ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆರಿಗೆ ರಜೆಯಿಂದ ಕೆಲಸ ಹೋಯ್ತು’

ಅತಿಥಿ ಉಪನ್ಯಾಸಕರ ಧರಣಿ; 277 ಮಂದಿ ಬಂಧನ
Last Updated 15 ಅಕ್ಟೋಬರ್ 2014, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ಹೆರಿಗೆ ಸಮಯದಲ್ಲಿ ರಜೆ ತೆಗೆದು­ಕೊಂಡ ಕಾರಣಕ್ಕೆ ನನ್ನ ಹುದ್ದೆಯನ್ನು ಬೇರೊಬ್ಬರಿಗೆ ನೀಡ­ಲಾಯಿತು. ಏಳೆಂಟು ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿದರೂ ಕಾಲೇಜು ಆಡಳಿತ ಮಂಡಳಿಗೆ ಕರುಣೆ ಇರಲಿಲ್ಲ. ಇದ್ದ ಕೆಲಸ ಕಳೆದುಕೊಂಡು ಜೀವನ ನಿರ್ವಹಣೆಗೆ ಸಿದ್ಧ ಉಡುಪು ಕಾರ್ಖಾನೆಗೆ ಸೇರಬೇಕಾಯಿತು’.

ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರದಿಂದ ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡಿದ್ದ ಯಲಬುರ್ಗಾ ತಾಲ್ಲೂಕು ಇಟಗಿ  ಗ್ರಾಮದ ನರಸಮ್ಮ ಅವರ ಬೇಸರದ ಮಾತುಗಳಿವು.

ಬೆಳಿಗ್ಗೆ 11 ಗಂಟೆಗೆ ನಗರ ರೈಲು ನಿಲ್ದಾಣದಿಂದ ಜಾಥಾ ಆರಂಭಿಸಿದ ಪ್ರತಿಭಟನಾಕಾರರು, ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಹೊರಟರು. ಆನಂದರಾವ್‌ ವೃತ್ತದ ಮೇಲ್ಸೇತುವೆ ಬಳಿ ಪೊಲೀಸರು ಅವರನ್ನು ಅಡ್ಡ­ಗಟ್ಟಿದ್ದರಿಂದ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಎಂಟು ಮಂದಿ ಸದಸ್ಯರನ್ನೊಳಗೊಂಡ ನಿಯೋಗ ಮುಖ್ಯಮಂತ್ರಿಗಳ  ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿತು. ಇತರರು ಸ್ವಾತಂತ್ರ್ಯ ಉದ್ಯಾನಕ್ಕೆ ತೆರಳಿ ಧರಣಿ ಕುಳಿತರು.

‘ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾ­ಗುವುದು. ಈ ಸಂಬಂಧ

ಉಡಾಫೆ ಉತ್ತರ: ಆರೋಪ
ಉನ್ನತ ಶಿಕ್ಷಣ ಇಲಾಖೆ ಆಯುಕ್ತ ನಂದ­ಕುಮಾರ್‌ ಅವರಿಗೆ ಎರಡು ಬಾರಿ ಮನವಿ ಸಲ್ಲಿಸ­ಲಾಗಿತ್ತು. ಆದರೆ, ‘ಈ ಕೆಲಸವನ್ನು ನಂಬಿಕೊಳ್ಳ­ಬೇಡಿ. ಜೀವನಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಿ. ನಿಮ್ಮ ಸೇವೆಯನ್ನು ಕಾಯಂಗೊಳಿ­ಸುತ್ತೇವೆ ಎಂದು ನಾವು ಎಂದೂ ಹೇಳಿಲ್ಲ’ ಎಂದು ಅವರು ಉಡಾಫೆಯ ಉತ್ತರ ಕೊಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
277 ಪ್ರತಿಭಟನಾಕಾರರ ಬಂಧನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾತ್ರಿ ಏಳು ಗಂಟೆಯಾದರೂ ಸ್ಥಳಕ್ಕೆ ಬಾರದ ಕಾರಣ ಆಕ್ರೋಶಗೊಂಡ ಪ್ರತಿಭಟ­ನಾಕಾರರು, ಅವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಹೊರಟರು. ಆಗ ಅವರನ್ನು ತಡೆದ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ 277 ಮಂದಿಯನ್ನು ಬಂಧಿಸಿ ಆರು ಬಸ್‌ಗಳಲ್ಲಿ ಆಡುಗೋಡಿಯ ಸಿಎಆರ್ ಮೈದಾನಕ್ಕೆ ಕರೆದೊಯ್ದರು. ಬಳಿಕ ಅವರಿಂದ ಮುಚ್ಚಳಿಕೆ ಬರೆಸಿಕೊಂಡು ರಾತ್ರಿ 11 ಗಂಟೆಗೆ ಬಿಡುಗಡೆ ಮಾಡಿದರು.

ಉನ್ನತ ಶಿಕ್ಷಣ ಸಚಿವರ ಜತೆ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ, ಅವರು ಈ ಹಿಂದೆ ಕೂಡ ಇದೇ ರೀತಿ ಮಾತು ಕೊಟ್ಟಿದ್ದರು. ಅವರ ಮೌಖಿಕ ಭರವಸೆಗಳನ್ನು ನಂಬುವ ಸ್ಥಿತಿಯಲ್ಲಿ ನಾವಿಲ್ಲ. ಶಾಶ್ವತ ಪರಿಹಾರ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ’ ಎಂದು ಪ್ರತಿಭಟನಾಕಾರರು ಧರಣಿ ಮುಂದುವರಿಸಿದರು.

‘ಕೊಪ್ಪಳದ ಸರ್ಕಾರಿ ಕಾಲೇಜುವೊಂದರಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದೆ. ಕಳೆದ ವರ್ಷ ಹೆರಿಗೆ ಸಂದರ್ಭದಲ್ಲಿ ರಜೆ ಕೇಳಿದಾಗ ಆಡಳಿತ ಮಂಡಳಿ ಅಮಾನವೀಯವಾಗಿ ನಡೆದುಕೊಂಡಿತು. ಹೀಗಾಗಿ ಅಧಿಕಾರಿಗಳ ನಿರ್ಧಾರಕ್ಕೆ ಕಾಯದೆ ನಾನೇ ರಜೆ ಪಡೆದುಕೊಂಡೆ. ಆದರೆ, ನಾಲ್ಕು ತಿಂಗಳ ನಂತರ ಸೇವೆಗೆ ವಾಪಸಾದಾಗ ನನ್ನ ಹುದ್ದೆಯನ್ನು ಬೇರೊಬ್ಬರಿಗೆ ನೀಡಲಾಗಿತ್ತು. ಈ ಬಗ್ಗೆ ಕೇಳಿದಾಗ ‘ನಿಮ್ಮ ಸೇವೆ ಕಾಯಂ ಅಲ್ಲ’ ಎಂದು ಉತ್ತರ ಕೊಟ್ಟರು. ಈಗ ಸಿದ್ಧ ಉಡುಪು ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದೇನೆ’ ಎಂದು ನರಸಮ್ಮ ಅಳಲು ತೋಡಿಕೊಂಡರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಶ್ರೀನಿವಾಸ ಚಾರ್, ‘ರಾಜ್ಯದಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮೂರು ಸಾವಿರ ಕಾಯಂ ಉಪನ್ಯಾಸಕರಿದ್ದಾರೆ. 11,680 ಅತಿಥಿ ಉಪನ್ಯಾಸಕರು ದುಡಿಯುತ್ತಿದ್ದಾರೆ. ಇವರಿಗೆ ಮಾಸಿಕ ₨ 8 ಸಾವಿರ ವೇತನ ನೀಡಲಾಗುತ್ತಿದೆ. ಕಳೆದ ವರ್ಷದ ವೇತನ ಇನ್ನೂ ಕೈಸೇರಿಲ್ಲ’ ಎಂದರು.

ಡಿವೈಎಫ್‌ಐನ ಅಧ್ಯಕ್ಷ ಬಿ.ರಾಜಶೇಖರಮೂರ್ತಿ, ಗುರುವಾರದಿಂದ ಎಲ್ಲ ಜಿಲ್ಲೆಗಳಲ್ಲೂ ಹೋರಾಟ ಆರಂಭವಾಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT