ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುರಾಣಗಳ ಪುನರ್‌ಸಂಯೋಜನೆ ಅಗತ್ಯ’

Last Updated 12 ಅಕ್ಟೋಬರ್ 2014, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಪುರಾಣಗಳನ್ನು ಗರ್ಭಗುಡಿಯ ಸಂಸ್ಕೃತಿ­ಯಿಂದ ಹೊರತಂದು ಪುನರ್‌ ಸಂಯೋಜಿಸುವ ಮತ್ತು ಪುನರ್‌ ವ್ಯಾಖ್ಯಾನಿಸುವ ಅಗತ್ಯವಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಭಾಗವತರು ಸಾಂಸ್ಕೃತಿಕ ಸಂಘಟನೆಯು ನಯನ ಸಭಾಂಗಣ­ದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಲಕ್ಷ್ಮಣದಾಸ್‌ 68: ‘ರಂಗ ಸಂಕೀರ್ತನ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮೊದಲು ಜನಜನಿತವಾಗಿದ್ದ ಪುರಾಣಗಳು ಕ್ರಮೇಣ ಗರ್ಭಗುಡಿಯನ್ನು ಸೇರಿ, ಕೇವಲ ಕೆಲವೇ ಜನರ ಸ್ವತ್ತಾದವು. ಆದರೆ, ಈಗ ಪುರಾಣಗಳನ್ನು ಗರ್ಭಗುಡಿ ಸಂಸ್ಕೃತಿಯಲ್ಲಿ ಕೊಳೆಯಲು ಬಿಡದೆ,  ಅವುಗಳನ್ನು ಮತ್ತೆ ಜನರ ಮಧ್ಯೆ ತರಬೇಕು. ಆಗ, ಜನರೇ ಹೊಸದಾಗಿ ಕಟ್ಟುತ್ತಾರೆ’ ಎಂದು ನುಡಿದರು.


‘ಇಂದಿನ ಎಲ್ಲಾ ಕ್ಷೇತ್ರಗಳಲ್ಲಿಯೂ ನಿರಂತರವಾಗಿ ಸಕಾ­ರಾತ್ಮಕ ಪ್ರಯೋಗಗಳು ನಡೆದು ಒಂದು ಸೀಮೋಲ್ಲಂಘನವಾಗಬೇಕಿದೆ. ಇಂದು ಎಲ್ಲಾ ಕಲೆಗಳು ಸಮಕಾಲೀನವಾಗಬೇಕು. ಇಲ್ಲವಾದರೆ, ಅವುಗಳು ಸಂಗ್ರಹಾಲಯವನ್ನು ಸೇರುತ್ತವೆ’ ಎಂದರು.

‘ಪುರಾಣಗಳ ಬಗ್ಗೆ ಬೇರೆ ಬೇರೆ ವಿದ್ವಾಂಸರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಪುರಾಣ­ಗಳನ್ನು  ನಿರಾಕರಣೆ ಮಾಡುವುದರ ಬದಲು ಅವು­ಗಳನ್ನು ಪುನರ್‌ ವ್ಯಾಖ್ಯಾನಿಸಬೇಕು. ರಾಮಾಯಣದ ಭರತನನ್ನು ಉದಾಹರಣೆಯಾಗಿ ತೆಗೆದು­ಕೊಂಡು ಕುರ್ಚಿ­ಯಲ್ಲಿ ಕುಳಿತುಕೊಳ್ಳದೆ ಆಡಳಿತ ನಡೆಸುವ ಪಾಠವನ್ನು ಇಂದು ಕುರ್ಚಿಯ ಹಿಂದೆ ಓಡುವವರಿಗೆ ಅರ್ಥವತ್ತಾಗಿ ತಿಳಿಸಬಹುದು’ ಎಂದು ಹೇಳಿದರು.

‘ಇಂದಿನ ರಂಗಭೂಮಿ, ಸಾಹಿತ್ಯ ಮತ್ತು ವಿವಿಧ ಕಲೆ­ಗಳು ಪುರಾಣಗಳನ್ನು ಪುನರ್‌ ಸಂಯೋಜಿಸುವತ್ತ ಸಾಗಬೇಕಿದೆ’ ಎಂದರು.
‘ಡಾ.ಲಕ್ಷ್ಮಣದಾಸ್‌ ಅವರದು ವಿಶೇಷ ಸಾಧನೆ­ಯಾಗಿದೆ. ಅವರು ಕೇವಲ ಹರಿಕಥೆ ವಿದ್ವಾಂಸರಾಗಿ ಮುಖ್ಯ­ರಾಗುವುದಿಲ್ಲ ಬದಲಿಗೆ ಹರಿಕಥೆಗೆ ಸಾಮಾಜಿಕ ರೂಪವನ್ನು ನೀಡಿದ ವಿಶೇಷ ಸಾಧಕ’ ಎಂದರು.

‘ದಲಿತರಾಗಿರುವ ಲಕ್ಷ್ಣಣದಾಸ್‌ ಅವರು  ಒಂದು ಸಾಮಾಜಿಕ ಸೀಮೋಲ್ಲಂಘನ ಮಾಡಿ, ಹರಿಕಥೆಯನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು, ಅದನ್ನು ಜನಜನಿತ ಮಾಡುವ ಅಪೂರ್ವ ಕಾಯಕವನ್ನು ಕೈಗೊಂಡಿದ್ದಾರೆ’ ಎಂದು ಹೇಳಿದರು.

‘ನಮ್ಮ ದೇಶದಲ್ಲಿ ಇನ್ನೂ 1.92 ಕೋಟಿ ಜನರು ಪಾಯಿಖಾನೆಯನ್ನು ಕೈಯಿಂದಲೇ ಎತ್ತುತ್ತಿರುವುದು ದುರಂತವಾಗಿದೆ. ಆದರೆ, ಇಂತಹ ಸಂದರ್ಭದಲ್ಲಿ ಲಕ್ಷ್ಣಣದಾಸ್‌ ಅವರದು ವಿಶೇಷ ಸಾಧನೆಯೇ ಆಗಿದೆ. ದಲಿತ ಪ್ರತಿಭೆಗಳಿಗೆ ಸಾಮಾಜಿಕ ನಿಷೇಧವನ್ನು ವಿಧಿಸಿ­ರುವ ಇಂತಹ ಸಂದರ್ಭದಲ್ಲಿ 20 ನೇ ಶತಮಾನವು ಅನೇಕ ಸಾಮಾಜಿಕ ಸೀಮೋಲ್ಲಂಘನೆಗಳಿಗೆ ದಾರಿ ಮಾಡಿ­ಕೊಟ್ಟಿದೆ’ ಎಂದು ಹೇಳಿದರು.

‘ಅನೇಕ ದಲಿತ ಪ್ರತಿಭೆಗಳು ಸಾಮಾಜಿಕ ಅವಮಾನ­ಗಳನ್ನು ಅನುಭವಿಸಿ ಸ್ವಾಭಿಮಾನವನ್ನಾಗಿ ರೂಪಾಂತರಿ­ಸಿಕೊಂಡು ಅಪೂರ್ವವಾದ ಸಾಧನೆ ಮಾಡಲು ಈ 20 ನೇ ಶತಮಾನವು ಪೂರಕವಾಗಿದೆ’ ಎಂದರು.  

ರಂಗಕರ್ಮಿ ಶ್ರೀನಿವಾಸ್‌ ಜಿ.ಕಪ್ಪಣ್ಣ  ಅವರು ಲಕ್ಷ್ಮಣ­ದಾಸ್‌ ಅವರ ‘ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ವೈಭವ’ ನಾಟಕ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT