ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಕ್ತ ಮನಸ್ಸಿನ ಸಂಶೋಧನೆಯೇ ಅಪರಾಧ’

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ–ಸಾಹಿತ್ಯ ಸಮ್ಮೇಳನ
Last Updated 10 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಉಜಿರೆ: ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ನಾವು ವಿಶಾಲ ಮನೋಭಾವವನ್ನು ಕಳೆದುಕೊಂಡು ಕುಬ್ಜರಾಗುತ್ತಿದ್ದೇವೆ. ಇಂದಿನ ವಿಚಿತ್ರವಾದ ಅಸಹಿಷ್ಣುತೆ ಎಲ್ಲ ಸಮಾಜದಲ್ಲಿಯೂ ಇದೆ. ಮುಕ್ತ ಮನಸ್ಸಿನಿಂದ ಇಂದು ಸಂಶೋಧನೆ ಮಾಡುವುದೇ ಅಪರಾಧವಾಗಿದೆ ಎಂದು ಹಿರಿಯ ಸಂಶೋಧಕ ಡಾ.ಷ.ಶೆಟ್ಟರ್ ಹೇಳಿದರು.

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಪ್ರಯುಕ್ತ ಗುರುವಾರ ನಡೆದ 83ನೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ‘ಪ್ರಬುದ್ಧ ಪ್ರಜಾಪ್ರಭುತ್ವದ ಮೂಲ ಗುಣ ಸಹಿಷ್ಣುತೆ ಆಗಿದೆ. ಈಗ ಯಾವುದೇ ವಿಚಾರ ಮಂಡನೆ ಮಾಡಬೇಕಾದರೂ ಅತೀವ ವೇದನೆಯಾಗುತ್ತಿದೆ. ನಾನು ಇನ್ನೂ ಬರೆಯುತ್ತಿದ್ದರೂ ಆತಂಕದಿಂದಲೇ ಬರೆಯುತ್ತಿದ್ದೇನೆ. ಆದರೆ ಜನರು ನನ್ನನ್ನು ನೋಯಿಸಿದರೆ ಬರೆಯುವುದನ್ನೇ ನಾನು ಬಿಡಬೇಕಾಗುತ್ತದೆ’ ಎಂದು ಶೆಟ್ಟರ್ ಹೇಳಿದರು.

ಸಂಸ್ಕೃತ ಪುರಾತನವಾದ ಮತ್ತು ಭವ್ಯ ಭಾಷೆ ಆಗಿದ್ದರೂ ಅದಕ್ಕೆ ಸ್ವಂತ ಲಿಪಿ ಇಲ್ಲದೆ ಹೆಳವನ ಭಾಷೆ ಆಗಿತ್ತು. ಕೇವಲ ಮೌಖಿಕ ಭಾಷೆಯಾಗಿತ್ತು. ಭಾಷೆಯ ವ್ಯವಹಾರ ಮೊದಲು ಪ್ರಾರಂಭವಾದದ್ದು ಕರ್ನಾಟಕದಲ್ಲೇ ಎಂದರು. ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಧರ್ಮಸ್ಥಳದಲ್ಲಿರುವ ಪುರಾತನ ಹಸ್ತಪ್ರತಿಗಳನ್ನು ಆಸಕ್ತರ ಬಳಕೆಗೆ ನೀಡಲಾಗುತ್ತಿದೆ. ಸಾಕಷ್ಟು ಜನರು ಇದರ ಸಹಾಯದಿಂದ ಸಂಶೋಧನೆ ನಡೆಸುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಪ್ರಧಾನ್ ಗುರುದತ್ ಮಾತನಾಡಿ, ಧರ್ಮ ಮತ್ತು ಸಾಹಿತ್ಯಕ್ಕೆ ನಿಕಟವಾದ ಸಂಬಂಧ ಇದೆ. ವಸ್ತುನಿಷ್ಠವಾಗಿ ನಾವು ಧರ್ಮವನ್ನು ಆಚರಣೆ ಮಾಡಬೇಕು. ಅಸಹಿಷ್ಣುತೆಗೆ ಪರಿಹಾರ ಮಾರ್ಗ ಧರ್ಮದಲ್ಲಿದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಭಾರತೀಯ ಸಂಸ್ಕೃತಿಯ ಸಾರ ಅಡಗಿದೆ. ಧರ್ಮದ ಅನುಷ್ಠಾನದಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ, ಹಿರಿಯ ಪತ್ರಕರ್ತ ರವಿ ಹೆಗಡೆ ಮತ್ತು ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ ಸಾರ್ಥಕ ಬದುಕಿಗೆ ಸಾಹಿತ್ಯದ ಕೊಡುಗೆ ಬಗ್ಗೆ ಉಪನ್ಯಾಸ ನೀಡಿದರು.

ಚೆನ್ನೈ ಸಂತ್ರಸ್ತರಿಗೆ  ₹ 50 ಲಕ್ಷ ನೆರವು
ಉಜಿರೆ: ಚೆನ್ನೈನಲ್ಲಿ ಸುರಿದ ಭಾರಿ ಮಳೆಯಿಂದ ಸಂಕಷ್ಟಕ್ಕೊಳಗಾದವರಿಗೆ ತಕ್ಷಣದ ಪರಿಹಾರವಾಗಿ ಧರ್ಮಸ್ಥಳದ ವತಿಯಿಂದ ₹ 50 ಲಕ್ಷ ಮೊತ್ತದ ನೆರವು ನೀಡುವುದಾಗಿ ಧರ್ಮಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಗುರುವಾರ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಪ್ರಕಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಸದ್ಯದಲ್ಲಿಯೇ ಚೆನ್ನೈಗೆ ಹೋಗಿ ಸಮೀಕ್ಷೆ ನಡೆಸಲಿದ್ದಾರೆ. ಬಳಿಕ ಪರಿಹಾರ ನೀಡಲಾಗುವುದು ಎಂದರು.

ಕುಲ, ಜಾತಿ, ಮತವನ್ನು ವೇದಿಕೆಯಾಗಿ ಬಳಸಿ ನಮ್ಮ ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನ ಮಾಡುವುದು ಸರಿಯಲ್ಲ
- ಡಾ.ಷ.ಶೆಟ್ಟರ್‌,
ಹಿರಿಯ ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT