ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನುಷ್ಯ ಪ್ರೀತಿ ಇಲ್ಲದ ಅಭಿವೃದ್ಧಿ ಅಪಾಯಕಾರಿ’

Last Updated 14 ಆಗಸ್ಟ್ 2014, 8:18 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಅಮೆರಿಕಾ ಮಾದರಿ ಅಭಿವೃದ್ಧಿ ಎನ್ನುವ ಭ್ರಮೆ­ಯಲ್ಲಿ ಇಲ್ಲಿನ ನಗರಗಳು ರಾಕ್ಷಸ ನಗರ­ಗಳಾಗಿ ಬೆಳೆಯುತ್ತಿವೆ. ಈ ಬಗೆಯ ಮನುಷ್ಯ ಪ್ರೀತಿ ಇಲ್ಲದ ಬೆಳ­ವಣಿಗೆ ಅಪಾಯಕಾರಿ’ ಎಂದು ಹಿರಿಯ ಸಾಹಿತಿ ಡಾ.ಪಿ.ವಿ.ನಾರಾಯಣ್ ಅಭಿಪ್ರಾಯಪಟ್ಟರು.

ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಕಾಲೇಜಿನ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾ­ರಂಭ -ಅವರು ಮಾತನಾಡಿದರು.

‘ಬದುಕನ್ನು ಪ್ರೀತಿಸುವ ಮತ್ತು ನೆಲದ ಸಂಸ್ಕೃತಿಯ ಅರಿವು ಹೊಂದಿರದ ಸಮಾಜ ಇಂದು ನಿರ್ಮಾಣ­ವಾಗುತ್ತಿದೆ. ದೇಶದ ಆರ್ಥಿಕ ತಜ್ಞರು, ರಾಜಕಾರಣಿಗಳು ದೊಡ್ಡ ಭ್ರಮೆಯಲ್ಲಿ­ದ್ದಾರೆ. ಯುವಶಕ್ತಿ ನಗರಗಳತ್ತ ಮುಖ­ಮಾಡಿದೆ. ನೈಜ ದೇಶಾಭಿವೃದ್ಧಿ ಹಳ್ಳಿ­ಗಳ ಮುನ್ನಡೆಯನ್ನು ಅವಲಂಬಿಸಿ­ರು­ತ್ತದೆ. ವಿದ್ಯಾರ್ಥಿಗಳು ಹಳ್ಳಿಯ ಮಹತ್ವ ಅರಿಯಬೇಕು. ಅಲ್ಲಿ ಭವಿಷ್ಯತ್ತನ್ನು ಕಟ್ಟಿಕೊಳ್ಳುವ ಚಿಂತನೆ ಮಾಡಬೇಕು’ ಎಂದರು.

ಎಂಇಎಸ್ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಜನಾರ್ಧನ್ ಮಾತ­ನಾಡಿ, ‘ಓದಿನ ಜತೆ ವ್ಯಕ್ತಿತ್ವ ಬೆಳವ­ಣಿ­ಗೆಗೆ ಮಾನ್ಯತೆ ಕೊಡಬೇಕು. ಇಂದು ಮಾಧ್ಯಮ­ಗಳ ಭರಾಟೆಯಲ್ಲಿ ಮನ­ರಂಜನೆ ಪ್ರಧಾನವಾಗಿ ಮಾಹಿತಿ ಗೌಣ­ವಾಗು­ತ್ತಿದೆ. ಆದರೆ, ಮನಸ್ಸನ್ನು ನಿಗ್ರಹಿ­ಸುವ ಮೂಲಕ ಸಮಕಾಲೀನ ಬದಲಾ­ವಣೆಗಳು ಮತ್ತು ಬೆಳವಣಿಗೆಗೆ ಪೂರಕ­ವಾಗಿ ಕೌಶಲಗಳನ್ನು ಹೊಂದುವುದು ವಾಣಿಜ್ಯ ಮತ್ತು ನಿರ್ವಹಣಾ ವಿದ್ಯಾರ್ಥಿ­ಗಳಿಗೆ ಮುಖ್ಯ’ ಎಂದರು.

ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಬಸವರಾಜು ಮಾತನಾಡಿ, ‘ವಿವೇಕ ವಿದ್ಯಾವಂತರ ಅಸ್ತ್ರವಾಗ­ಬೇಕು. ಅದನ್ನು ಬಳಸಿಕೊಳ್ಳುವ ಕೌಶ­ಲ­ವನ್ನು ಶಿಕ್ಷಣ ಒದಗಿಸಿಕೊಡಬೇಕು. ಯುವಜನತೆ ಬದುಕನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಚಿಂತನೆ, ಅನು­ಷ್ಠಾನ ಮತ್ತು ಅನುಭವಗಳು ವಿದ್ಯಾರ್ಥಿ ಬದುಕಿನ ನೈತಿಕ ಪ್ರಜ್ಞೆ­ಯನ್ನು ಸದಾ ಜಾಗೃತಗೊಳಿಸುತ್ತವೆ’ ಎಂದರು.

ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಎಚ್.ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಜೆ.ರಾಜೇಂದ್ರ, ಮಾಜಿ ನಿರ್ದೇಶಕ ಜೆ.ನಾಗೇಂದ್ರ­ಸ್ವಾಮಿ, ಆರ್‌ಎಲ್‌­ಜೆಐಟಿ ಪ್ರಾಂಶು­ಪಾಲ ಡಾ.ನಂದಕುಮಾರ್, ಮಾನವ ಸಂಪನ್ಮೂಲ ಅಧಿಕಾರಿ ಯತೀಶ್, ನ್ಯಾಕ್ ಸಂಯೋಜಕ ವೆಂಕಟರೆಡ್ಡಪ್ಪ­ಚೆಟ್ಟಿ, ಪ್ರಾಂಶುಪಾಲ ಪ್ರೊ.ಎಚ್.­ಎಸ್.ನಾರಪ್ಪ, ಉಪಪ್ರಾಂಶುಪಾಲ ಜೆ.ವಿ. ಚಂದ್ರಶೇಖರ್, ವಿಭಾಗ ಮುಖ್ಯಸ್ಥ ಕೆ. ದಕ್ಷಿಣಾಮೂರ್ತಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಕೆ.ಆರ್.­ರವಿಕಿರಣ್, ಎನ್‌ಎಸ್‌ಎಸ್ ಅಧಿಕಾರಿ ಎಂ.ಚಿಕ್ಕಣ್ಣ, ಸ್ಥಾನಾಧಿಕಾರಿ ಪಿ.ಚೈತ್ರಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT