ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ ಅಂಕಣ

Published 30 ಏಪ್ರಿಲ್ 2024, 20:41 IST
Last Updated 30 ಏಪ್ರಿಲ್ 2024, 20:41 IST
ಅಕ್ಷರ ಗಾತ್ರ

ಶಿವಾನಂದ ಕೆ., ಚಿಕ್ಕಬಳ್ಳಾಪುರ.

ಪ್ರಶ್ನೆ: ನಾನು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. 2023-24ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿ ಆದಾಯ ತೆರಿಗೆ ರಿಟರ್ನ್ಸ್‌ ಮುಂದಿನ ಜುಲೈ ತಿಂಗಳ ಗಡುವಿನೊಳಗೆ ಸಲ್ಲಿಸಬೇಕೆಂದಿದ್ದೇನೆ. ಆದರೆ, ಇತ್ತೀಚೆಗೆ ನನ್ನ ಪ್ಯಾನ್ ಖಾತೆಯಲ್ಲಿ ಸುಮಾರು ₹15 ಸಾವಿರ ಅಂದಾಜು ಮೊತ್ತವು ತಪ್ಪಾಗಿ ಜಮಾ ಆಗಿದೆ ಎಂದು ಕಾಣುತ್ತಿದೆ. ಇದನ್ನು ನಾನು ಯಾವ ಮೂಲದ ಆದಾಯವೆಂದು ತೆಗೆದುಕೊಳ್ಳಬೇಕು. ಈ ಮೊತ್ತ ನಾನು ಗೊತ್ತಿದ್ದು ಮಾಡಿದ ವ್ಯವಹಾರದ ಮೊತ್ತವಲ್ಲ ಎಂಬುದು ನನ್ನ ಊಹೆ. ಆದರೆ, ಈ ಮೊತ್ತವನ್ನು ನಾನು ರಿಫಂಡ್ ಪಡೆಯಬಹುದೇ. ಈ ಬಗ್ಗೆ ತಿಳಿಸಿ.

ಉತ್ತರ: ಯಾವುದೇ ಪ್ಯಾನ್ ಖಾತೆಯಲ್ಲಿ ಜಮಾ ಆದ ಮೊತ್ತವನ್ನು ತಮ್ಮ ಅರಿವಿಗೆ ಬಾರದ ಕಂಪನಿಯ ವ್ಯಕ್ತಿಗಳಿಂದ ಬಂದಿದ್ದಾದರೆ, ಅದನ್ನು ಮೊದಲು ಕೂಲಂಕಷವಾಗಿ ಪರಿಶೀಲಿಸಿ. ಕೆಲವೊಮ್ಮೆ ತಪ್ಪಾಗಿ ನಿಮ್ಮ ಖಾತೆಯಲ್ಲಿ ತೆರಿಗೆ ಜಮಾ ಬಂದಿರಬಹುದು. ಆದರೆ, ಅದನ್ನು ನಂತರದ ಹಂತದಲ್ಲಿ ತಪ್ಪೆಂದು ಒಪ್ಪಿಕೊಳ್ಳುವುದಕ್ಕಿಂತ ಮೊದಲ ಹಂತದಲ್ಲೇ ನಮ್ಮದಲ್ಲದ ತೆರಿಗೆ ಜಮಾ ಮೊತ್ತವನ್ನು ರಿಟರ್ನ್ಸ್ ಸಲ್ಲಿಕೆ ವೇಳೆ ತೆಗೆದುಕೊಳ್ಳದಿರುವುದು ಉತ್ತಮ. ಆದರೆ, ಈ ಬಗ್ಗೆ ಸರಿಯಾಗಿ ಖಚಿತಪಡಿಸಿಕೊಳ್ಳಬೇಕು.

ಸಾಮಾನ್ಯವಾಗಿ ತೆರಿಗೆ ಜಮಾ ಪಡೆದ ಮೂಲ ಆದಾಯವು ಒಂದಲ್ಲ ಒಂದು ಕಡೆ ಆದಾಯವೆಂದು ಘೋಷಿಸಬೇಕಾಗುತ್ತದೆ. ತಪ್ಪಾಗಿ ನಿಮ್ಮ ಖಾತೆಗೆ ಬಂದು ಜಮಾ ಆದರೂ ಅದನ್ನು ಪಡೆಯುವುದರಿಂದ ಮುಂದೆ ಸಮಸ್ಯೆಗೆ ಕಾರಣವಾಗಬಹುದು.

ಮುಂದಿನ ದಿನಗಳಲ್ಲಿ ಮೂಲ ತೆರಿಗೆ ಯಾರ ಹೆಸರಲ್ಲಿ ಕಡಿತವಾಗಿತ್ತೋ ಆತ ತನ್ನ ಖಾತೆಗೆ ಜಮಾ ಆಗದಿರುವ ಬಗ್ಗೆ ತಕರಾರು ಸಲ್ಲಿಸಿ ತನ್ನ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಬಹುದು. ಆಗ ನಿಮ್ಮ ಪ್ಯಾನ್ ಖಾತೆಯಲ್ಲಿ ಆ ಮೊತ್ತವನ್ನು ಶೂನ್ಯ ಮಾಡಿ ಸರಿಯಾದ ವ್ಯಕ್ತಿಗೆ ಜಮಾ ನೀಡಲಾಗುತ್ತದೆ. ಅಂತಹ ಸಂದರ್ಭದಲ್ಲಿ ನಿಮ್ಮ ಖಾತೆಯಲ್ಲಿ ತೆರಿಗೆ ಬಾಕಿ ಇರುವ ವಿಚಾರವು ಸಮಸ್ಯೆಯಾಗಿ ಪರಿಣಮಿಸಬಹುದು. ಹೀಗಾಗಿ, ನಿಮ್ಮದಲ್ಲದ ಮೊತ್ತಕ್ಕೆ ಯಾವುದೇ ಕ್ರೆಡಿಟ್ ಪಡೆಯಬೇಡಿ. ಆ ಮೊತ್ತವನ್ನು ಹಾಗೆಯೇ ಬಿಟ್ಟುಬಿಡಿ.

ಕೆ. ಮದನ್, ಊರು ತಿಳಿಸಿಲ್ಲ.

ಪ್ರಶ್ನೆ: ಎಜುಕೇಷನಲ್ ಚಾರಿಟಬಲ್ ಸಂಸ್ಥೆಗಳಿಗೆ ಹಣ ನೀಡಿದರೆ ಆ ಎಜುಕೇಷನಲ್ ಸಂಸ್ಥೆಯು ಯಾವ ಕಾಯ್ದೆ ಅಡಿಯಲ್ಲಿ ಬರಬೇಕು. ಯಾವ ಕಾಯ್ದೆಯಡಿ ಬಂದರೆ ಟ್ಯಾಕ್ಸ್ ಡಿಡಕ್ಷನ್ ಅನ್ನು ಹೆಚ್ಚಾಗಿ ತೋರಿಸಬಹುದು.

ಉತ್ತರ: ಯಾವುದೇ ಸಂಘ–ಸಂಸ್ಥೆಗಳಿಗೆ ದೇಣಿಗೆ ಕೊಟ್ಟಾಗ ಅಂತಹ ದೇಣಿಗೆಗೆ ಆದಾಯ ತೆರಿಗೆ ನಿಯಮದಡಿ ರಿಯಾಯಿತಿ ಪಡೆಯುವಂತಾಗಲು ಆಯಾ ಸಂಸ್ಥೆಗಳು ಆದಾಯ ತೆರಿಗೆ ಇಲಾಖೆಯಡಿ ಮಾನ್ಯತೆ ಪಡೆದಿರಬೇಕು. ಸೆಕ್ಷನ್ 80ಜಿ ಅಡಿ ದೇಣಿಗೆಗೆ ಪಡೆಯುವ ಅರ್ಹತೆ ಹೊಂದಿರಬೇಕು. ಮಾನ್ಯತಾ ಸಂಖ್ಯೆಯನ್ನು ರಸೀದಿಯಲ್ಲಿ ಕಡ್ಡಾಯವಾಗಿ ನೀಡಿರಬೇಕು. ಇದರಿಂದ ಯಾವುದೇ ದೇಣಿಗೆದಾರ ತೆರಿಗೆ ರಿಯಾಯಿತಿ ಪಡೆಯುವ ಉದ್ದೇಶದಿಂದ ಕೊಡುಗೆ ನೀಡಬೇಕೆ, ಬೇಡವೇ ಎನ್ನುವುದನ್ನು ಖಚಿತ ಮಾಡಿಕೊಳ್ಳಬಹುದು.

ಮಾನ್ಯತೆ ಇರದ ಸಂಸ್ಥೆಗಳಿಗೆ ನೀಡುವ ದೇಣಿಗೆಗೆ ತೆರಿಗೆ ರಿಯಾಯಿತಿ ಸಿಗುವುದಿಲ್ಲ. ಸಾಮಾನ್ಯವಾಗಿ ಯಾವುದೇ ಸಂಘ– ಸಂಸ್ಥೆಗಳು ಚಾರಿಟಬಲ್ ಮತ್ತು ಧಾರ್ಮಿಕ ಟ್ರಸ್ಟ್ ಕಾಯ್ದೆಯಡಿ ಬರುತ್ತವೆ. ಆದರೆ, ಆದಾಯ ತೆರಿಗೆಗೆ ಸಂಬಂಧಿಸಿ, ಆದಾಯ ತೆರಿಗೆ ಕಾಯ್ದೆಯೇ ಮುಖ್ಯ ಪಾತ್ರವಹಿಸುತ್ತದೆ.

ರುದ್ರಗೌಡ ಪಾಟೀಲ, ಪಗಡದಿನ್ನಿ, ಸಿಂಧನೂರು ತಾಲ್ಲೂಕು, ರಾಯಚೂರು ಜಿಲ್ಲೆ.

ಪ್ರಶ್ನೆ: ನಾನು ಮೊದಲ ಬಾರಿಗೆ ಮೊಬೈಲ್ ಅಪ್ಲಿಕೇಶನ್‌ಗಳನ್ನು (ಗ್ರೋ, ಏಂಜೆಲ್ ಇತ್ಯಾದಿ) ಬಳಸಿಕೊಂಡು ಸ್ಟಾಕ್ ಮತ್ತು ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇಚ್ಛಿಸಿದ್ದೇನೆ. ದೀರ್ಘಾವಧಿ ಹೂಡಿಕೆಗೆ ಇವುಗಳು ಎಷ್ಟು ಸುರಕ್ಷಿತ ಹಾಗೂ ವೈಯಕ್ತಿಕ ಹೂಡಿಕೆ ನಿರ್ಧಾರ ಸೂಕ್ತವೋ ಅಥವಾ ಸ್ಟಾಕ್ ಬ್ರೋಕರ್ ಸಲಹೆ ಅವಶ್ಯಕವೋ? ಇದರಿಂದ ನಿಶ್ಚಿತ ಆದಾಯ ಹಾಗೂ ಆರ್ಥಿಕ ಅಭಿವೃದ್ಧಿ ಸಾಧ್ಯವೇ? ತಿಳಿಸಿ.

ಉತ್ತರ: ನಾವು ಇಂದು ತಾಂತ್ರಿಕ ಯುಗದಲ್ಲಿ ಬದುಕುತ್ತಿದ್ದೇವೆ ಎನ್ನುವುದು ಎಲ್ಲರೂ ಅನುಭವದಿಂದ ತಿಳಿದ ವಿಚಾರ. ಅದರಲ್ಲೂ ನಮ್ಮ ಬದುಕಿನ ಮೇಲೆ ಮೊಬೈಲ್ ಹಾಗೂ ಕಂಪ್ಯೂಟರ್‌ಗಳ ಪ್ರಭಾವ ನೇರವಾಗಿ ಹಾಗೂ ಪರೋಕ್ಷವಾಗಿ ಇದ್ದೇ ಇದೆ. ನೀವು ಪ್ರಸ್ತುತ ಕಾಲಘಟ್ಟದಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಮಾಡುವ ಟ್ರೇಡಿಂಗ್ ಸುರಕ್ಷಿತವೇ ಎಂಬ ಬಗ್ಗೆ ಆತಂಕ ಭರಿತ ಅನುಮಾನವನ್ನು ಬಗೆಹರಿಸಿಕೊಳ್ಳುವ ಆಸಕ್ತಿ ತೋರಿದ್ದೀರಿ. ಈ ಸಂಸ್ಥೆಗಳ ಬಗ್ಗೆ ಆತಂಕ ಬೇಡ.

ಈ ವಿಚಾರದಲ್ಲಿ ಗಮನಿಸಬೇಕಾದ ಕೆಲವು ಸರಳ, ಆದರೆ ಅಗತ್ಯ ಮಾಹಿತಿಗಳನ್ನು ನೆನಪಿಡಿ;

ಸೆಬಿ ಮಾನ್ಯತೆ ಪಡೆದ ಬ್ರೋಕರ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ  ಪಾಸ್‌ವರ್ಡ್, ಒಟಿಪಿ ಇತ್ಯಾದಿ ಮಾಹಿತಿಯನ್ನು ಯಾರಿಗೂ ಹಂಚಿಕೊಳ್ಳಬೇಡಿ. ಪ್ರಸ್ತುತ ಎಲ್ಲ ಅಪ್ಲಿಕೇಶನ್‌ಗಳಿಗೆ ಪಾಸ್‌ವರ್ಡ್ ಅಲ್ಲದೆ, ಹೆಚ್ಚುವರಿ ನಿಮ್ಮ ಬೆರಳಚ್ಚು ಅಥವಾ ಒಟಿಪಿ ಮೂಲಕ ವ್ಯವಹರಿಸುವ ವ್ಯವಸ್ಥೆಯು ಕಡ್ಡಾಯವಾಗಿದೆ. ಹೀಗಾಗಿ ತಂತ್ರಾಂಶದ ಬಗ್ಗೆ ಯಾವುದೇ ಅನುಮಾನ ಬೇಡ. ಯಾವುದೇ ಅನಾಮಿಕ ಮಾಹಿತಿ ವಿನಿಮಯಕ್ಕೆ ಪ್ರತಿಕ್ರಿಯಿಸದಿರಿ.

ಇನ್ನು ಯಾವುದೇ ಸಲಹೆ ಪಡೆಯುವ ಬಗ್ಗೆ ಮಾಹಿತಿ ನೀಡುವುದಾದರೆ, ನಮ್ಮ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನಾವು ನಮ್ಮದೇ ರೀತಿಯ ಕೆಲವು ಪೂರ್ವ ಸಿದ್ಧತೆ ಮಾಡಿರಬೇಕು. ನಾವು ಕೈಗೊಳ್ಳುವ ನಿರ್ಧಾರ ಕೆಲವೊಮ್ಮೆ ತಪ್ಪಾಗುವ ಸಾಧ್ಯತೆ ಇಲ್ಲವೆಂದಲ್ಲ. ಆದರೆ, ನಮ್ಮ ನಿರ್ಧಾರದ ಬಗೆಗಿನ ಕಾರಣಗಳನ್ನು ಗೊತ್ತು ಮಾಡಿಕೊಳ್ಳಬೇಕು. ಇದರಿಂದ ನಮ್ಮ ತಪ್ಪುಗಳನ್ನು ನಾವು ಸರಿಪಡಿಸುವುದರಲ್ಲಿ ಸಹಾಯವಾಗುತ್ತದೆ.

ಅದೇ ತಪ್ಪು ಉಚಿತ ಸಲಹೆ ಪಡೆದು ಮಾಡಿದರೆ ಬ್ರೋಕರ್‌ಗಳನ್ನು ಹಳಿಯುವ ಪ್ರಸಂಗ ಒದಗಬಾರದು. ಇದಕ್ಕಾಗಿ ಸಲಹೆಗಳನ್ನು ಯಾವ ಆಧಾರದ ಮೇಲೆ ನೀಡಲಾಗಿದೆ, ಅವರು ಯಾವ ಕಾರಣದಿಂದ ಖರೀದಿ, ಮಾರಾಟಕ್ಕೆ ಸೂಚಿಸಿದ್ದಾರೆ ಎನ್ನುವುದನ್ನೂ ಗೊತ್ತು ಮಾಡಿ. ಎಲ್ಲದಕ್ಕಿಂತ ಮೊದಲು ಆ ಬಗ್ಗೆ ದಿನೇ ದಿನೇ ಅರಿಯುವ ಪ್ರಯತ್ನ ಮಾಡಿ. ಲಾಭ ಬರುವುದು ನಮ್ಮ ನಿರ್ಧಾರದ ಮೇಲೆ ಎನ್ನುವುದು ತಿಳಿದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT