಣೆ ಮಾಡಬೇಕು ಎಂದು ಯೋಚಿಸಿದ್ದೀರಿ?
ಕೃಷಿ ವಿ.ವಿ. ಕಳೆದ 50 ವರ್ಷಗಳಿಂದ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಈ ಮೂರೂ ಕ್ಷೇತ್ರಗಳಲ್ಲಿ ಇನ್ನೂ ಉನ್ನತ ಮಟ್ಟದ ಕೆಲಸ ಮಾಡಬೇಕು ಎಂಬ ಹಂಬಲ ಇದೆ. ಈಗಿನ ಸಂಶೋಧನಾ ವಿಧಾನ, ವಿಸ್ತರಣಾ ಚಟುವಟಿಕೆ ಹೇಗಿರಬೇಕು ಎಂದು ತಜ್ಞರ ಜತೆಗೆ ಸಮಾಲೋಚಿಸಿ ಅದಕ್ಕೊಂದು ರೂಪ ನೀಡಲಾಗುವುದು. ಈಗ ಎಲ್ಲ ಕಡೆ ಹವಾಮಾನ ಬದಲಾವಣೆ ಬಗ್ಗೆ ಚರ್ಚೆ ಆಗುತ್ತಿದೆ. ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಮಗ್ರ ಮಾಹಿತಿ ಯಾರಿಗೂ ಇಲ್ಲ. ಈ ವಿಷಯ ಕುರಿತು ವಿ.ವಿ.ಯಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಾಗುವುದು.

*ಈ ವರ್ಷ ಮಳೆ ಪ್ರಮಾಣ ಶೇ 12ರಷ್ಟು ಕಡಿಮೆ ಆಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಇಂತಹ ಸಂದರ್ಭದಲ್ಲಿ ರೈತರು ಏನು ಮಾಡಬಹುದು?
ದಕ್ಷಿಣ ಕರ್ನಾಟಕ ಭಾಗದಲ್ಲಿ ಜೂನ್‌ನಲ್ಲಿ ವಾಡಿಕೆಯ ಮಳೆಯಾಗಿದೆ. ಜುಲೈನಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾದರೂ ರೈತರಿಗೆ ಹೆಚ್ಚಿನ ಸಮಸ್ಯೆ ಆಗುವುದಿಲ್ಲ.  ಜುಲೈನಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗುವ ನಿರೀಕ್ಷೆ ಇದೆ. ಬಿತ್ತನೆ ವೇಗ ಪಡೆಯುವುದು ಈ ತಿಂಗಳಲ್ಲೇ. ಒಂದು ವೇಳೆ ಮಳೆ ಪ್ರಮಾಣ ಕಡಿಮೆಯಾಗುವ ಸೂಚನೆ ಸಿಕ್ಕ ತಕ್ಷಣ ರೈತರು ಕಡಿಮೆ ನೀರು ಬಳಕೆಯ ಬೆಳೆಗಳ ಮೊರೆ ಹೋಗಬೇಕು. ಈ ಸಂಬಂಧ ಪರಿಸ್ಥಿತಿ ಗಮನಿಸಿ ಕೃಷಿ ಇಲಾಖೆಗೂ ವಿ.ವಿ. ಮಾರ್ಗದರ್ಶನ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT