ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಮಾರುಕಟ್ಟೆಯ ಕಷ್ಟ ಸುಖ

Last Updated 9 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಆನ್‌ಲೈನ್ ವೆಬ್‌ ಪೋರ್ಟಲ್‌ಗಳ ಮೂಲಕ ವಸ್ತ್ರ, ಎಲೆಕ್ಟ್ರಾನಿಕ್‌ ಗ್ಯಾಡ್ಜೆಟ್ಸ್‌ ಮೊದಲಾದ ವಸ್ತುಗಳನ್ನು ಖರೀದಿಸಿದ ಪ್ರತಿ ಐವರಲ್ಲಿ ಒಬ್ಬರು ತೊಂದರೆ ಅನುಭವಿಸಿದ್ದಾರೆ. ಶೇ ೬೨ರಷ್ಟು ಆನ್‌ಲೈನ್‌ ಖರೀದಿದಾರರು ಸರಬರಾಜುದಾರರ ಬಗ್ಗೆ ಸಮಾಧಾನವಿಲ್ಲದೆ ಬೇರೆ ಸರಬರಾಜುದಾರರೆಡೆ ಮುಖ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ಪ್ರದರ್ಶಿತ ವಸ್ತುಗಳಿಗೂ, ಚಿಲ್ಲರೆಯಾಗಿ ವಿತರಿತವಾಗುವ ವಸ್ತುಗಳಿಗೂ ಸಮನ್ವಯವಿಲ್ಲ ಎಂದು ಶೇ ೫೭ರಷ್ಟು ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ.

ಅಯ್ಯೊ ನಮ್ಮ ದೇಶದಲ್ಲಿ ಇದೆಲ್ಲಾ ಮಾಮೂಲು ಎನ್ನುತ್ತೀರಲ್ಲವೇ? ಆದರೆ, ಇದು ನಮ್ಮ ದೇಶದ ಸಮಾಚಾರವಲ್ಲ.  ಇಂಗ್ಲೆಂಡಿನಲ್ಲಿ ಇತ್ತೀಚೆಗೆ ನಡೆದ ಆನ್‌ಲೈನ್ ಖರೀದಿದಾರರ ಅಭಿಪ್ರಾಯ ಸಂಗ್ರಹಣೆ ವರದಿಯ (ಜೆಡಿಎ ಕಸ್ಟಮರ್ ಪಲ್ಸ್ ರಿಪೋರ್ಟ್ ೨೦೧೪) ಕೆಲವು ಮುಖ್ಯ ಅಭಿಪ್ರಾಯಗಳಿವು.  ಅಭಿವೃಧ್ಧಿ ಹೊಂದಿದ, ಸುಶಿಕ್ಷಿತ ದೇಶದಲ್ಲೇ ಪರಿಸ್ಥಿತಿ ಹೀಗಿದ್ದರೆ ಇನ್ನು ಬೇರೆಡೆ ಹೇಗಿರಬಹುದು?

ಕ್ಷಿಪ್ರ ಬೆಳವಣಿಗೆ ಕ್ಷೇತ್ರ
ಆನ್‌ಲೈನ್ ಮಾರುಕಟ್ಟೆ ಅಥವಾ ಅಂತರ್ಜಾಲ ಬಿಕರಿ ಮಾರುಕಟ್ಟೆ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ.  ನಮ್ಮ ದೇಶವೂ ಇದಕ್ಕೆ ಹೊರತಲ್ಲ. ಒಂದು ವರದಿಯ ಪ್ರಕಾರ ಗೂಗಲ್ ಇತ್ತೀಚೆಗೆ ನಡೆಸಿದ ಆನ್‌ಲೈನ್ ಖರೀದಿ ಉತ್ಸವದಲ್ಲಿ (ಗೂಗಲ್ಸ್‌ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್) ಕೇವಲ ನಾಲ್ಕು ದಿನದಲ್ಲಿ ೧.೬0 ಕೋಟಿ ಭಾರತೀಯರು ಭಾಗವಹಿಸಿದರು.  ವೇಗವಾಗಿ ಹಬ್ಬಿದ ಅಂತರ್ಜಾಲ ಸೌಲಭ್ಯ, ಅಂಗಡಿಗಳಿಗೆ ಹೋಗಿ ಶಾಪಿಂಗ್ ಮಾಡಲು ಸಮಯದ ಅಭಾವ, ಮನೆಯಲ್ಲೇ ಕುಳಿತು ಶಾಪಿಂಗ್ ಮಾಡಬಹುದಾದ ಅನುಕೂಲ, ಅಯ್ಕೆಗೆ ಅವಕಾಶವಿರುವಂತೆ ಹಲವಾರು ಸರಬರಾಜುದಾರರ ಲಭ್ಯತೆ... ಇವೆಲ್ಲವೂ ಅಂತರ್ಜಾಲ ಆಧಾರಿತ ವಿದ್ಯುನ್ಮಾನ ವಾಣಿಜ್ಯ ಚಟುವಟಿಕೆಗಳು (ಇ- ಕಾಮರ್ಸ್) ವೇಗವಾಗಿ ಬೆಳೆಯಲು ಕಾರಣವಾಗಿವೆ.

ಇತ್ತೀಚಿನವರೆಗೂ ಆನ್‌ಲೈನ್ ಶಾಪಿಂಗ್‌ನ ಗ್ರಾಹಕರ ದೊಡ್ಡಪಾಲು ಯುವಜನರದ್ದೇ ಆಗಿತ್ತು.  ೨೦೧೩ ರಲ್ಲಿ ನಮ್ಮ ದೇಶದಲ್ಲಿ ನಡೆದ ಒಂದು ಸಮೀಕ್ಷೆ ಪ್ರಕಾರ ಈ ಕ್ಷೇತ್ರದ ಒಟ್ಟು ಗಾಹಕರ ಶೇ ೮೦ರಷ್ಟು ಭಾಗ ೩೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರದ್ದೇ ಆಗಿದೆ.

ಹೊಸ ಪೀಳಿಗೆ ಮಾರುಕಟ್ಟೆ
ಆನ್‌ಲೈನ್ ವಹಿವಾಟು ಹೊಸ ಪೀಳಿಗೆಯ ಮಾರುಕಟ್ಟೆಯಾಗಿದೆ. ಈ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವುದು ಎಲೆಕ್ತ್ರಾನಿಕ್‌ ಉಪಕರಣಗಳೇ ಆಗಿವೆ ಎಂಬ ಪರಿಸ್ಥಿತಿ ಇತ್ತು.. ಆದರೆ ಕಳೆದ ಕೆಲವು ವರ್ಷಗಳಲ್ಲಿ ಖರೀದಿದಾರರ ಮತ್ತು ಮಾರಾಟವಾಗುತ್ತಿರುವ ಸಾಮಗ್ರಿಗಳಲ್ಲಿ ದೊಡ್ಡ ಬದಲಾವಣೆಯೂ ಆಗುತ್ತಿದೆ.  ಅಂತರ್ಜಾಲದ ಜೊತೆಗೇ ಟೆಲಿವಿಷನ್ ಮೂಲಕವೂ ಪ್ರಚಾರ ಜೋರಾಗತೊಡಗಿದಂತೆ ಎಲ್ಲ ವಯಸ್ಸಿನವರೂ, ಅದರಲ್ಲೂ ವಿಶೇಷವಾಗಿ ಗೃಹಿಣಿಯರು ಈ ಮಾರುಕಟ್ಟೆಯಲ್ಲಿ ಖರೀದಿ ವಹಿವಾಟು ನಡೆಸುವ ಪ್ರಮಾಣ ಹೆಚ್ಚುತ್ತಲೇ ಇದೆ.  ಹಾಗೆಯೇ ಗೃಹ ಬಳಕೆ ಸಾಮಗ್ರಿಗಳು, ಬಟ್ಟೆ, ಪೀಠೋಪಕರಣಗಳು ಮತ್ತು ಆಭರಣಗಳನ್ನು ಕೂಡ ಆನ್‌ಲೈನ್ ಅಥವಾ ದೂರವಾಣಿ ಮೂಲಕ  ಕೋರಿಕೆ ಸಲ್ಲಿಸಿ ಖರೀದಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಪ್ರಮುಖ ತೊಡಕುಗಳು
ಆನ್‌ಲೈನ್ ಮಾರುಕಟ್ಟೆ ಎಂಬುದು ಎಲ್ಲ ವಿಧದಲ್ಲೂ ಪರಿಪೂರ್ಣವಾದುದು ಎನ್ನುವಂತಿಲ್ಲ. ಬಹಳ ಸುಲಭದ, ದಿನದ 24 ಗಂಟೆಯೂ ಖರೀದಿಗೆ ಅವಕಾಶವಿರುವ, ಖರೀದಿಸಿದ ವಸ್ತು ಮನೆ ಬಾಗಿಲಿಗೆ ಬಂದು ಸೇರಿದ ನಂತರವಷ್ಟೇ ಹಣ ಪಾವತಿಗೂ ಅವಕಾಶವಿರುವ ಈ ಆನ್‌ಲೈನ್ ಮಾರುಕಟ್ಟೆಯಲ್ಲೂ ದೋಷಗಳಿವೆ.

ಆನ್‌ಲೈನ್‌ ಮಾರುಕಟ್ಟೆ ಖರೀದಿದಾರರಿಗೆ ಹಲವು  ಬಗೆಯ ತೊಡಕುಗಳಿವೆ ಎಂಬುದೂ ನಿಜ. ಮುಖ್ಯವಾಗಿ ಈ ಮಾರುಕಟ್ಟೆಯ ನಿಯಂತ್ರಣಕ್ಕಾಗಿ ಇನ್ನೂ ಸರಿಯಾದ ಕಾಯಿದೆಗಳು, ನಿಯಮಾವಳಿಗಳು ರಚನೆಯೇ ಆಗಿಲ್ಲದಿರುವುದು ಹಾಗೂ ಅಂತರ್ಜಾಲ ರಕ್ಷಣೆ (ಇಂಟರ್ನೆಟ್ ಸೆಕ್ಯುರಿಟಿ) ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿಲ್ಲದೇ ಇರುವುದು ಪ್ರಮುಖ ಸಮಸ್ಯೆಗಳು. ಇದರಿಂದಾಗಿ ಖೊಟ್ಟಿ (ನಕಲಿ) ಸರಬರಾಜುದಾರರು ಹುಟ್ಟಿಕೊಳ್ಳುತ್ತಿರುವುದು ಹಾಗೂ ಅಂತರ್ಜಾಲದ ಮೂಲಕ ಹಣ ಪಾವತಿ ಮಾಡುವಾಗ ಪಾಸ್‌ವರ್ಡ್‌ಗಳನ್ನು ಕದಿಯುವುದು... ಮೊದಲಾದ  ಸಾಧ್ಯತೆಗಳು ಹೆಚ್ಚೇ ಇವೆ. ಅಲ್ಲದೇ, ಅಂತರ್ಜಾಲದಲ್ಲಿ ಪ್ರದರ್ಶಿತವಾದಾಗ ನೋಡಿ ಖರೀದಿ ಮಾಡಿದ ವಸ್ತುವೇ ಒಂದಾಗಿದ್ದರೆ ಮತ್ತು ನಿಜವಾಗಿ ಕೈಸೇರುವ ವಸ್ತುವಿನಲ್ಲಿ ಗುಣಮಟ್ಟದಲ್ಲಿ ವ್ಯತ್ಯಾಸ ಇರುವುದು ಮತ್ತು ಸಮಯಕ್ಕೆ ಸರಿಯಾಗಿ ವಸ್ತುಗಳು ವಿತರಣೆ ಆಗದೇ ಇರುವುದು ಸಾಧಾರಣ  ಎನ್ನುವಂತಹ ಸಮಸ್ಯೆಗಳಾಗಿವೆ.

ಖರೀದಿಸಿದ ಸಾಮಗ್ರಿಯನ್ನು ಮನೆ ಬಾಗಿಲಿಗೆ ತಲುಪಿಸುವ ಕೊರಿಯರ್‌ ಸಂಸ್ಥೆಯವರು ಒಳಗಿರುವ ಸಾಮಗ್ರಿಗೆ ತಾವು ಜವಾಬ್ದಾರರಲ್ಲ ಎನ್ನುವುದು ಮತ್ತು ಹಣ ಪಾವತಿ ಮಾಡುವವರೆಗೆ ಕಟ್ಟನ್ನು ಬಿಚ್ಚಿ ಸಾಮಗ್ರಿಗಳನ್ನು ಪರಿಶೀಲಿಸಲು ಬಿಡದೇ ಇರುವುದೂ ಸೇರಿದಂತೆ ಹಲವು ಸಮಸ್ಯೆಗಳಿವೆ.

ಬಹಳ ಮುಖ್ಯ ಅಂಶವೆಂದರೆ, ಆನ್‌ಲೈನ್ ಖರೀದಿಯಲ್ಲಿ ಸರಬರಾಜುದಾರರು ಮತ್ತು ಗ್ರಾಹಕರ ನಡುವೆ ಯಾವುದೇ ನೇರ ಮಾತುಕತೆ ಇಲ್ಲದೇ ಇರುವುದು ಮತ್ತು ಮುಖ ಪರಿಚಯ ಇಲ್ಲದಿರುವುದು.  ತಾವು ಯಾವ ವ್ಯಕ್ತಿಯೊಂದಿಗೆ ವ್ಯವಹರಿಸುತ್ತಿದ್ದೇವೆ ಎಂಬುದು ತಿಳಿಯದೇ ಕೇವಲ ನಂಬಿಕೆಯ ಆಧಾರದಲ್ಲಿ ವ್ಯವಹಾರ ನಡೆಯುತ್ತಿರುತ್ತದೆ.  ಹೀಗಾಗಿ ಗ್ರಾಹಕರು ಮೋಸ ಹೋಗುವ ಸಾಧ್ಯತೆಗಳು ಬಹಳ.  ಖರೀದಿದಾರರಿಗೆಲ್ಲ ಸೈಬರ್ ಸೆಕ್ಯುರಿಟಿ ಕಾಯಿದೆಯಡಿಯಲ್ಲಿ ತಮಗಿರಬಹುದಾದ ರಕ್ಷಣೆಯ ಬಗ್ಗೆ ಹೆಚ್ಚೇನೂ ಮಾಹಿತಿ ಇರುವುದಿಲ್ಲ.  ಹಾಗೆಯೇ ಖರೀದಿಸಿದ ವಸ್ತುಗಳಲ್ಲಿ ವ್ಯತ್ಯಯವಾದರೆ, ಹಣ ಪಾವತಿ ವೇಳೆ ತೊಂದರೆಯಾದರೆ ಏನು ಮಾಡಬೆೇಕೆಂಬುದೂ ತಿಳಿದಿರುವುದಿಲ್ಲ. 

ಬಹಳಷ್ಟು ಸಂದರ್ಭಗಳಲ್ಲಿ ಸರಬರಾಜುದಾರರು ಸಮಸ್ಯೆಗಳಿದ್ದಾಗ ಸಂಪರ್ಕಿಸಲು ನೀಡಿರುವ ದೂರವಾಣಿಗಳು ಸಮರ್ಪಕವಾಗಿ ಇರುವುದಿಲ್ಲ. ದೂರು ನೀಡಲೋ, ಸಮಸ್ಯೆ ಹೇಳಿಕೊಂಡು ಪರಿಹಾರ ಪಡೆದುಕೊಳ್ಳಲೋ ಕರೆ ಮಾಡಿದರೆ ಬಹಳಷ್ಟು ಸಂದರ್ಭಗಳಲ್ಲಿ ಈ ಸಂಖ್ಯೆ ದುರಸ್ತಿಯಲ್ಲಿದೆ ಎಂದೋ, ಕರೆ ಮಾಡಿದ ಮಾರ್ಗ ಬಿಜಿ ಇದೆ ದಯವಿಟ್ಟು ಕಾಯಿರಿ ಎಂಬ ಸಂದೇಶವೇ ಬಹುತೇಕ ವೇಳೆ ಕೇಳಿಬರುವ ದ್ವನಿ ಮುದ್ರಿತ ಸಂದೇಶವಾಗಿರುತ್ತದೆ. ಇ ಮೈಲ್ ಮಾಡಿದಾಗಲೂ ಅಷ್ಟೆ. ನಿಮ್ಮ ದೂರನ್ನು ಶೀಘ್ರವೇ  ಪರಿಶೀಲಿಸಲಾಗುವುದು ಎಂಬ ಉತ್ತರ ಬಂದರೂ ನಂತರ ಯಾವುದೇ ಪ್ರತಿಕ್ರಿಯೆ ಬಾರದೇ ಇರುವ ಉದಾಹರಣೆಗಳೂ ಇವೆ. 

ವೇಗದ ಬೆಳವಣಿಗೆ!
ಇಷ್ಟೆಲ್ಲ ನಕಾರಾತ್ಮಕ ಅಂಶಗಳ ನಡುವೆಯೂ ಆನ್‌ಲೈನ್ ಮಾರುಕಟ್ಟೆ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳ ವೇಗವಾಗಿಯೇ ಬೆಳೆಯುತ್ತಿದೆ.  ಆದರೆ ಅಗತ್ಯ ಪ್ರಮಾಣದಲ್ಲಿ ಪ್ರೌಢಮಿ (ಮೆಚುರಿಟಿ) ಪಡೆದುಕೊಂಡಿಲ್ಲ ಎಂಬುದೂ ಗಮನಾರ್ಹ ಅಂಶವೇ ಆಗಿದೆ. ಆದುದರಿಂದ ಸರ್ಕಾರದ ಕಡೆಯಿಂದ ಮತ್ತು ಗ್ರಾಹಕರ ವಿಭಾಗದಿಂದ ಹಲವು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಾದ್ದು ಅತ್ಯಗತ್ಯ.

ರಕ್ಷಣಾತ್ಮಕ ಕ್ರಮಗಳು
ಆನ್‌ಲೈನ್ ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿರುವ ಭವಿಷ್ಯದ  ಸದೃಢ ಮಾರುಕಟ್ಟೆಯಾಗಿದೆ. ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಪ್ರಶ್ನಿಸಿದವರಲ್ಲಿ ಶೇ ೬೧ರಷ್ಟು ಮಂದಿ, ತಾವು ಮುಂದಿನ ದಿನಗಳಲ್ಲಿ ಆನ್‌ಲೈನ್ ಮೂಲಕವೇ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತೇವೆ ಎಂದಿದ್ದಾರೆ. ಅರ್ಧಕ್ಕಿಂತ ಹೆಚ್ಚು ಮಂದಿ ತಮ್ಮ ಮುಂದಿನ ದಿನಗಳ ಖರೀದಿಗಳ ಬಹುಪಾಲು ಆನ್‌ಲೈನ್ ಮಾರುಕಟ್ಟೆಯ ಮೂಲಕ ಬರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಈ ಮಾರುಕಟ್ಟೆಯು ವಿಶ್ವಾಸಾರ್ಹವಾಗುವಂತೆ ಮತ್ತು ಗ್ರಾಹಕರು ತೊಂದರೆಗೆ ಸಿಲುಕದಂತೆ ಮಾಡಬೇಕಾದ ಅಗತ್ಯವಿದೆ.
ಮೊದಲನೆಯದಾಗಿ, ಆನ್‌ಲೈನ್ ಮಾರಾಟ ಸೇವೆ ಒದಗಿಸುವ ಸರಬರಾಜುದಾರರು ಮತ್ತು ಅವರ ಅಂತರ್ಜಾಲ ತಾಣಗಳ ಬಗ್ಗೆ ನಿಖರ ಮಾಹಿತಿ ಲಭ್ಯವಾಗುವಂತೆ ಮಾಡಬೇಕು.  ಈ ಸರಬರಾಜುದಾರರು ಸರ್ಕಾರದಿಂದ ಸೂಕ್ತ ಪರವಾನಗಿ ಪಡೆಯುವಂತೆ ಮತ್ತು ಅಂತಹ ಇ ಕಾಮರ್ಸ್‌ ಸಂಸ್ಥೆಗಳಿಗೆ ನಿರ್ದಿಷ್ಟ ಭೌತಿಕ ವಿಳಾಸ ಇರುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು.  ಸರ್ಕಾರದ ಇನ್ನೊಂದು ಜವಾಬ್ದಾರಿ ಏನೆಂದರೆ ಅಂತರ್ಜಾಲ ಕೇಂದ್ರಿತ ವ್ಯವಹಾರಗಳಿಗೆ ಸಂಬಂಧಿಸಿದ ಕಾನೂನು ಮತ್ತು ನಿಯಮಾವಳಿಗಳನ್ನು ಸೂಕ್ತವಾಗಿ ಚಾಲ್ತಿಗೆ ತರುವುದು ಹಾಗೂ ಗ್ರಾಹಕರಿಗೆ ಈ ಕುರಿತು ಸರಿಯಾದ ಮಾಹಿತಿ ದೊರೆಯುವಂತೆ ಮಾಡುವುದು.

ಗ್ರಾಹಕರ ಜವಾಬ್ದಾರಿ
ಆದರೆ ಈ ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುವಾಗ ಗ್ರಾಹಕರೇ ಜಾಗರೂಕರಾಗಿರಬೇಕಾದುದು ಬಹಳ ಮುಖ್ಯ. ತಾವು ಖರೀದಿಸುತ್ತಿರುವ ವಸ್ತುಗಳ ಬಗ್ಗೆ ಸೂಕ್ತ ತಿಳಿವಳಿಕೆ ಪಡೆಯದೇ ಗ್ರಾಹಕರು ಆನ್‌ಲೈನ್ ಖರೀದಿಗೆ ಹೋಗಬಾರದು.  ಖರೀದಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನೂ ಜೋಪಾನವಾಗಿ ಇಟ್ಟುಕೊಂಡಿರಬೇಕು. ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುವ ಮೊದಲು ಖರೀದಿಗೆ ಸಂಬಂಧಿಸಿದ ನಿಯಮಗಳನ್ನು ಸರಿಯಾಗಿ ಓದಿಕೊಳ್ಳಬೇಕು.

ಆನ್‌ಲೈನ್‌ನಲ್ಲಿ ಪಾವತಿಸುವಾಗ ಇನ್ನೊಂದು ತುದಿಯಲ್ಲಿ ಹಣ  ಸ್ವೀಕರಿಸುವ ಸಂಸ್ಥೆಯ ಬಗ್ಗೆ ಗ್ರಾಹಕ ಸ್ಪಷ್ಟ ಮಾಹಿತಿ ಹೊಂದಿರಬೇಕು.  ವಸ್ತುಗಳು ಕೈಸೇರಿದ ನಂತರವೇ ಹಣ ಪಾವತಿಸುವ ಸೌಲಭ್ಯ ಇದ್ದರೂ ವಸ್ತು ಸರಿಯಾದುದೇ ಎಂಬುದನ್ನು ಪರಿಶೀಲಿಸಿ ನಂತರ ಪಾವತಿಸಬೇಕು.  ಯಾವುದಾದರೂ ಸಮಸ್ಯೆ ಎದುರಾದರೆ ಯಾರನ್ನು ಸಂಪರ್ಕಿಸಬೇಕು ಎನ್ನುವುದು ತಿಳಿಯದೇ ಇದ್ದರೆ ಅಥವಾ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕೆಂದು ಗೊತ್ತಿಲ್ಲವಾದರೆ  ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ (ನ್ಯಾಷನಲ್ ಕನ್ಷೂಮರ್ ಹೆಲ್ಪ್‌ಲೈನ್ - ಸಂಖ್ಯೆ ೧೮೦೦ -೧೧ -೪೦೦೦) ಕರೆಮಾಡಿ ದೂರು ನೀಡಬಹುದು, ಅಗತ್ಯ ನೆರವನ್ನೂ ಪಡೆದುಕೊಳ್ಳಬಹುದು.

ಹಲವಾರು ಅನುಕೂಲಗಳಿದ್ದರೂ, ತೊಡಕುಗಳೂ ಸಾಕಷ್ಟಿರುವ ಆನ್‌ಲೈನ್ ಮಾರುಕಟ್ಟೆಯು ಭಾರತದ ಎಲ್ಲೆಡೆಗೂ ಸಲ್ಲುವಂತೆ ಇನ್ನೂ ಪೂರ್ಣ ಪ್ರಮಾಣದ ಪ್ರೌಢ ಮಾರುಕಟ್ಟೆಯಾಗಿ ಬೆಳೆದಿಲ್ಲ. ಅದಿನ್ನೂ ಬೆಳೆಯವ ಹಂತದಲ್ಲಿದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ ಈ ಮಾರುಕಟ್ಟೆಯಲ್ಲಿ ವ್ಯವಹರಿಸುವವರು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿರಲೇ ಬೇಕು. 

ನೇರ ವಹಿವಾಟಿನ ಮಾರುಕಟ್ಟೆಯಲ್ಲಿ ಗ್ರಾಹಕ ಮತ್ತು ಮಾರಾಟಗಾರ ಮುಖಾಮುಖಿ ವ್ಯವಹರಿಸುವುದರಿಂದ ಸಂವಹನ ಸುಲಭ. ಪ್ರಶ್ನಿಸುವುದು, ಅನುಮಾನಗಳಿದ್ದರೆ ಪರಿಹರಿಸಿಕೊಳ್ಳುವುದು ಸಾಧ್ಯ. ಆದರೆ ಆನ್‌ಲೈನ್‌ ವಹಿವಾಟಿನಲ್ಲಿ ಗ್ರಾಹಕ ಮತ್ತು ಮಾರಾಟಗಾರನ ಸಂವಹನ, ಮಾರಾಟ ಪ್ರಕ್ರಿಯೆ ಎಲ್ಲವೂ ಗಣಕಯಂತ್ರ ಅಥವಾ ದೂರವಾಣಿ ಮೂಲಕ ಮಾತ್ರವೇ ಆಗಿರುವುದರಿಂದ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು, ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾದುದು ಬಹಳ ಮುಖ್ಯ. ಆನ್‌ಲೈನ್‌ ಮಾರುಕಟ್ಟೆಗೇನೋ ಭವಿಷ್ಯವಿದೆ, ಗ್ರಾಹಕರಿಗೂ ಸಹ ಉತ್ತಮ ಭವಿಷ್ಯ ಇರುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT