ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಗಾರರು ಒಗ್ಗೂಡಲಿ

ಮಹಿಳೆಯರಿಗೆ ಸಲಹೆ ನೀಡಿದ ಸಂಶೋಧಕಿ ಗಾಯತ್ರಿ ನಾವಡ
Last Updated 28 ನವೆಂಬರ್ 2015, 5:37 IST
ಅಕ್ಷರ ಗಾತ್ರ

ರತ್ನಾಕರವರ್ಣಿ ವೇದಿಕೆ (ವಿದ್ಯಾಗಿರಿ, ಮೂಡುಬಿದಿರೆ): ‘ಮಹಿಳೆಯರ ಹಕ್ಕಿ­ಗಾಗಿ ನಡೆಯುವ ಹೋರಾಟಗಳನ್ನು ಜಾತಿ, ಧರ್ಮ, ವರ್ಗವನ್ನು ಮುಂದಿ­ಟ್ಟುಕೊಂಡು ಒಡೆಯುವ ಕೆಲಸ ಮಾಡಲಾಗುತ್ತಿದೆ. ಮಹಿಳಾ ಹೋರಾಟ­ಗಾರರನ್ನು ಒಟ್ಟುಗೂಡಿಸುವ ಕೆಲಸವನ್ನು ಮಾಡಬೇಕಿದೆ’ ಎಂದು ಹಿರಿಯ ಸಂಶೋಧಕಿ ಡಾ. ಗಾಯತ್ರಿ ನಾವಡ ಅಭಿಪ್ರಾಯ­ಪಟ್ಟರು.

ಇಲ್ಲಿ ನಡೆಯುತ್ತಿರುವ 12ನೇ ನುಡಿ­ಸಿರಿಯಲ್ಲಿ ಭಾಗವಹಿಸಿ ‘ಮಹಿಳಾ ಚಳ­ವಳಿ: ಹೊಸತನದ ಹುಡುಕಾಟ’ ವಿಷ­ಯದ ಕುರಿತು ಮಾತನಾಡಿದ ಅವರು, ‘ರಾಜಕೀಯ, ಸಾಮಾಜಿಕ ಮತ್ತು ಮಾ­ಧ್ಯಮ ಪ್ರೇರಿತವಾಗಿ ಮಹಿಳಾ ಹೋರಾ­ಟ­ಗಳು ದಿಕ್ಕು ತಪ್ಪುತ್ತಿವೆ. ಹೋರಾಟ­ಗಳನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕಾಗಿದೆ’ ಎಂದು ಹೇಳಿ­ದರು.

‘ಧರ್ಮಾಂಧತೆಯ ಭಯೋ­ತ್ಪಾದನೆ­ಯಿಂದಾಗಿ ಮಹಿಳೆ ಕಷ್ಟ ಪಡುತ್ತಿದ್ದಾಳೆ. ಧರ್ಮಗಳನ್ನು ಮೀರಿ ಲಿಂಗತ್ವದ ನೆಲೆಯಲ್ಲಿ ಒಟ್ಟಾಗಿ ಈ ಸಮಸ್ಯೆಯ ವಿರುದ್ಧ ಹೋರಾಡಬೇಕಿದೆ. ದೆಹಲಿ­ಯಲ್ಲಿ ನಿರ್ಭಯಾ ಪ್ರಕರಣವನ್ನು ವಿರೋಧಿಸಿ ನಡೆಸಿದ ಪ್ರತಿಭಟನೆ, ಇತರ ಅತ್ಯಾಚಾರ ಪ್ರಕರಣಗಳು ನಡೆದಾಗ ಏಕೆ ಕಾಣಲಿಲ್ಲ ಎಂದು ಪ್ರಶ್ನಿಸಿದ ಅವರು, ‘ರಾಜಕೀಯ ಲಾಭಕ್ಕಾಗಿ ಮಹಿಳಾ ಹೋರಾಟಗಳನ್ನು ಹಾದಿತಪ್ಪಿಸುವ ಕೆಲಸ ನಿಲ್ಲಬೇಕು’ ಎಂದು ಪ್ರತಿಪಾದಿಸಿದರು.

‘ಮಹಿಳೆಯರ ಮೇಲೆ ನಡೆಯು­ತ್ತಿರುವ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಈ ಪ್ರಕರಣಗಳಿಗೆ ಕಡಿವಾಣ ಹಾಕಬೇಕೆಂದರೆ ಮೊದಲು ಯುವಕ­ರನ್ನು ಹೆಣ್ಣುಮಕ್ಕಳನ್ನು ಗೌರವದಿಂದ ನೋಡುವುದನ್ನು, ಗ್ರಹಿಸುವುದನ್ನು ಕಲಿಸಬೇಕಾಗಿದೆ. ಇದು ಮನೆಗಳಿಂದಲೇ ನಡೆಯಬೇಕು. ಅಲ್ಲದೆ, ಮಹಿಳಾ ಸಾಗಾಟವೂ ಇಂದು ಸಮಾಜಕ್ಕೆ ಕಾಡುತ್ತಿರುವ ದೊಡ್ಡ ಸಮಸ್ಯೆ. ಇದನ್ನು ಬಗೆಹರಿಸಲು ಹೋರಾಟಗಳು ನಡೆಯಬೇಕಿದೆ’ ಎಂದು ಹೇಳಿದರು.

‘ಸ್ವಾತಂತ್ರ್ಯಪೂರ್ವದ ಹೋರಾಟ­ದಿಂದ ಹಿಡಿದು, ಸ್ವಾತಂ­ತ್ರ್ಯೋತ್ತರ ಹೋರಾಟಗಳಲ್ಲಿ ಮಹಿಳೆ­ಯರು ಸಕ್ರಿಯ­ರಾಗಿ ಭಾಗವಹಿಸಿದ್ದಾರೆ. ಮಹಿಳೆಯರು ಬೀದಿಗಿಳಿಯದೆ ಮನೆ­ಯೊಳಗಿದ್ದು­ಕೊಂಡೇ ಪ್ರತಿಭಟನೆ ನಡೆಸಿ­ದ್ದಾರೆ. ಮಹಿಳಾ ಪರ ಪುರುಷರಿಂದ ಮಹಿಳಾ ಹೋರಾಟಗಳು ಬೆಳೆದು ಬಂದಿದೆ ಅದನ್ನು ನಾವು ನೆನಪಿನಲ್ಲಿಟ್ಟು­ಕೊಳ್ಳಬೇಕಾಗಿದೆ’ ಎಂದು ಹೇಳಿದರು.

‘ಮಹಿಳೆಯರು ಅಧಿಕಾರ ಪಡೆದರೆ ಆಕೆಯ ಪತಿ, ಪುತ್ರರು ಅಧಿಕಾರ ನಡೆಸು­ತ್ತಾರೆ ಎಂದು ವಾದಿಸುವವರಿಗೆ, ಅನಕ್ಷ­ರಸ್ಥ ಗ್ರಾಮಸ್ಥನೊಬ್ಬ ಊರಿನ ಹಿರಿಯರ, ಸ್ವಾಮೀಜಿಗಳ ನಿರ್ದೇಶನ­ದಂತೆ ಅಧಿಕಾರ ನಡೆಸುತ್ತಿರುವುದು ಯಾಕೆ ಕಾಣಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಇದ್ದರು.

ದೇಶದಲ್ಲಿ ಅಸಹಿಷ್ಣುತೆ ಜಾಸ್ತಿ ಆಗುತ್ತಿದೆ ಎಂದು ವಿರೋಧಿಸಿ ಅನೇಕರು ಪ್ರಶಸ್ತಿಗಳನ್ನು ಮರಳಿಸುತ್ತಿದ್ದಾರೆ. ಆದರೆ, ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಹೀಗೆ ಏಕೆ ಮಾಡಲಿಲ್ಲ?
ಡಾ. ಗಾಯತ್ರಿ ನಾವಡ,
ಹೋರಾಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT