ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಶೋಧನೆಗೆ ಸೌಲಭ್ಯವಿದೆ, ಮಾರ್ಗದರ್ಶಕರಿಲ್ಲ’

ಪಿಇಎಸ್‌ ವಿಶ್ವವಿದ್ಯಾಲಯ ಸಂಶೋಧನಾ ಕೇಂದ್ರಕ್ಕೆ ಸಿ.ಎನ್‌.ಆರ್‌.ರಾವ್‌ ಚಾಲನೆ
Last Updated 16 ಡಿಸೆಂಬರ್ 2014, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವು ಸಂಶೋಧನೆ ನಡೆಸಲು ಮುಂದಾದ ದಿನಗಳಲ್ಲಿ ಸೌಲಭ್ಯ ಇರಲಿಲ್ಲ. ಆದರೆ, ಅತ್ಯುತ್ತಮ ಮಾರ್ಗ­ದರ್ಶಕರಿದ್ದರು. ಈಗ ಸಂಶೋಧನಾ ವಿದ್ಯಾರ್ಥಿಗಳಿಗೆ ವೇತನ ಲಭಿಸುತ್ತಿದ್ದು, ಉತ್ತಮ ಸೌಲಭ್ಯಗಳಿವೆ. ವಿಪರ್ಯಾಸ­ವೆಂದರೆ ಮಾರ್ಗದರ್ಶನ ಹಾಗೂ ಬೆಂಬಲ ನೀಡುವವರೇ ಇಲ್ಲ’ ಎಂದು ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.­ಆರ್‌.­ರಾವ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಿ.ಇ.ಎಸ್‌. ವಿಶ್ವವಿದ್ಯಾಲಯದ ‘ಸಂಶೋಧನಾ ಪ್ರತಿಷ್ಠಾನ’ಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಹಿಂದೆ ಸಂಶೋಧನೆಗೆ ಅಗತ್ಯವಿರುವ ವಸ್ತುಗಳನ್ನು ನಾವೇ ರೂಪಿಸಿಕೊಳ್ಳು­ತ್ತಿದ್ದೆವು. ಇದರಿಂದ ಹೊಸ ಆಲೋಚನೆ ಹುಟ್ಟುತ್ತಿತ್ತು. ದೊಡ್ಡ ಮಟ್ಟದಲ್ಲಿ ಸಂಶೋಧನೆ ನಡೆಸಲು ಪ್ರೇರಣೆ­ಯಾಗು­ತ್ತಿತ್ತು. ಈಗ ಬಹುತೇಕ ವಸ್ತುಗಳು ಸಿದ್ಧವಾಗಿರುತ್ತವೆ. ಆದರೆ, ಬದ್ಧತೆಯ ಕೊರತೆಯಿದೆ’ ಎಂದರು.

‘ವಿಜ್ಞಾನ ಎಂಬುದು ವೈಯಕ್ತಿಕ ಆಸ್ತಿ ಅಲ್ಲ. ಒಬ್ಬರು ಸಂಶೋಧನೆ ನಡೆಸಿದರೆ ಅದೆಷ್ಟೋ ಮಂದಿಗೆ ಸಹಾಯ­ವಾಗು­ತ್ತದೆ. ಹಾಗಾಗಿ ಸಂಶೋಧನೆ­ಯಲ್ಲಿ ಗುಣಮಟ್ಟಕ್ಕೆ ಒತ್ತುಕೊಡಬೇಕು. ಸೂಕ್ತ ಬೆಂಬಲ ನೀಡಬೇಕು. ಈ ನಿಟ್ಟಿನಲ್ಲಿ ಪಿ.ಇ.ಎಸ್‌. ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯ’ ಎಂದು ತಿಳಿಸಿದರು.

ಸಂಶೋಧನಾ ಪ್ರತಿಷ್ಠಾನ ಕುರಿತು...

ಪ್ರತಿಷ್ಠಾನ ಕುರಿತು ಮಾಹಿತಿ  ನೀಡಿದ ಪ್ರೊ.ಡಿ.­ಜವಾಹರ್‌, ‘ಪ್ರತಿಷ್ಠಾನದ ಸಂಶೋಧನಾ ಚಟುವಟಿಕೆಗಳಿಗೆ ಪಿ.ಇ.ಎಸ್‌.ವಿಶ್ವವಿದ್ಯಾಲಯವು ರೂ 10 ಕೋಟಿ ನಿಧಿ ಮೀಸಲಿಟ್ಟಿದೆ. ಇದಕ್ಕೆ ವಿಶ್ವವಿದ್ಯಾಲಯದ ವಾರ್ಷಿಕ ಒಟ್ಟು ಆದಾಯದ ಶೇ 5ರಷ್ಟನ್ನು ಪ್ರತಿ ವರ್ಷ ಸೇರಿಸಲಾಗುವುದು. ಈ ಮೂಲಕ ನಿಧಿಯನ್ನು ರೂ 100 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ’ ಎಂದರು.

‘ವಿ.ವಿಯ ವಿವಿಧ ವಿಭಾಗಗಳ ಸಂಶೋಧನಾ ಉದ್ದೇಶಗಳಿಗೆ, ಸೆಂಟರ್‌ ಆಫ್‌ ಎಕ್ಸಲೆನ್ಸ್‌ನ ಚಟುವಟಿಕೆಗಳಿಗೆ ಹಾಗೂ ಅನನ್ಯ ಸಂಶೋಧನಾ ಮತ್ತು ಆವಿಷ್ಕಾರ ಕೇಂದ್ರದ (ಕೋರಿ) ಕಾರ್ಯಕ್ರಮಗಳಿಗೆ ಈ ಪ್ರತಿಷ್ಠಾನ ವೇದಿಕೆ ಒದಗಿಸಲಿದೆ. ಆವಿಷ್ಕಾರಗಳಿಗೆ, ಉಪಕರಣಗಳ ಅಭಿವೃದ್ಧಿಗೆ ಒತ್ತು ನೀಡಲಾಗು­ವುದು’ ಎಂದು ವಿವರಿಸಿದರು.

ರಾಜ್ಯ ಆವಿಷ್ಕಾರ ಮಂಡಳಿ ಅಧ್ಯಕ್ಷ ಪ್ರೊ.ಎಚ್‌.ಪಿ.ಖಿಂಚ ಮಾತನಾಡಿ, ‘ಬದ್ಧತೆ ಹಾಗೂ ಶ್ರಮದಲ್ಲಿ ಸಿ.ಎನ್‌.ಆರ್‌.ರಾವ್‌ ಅವರನ್ನು ಮೀರಿ ನಿಲ್ಲಲು ನಮ್ಮಿಂದ ಈಗಲೂ ಸಾಧ್ಯವಿಲ್ಲ. ಸಂಶೋಧನಾ ಕ್ಷೇತ್ರದಲ್ಲಿನ ಅವರ ಅಗಾಧ ಸಾಧನೆಗಳೇ ಇಂದಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿ’ ಎಂದರು.

ಪಿ.ಇ.ಎಸ್‌. ವಿಶ್ವವಿದ್ಯಾಲಯದ ಕುಲಾ­ಧಿಪತಿ ಪ್ರೊ.ಎಂ.ಆರ್‌.­ದೊರೆ­ಸ್ವಾಮಿ, ‘ಸಂಶೋಧನಾ ಪ್ರತಿಷ್ಠಾನದ ಮೊದಲ ಮುಖ್ಯಸ್ಥರನ್ನು ‘ಪ್ರೊ.ಸಿ.ಎನ್‌.­ಆರ್‌.­ರಾವ್‌ ಚೇರ್‌ ಪ್ರೊಫೆಸರ್‌’ ಎಂದು ಕರೆಯಲಾಗುವುದು. ಸ್ನಾತ­ಕೋತ್ತರ ಹಾಗೂ ಡಾಕ್ಟರೇಟ್‌ ಪದವೀಧರರಿಗೆ ಪ್ರೊ.ಸಿ.ಎನ್.­ಆರ್‌.­ರಾವ್‌­ ಫೆಲೋಶಿಪ್‌ ನೀಡ­ಲಾಗು­ವುದು. ಸಂಶೋಧನೆಗಾಗಿ ಪ್ರತಿ ವರ್ಷ ರೂ 1 ಕೋಟಿ ಕೊಡಲಾಗುವುದು’  ಎಂದು ಹೇಳಿದರು.

ಸಂಸ್ಥೆಯ ವತಿಯಿಂದ ವೈದ್ಯಕೀಯ ಕಾಲೇಜು, ಕಾನೂನು ಕಾಲೇಜು, ವಿನ್ಯಾಸ ಕೇಂದ್ರ ಸ್ಥಾಪಿಸಲು ಯೋಜನೆ ಹೊಂದಿರುವುದಾಗಿ ಹೇಳಿದ ಅವರು ಕೆಲ ವಿ.ವಿಗಳಲ್ಲಿ ನಡೆಯುತ್ತಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸಿ.ಎನ್‌.ಆರ್‌.­ರಾವ್‌ ಅವರಿಗೆ ವಿಶ್ವವಿದ್ಯಾಲಯ ವತಿ­ಯಿಂದ ‘ವಿಜ್ಞಾನ ವ್ಯಾಸ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯ­ಕ್ರಮ­ದಲ್ಲಿ ಸಹ ಕುಲಾಧಿಪತಿ ಪ್ರೊ.ಡಿ.ಜವಾ­ಹರ್‌, ಕುಲಪತಿ ಪ್ರೊ.ಕೆ.ಎನ್‌.ಬಿ.­ಮೂರ್ತಿ, ಪಿ.ಇ.ಎಸ್‌ ಸಂಸ್ಥೆ­ಗಳ ಸಿಒಒ ಪ್ರೊ.ಅಜಯ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT