ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಹೂಡಿಕೆಗೆ ಪರ್ಯಾಯ ಮಾರ್ಗ

Last Updated 22 ಜನವರಿ 2019, 19:30 IST
ಅಕ್ಷರ ಗಾತ್ರ

ಷೇರುಪೇಟೆಯ ಹೆಗ್ಗುರುತಾದ ಸಂವೇದಿ ಸೂಚ್ಯಂಕ ಆಗಸ್ಟ್ ತಿಂಗಳ ಅಂತ್ಯದಲ್ಲಿ 38,989 ಅಂಶಗಳಿಗೆ ತಲುಪಿ ಸಾರ್ವಕಾಲಿಕ ಗರಿಷ್ಠದ ದಾಖಲೆ ನಿರ್ಮಿಸಿದ ನಂತರ ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾದ ಮಾರಾಟದ ಹಾದಿಯಲ್ಲಿ ಇವೆ. ಇದರಿಂದ ಪೇಟೆಯಲ್ಲಿ ಅಸ್ಥಿರತೆ ಹೆಚ್ಚಿದೆ. ಆಗಸ್ಟ್ ಅಂತ್ಯದಲ್ಲಿ ಪೇಟೆಯ ಬಂಡವಾಳೀಕರಣ ಮೌಲ್ಯವು ₹ 159.34 ಲಕ್ಷ ಕೋಟಿ ತಲುಪಿ ದಾಖಲೆ ನಿರ್ಮಿಸಿತ್ತು. ತದನಂತರ ನಿರಂತರವಾದ ಮಾರಾಟದ ಕಾರಣಕ್ಕೆ ₹ 143.43 ಲಕ್ಷ ಕೋಟಿಗೆ ಕುಸಿದಿದೆ.

ನಾಲ್ಕು ತಿಂಗಳ ಅವಧಿಯಲ್ಲಿ ₹ 16 ಲಕ್ಷ ಕೋಟಿಗಳಷ್ಟು ಮೌಲ್ಯವು ಕರಗಿ ಹೋಗಿದೆ. ಆದರೂ ಸಂವೇದಿ ಸೂಚ್ಯಂಕವು 35 ಸಾವಿರಕ್ಕೂ ಹೆಚ್ಚಿನ ಅಂಶಗಳಲ್ಲಿದೆ. ಮ್ಯೂಚುವಲ್ ಫಂಡ್‌ಗಳ ಮೂಲಕ ಪೇಟೆಯ ಕಡೆ ಹೆಚ್ಚಿನ ಪ್ರಮಾಣದಲ್ಲಿ ಹಣ ಹರಿದುಬರುತ್ತಿರುವುದೇ ಇದಕ್ಕೆ ಕಾರಣ.

ಮ್ಯೂಚುವಲ್ ಫಂಡ್‌ಗಳು ಹೊಸ ಹೊಸ ಯೋಜನೆಗಳನ್ನು ತೇಲಿಬಿಟ್ಟು ಹಣ ಸಂಗ್ರಹಿಸುತ್ತಿವೆ. ಮ್ಯೂಚುವಲ್ ಫಂಡ್‌ಗಳ ವ್ಯವಸ್ಥಿತ ಹೂಡಿಕೆ ಯೋಜನೆ (ಸಿಪ್) ಮೂಲಕ ಹೂಡಿಕೆ ಮಾಡಿದರೆ ಹೆಚ್ಚು ಸುರಕ್ಷಿತ ಎಂಬ ಪರಿಕಲ್ಪನೆಯು ಹೆಚ್ಚಿನ ಸಣ್ಣ ಹೂಡಿಕೆದಾರರಲ್ಲಿ ಇದೆ. ಇದೇ ಕಾರಣಕ್ಕೆ ಸಾಸಿವೆ ಡಬ್ಬಿಗಳಲ್ಲಿ ಕೂಡಿಟ್ಟ ಹಣವು ಸಹ ಮ್ಯೂಚುವಲ್ ಫಂಡ್‌ಗಳತ್ತ ಹರಿದು ಬರುತ್ತಿದೆ. ಸುರಕ್ಷಿತ ಎಂಬುದು ತಪ್ಪು ಭಾವನೆ. ದೀರ್ಘಕಾಲೀನ ಹೂಡಿಕೆ ಸರಿಯಾದುದಾದರೂ ಹೂಡಿಕೆ ಮಾಡಿದ ಫಂಡ್‌ನಲ್ಲಿ ಉಂಟಾಗುವ ಬದಲಾವಣೆ, ಪೇಟೆಯಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು.

ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆಯು ಸಹ, ಷೇರುಗಳಲ್ಲಿ ಹೂಡಿಕೆ ಮಾಡುವುದರಿಂದ ಷೇರುಪೇಟೆಯಲ್ಲಾಗುವ ಏರುಪೇರುಗಳಿಗೆ ಅನುಗುಣವಾಗಿ ಫಂಡ್‌ಗಳ ಆಸ್ತಿ ಮೌಲ್ಯವು ಸಹ ಅದಕ್ಕೆ ಸ್ಪಂದಿಸಿ ಬದಲಾಗುತ್ತಿರುತ್ತದೆ. ಭಾರತದ ಷೇರುಪೇಟೆಯಿಂದ ₹ 80 ಸಾವಿರ ಕೋಟಿಗೂ ಹೆಚ್ಚಿನ ಹಣವನ್ನು ವಿದೇಶಿ ವಿತ್ತೀಯ ಸಂಸ್ಥೆಗಳು ಹಿಂದೆ ಪಡೆದಿವೆ ಎಂಬ ವಿಚಾರ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆದಿದೆ. ಆದರೂ ಪೇಟೆಗಳು ನಿಸ್ಸಾರವಾಗಿವೆಯೇ ಹೊರತು ಹೆಚ್ಚಿನ ಕುಸಿತ ಕಂಡಿಲ್ಲ. ಗೊಂದಲದ ಗೂಡಾಗಿರುವ ಈಗಿನ ಷೇರುಪೇಟೆಗಳ ಚಲನೆಯು ಸಿದ್ಧಾಂತಗಳಿಂದ ಹೊರತಾಗಿದ್ದು, ಅನಿಶ್ಚಿತ ರೀತಿಯಲ್ಲಿ ಸಾಗುತ್ತಿದೆ.

ಹಿಂದಿನ ತಿಂಗಳು ಮ್ಯೂಚುವಲ್ ಫಂಡ್‌ಗಳಿಗೆ ಹರಿದು ಬಂದ ಹಣವು ಸಹ ಕಡಿಮೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ಮ್ಯೂಚುವಲ್ ಫಂಡ್‌ ಮೂಲಕ ₹ 11,422 ಕೋಟಿ ಹೂಡಿಕೆಯಾಗಿದೆ. ಡಿಸೆಂಬರ್‌ನಲ್ಲಿ ಅದು ₹ 6,606 ಕೋಟಿಗೆ ಕುಸಿದಿದೆ. ಅಂದರೆ ನಿಸ್ಸಾರವಾದ ಪೇಟೆಯ ಚಟುವಟಿಕೆಯಿಂದ ಬಹುಜನರ ಆಸಕ್ತಿಯನ್ನು ಕಳೆದುಕೊಳ್ಳುತ್ತಿದೆ. ಪೇಟೆಯ ಚಲನೆಯ ವೇಗ ಹೇಗಿದೆ ಎಂದರೆ ಚಟುವಟಿಕೆಯ ಮಧ್ಯಂತರದಲ್ಲಿ ಸುದ್ಧಿ ತೇಲಿಬಿಡಲಾಗುತ್ತಿದೆ. ಆ ಷೇರು ತ್ವರಿತವಾದ ಏರಿಕೆ ಪ್ರದರ್ಶಿಸಿ ನಂತರ ಕುಸಿಯುತ್ತದೆ. ಸ್ಥಿರತೆ ಎಂಬುದಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಗಮನಹರಿಸುವುದು ಬ್ಯಾಂಕ್‌ಗಳ ಸ್ಥಿರ ಠೇವಣಿಗಳತ್ತ. ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಲ್ಲಿ ಶೇ 7 ರಿಂದ 7.5 ರ ಬಡ್ಡಿ ಬಂದರೂ ಸಾಕು, ಹೂಡಿಕೆಯಾದ ಹಣ ಸುರಕ್ಷಿತವಾಗಿರುತ್ತದೆ ಎಂಬ ಭಾವನಾತ್ಮಕ ನಿರ್ಧಾರವು ಮೂಡುವುದು ಸಹಜವಾಗಿದೆ. ಷೇರುಪೇಟೆಗಳಲ್ಲದೆ, ಚಿನಿವಾರ ಪೇಟೆ, ಸರಕುಪೇಟೆ, ಮುಂತಾದವು ಹೆಚ್ಚಿನ ಅಸ್ಥಿರತೆ ಪ್ರದರ್ಶಿಸುತ್ತಿವೆ. ಹೀಗಾಗಿ ಬಂಡವಾಳ ಕರಗುವುದನ್ನು ತಡೆಯಬೇಕೆಂಬ ಹಂಬಲ ಎಲ್ಲರಲ್ಲಿ ಇರುವುದರಿಂದ ಹೆಚ್ಚಿನವರು ಬ್ಯಾಂಕ್ ಠೇವಣಿಗಳತ್ತ ಮುಖ ಮಾಡುವುದು ಸಾಮಾನ್ಯವಾಗಿದೆ.

ಹೂಡಿಕೆಯ ಹಣ ಸುರಕ್ಷಿತವಾಗಿರಬೇಕು ಎನ್ನುವುದು ಆರ್ಥಿಕ ಸಾಕ್ಷರತೆಯ ಮೊದಲ ಸಂದೇಶವಾಗಿದೆ. ಇದರೊಂದಿಗೆ ಇನ್ನೂ ಕೆಲವು ಸಂಗತಿಗಳನ್ನು ತಿಳಿದುಕೊಂಡಿರಬೇಕಾದುದು ಅವಶ್ಯಕ. ಬ್ಯಾಂಕ್‌ಗಳಲ್ಲಿ ಇಡುವ ಠೇವಣಿ ಸಂಪೂರ್ಣ ಸುರಕ್ಷಿತ ಎಂಬುದು ಕೇವಲ ಭಾವನಾತ್ಮಕ ಸಂಗತಿಯಾಗಿದೆ. ಬ್ಯಾಂಕ್‌ಗಳಲ್ಲಿ ಇರಿಸುವ ₹ 1 ಲಕ್ಷವರೆಗಿನ ಠೇವಣಿಗೆ ವಿಮೆ ಸೌಲಭ್ಯ ಅನ್ವಯವಾಗುವುದು. ನಂತರದ ಮೊತ್ತಕ್ಕೆ ಈ ವಿಮೆ ಅನ್ವಯವಾಗುವುದಿಲ್ಲ. ಅಂದರೆ ಬ್ಯಾಂಕ್‌ಗಳಲ್ಲಿ ನಮ್ಮ ಹಣ ಸುರಕ್ಷಿತ, ಸರ್ಕಾರದ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ ಶ್ರೀರಕ್ಷೆ ಇದೆ ಎಂಬ ಭಾವನೆಗಳು, ಚಿಂತನೆಗಳು ನಮ್ಮ ಮನದಲ್ಲಿ ಬೇರೂರಿವೆ.

ಷೇರುಪೇಟೆಗಳ ಅಸ್ಥಿರತೆಯಿಂದ ಬೇಸತ್ತ ಹೂಡಿಕೆದಾರರು ಪರ್ಯಾಯ ಹೂಡಿಕೆ ಅವಕಾಶಗಳನ್ನು ಹುಡುಕುತ್ತಿರುತ್ತಾರೆ. ಬ್ಯಾಂಕ್‌ಗಳು ಸಹ ತಮ್ಮ ಚಟುವಟಿಕೆಗೆ ಸಂಪನ್ಮೂಲ ಸಂಗ್ರಹಣೆ ಮತ್ತು ‘ಬಾಸೆಲ್ –3’ ನಿಯಮಗಳನ್ನು ಪಾಲಿಸಲು ಬಾಂಡ್, ಪರಿವರ್ತಿಸಲಾಗದ ಡಿಬೆಂಚರ್ ಮುಂತಾದ ಬಾಂಡ್‌ಗಳ ಮೂಲಕ ಹಣ ಸಂಗ್ರಹಿಸುತ್ತಿವೆ. ಇವುಗಳು ನೀಡುವ ಬಡ್ಡಿ ದರವು ಸಹ ಆಕರ್ಷಕವಾಗಿರುತ್ತವೆ.

ಉತ್ತಮ ಗುಣಮಟ್ಟದ ಬ್ಯಾಂಕ್‌ಗಳ ಸಾಲಪತ್ರಗಳು ಅಧಿಕ ಲಾಭಗಳಿಸಿ ಕೊಡುತ್ತವೆ. ಉದಾಹರಣೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶೇ 9.56 ಮತ್ತು ಶೇ 9.37, ವಿಜಯ ಬ್ಯಾಂಕ್ ಶೇ 10.49, ಕರ್ಣಾಟಕ ಬ್ಯಾಂಕ್ ಶೇ 12, ಇಂಡಿಯನ್ ಓವರ್ಸಿಸ್ ಬ್ಯಾಂಕ್ ಶೇ 11.7 ರ ಸಾಲಪತ್ರಗಳು ಮುಖಬೆಲೆ ಅಥವಾ ಸ್ವಲ್ಪ ಪ್ರೀಮಿಯಂ ನಲ್ಲಿ ದೊರೆಯುತ್ತವೆ. ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 8.85, ಯೆಸ್ ಬ್ಯಾಂಕ್ ಶೇ 9.50, ಬ್ಯಾಂಕ್ ಆಫ್ ಬರೋಡಾ ಶೇ 8.65 ಬಡ್ಡಿ ನೀಡುವ ಸಾಲಪತ್ರಗಳು ಮುಖಬೆಲೆಗಿಂತ ಕಡಿಮೆ ಬೆಲೆಗೆ ದೊರೆಯುತ್ತವೆ.

ಇನ್ನು ಖಾಸಗಿ ಕಂಪನಿಗಳಾದ ದಿವಾನ್ ಹೌಸಿಂಗ್ ಫೈನಾನ್ಸ್, ಶ್ರೀರಾಮ್ ಟ್ರಾನ್ಸ್‌ಪೋರ್ಟ್ಸ್‌ ಫೈನಾನ್ಸ್, ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್, ಈಸಿಎಲ್ ಫೈನಾನ್ಸ್, ಮನ್ನಪುರಂ ಫೈನಾನ್ಸ್, ಶ್ರೇಯ್ ಇನ್ಫ್ರಾ ಕಂಪನಿಗಳ ಸಾಲಪತ್ರಗಳಲ್ಲಿ ಕೆಲವು ಮುಖಬೆಲೆಗಿಂತ ಕಡಿಮೆ ಬೆಲೆಗೆ ಮತ್ತು ಇನ್ನೂ ಕೆಲವು ಹೆಚ್ಚಿನ ಬೆಲೆಗೆ ದೊರೆಯುತ್ತಿರುತ್ತವೆ.

ಒಟ್ಟಿನಲ್ಲಿ ಹೂಡಿಕೆ ಸುರಕ್ಷಿತವಾಗಿರಬೇಕಾದರೆ ಉತ್ತಮ ಕಂಪನಿಗಳನ್ನು ಆಯ್ಕೆಮಾಡಿಕೊಳ್ಳಬೇಕು. ಇದಕ್ಕೆ ತಜ್ಞರ ಮಾರ್ಗದರ್ಶನ ಪಡೆಯಲೂಬಹುದು. ಸಂದರ್ಭವನ್ನರಿತು, ವಾಸ್ತವ ಸಂಗತಿ ಆಧರಿಸಿ ನಿರ್ಧಾರ ತೆಗೆದುಕೊಳ್ಳುವ ಆರ್ಥಿಕ ಸಾಕ್ಷರತೆ ಬೆಳೆಸಿಕೊಂಡು ಆರ್ಥಿಕ ಸದೃಢರಾಗುವುದು ಅತಿ ಮುಖ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT