ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಡುಗರೇಕೆ ಇಷ್ಟೊಂದು ಪೆದ್ದು?

Last Updated 6 ಆಗಸ್ಟ್ 2014, 19:47 IST
ಅಕ್ಷರ ಗಾತ್ರ

ಹುಡುಗಿಯರನ್ನು ಇಂಪ್ರೆಸ್ ಮಾಡಬೇಕೆಂದರೆ ಲುಕ್ ತುಂಬಾ ಮುಖ್ಯ ಎನ್ನುವುದು ಕಾಲೇಜು ಮೆಟ್ಟಿಲು ತುಳಿದ ಬಹುಪಾಲು ಹುಡುಗರ ನಂಬಿಕೆ. ಈ ನಂಬಿಕೆಯ ದಾರಿಯಲ್ಲಿ ಹುಡುಗರಿಗೆ ಸಾಥ್‌ ಕೊಡುವುದು ಬೈಕ್‌ಗಳು. ಹುಡುಗಿ ನೋಡುತ್ತಿದ್ದಾಳೆ ಎಂದರೆ ನೇರವಾಗಿ ಚಲಿಸುವ ಬೈಕ್‌ಗಳೂ ಓರೆಕೋರೆಯಾಗಿ ಓಡುತ್ತವೆ. ಬೈಕ್ ಹತ್ತುವ, ಇಳಿಯುವ, ಬೈಕ್‌ನಲ್ಲಿ ಕುಳಿತು ಹೀರೊನಂತೆ ಕೂಲಿಂಗ್ ಗ್ಲಾಸ್‌ ತೆಗೆಯುವ, ಸಿಗರೇಟ್ ಸೇದುವ ಹುಡುಗರು ಎಷ್ಟೋ ಹುಡುಗಿಯರಿಗೆ ಬಫೂನ್‌ಗಳಂತೆ ಕಾಣಿಸುತ್ತಾರೆ.

ನನ್ನ ಗೆಳತಿಗಂತೂ ಅನುಮಾನ ಇಲ್ಲವೇ ಇಲ್ಲ; ‘ಈ ಹುಡುಗರು ತುಂಬಾ ಪೆದ್ದು’ ಎನ್ನುತ್ತಾಳೆ ಅವಳು. ತನ್ನ ಮಾತು ಎಂದೂ ಹುಸಿಯಾಗದ ಸತ್ಯ ಎನ್ನುವುದವಳ ನಂಬಿಕೆ. ಅವಳೇನೂ ‘ದಡ್ಡ’ ಎಂದು ಹುಡುಗರನ್ನು ಸುಮ್ಮಸುಮ್ಮನೆ ಬಯ್ಯುವುದಿಲ್ಲ. ಮುದ್ದಿನಿಂದಲೇ ‘ದಡ್ಡಮುಂಡೇವು’ ಎನ್ನುತ್ತಾಳೆ. ತನ್ನ ಮಾತಿಗೆ ಕಾರಣಗಳನ್ನೂ ಕೊಡುತ್ತಾಳೆ. ಅವಳ ವಾದಸರಣಿಯನ್ನು ಕೇಳುತ್ತಿದ್ದರೆ, ಇಡೀ ಗಂಡಸುಕುಲದ ಬಗ್ಗೆ ಕರುಣೆ ಮೂಡಬೇಕು!

ಒಂದು ಉದಾಹರಣೆ ನೋಡಿ:
ಎರಡು ನೋಟ್‌ ಬುಕ್‌ಗಳನ್ನು ಕೈಯಲ್ಲಿ ಆಡಿಸುತ್ತಾ ಹುಡುಗನೊಬ್ಬ ತುಸು ವಯ್ಯಾರದಿಂದಲೇ ತರಗತಿಯೊಳಗೆ ನಡೆದುಬಂದ. ಎಲ್ಲರೂ ಅವನನ್ನು ಬೆರಗುಗಣ್ಣಿನಿಂದ ನೋಡುವವರೇ. ಸಹಪಾಠಿಗಳೆಲ್ಲರೂ ತನ್ನನ್ನೇ ಗಮನಿಸುತ್ತಾರೆಂದು ಅವನಿಗೆ ಬಿಗುಮಾನ. ಮೀಸೆಯಡಿಯಲ್ಲಿಯೇ ನಗು. ಅಷ್ಟರಲ್ಲಿ, ಕೊನೆಯ ಬೆಂಚಿನಿಂದ ಕಿಸಕ್‌ನೆ ನಕ್ಕ ಸದ್ದು. ನಕ್ಕವಳು ಹುಡುಗಿ.

ಅವಳು ಅವನ ಗೆಳತಿ ಎನ್ನುವುದು ವಿಶೇಷ. ಆ ನಗುವಿಗೆ ಕಾರಣವಿಷ್ಟು: ಕಾಲೇಜ್‌ ಕಾರಿಡಾರಿನಲ್ಲಿ ಹರಟೆ ಹೊಡೆಯುತ್ತಾ ಕುಳಿತಿದ್ದ ಹುಡುಗಿಯರ ಗುಂಪು ಅಪ್ಪುವಿನ (ಪುನೀತ್‌ ರಾಜಕುಮಾರ್‌) ‘ನಿನ್ನಿಂದಲೇ’ ಚಿತ್ರದ ಬಗ್ಗೆ ಮಾತನಾಡುತ್ತಿತ್ತು. ಒಬ್ಬ ಹುಡುಗಿ, ಸಿನಿಮಾದಲ್ಲಿ ಅಪ್ಪು ಧರಿಸಿದ್ದ ಡ್ರೆಸ್‌ ಬಗ್ಗೆ ಮಾತನಾಡಿದಳು. ಮತ್ತೊಬ್ಬಳು, ‘ಆ ಡ್ರೆಸ್‌ನಲ್ಲಿ ಅಪ್ಪು ಎಷ್ಟು ಚೆನ್ನಾಗಿ ಕಾಣುತ್ತಾನೆ ಅಲ್ಲವಾ’ ಎಂದಿದ್ದಳು.

ಈ ಸಂಭಾಷಣೆ ಕೇಳಿಸಿಕೊಂಡಿದ್ದ ಹುಡುಗ ‘ನಿನ್ನಿಂದಲೇ’ ಚಿತ್ರದಲ್ಲಿ ಪುನೀತ್‌ ಹಾಕಿಕೊಂಡಿದ್ದ ಕಾಂಬಿನೇಷನ್ ಡ್ರೆಸ್‌ನಲ್ಲಿ ಕಾಲೇಜಿಗೆ ಬಂದಿದ್ದಾನೆ. ಹುಡುಗಿಯರ ಗುಂಪಿನಲ್ಲಿ ತನ್ನ ಗೆಳತಿಯೂ ಇದ್ದುದು, ಅವಳು ಪುನೀತ್‌ ಡ್ರೆಸ್‌ ಮೆಚ್ಚಿಕೊಂಡಿದ್ದು ಅವನಿಗೆ ಗೊತ್ತಿತ್ತು. ಗೆಳತಿಯನ್ನು ಇಂಪ್ರೆಸ್‌ ಮಾಡಲಿಕ್ಕಾಗಿ ಅವನು ‘ನಿನ್ನಿಂದಲೇ’ ಸಿನಿಮಾ ನೋಡಿ, ಅದೇ ಬಣ್ಣದ ಬಟ್ಟೆಯನ್ನು ಅಂಗಡಿ ಅಂಗಡಿ ಅಲೆದು ಖರೀದಿಸಿದ್ದ. ಆದರೆ, ಪುನೀತ್‌ಗೆ ಚೆಂದ ಕಂಡಿದ್ದ ಬಟ್ಟೆ ಇವನನ್ನು ಪೊರ್ಕಿ ಹುಡುಗನಂತೆ ಮಾಡಿತ್ತು. ಗೆಳತಿಯ ನಗು ಹುಡುಗನನ್ನು ಭ್ರಮನಿರಸನಗೊಳಿಸಿತ್ತು.

ಮೇಲಿನ ಘಟನೆಯನ್ನು ಕಥೆಯಂತೆ ಹೇಳಿದ ಗೆಳತಿ, ‘ನಿನ್ನಿಂದಲೇ ನಿನ್ನಿಂದಲೇ’ ಎಂದು ಹಾಡುತ್ತ ನಗತೊಡಗಿದಳು. ‘ಹುಡುಗರ ಇಂಥ ಅನುಕರಣೆಗಳು ಬಟ್ಟೆಯೊಂದಕ್ಕೆ ಸೀಮಿತವಲ್ಲ, ನಟರು ತೊಡುವ ಪೆಂಡೆಂಟ್, ವಾಚ್, ಬ್ಯಾಗ್, ರಿಂಗ್ ಹೀಗೆ ಪ್ರತಿಯೊಂದರಲ್ಲೂ ಅನುಕರಣೆ ನಡೆಯುತ್ತದೆ. ಅದರಲ್ಲೂ ತಾನು ಇಷ್ಟ ಪಟ್ಟ ಹುಡುಗಿಯ ನೆಚ್ಚಿನ ನಟನನ್ನೂ ತನ್ನೊಳಗೇ ಆವಾಹಿಸಿಕೊಂಡವರಂತೆ ಆಡುತ್ತಾರೆ’ ಎಂದು ಗೆಳತಿ ಮತ್ತೂ ನಕ್ಕಳು. ‘ಪಾಪದ ಹುಡುಗರನ್ನು ಇಷ್ಟೇಕೆ ಗೋಳು ಹೊಯ್ಕೊಳ್ತಿ’ ಎಂದರೂ ಅವಳ ನಗು ನಿಲ್ಲಲಿಲ್ಲ.
ಗೆಳತಿಯ ಅಪಹಾಸ್ಯ ಏನೇ ಇರಲಿ, ಹುಡುಗರು ಕೊಂಚ ಪೆದ್ದು ಎನ್ನುವುದು ಅಂಥ ಪರಮರಹಸ್ಯವೇನಲ್ಲ.

ಅದರಲ್ಲೂ, ಪ್ರಾಯದ ಹುಡುಗರು ಕಳ್ಳು ಕುಡಿದಂತೆ ಆಡುವುದು ಮಾಮೂಲು. ಮುಖದಲ್ಲಿ ಮೀಸೆಕಪ್ಪು ಕಾಣಿಸಿದರೆ ಸಾಕು; ‘ಹೃದಯದಲಿ ಇದೇನಿದು ನದಿಯೊಂದು ಓಡಿದೆ’ ಎಂದು ಹಾಡತೊಡಗುತ್ತಾರೆ. ಹೈಸ್ಕೂಲು ಹೊಸ್ತಿಲು ತುಳಿಯುತ್ತಿದ್ದಂತೆಯೇ ತೊಡುವ ಬಟ್ಟೆಯಿಂದ ಹಿಡಿದು ಹೇರ್‌ಸ್ಟೈಲ್, ನೋಟ, ನಡೆ ನುಡಿ ಎಲ್ಲದರಲ್ಲೂ ಒಂದು ಬಗೆಯ ಐಲು. ಕಾಲೇಜು ಮೆಟ್ಟಿಲೇರಿದರಂತೂ ಮುಗಿದೇ ಹೋಯಿತು. ಕನ್ನಡಿ ಮುಂದೆ ಮುಖ ತೀಡಿಕೊಳ್ಳುತ್ತಾ ಗಂಟೆಗಟ್ಟಲೆ ಕಳೆಯುವುದೂ ಗೊತ್ತಾಗುವುದೇ ಇಲ್ಲ. ವಾಸ್ತವ ಹೀಗಿದ್ದರೂ, ‘ಹೆಣ್ಣುಮಕ್ಕಳು ಅಲಂಕಾರಪ್ರಿಯರು’ ಎಂದು ಹೆಣ್ಣುಮಕ್ಕಳನ್ನು ಸುಖಾಸುಮ್ಮನೆ ಆಡಿಕೊಳ್ಳುತ್ತಾರೆ.

ಹುಡುಗರ ಪಾಲಿಗೆ ಸಿನಿಮಾ ಡೈಲಾಗುಗಳೇ ಭಗವದ್ಗೀತೆ. ಯಾವುದೋ ಸಿನಿಮಾದ ಡೈಲಾಗನ್ನು ತಮ್ಮ ಹುಡುಗಿಯ ಮುಂದೆ, ಇದು ತನ್ನದೇ ಮನಸ್ಸಿನ ಭಾವ ಎನ್ನುವಂತೆ ಒಪ್ಪಿಸುತ್ತಾರೆ. ಪಾಪ, ಆ ಹೈದರಿಗೆ ತಮ್ಮ ಹುಡುಗಿಯರೂ ಕಾಲೇಜ್‌ ಬಂಕ್‌ ಮಾಡಿ ಆ ಸಿನಿಮಾ ನೋಡಿರಬಹುದು ಎನ್ನುವ ಕಲ್ಪನೆಯೇ ಇರುವುದಿಲ್ಲ. ಜಾಣತನವೋ, ಮೂರ್ಖತನವೋ– ಒಟ್ಟಿನಲ್ಲಿ, ಆಕರ್ಷಣೆಯ ಕೇಂದ್ರಬಿಂದು ಆಗಬೇಕೆಂಬ ಹಂಬಲ ಅವರದು.

ಕೃತಿಚೌರ್ಯದ ವಿಷಯವನ್ನೂ ಇಲ್ಲಿಯೇ ಹೇಳಿಬಿಡಬೇಕು. ಕಾದಂಬರಿಗಳಿಂದ, ಕವಿತೆಯ ಪುಸ್ತಕಗಳಿಂದ, ಇಂಟರ್‌ನೆಟ್‌ನಿಂದ– ಹೀಗೆ, ಎಲ್ಲೆಲ್ಲಿಂದಲೋ ಕದ್ದ ಸಾಲುಗಳನ್ನು ಹುಡುಗರು ಪುಸ್ತಕದಲ್ಲಿ ಗೀಚಿ ತಂದು ಹುಡುಗಿಯ ಮುಂದೆ ಹಿಡಿಯುತ್ತಾರೆ. ಅವಳಿಗೋ ಇದೆಲ್ಲ ಹುಚ್ಚಾಟ ಅನ್ನಿಸಿಬಿಡುತ್ತದೆ. ಅನೇಕ ಸಂದರ್ಭಗಳಲ್ಲಿ ಈ ಬೆಳದಿಂಗಳ ಬಾಲೆಗೆ ಸಾಹಿತ್ಯದ ಗಂಧವೇ ಇಲ್ಲ. ಹೀಗಿರುವಾಗ, ‘ಮೈಸೂರ ಮಲ್ಲಿಗೆ’ಯ ಪದ ಅವಳಿಗೆ ಇಷ್ಟವಾಗುವುದು ಹೇಗೆ? ಇನ್ನು ಮೊಬೈಲ್‌ಗಳಲ್ಲಿ ಯಾಂತ್ರಿಕ ಪದಗಳಾಗಿ ಹಳತಾಗಿ ಹೋದ ಸ್ವೀಟ್ ಹಾರ್ಟ್, ಲವ್‌ ಯೂ, ಮಿಸ್‌ ಯೂ ಮೆಸೇಜ್‌ಗಳೂ ತುಂಬಾ ಕಾಲ ಬಾಳಿಕೆ ಬರುವುದಿಲ್ಲ.

ಮೊದಮೊದಲು ಮೆಸೇಜ್‌ಗಳನ್ನು ನೋಡಿ ಮುಖ ಅರಳಿಸುವ ಹುಡುಗಿ ನಂತರದಲ್ಲಿ ಅದೇ ಅದೇ ಮೆಸೇಜುಗಳನ್ನು ನೋಡಿ, ಹುಡುಗನನ್ನು ಪೆಂಗನಂತೆ ನೋಡಲು ಆರಂಭಿಸಿರುತ್ತಾಳೆ. ಪ್ರೀತಿ ಫಲಿಸಲೆಂದು ಹೊಗಳುಭಟ್ಟರಾಗುವ, ಸ್ವತಃ ಹೊಗಳಿಕೊಳ್ಳುವ ಹುಡುಗರಲ್ಲೂ ಹುಡುಗಿಯರು ನಂಬಿಕೆ ತಾಳುವುದಿಲ್ಲ. ಮೇಲುನೋಟಕ್ಕೆ ನಕ್ಕರೂ ಅವಳಲ್ಲಿ ಅವನೆಡೆಗೆ ಸಣ್ಣ ತಾತ್ಸಾರವೊಂದು ಸಿಕ್ಕಿಹಾಕಿಕೊಂಡಿರುತ್ತದೆ. ಪ್ರೀತಿಯ ಅಮಲಿನಲ್ಲಿ ಸಿಕ್ಕಿಕೊಂಡ ಹುಡುಗರಿಗೆ ಇವೆಲ್ಲಾ ಅರ್ಥವಾಗುವುದೇ ಇಲ್ಲ.

ಹುಡುಗಿಯರನ್ನು ಇಂಪ್ರೆಸ್ ಮಾಡಬೇಕೆಂದರೆ ಲುಕ್ ತುಂಬಾ ಮುಖ್ಯ ಎನ್ನುವುದು ಕಾಲೇಜು ಮೆಟ್ಟಿಲು ತುಳಿದ ಬಹುಪಾಲು ಹುಡುಗರ ನಂಬಿಕೆ. ಈ ನಂಬಿಕೆಯ ದಾರಿಯಲ್ಲಿ ಹುಡುಗರಿಗೆ ಸಾಥ್‌ ಕೊಡುವುದು ಬೈಕ್‌ಗಳು. ಹುಡುಗಿ ನೋಡುತ್ತಿದ್ದಾಳೆ ಎಂದರೆ ನೇರವಾಗಿ ಚಲಿಸುವ ಬೈಕ್‌ಗಳೂ ಓರೆಕೋರೆಯಾಗಿ ಓಡುತ್ತವೆ. ಬೈಕ್ ಹತ್ತುವ, ಇಳಿಯುವ, ಬೈಕ್‌ನಲ್ಲಿ ಕುಳಿತು ಹೀರೊನಂತೆ ಕೂಲಿಂಗ್ ಗ್ಲಾಸ್‌ ತೆಗೆಯುವ, ಸಿಗರೇಟ್ ಸೇದುವ ಹುಡುಗರು ಎಷ್ಟೋ ಹುಡುಗಿಯರಿಗೆ ಬಫೂನ್‌ಗಳಂತೆ ಕಾಣಿಸುತ್ತಾರೆ. ಆದರೆ, ತಮ್ಮದೇ ಲೋಕದಲ್ಲಿ ತಲ್ಲೀನರಾದ ಈ ಹೀರೊಗಳು ‘ನಂಗೂ ಬೈಕು ಕಲಿಸಿಕೊಡು’ ಎಂದು ಯಾವಳಾದರೂ ಹುಡುಗಿ ಕೇಳಬಹುದೆಂದು ಸರ್ಕಸ್‌ ಮುಂದುವರಿಸುತ್ತಾರೆ.

ಹುಡುಗಿಯರ ಕಣ್ಣಿಗೆ ಬೀಳಲೆಂದೇ ಕಾಲೇಜು ಮುಂದಿನ ಕಿರು ರಸ್ತೆಗಳಲ್ಲಿ ಕಿರ್ರೆನ್ನುವಂತೆ ಬೈಕ್ ಡ್ರ್ಯಾಗ್‌ ಮಾಡುವ ಹುಡುಗರಿಗೂ ಕಡಿಮೆಯಿಲ್ಲ. ಆದರೆ ಸ್ಟಂಟ್‌ಗಳಿಗೆ ಹುಡುಗಿಯರು ಮಾರುಹೋಗುತ್ತಾರೆ ಎಂದು ಭಾವಿಸುವ ಹುಡುಗರಿಗೆ ಸಿಗುವುದು ‘ಪಡ್ಡೆ’ ಎಂಬ ಹಣೆಪಟ್ಟಿಯಷ್ಟೇ. ಬೈಕ್‌ನಲ್ಲಿ ಡ್ರಾಪ್‌ ಕೊಡುವಂತೆ ಹುಡುಗಿಯನ್ನು ಗೋಗರೆದು ಕರೆದುಕೊಂಡು ಹೋಗುವ ಹುಡುಗರೂ ಇದ್ದಾರೆ. ಇಂಥವರಲ್ಲಿ ಕೆಲವರಿಗೆ ಎದೆಯಲ್ಲಿ ನಡುಕ ಶುರುವಾಗುವುದು ಅರ್ಧ ದಾರಿಯಲ್ಲಿ ಬೈಕ್‌ನಲ್ಲಿನ ಪೆಟ್ರೋಲ್ ಮುಗಿದು ಹೋಗುತ್ತಿರುವ ಸೂಚನೆ ಸಿಕ್ಕಾಗಲೇ. ಮನೆಯಲ್ಲಿ ಕಾಡಿ ಬೇಡಿ ಬೈಕ್ ತೆಗೆಸಿಕೊಂಡಿದ್ದ ಹುಡುಗನಿಗೆ ಪಾಕೆಟ್‌ ಮನಿಗೂ ಬರ. ಹುಡುಗಿ ಮುಂದೆ ಬಿಲ್ಡಪ್‌ ಕೊಟ್ಟಿದ್ದ ಅವನಿಗೆ ದಿಗಿಲಾಗುವುದು ಇಂಥ ಸನ್ನಿವೇಶಗಳಲ್ಲೇ.

ಹಾಗೋ ಹೀಗೋ ಹುಡುಗನ ಇಷ್ಟೆಲ್ಲಾ ಕಿತಾಪತಿಗಳಿಗೆ ಹುಡುಗಿ ಮರುಳಾಗಿ ಮುಗುಳು ನಕ್ಕಳೆನ್ನಿ, ಅಲ್ಲಿಗೆ ಹುಡುಗರ ವರ್ತನೆ ಇನ್ನಷ್ಟು ಅತಿರೇಕಕ್ಕೇರಿರುತ್ತದೆ. ಆಕೆ ತಿರುಗಿ ನೋಡಿ ತುಟಿಯಂಚಲ್ಲಿ ನಕ್ಕಳೆಂದರೆ ಇವರ ಮಾತಿನ ಬಂಡಿಯೂ ಪುರುಸೊತ್ತಿಲ್ಲದೆ ಓಡುತ್ತದೆ. ನುಡಿಯ ಶೈಲಿಯಲ್ಲೇ ಬದಲಾವಣೆ. ಆಕರ್ಷಣೀಯವಾಗಿ ಮಾತನಾಡುವ ಹುಮ್ಮಸ್ಸಿನಲ್ಲಿ ಎಲ್ಲೆ ಇಲ್ಲದೆ ಸಿನಿಮಾ ಡೈಲಾಗ್‌ಗಳು ಒಂದಾದ ಮೇಲೊಂದರಂತೆ ಬಿಚ್ಚಿಕೊಳ್ಳುತ್ತಿರುತ್ತವೆ. ಒಂದೋ ಎರಡೋ ಡೈಲಾಗ್‌ಗಳನ್ನು ಸಹಿಸಿಕೊಂಡ ಹುಡುಗಿಗೆ ನಂತರ ಈ ಡೈಲಾಗ್‌ಗಳು ಹಳಸಿದ ಚಿತ್ರಾನ್ನ ಅನ್ನಿಸತೊಡಗುತ್ತದೆ.

ಹುಡುಗರಿಗೆ ಹುಡುಗಿಯರನ್ನು ಒಲಿಸಿಕೊಳ್ಳಲು ಭಯಾನಕ ಐಡಿಯಾಗಳೂ ಹೊಳೆಯುತ್ತವೆ. ಜಿಮ್‌ ಬಾಡಿ ನೋಡಿದರೆ ಹುಡುಗಿಯರು ಮರುಳಾಗುತ್ತಾರೆ ಎಂಬ ಹುಚ್ಚು ಆಸೆಯೊಂದಿಗೆ  ಸೂರ್ಯೋದಯ ನೋಡಿ ಅಭ್ಯಾಸವೇ ಇರದ ಹುಡುಗನೊಬ್ಬ ಡೊಳ್ಳು ಹೊಟ್ಟೆ ಕರಗಿಸಲು ಬೆಳಗ್ಗಿನ ಜಾವ ನಾಲ್ಕು ಗಂಟೆಗೇ ಎದ್ದು ಬೆವರಿಳಿಸಿಕೊಂಡು ಎರಡು ತಿಂಗಳಿಗೆ ನಾಲ್ಕು ಕೇಜಿ ಇಳಿಸಿಕೊಳ್ಳುತ್ತಾನೆ. ಜಿಮ್ ಬಾಡಿ ತೋರಲೆಂದೇ ಮೈಗಂಟುವ ಬಟ್ಟೆಯನ್ನೂ ತೊಟ್ಟುಕೊಳ್ಳುತ್ತಾನೆ. ಹುಡುಗಿ ಎದುರಾದಾಕ್ಷಣ ಕೈ ರಟ್ಟೆಗಳನ್ನು ಒಮ್ಮೆ ನೋಡಿಕೊಂಡು ಹಮ್ಮಿನಿಂದ ಹೆಜ್ಜೆ ಹಾಕುತ್ತಾನೆ. ಆದರೆ ಅವಳೋ, ‘ದಾಂಡಿಗ’ ಎನ್ನುವ ಒಂದೇ ಶಬ್ದದಲ್ಲಿ ಅವನ ಜಿಮ್‌ಬಾಡಿಯನ್ನು ನಿವಾಳಿಸಿಬಿಡುತ್ತಾಳೆ.

ಪ್ರೇಮದ ವಿಷಯದಲ್ಲಿ ಹುಡುಗಿಯರು ಮಾಡರ್ನ್‌ ಆದರೂ ಹುಡುಗರು ಮಾತ್ರ ಓಬೀರಾಯನ ಕಾಲದಲ್ಲೇ ಇದ್ದಾರೆ. ಹಳೆಯ ಕಾಲದ ಸಿನಿಮಾಗಳ ಟೆಕ್ನಿಕ್‌ಗಳೇ ಈಗಲೂ ಅವರ ಪ್ರೇಮದ ಸೂತ್ರಗಳು. ತಾನಿಷ್ಟಪಟ್ಟ ಹುಡುಗಿ ಅಲ್ಲಿ ಹಾದುಹೋಗುತ್ತಿದ್ದಾಳೆಂದರೆ ಸಾಕು, ವೀರಾವೇಶದಿಂದ ಇತರರೊಂದಿಗೆ ಕಾರಣವಿಲ್ಲದೆಯೇ ಜಗಳಕ್ಕೆ ಬೀಳುವುದು ಅಥವಾ ತನ್ನ ಹುಡುಗಿಯನ್ನು ಯಾರಾದರೂ ರೇಗಿಸಿದರೆ, ಅವಳ ಮುಂದೆಯೇ ಅಂಗಿ ತೆಗೆದು ಜಗಳಕ್ಕೆ ಬೀಳುವ ಹುಡುಗರು ಇನ್ನೂ ಇದ್ದಾರೆ. ‘ಓಂ’, ‘ಜೋಗಿ’ ಜಮಾನದ ಈ ತುಂಡುಗಳಿಗೆ ಏನು ಹೇಳುವುದು?

ತನ್ನ ಹುಡುಗ ಗಂಭೀರವದನ ಆಗಿರಬೇಕು, ತನ್ನೊಂದಿಗೆ ಮಾತ್ರ ಮನಸೋಇಚ್ಛೆ ನಡೆದುಕೊಳ್ಳಬೇಕು ಎಂದು ಬಯಸುವುದು ಹುಡುಗಿಯ ಸಹಜ ಗುಣ. ಆದರೆ ಹುಡುಗ ತದ್ವಿರುದ್ಧ. ಪೋಲಿ ಜೋಕುಗಳನ್ನೂ ಹುಡುಗಿಯರ ಗುಂಪಿನ ಮಧ್ಯೆ ತೇಲಿಸಿ ನಕ್ಕುಬಿಡುವ ಅವನು ಹುಡುಗಿ ದೃಷ್ಟಿಯಲ್ಲಿ ಇಂಚಿಂಚೇ ಇಳಿದುಹೋಗಿರುತ್ತಾನೆ.

ಪದೇ ಪದೇ ಕರೆ ಮಾಡಿ ‘ಎಲ್ಲಿದ್ದೀಯಾ, ಊಟ ಮಾಡಿದ್ದೀಯಾ, ಯಾವ ಡ್ರೆಸ್ ಹಾಕಿಕೊಂಡಿದ್ದೀಯಾ’ ಎಂದು ಕೇಳುವ ಹುಡುಗನ ‘ಪೊಸೆಸಿವ್‌ನೆಸ್’ ಹುಡುಗಿಗೆ ಕಿರಿಕಿರಿಯಾಗುತ್ತದೆ. ಫೋನ್ ಕಟ್ ಮಾಡಿ, ‘ಅಪ್ಪ ಇದ್ದಾರೆ’ ಎಂದು ಸುಳ್ಳು ಮೆಸೇಜ್ ಮಾಡುವಾಗಲೂ ಅವಳ ಒಳ ರೇಜಿಗೆ ಇವನಿಗೆ ಅರ್ಥವಾಗುವುದೇ ಇಲ್ಲ. ಇನ್ನು, ಹುಡುಗಿಯರ ಮಧ್ಯೆ ಸೇರಿಕೊಂಡು ಎಲ್ಲರ ಮಾತಿಗೂ ತಾಳ ಹಾಕುವ ಹುಡುಗನು ಈಕೆಯ ದೃಷ್ಟಿಯಲ್ಲಿ ಒಲ್ಲದವನು. ದೂರ ಎಲ್ಲೋ ಕೈಕಟ್ಟಿ ನಿಲ್ಲುವ ಒಂಟಿ ಹುಡುಗನೇ ಅವಳ ಮನಸ್ಸನ್ನು ಕಲಕಿಬಿಟ್ಟಿರುತ್ತಾನೆ. ಈ ಸೂಕ್ಷ್ಮವನ್ನೇ ಅರಿಯದ ಹುಡುಗನ ಮನಸ್ಸು ಮಾತ್ರ ಹುಡುಗಿಯನ್ನು ಒಲಿಸಿಕೊಳ್ಳುವ ಸುತ್ತಲೇ ಚಿಂತನೆ ನಡೆಸುತ್ತ ವಿಲವಿಲನೆ ಒದ್ದಾಡುತ್ತಿರುತ್ತದೆ.

ಹಾಗೆ ನೋಡಿದರೆ, ಹೆಣ್ಣನ್ನು ಒಲಿಸಿಕೊಳ್ಳುವ ಭರದಲ್ಲಿ ಗಂಡುಗಳು ಕಾಮಿಡಿ ಪೀಸ್‌ಗಳಾಗುವುದು ಹೊಸತೇನೂ ಅಲ್ಲ. ದಮಯಂತಿಯ ಒಲಿಸಿಕೊಳ್ಳಲು ಅಷ್ಟ ದಿಕ್ಪಾಲಕರು ನಳನಂತೆ ವೇಷಾಂತರಿಗಳಾಗಲಿಲ್ಲವೇ? ಅನಸೂಯೆಯ ಮುಜುಗರಕ್ಕೆ ಸಿಕ್ಕಿಸಲು ಬಂದ ತ್ರಿಮೂರ್ತಿಗಳು ಕಂದಮ್ಮಗಳಾಗಿ ಕುಂಯ್‌ ಕುಂಯ್‌ ಎನ್ನಲಿಲ್ಲವೇ? ಇಂದ್ರನದಂತೂ ಮತ್ತೂ ಫಜೀತಿ, ಅವನ ಸಾಸಿರ ಕಣ್ಣುಗಳೇ ಚಪಲದ ಕಥೆ ಹೇಳುವಂತಿವೆ. ಪುರಾಣ ಕಥೆಗಳ ಚಪಲ ಚೆನ್ನಿಗರಾಯರು ವರ್ತಮಾನದಲ್ಲೂ ಇದ್ದಾರೆ.

ಒಂದಂತೂ ನಿಜ. ಹುಡುಗಿಯರ ಹಿಂದೆ ಸುತ್ತುವ ಹುಡುಗರನ್ನು ಗಮನಿಸಿದರೆ, ಇವರ ಮುಂದೆ ‘ಹಾಸ್ಯೋತ್ಸವ’ಗಳೆಲ್ಲ ಕಳಾಹೀನ. ವಿಪರ್ಯಾಸ ಎಂದರೆ, ಇಂಥ ಕಾಮಿಡಿ ಪೀಸ್‌ಗಳಲ್ಲೇ ಒಬ್ಬರನ್ನು ‘ಪರವಾಗಿಲ್ಲ’ ಎಂದು ಒಪ್ಪಿಕೊಳ್ಳಬೇಕಾದ ದುರವಸ್ಥೆ ಹುಡುಗಿಯರದಾಗಿದೆ. ‘ನನಗೂ ಒಬ್ಬ ಗೆಳೆಯ ಬೇಕು’ ಎನ್ನುವ ಗೀತೆ, ಗೆಳೆಯನ ಹಂಬಲವಷ್ಟೇ ಆಗಿರದೆ, ಆದರ್ಶ ಗೆಳೆಯರ ಕೊರತೆಯ ವಿಷಾದಗೀತೆಯೂ ಆಗಿದೆ.

ಅಂದಹಾಗೆ, ಈ ಹುಡುಗರಿಗೆ ಬುದ್ಧಿ ಬರುವುದು ಯಾವಾಗ? ‘ನಾಯಿ ಬಾಲ ನೆಟ್ಟಗಾಗುತ್ತಾ?’ ಎನ್ನುತ್ತಾಳೆ ಗೆಳತಿ. ‘ಛೇ ಛೇ ಹೀಗೆಲ್ಲ ಹೇಳಬಾರದು. ಹುಡುಗರನ್ನು ಹೀಗೆಲ್ಲ ಯಾವಯಾವುದಕ್ಕೋ ಹೋಲಿಸಬಾರದು...’ ಎಂದರೆ ಅವಳು
ಕೇಳುವುದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT