ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿ ವಿವೇಕಾನಂದ ಸ್ಕಾಲರ್‌ಶಿಪ್‌

ವಿದ್ಯಾ ಧನ
Last Updated 9 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಪಶ್ಚಿಮ ದೇಶಗಳಿಗೆ ವೇದಾಂತ ಮತ್ತು ಯೋಗವನ್ನು ಪರಿಚಯಿಸಿದ ಸಮಾಜ ಸುಧಾರಕ, ಚಿಂತಕ ಸ್ವಾಮಿ ವಿವೇಕಾನಂದ ಅವರು ಮಹಿಳೆಯರಿಗೆ ಶಿಕ್ಷಣ ನೀಡಿದಾಗ ಮಾತ್ರ ಸದೃಢ ಭಾರತ ಕಟ್ಟಲು ಸಾಧ್ಯ ಎಂದು ಪ್ರತಿಪಾದಿಸಿದ್ದರು. ಸ್ವಾಮಿ ವಿವೇಕಾನಂದ ಅವರ ಜ್ಞಾಪಕಾರ್ಥವಾಗಿ ಮಹಿಳೆಯರ ಉನ್ನತ ಅಧ್ಯಯನಕ್ಕೆ ಭಾರತ ಸರ್ಕಾರ ಸ್ಕಾಲರ್‌ಶಿಪ್‌ ನೀಡುವ ಯೋಜನೆಯನ್ನು ಹಲವು ವರ್ಷಗಳ ಹಿಂದೆಯೇ ಜಾರಿಗೆ ತಂದಿದೆ. ಸಮಾಜ ವಿಜ್ಞಾನ ವಿಷಯದಲ್ಲಿ ಪಿಎಚ್‌.ಡಿ ಪಡೆಯುತ್ತಿರುವ ವಿದ್ಯಾರ್ಥಿನಿಯರು ಮಾತ್ರ ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹರು.

ಮಹಿಳೆಯರು ಕ್ಷೇತ್ರಕಾರ್ಯದ ಮೂಲಕ ಸಮಾಜ ಮತ್ತು ಸಮುದಾಯವನ್ನು ಅರಿಯಬೇಕು. ಆ ಮೂಲಕ ಸಮಾಜದಲ್ಲಿ ಆಳವಾಗಿ  ಬೇರೂರಿರುವ ಕಂದಾಚಾರ, ಮೂಡನಂಬಿಕೆ, ಮೌಢ್ಯಗಳನ್ನು ತೊಡೆದು ಹಾಕಲು ಪ್ರಯತ್ನಿಸಬೇಕು ಎನ್ನುವ ಉದ್ದೇಶದಿಂದ ಈ ಸ್ಕಾಲರ್‌ಶಿಪ್‌ ನೀಡಲಾಗುತ್ತಿದೆ. ಪ್ರತಿ ವರ್ಷ ಯಾವುದೇ ಸಮಾಜ ವಿಜ್ಞಾನ ವಿಷಯಗಳಲ್ಲಿ ಪಿಎಚ್‌.ಡಿ ಪಡೆಯುತ್ತಿರುವ 300 ವಿದ್ಯಾರ್ಥಿನಿಯರು ಈ ಸೌಲಭ್ಯ ಪಡೆಯಬಹುದು. ಇದನ್ನು ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ )ನೀಡುತ್ತಿದೆ.

ಅರ್ಹತೆಗಳು...
ಭಾರತೀಯ ಪ್ರಜೆಗಳಾಗಿದ್ದು, ಇಲ್ಲಿನ ಯಾವುದೇ ವಿಶ್ವವಿದ್ಯಾಲಯ ಅಥವಾ ಖಾಸಗಿ ಸಂಸ್ಥೆ, ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌.ಡಿ  ಮಾಡುತ್ತಿರುವ ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಸ್ಕಾಲರ್‌ಶಿಪ್‌ ಅನ್ನು ಒಂದೇ ಹೆಣ್ಣು ಮಗು ಜನಿಸಿದ ಕುಟುಂಬಕ್ಕೆ ಮಾತ್ರ ನೀಡಲಾಗುವುದು. ಅಂದರೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯು ಒಬ್ಬಳೇ ಮಗಳಾಗಿರಬೇಕು. ಸಹೋದರ ಅಥವಾ ಸಹೋದರಿಯರು ಇರಬಾರದು. ಆದರೆ ಅವಳಿ ಹೆಣ್ಣುಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಿದ್ಯಾರ್ಥಿನಿಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಂದ ಬಂದವರಾಗಿರಬೇಕು. ಸಾಮಾನ್ಯ ವರ್ಗದವರಿಗೆ ಗರಿಷ್ಠ ವಯೋಮಿತಿ 40 ವರ್ಷಗಳು. ಎಸ್‌ಸಿ, ಎಸ್‌ಟಿ, ಅಂಗವಿಕಲರಿಗೆ ಗರಿಷ್ಠ 45 ವರ್ಷಗಳ ಮಯೋಮಿತಿ ಸಡಿಲಿಕೆ ಇದೆ. ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವವರಿಗೆ ಈ ಸ್ಕಾಲರ್‌ಶಿಪ್‌ ನೀಡಲಾಗುವುದಿಲ್ಲ. ದೂರಶಿಕ್ಷಣದಲ್ಲಿ ಪಿಎಚ್‌.ಡಿ ಪಡೆಯುತ್ತಿರುವವರು ಅರ್ಜಿ ಸಲ್ಲಿಸುವಂತಿಲ್ಲ.

ಸ್ಕಾಲರ್‌ಶಿಪ್‌ಗಳ ಸಂಖ್ಯೆ/ಅವಧಿ/ ವೇತನ: ಪ್ರತಿ ವರ್ಷ 300 ಸ್ಕಾಲರ್‌ಶಿಪ್‌ಗಳನ್ನು ಮಾತ್ರ ನೀಡಲಾಗುವುದು. ಸಮಾಜ ವಿಜ್ಞಾನದಲ್ಲಿ ಪಿಎಚ್‌.ಡಿ ಪಡೆಯುತ್ತಿರುವವರು ಮಾತ್ರ ಅರ್ಜಿ ಹಾಕಬಹುದು. ಈ ಸ್ಕಾಲರ್‌ಶಿಪ್‌ ಅನ್ನು ನಾಲ್ಕು ವರ್ಷಗಳವರೆಗೆ ಮಾತ್ರ ನೀಡಲಾಗುವುದು. ಆದಾಗ್ಯೂ ಸಂಶೋಧನೆಯನ್ನು ಮತ್ತೆ ಒಂದು ವರ್ಷ ವಿಸ್ತರಿಸಿಕೊಂಡರೆ ಸ್ಕಾಲರ್‌ಶಿಪ್‌ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲಾಗುವುದು.

ಮೊದಲ ಎರಡು ವರ್ಷಗಳು ಮಾಸಿಕ 8000 ರೂಪಾಯಿಗಳನ್ನು ನೀಡಲಾಗುವುದು. ಮೂರು ಮತ್ತು ನಾಲ್ಕನೇ ವರ್ಷ ಮಾಸಿಕ 10.000 ರೂಪಾಯಿಗಳನ್ನು ನೀಡಲಾಗುವುದು. ಮತ್ತೊಂದು ವರ್ಷಕ್ಕೆ ಸ್ಕಾಲರ್‌ಶಿಪ್‌ ವಿಸ್ತರಣೆ ಯಾದರೆ ಐದನೆ ವರ್ಷದಲ್ಲೂ 10.000 ರೂಪಾಯಿಗಳನ್ನು ನೀಡಲಾಗುವುದು. ಇದರ ಜೊತೆಗೆ ವಸತಿ ಭತ್ಯೆ, ಆರೋಗ್ಯ ಭತ್ಯೆ ಸೇರಿದಂತೆ ಇತರೆ ಯಾವುದೇ ವೆಚ್ಚ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ. ಅನುಚಿತ ವರ್ತನೆ ಹಾಗೂ ಸಕಾಲಕ್ಕೆ ಸರಿಯಾಗಿ ಸಂಶೋಧನಾ ವರದಿಯನ್ನು ಸಲ್ಲಿಸದ ವಿದ್ಯಾರ್ಥಿನಿಯರ   ಸ್ಕಾಲರ್‌ಶಿಪ್‌ ಅನ್ನು ಯಾವ ಸೂಚನೆ ನೀಡದೇ   ನಿಲ್ಲಿಸಲಾಗುವುದು.

ಆಯ್ಕೆ ವಿಧಾನ: ಯುಜಿಸಿ ನೇಮಕ ಮಾಡಿರುವ ನುರಿತ ತಜ್ಞರ ಸಮಿತಿಯು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದು. ವಿದ್ಯಾರ್ಥಿನಿಯರ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ವಿದ್ಯಾರ್ಥಿನಿಯರು ಅರ್ಜಿಯನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಇತರ ವಿಧಾನದಲ್ಲಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅಗತ್ಯ ದಾಖಲೆ ಪತ್ರಗಳನ್ನು ಸಲ್ಲಿಸುವುದು ಕಡ್ಡಾಯ. ಪಿಎಚ್‌.ಡಿಗೆ ದಾಖಲಾಗಿರುವ ಬಗ್ಗೆ ವಿಶ್ವವಿದ್ಯಾಲಯದಿಂದ ಪಡೆದ ಪ್ರಮಾಣ ಪತ್ರ, ಪದವಿ ಮತ್ತು ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಒಬ್ಬಳೇ ಮಗಳು ಎಂದು ತೋರಿಸಲು ಸಂಬಂಧಪಟ್ಟ ತಾಲ್ಲೂಕು ಅಧಿಕಾರಿಗಳಿಂದ (ತಹಶೀಲ್ದಾರ್‌) ಪಡೆದ ಅಫಿಡವಿಟ್‌ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

www.ugc.ac.in/svsgc/  ಈ ವೆಬ್‌ಸೈಟ್‌ಗೆ ಲಾಗಿನ್‌ ಆಗುವ ಮೂಲಕ ಅರ್ಜಿಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಸೂಚನೆಗಳನ್ನು ನಿಖರವಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್‌ 30 ಕಡೆಯ ದಿನವಾಗಿರತ್ತದೆ.
ಈ ಸಂಬಂಧ ಹೆಚ್ಚಿನ ಮಾಹಿತಿಗೆ University Grants Commission (UGC) Bahadur Shah Zafar Marg, New Delhi, Pin:110 002, India ಈ ವಿಳಾಸವನ್ನು ಸಂಪರ್ಕಿಸಬಹುದು.

ಈ ಮೇಲ್‌ ವಿಳಾಸ; Dharmesh Shah: dashah@inflibnet.ac.in
ದೂರವಾಣಿ ಸಂಖ್ಯೆಗಳು; 011–. 23232701 /23236735/ 23239437/ 23235733/23237721
ವೆಬ್‌ಸೈಟ್‌: www.ugc.ac.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT