ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಶೌಚಾಲಯ ಅಭಿಯಾನ!

Last Updated 6 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕಳೆದ ವಾರ ಕಾಸರಗೋಡು ಜಿಲ್ಲೆಯ ಪ್ರಸಿದ್ಧ ದೇವಸ್ಥಾನವೊಂದಕ್ಕೆ ಹೋಗಿದ್ದೆ. ಪ್ರಾರ್ಥನೆ ಮುಗಿಸಿ ಅಲ್ಲಿಯೇ ಇದ್ದ ಮಹಿಳಾ ಶೌಚಾಲಯಕ್ಕೆ ಹೋದೆ. ಒಟ್ಟು ಎರಡು ಶೌಚಾ­ಲಯಗಳಿದ್ದವು. ಒಂದರಲ್ಲಿ ಬಕೆಟ್ ಇರ­ಲಿಲ್ಲ. ಇನ್ನೊಂದರಲ್ಲಿ ಬಕೆಟ್ ಇದ್ದರೂ ನಲ್ಲಿ  ಸರಿ ಇರಲಿಲ್ಲ. ಮೋದಿಯವರ ‘ಸ್ವಚ್ಛ ಭಾರತ ಅಭಿ­ಯಾನ’ವನ್ನು ಇಲ್ಲಿಂದಲೇ ಶುರು ಮಾಡೋಣ ಎಂದುಕೊಂಡು ದೇವಸ್ಥಾನದ ಆಡಳಿತ ಮಂಡ­ಳಿ­ಯವರನ್ನು ಹುಡುಕಿಕೊಂಡು ಹೊರಟೆ.

ಅಲ್ಲೇ ಒಬ್ಬರು ಏನೋ ಲೆಕ್ಕ ಬರೆ­ಯುತ್ತ ಕೋಣೆ­ಯಲ್ಲಿ ಕುಳಿತಿದ್ದರು. ಸಮಸ್ಯೆ­ಯನ್ನು ಅವರ ಮುಂದಿಟ್ಟೆ. ‘ಬಕೆಟ್ ಮತ್ತು ನಲ್ಲಿ ಸರಿ ಇಲ್ಲ­ದಿದ್ದರೆ ಶೌಚಾಲಯವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಹೇಗೆ?’ ಎಂದು ಕೇಳಿದೆ. ಅವರು ‘ಇದು ನನಗೆ ಸಂಬಂಧಿಸಿದ್ದಲ್ಲ. ಓ ಅಲ್ಲಿ ದೇವಸ್ಥಾನದ ಮ್ಯಾನೇಜರ್ ಇದ್ದಾರೆ. ಅವ­ರನ್ನು ವಿಚಾರಿಸಿ’ ಎಂದರು. ಅವರನ್ನು ಕೇಳಿ­ದಾಗ ಅವರು ‘ನನಗೆ ಗೊತ್ತೇ ಇರಲಿಲ್ಲ. ಬಕೆಟ್ ಇಡು­ವುದು, ಹೊಸ ಟ್ಯಾಪ್ ಹಾಕು­ವುದು ಯಾವ ದೊಡ್ಡ ವಿಷಯ? ಇಂದೇ ಮಾಡಿಸು­ತ್ತೇನೆ. ಆದರೆ ಶೌಚಾಲಯ ಸ್ವಚ್ಛ ಮಾಡುವ ಹೆಂಗಸು ಈ ವಿಷಯವನ್ನು ನನ್ನ ಗಮನಕ್ಕೆ ತರಲೇ ಇಲ್ಲ’ ಎಂದರು.

ನಾನು ಪಟ್ಟು ಬಿಡದೆ ಆ ಹೆಂಗಸನ್ನೂ ಕಂಡು ಅವಳಲ್ಲಿ ಕೇಳಿದೆ. ಅವಳು ಹೇಳಿದ್ದು ಇಷ್ಟು: ‘ಬಕೆಟ್ ಇಲ್ಲದೆ, ಟ್ಯಾಪ್ ಹಾಳಾಗಿ ತಿಂಗಳು­ಗಳೇ ಕಳೆದಿವೆ. ಒಂದು ಶೌಚಾಲಯಕ್ಕೆ ಚಿಲಕ­ವೂ ಇಲ್ಲ. ಗಂಡಸರ ಶೌಚಾಲಯ­ದಲ್ಲೂ ಇದೇ ಸ್ಥಿತಿ. ನನಗೆ ಮೇಲಿನವರಲ್ಲಿ ಹೇಳಿ ಹೇಳಿ ಸಾಕಾ­ಯಿತು. ನನ್ನ ಕರ್ತವ್ಯ ನಾನು ಮಾಡಿ­ದ್ದೇನೆ’. ಕೊನೆಗೆ ದೇವಾಲಯದ ಒಳ­ಹೊಕ್ಕು ಪುನಃ ಪ್ರಾರ್ಥನೆ ಮಾಡಿದೆ  ‘ದೇವಾ, ನಿನ್ನ ಸನ್ನಿ­ಧಾನ­ದಲ್ಲಿರುವ ಶೌಚಾ­ಲಯಕ್ಕೆ ಆದಷ್ಟು ಬೇಗ ಬಕೆಟ್ ಮತ್ತು ಹೊಸ ಟ್ಯಾಪ್ ಕರುಣಿಸು. ಬೇರೇನೂ ಬೇಡ’.

ನಿತ್ಯವೂ ಸಾವಿರದಷ್ಟು ಸಂಖ್ಯೆಯಲ್ಲಿ ಜನ ಭೇಟಿ ನೀಡುವ ಒಂದು ದೇವಸ್ಥಾನದ ಶೌಚಾ­ಲ­ಯದ ಪರಿಸ್ಥಿತಿಯೇ ಇಷ್ಟು ಹದಗೆಟ್ಟಿರು­ವಾಗ ಇನ್ನು ಬೇರೆ ಸಾರ್ವಜನಿಕ ಶೌಚಾ­ಲಯಗಳ ಗತಿ ಹೇಗಿರಬಹುದು? ಭಕ್ತರು ಹುಂಡಿಗೆ ಹಾಕುವ ಹಣದಲ್ಲಿ ಒಂದಂಶವ­ನ್ನಾ­ದರೂ ಸ್ವಚ್ಛತೆಗಾಗಿ ವಿನಿಯೋಗಿಸದ ದೇವ­ಸ್ಥಾನದ ಕಾರ್ಯವೈಖರಿ ಬೇಸರ ತರಿಸಿತು. ‘ಸ್ವಚ್ಛ ಶೌಚಾಲಯ ಅಭಿಯಾನ’­ವೂ ಆರಂಭವಾದರೆ?
–-ಸಹನಾ ಕಾಂತಬೈಲು, ಮಡಿಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT