ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಷ್ಟ್ರಕವಿ ಆಯ್ಕೆಗೆ ಪತ್ರ ಬರೆದು ಸೂಚಿಸಿ’

Last Updated 9 ಜನವರಿ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಕವಿ ಗೌರವವನ್ನು ಯಾರಿಗೆ ನೀಡಬೇಕು ಎಂಬುದನ್ನು ಪತ್ರ ಬರೆದು ಸೂಚಿಸುವಂತೆ ‘ರಾಷ್ಟ್ರಕವಿ ಆಯ್ಕೆ ಸಮಿತಿ’ ರಾಜ್ಯದ ಸಮಸ್ತರಿಗೆ ಕರೆ ನೀಡಿದೆ.

ಹೆಸರು ಸೂಚಿಸುವಾಗ ಕವಿ, ಸಾಹಿತಿಯ ಸಾಹಿತ್ಯ ಕೃತಿಗಳಲ್ಲಿರುವ ಶಾಶ್ವತ ಸತ್ಯ ಎನಿಸುವ ಸಾಲು ಮತ್ತು ಅವುಗಳ ವೈಶಿಷ್ಟ್ಯ ವಿವರಿಸಬೇಕು ಎಂದು ಸಮಿತಿ ಅಧ್ಯಕ್ಷ ಕೋ. ಚೆನ್ನಬಸಪ್ಪ (ಕೋಚೆ) ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯದ ಏಕೀಕರಣದ ನಂತರ ಸರ್ಕಾರ ಇಬ್ಬರಿಗೆ (ಕುವೆಂಪು ಮತ್ತು ಜಿ.ಎಸ್‌. ಶಿವರುದ್ರಪ್ಪ) ಈ ಗೌರವ ನೀಡಿದೆ. ಇದಕ್ಕೂ ಮುನ್ನ ಹಿಂದಿನ ಮದ್ರಾಸ್ ಸರ್ಕಾರ ಎಂ. ಗೋವಿಂದ ಪೈ ಅವರಿಗೆ ರಾಷ್ಟ್ರಕವಿ ಗೌರವ ನೀಡಿತ್ತು. ಈಗ ಕೆಲವು ಮಾನದಂಡಗಳನ್ನು ರೂಪಿಸಿ, ರಾಷ್ಟ್ರಕವಿ ಗೌರವಕ್ಕೆ ಯಾರು ಅರ್ಹರು ಎಂಬುದನ್ನು ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.

ಜನರಿಂದ ಅಭಿಪ್ರಾಯ ಆಹ್ವಾನಿಸಿದ ಮಾತ್ರಕ್ಕೆ, ಬಹುಮತದ ಆಧಾರದಲ್ಲಿ ರಾಷ್ಟ್ರಕವಿ ಗೌರವಕ್ಕೆ ಕವಿಯನ್ನು ಆಯ್ಕೆ ಮಾಡುವುದಿಲ್ಲ. ಜನರ ಅಭಿಪ್ರಾಯ ಮತ್ತು ಸಮಿತಿಯ ಅಭಿಪ್ರಾಯವನ್ನು ತಾಳೆ ಮಾಡಿ, ಸರ್ಕಾರಕ್ಕೆ ಒಬ್ಬರ ಹೆಸರು ಸೂಚಿಸಲಾಗುವುದು. ಅದನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಯಾರೂ ಅರ್ಹರಲ್ಲ ಎಂದೆನಿಸಿದರೆ, ಯಾವುದೇ ಹೆಸರು ಸೂಚಿಸದಿರುವ ಅಧಿಕಾರ ಸಮಿತಿಗೆ ಇದೆ ಎಂದರು.

ಪತ್ರವನ್ನು ಇದೇ 27ರೊಳಗೆ, ‘ಅಧ್ಯಕ್ಷರು, ರಾಷ್ಟ್ರಕವಿ ಆಯ್ಕೆ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು – 560 002’ ವಿಳಾಸಕ್ಕೆ ಕಳುಹಿಸಬೇಕು.

ಮಾನದಂಡ ಏನು?
* ಗುಣ ಮತ್ತು ಗಾತ್ರದಲ್ಲಿ ಗಣನೀಯವಾದ, ಶಾಶ್ವತ ಮತ್ತು ಅಸಾಧಾರಣ ಎನಿಸುವ ಕಾವ್ಯ–ಗದ್ಯ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಿರಬೇಕು.
* ಸ್ವಾತಂತ್ರ್ಯ ಹೋರಾಟಕ್ಕೆ ಸ್ಪಂದಿಸಿ ಸಾಹಿತ್ಯ ರಚಿಸಿದವರು, ರಾಜ್ಯದ ಏಕೀಕರಣಕ್ಕೆ, ಕನ್ನಡದ ಹಿತರಕ್ಷಣೆಗೆ, ನಾಡಿನ ಅಭಿವೃದ್ಧಿಗೆ ಶ್ರಮಿಸಿದವರು, ಸಂಸ್ಕೃತಿಯ ಉನ್ನತಿಗೆ ದುಡಿದವರು, ಗಡಿನಾಡು–ಹೊರನಾಡ ಕನ್ನಡಿಗರಿಗೆ ಸಹಾಯ ಮಾಡಿದವರಾಗಿರಬೇಕು.
* ಮೇರುಸದೃಶ ವ್ಯಕ್ತಿತ್ವ, ಆದರ್ಶ ಜೀವನ ಸಾಗಿಸುತ್ತಿರಬೇಕು. ಇಡೀ ಜನಾಂಗ ಅವರ ಮಾತು ಕೇಳುವಂತಿರಬೇಕು. ಅವರು ನಾಡಿನ ಗುರುವಿನಂತೆ ಇರಬೇಕು.
* ‘ಮನುಜ ಕುಲ ತಾನೊಂದೆ ವಲಂ’ ಎಂದು ಹೇಳಿದ ಪಂಪನ ಜಾತ್ಯತೀತ ವಿಶ್ವಮಾನವ ದೃಷ್ಟಿ ಇರಬೇಕು. ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಕುವೆಂಪು ಮಾತಿನಲ್ಲಿ ನಂಬಿಕೆ ಇರುವ ದಿವ್ಯ ಜೀವಿ ಆಗಿರಬೇಕು.
* ರಾಷ್ಟ್ರಕವಿ ಗೌರವ ಪಡೆಯುವವರು ಎಂದಿಗೂ ಯಾವುದೇ ಆಪಾದನೆಗೆ ಗುರಿಯಾಗಿರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT