ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಐ ಸ್ಪರ್ಧೆ:ಸ್ಥಳೀಯ ಪರಿಹಾರ

Last Updated 13 ಆಗಸ್ಟ್ 2013, 20:00 IST
ಅಕ್ಷರ ಗಾತ್ರ

ಸ್ವಾತಂತ್ರ್ಯಾ ನಂತರ ದೇಶದ ಆರ್ಥಿಕ ಪ್ರಗತಿ ಚುರುಕುಗೊಳಿಸಲು ಅಗತ್ಯವಾದ ಬಂಡವಾಳವನ್ನು ವಿವಿಧ ದೇಶಗಳಿಂದ ಸಾಲ ರೂಪದಲ್ಲಿ ಪಡೆಯಲಾಯಿತು. ಇದರಿಂದ ದೇಶದ ಸಾಲದ ಹೊರೆ ಬೆಳೆದು ವಿದೇಶಿ ವಿನಿಮಯ ಕೊರತೆ ಅನುಭವಿಸುವಂತಾಯಿತು. 1990ರ ದಶಕದಲ್ಲಿ ಅನುಷ್ಠಾನಗೊಂಡ ಉದಾರ ಆರ್ಥಿಕ ನೀತಿ ಮತ್ತು ಅದರಿಂದಾಗಿ ಆರಂಭವಾದ ಜಾಗತೀಕರಣ ಪ್ರಕ್ರಿಯೆಯಲ್ಲಿ ಸಾಲದ ಬದಲಾಗಿ ವಿದೇಶಿ ಬಂಡವಾಳಕ್ಕೆ (ಎಫ್‌ಡಿಐ) ಪ್ರಮುಖ ಸ್ಥಾನ ದೊರೆಯಿತು.

ಈ ಬಂಡವಾಳ ವಿವಿಧ ಮೂಲಗಳಿಂದ ಬೇರೆ ಬೇರೆ ರೂಪದಲ್ಲಿ ಭಾರತ ಪ್ರವೇಶಿಸಬಹುದು. ಸ್ಥೂಲವಾಗಿ ಹೇಳಬೇಕೆಂದರೆ ವಿದೇಶಿ ಬಂಡವಾಳ ಈಗಾಗಲೇ ವಹಿವಾಟು ನಡೆಸುತ್ತಿರುವ ಭಾರತದ ಕಂಪೆನಿಗಳಲ್ಲಿ ಷೇರು ಖರೀದಿಸುವ ಮೂಲಕ ಮತ್ತು ಅಂತಹ ಕಂಪನಿಗಳ ಪತ್ತಿನಲ್ಲಿ ಹೂಡಿಕೆ ಮಾಡುವ ಮೂಲಕ ಬರಬಹುದು.

ಹೊಸದಾಗಿ ಕಂಪೆನಿ ಸ್ಥಾಪಿಸುವ ಅಥವಾ ಈಗಾಗಲೇ ಇರುವ ಭಾರತೀಯರ ಸ್ವಾಮ್ಯದ ಉದ್ದಿಮೆಯನ್ನು ಸ್ವಾಮ್ಯಕ್ಕೆ ತೆಗೆದುಕೊಳ್ಳುವ ಮೂಲಕವೂ ಬರಬಹುದು. ಈ `ಎಫ್‌ಡಿಐ' ಪ್ರಕ್ರಿಯೆಯಲ್ಲಿ ವಿದೇಶಿ ಬಂಡವಾಳದಾರರು ಕಂಪೆನಿ ವ್ಯವಹಾರ ನಡೆಸುವ ಜವಾಬ್ದಾರಿಹೊರುತ್ತಾರೆ. ವಹಿವಾಟು ನಿಯಂತ್ರಣ ಮತ್ತು ಲಾಭದ ಹಕ್ಕನ್ನೂ ಹೊಂದಿರುತ್ತಾರೆ. ಈ ರೀತಿಯ ವಿದೇಶಿ ನೇರ ಹೂಡಿಕೆಗೆ ದೇಶದ ಉದ್ದಿಮೆಗಳಲ್ಲಿ ವಿವಿಧ ಪ್ರಮಾಣದಲ್ಲಿ ಅವಕಾಶವಿದೆ.

ಚಿಲ್ಲರೆ ವಹಿವಾಟು ವಲಯ
ಚಿಲ್ಲರೆ ಮಾರುಕಟ್ಟೆಗೆ ಸಂಬಂಧಿಸಿದಂತೆ ಕೂಡ ವಿದೇಶೀಯರ ಬಂಡವಾಳ ಹೂಡಿಕೆ ನಮ್ಮ ದೇಶಕ್ಕೆ ಹೊಸತೇನೂ ಅಲ್ಲ. ಈಗಾಗಲೇ ಹಲವು ರೀತಿಯ ಚಿಲ್ಲರೆ ವ್ಯವಹಾರಗಳಿಗೆ ಬೇರೆ ಬೇರೆ ಪ್ರಮಾಣದಲ್ಲಿ ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡಲಾಗಿದೆ. ಭಾರಿ ಪ್ರಮಾಣದ ಬಂಡವಾಳವೂ ಹೂಡಿಕೆಯಾಗಿದೆ.

ಒಂದೇ ಕಂಪನಿಯ ವಸ್ತುಗಳ ಚಿಲ್ಲರೆ ಮಾರಾಟಕ್ಕೆ `ಎಫ್‌ಡಿಐ'ಗೆ ಅವಕಾಶ ನೀಡಿ ದಶಕವೇ ಕಳೆದಿದೆ. ಅಂದರೆ ಯಾವುದೇ ಒಂದು ವಿದೇಶಿ ಸಂಸ್ಥೆ ತನ್ನ ಉತ್ಪನ್ನಗಳನ್ನಷ್ಟೇ ಮಾರಾಟ ಮಾಡಲು ಭಾರತದಲ್ಲಿ ನೇರವಾಗಿ ಬಂಡವಾಳ ಹೂಡಬಹುದು. ಉದಾ: Reebok, Nike ಮೊದಲಾದ ಕ್ರೀಡಾ ಸಾಮಗ್ರಿ ತಯಾರಿಕೆ ಕಂಪನಿಗಳು ಈಗಾಗಲೇ ನೇರ ಬಂಡವಾಳ ಹೂಡಿಕೆ ಮೂಲಕ ಮಳಿಗೆಗಳನ್ನು ತೆರೆದು ತಮ್ಮ ಉತ್ಪನ್ನಗಳನ್ನು ಮಾರುತ್ತಿವೆ. ಆದರೆ, ಈ ಮಳಿಗೆಗಳಲ್ಲಿ ಬೇರಾವುದೇ ಕಂಪನಿಯ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ.

ಸಗಟು ಮಾರಾಟ ವಲಯದಲ್ಲಿ  ವಿವಿಧ ಕಂಪನಿಗಳ ವಸ್ತುಗಳನ್ನು ಒಂದೇ ಕಡೆ ಮಾರಲು ಕೂಡ ವಿದೇಶಿ ಹೂಡಿಕೆ ನಡೆದಿದೆ. ಉದಾ: ಜರ್ಮನಿ ಮೂಲದ ಮೆಟ್ರೊ.

ಉನ್ನತ ತಂತ್ರಜ್ಞಾನ ಪರಿಕರಗಳು, ಮಾರಾಟದ ನಂತರದ ಸೇವೆ, ನಿರ್ದಿಷ್ಟ ವೈದ್ಯಕೀಯ ಸಾಮಗ್ರಿ, ಭಾರತದ ಉದ್ದಿಮೆಗಳಿಂದಲೇ ಪರಿಕರ ಪಡೆದು ವಿದೇಶಿ ತಂತ್ರಜ್ಞಾನ ಬಳಸಿ ತಯಾರಿಸುವ ವಸ್ತುಗಳು, ಎರಡು ವರ್ಷಗಳ ಅವಧಿಗೆ, ಮಾರುಕಟ್ಟೆ ಪರೀಕ್ಷೆಗಾಗಿ (Test Marketing)) ತಯಾರಿಸಿ ಮಾರಾಟ ಮಾಡುವ ವಸ್ತುಗಳು... ಹೀಗೆ ದೇಶದ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ಹಲವು ಬಗೆಯಲ್ಲಿ `ಎಫ್‌ಡಿಐ' ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ.ಆದರೆ ಈ ಅವಕಾಶ ಕೆಲವೇ ವಸ್ತುಗಳಿಗೆ ಮತ್ತು ಮಾರುಕಟ್ಟೆಯ ಒಂದು ವರ್ಗಕ್ಕಷ್ಟೇ ಸೀಮಿತವಾಗಿದ್ದು, ನಿತ್ಯ ಬಳಕೆ ವಸ್ತುಗಳ ಮಾರಾಟಕ್ಕೆ ಅನ್ವಯಿಸುವುದಿಲ್ಲ.

ಹೊಸತೇನಿದೆ?
ನಮ್ಮ ರಾಜ್ಯ ಸರ್ಕಾರ ಅನುಮೋದಿಸಿರುವ ನೀತಿಯು ಬಹುಬಗೆ ವಸ್ತುಗಳ ಚಿಲ್ಲರೆ ಮಾರಾಟಕ್ಕೆ (Multi Brand Retailing) ಸಂಬಂಧಿಸಿದೆ. ಕೇಂದ್ರ ಸರ್ಕಾರದ ಹೊಸನೀತಿ ಪ್ರಕಾರ ಬೇರೆ ಬೇರೆ ಉತ್ಪಾದಕರ, ವಿವಿಧ ರೀತಿಯ ಉತ್ಪನ್ನಗಳನ್ನು ಒಂದೇ ಕಡೆ ಚಿಲ್ಲರೆ ವಹಿವಾಟು ಮೂಲಕ ಮಾರಲು ವಿದೇಶಿ ನೇರ ಬಂಡವಾಳ ಹೂಡಿಕೆಗೆ ನಿರ್ದಿಷ್ಟ ಪ್ರಮಾಣದಲ್ಲಿ ಈಗ ಸಮ್ಮತಿಸಲಾಗಿದೆ. ಇದರ ಅರ್ಥ ಪ್ರಪಂಚದ ದೊಡ್ಡ ಚಿಲ್ಲರೆ ಮಾರಾಟ ಸಂಸ್ಥೆಗಳು ನಮ್ಮಲ್ಲಿ ಮಾರಾಟ ಮಳಿಗೆ ತೆರೆಯಬಹುದಾಗಿದೆ.

ಈಗಾಗಲೇ ಭಾರತೀಯ ಕಂಪನಿಗಳು ಚಿಲ್ಲರೆ ಮಾರುಕಟ್ಟೆ ವಹಿವಾಟು ನಡೆಸುತ್ತಿವೆ. ಬಿರ್ಲಾ ಸಮೂಹದ `ಮೋರ್', ರಿಲಯನ್ಸ್ ಸಮೂಹದ `ರಿಲಯನ್ಸ್ ಫ್ರೆಶ್', ಭಾರ್ತಿ ಎಂಟರ್‌ಪ್ರೈಸಸ್‌ನ  `ಈಜೀ ಡೇ' ಮೊದಲಾದ ಸಂಸ್ಥೆಗಳ ಚಿಲ್ಲರೆ ವಹಿವಾಟು ಫಟಕಗಳು ಮೈಸೂರು, ಮಂಗಳೂರು ಮೊದಲಾದ ಎರಡನೇ ಶ್ರೇಣಿ ನಗರಗಳಲ್ಲಿಯೂ ಕಾರ್ಯಾಚರಣೆ ಆರಂಭಿಸಿವೆ. ಹಾಗಿದ್ದೂ ಸರ್ಕಾರದ ಈಗಿನ ನೀತಿ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಕಾರಣವೇನು? ಇದನ್ನು ಅರಿಯಲು ಚಿಲ್ಲರೆ ಮಾರುಕಟ್ಟೆಯ ಸದ್ಯದ ಸ್ಥಿತಿಯನ್ನು ಮೊದಲು ಅರ್ಥಮಾಡಿಕೊಳ್ಳಬೇಕು.

ಹೆಚ್ಚು ಉದ್ಯೋಗದ ಕ್ಷೇತ್ರ
ಭಾರತದ ಚಿಲ್ಲರೆ ಮಾರುಕಟ್ಟೆ, ಕೃಷಿ ನಂತರ ಅತ್ಯಂತ ಹೆಚ್ಚು ಜನರಿಗೆ ಉದ್ಯೋಗ ನೀಡಿರುವ ಕ್ಷೇತ್ರ. ದೇಶದ ಜನಸಂಖ್ಯೆಯ ಶೇ 8ಕ್ಕೂ ಹೆಚ್ಚಿನ ಜನರು ಆದಾಯಕ್ಕಾಗಿ ಈ ಕ್ಷೇತ್ರವನ್ನು ಅವಲಂಬಿಸಿದ್ದಾರೆ. ದೇಶದ ವಾರ್ಷಿಕ ಆದಾಯದ ಶೇ 10ರಷ್ಟು ಈ ಕ್ಷೇತ್ರದಿಂದಲೇ ಬರುತ್ತಿದೆ. 1.20 ಕೋಟಿಯಷ್ಟು ಚಿಲ್ಲರೆ ವ್ಯಾಪಾರ ಮಳಿಗೆಗಳು ದೇಶದಲ್ಲಿವೆ. ಬಹಳಷ್ಟು ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬದ ಸ್ವಉದ್ಯೋಗ ರೂಪದಲ್ಲಿವೆ. ಕುಟುಂಬಗಳ ಮೂಲ ಆದಾಯ ಮೂಲವಾಗಿವೆ. ಮುಖ್ಯ ಸಂಗತಿಯೆಂದರೆ ದೇಶದ ಚಿಲ್ಲರೆ ಮಾರುಕಟ್ಟೆಯ ಶೇ 97ರಷ್ಟು ಅಸಂಘಟಿತ ವಲಯಕ್ಕೆ ಸೇರಿದ್ದು, ಇಂದಿಗೂ ಪಾರಂಪರಿಕ ಕಿರಾಣಿ ಅಂಗಡಿ ಸ್ವರೂಪದಲ್ಲೇ ವ್ಯವಹರಿಸುತ್ತಿವೆ.

ಇಂತಹ ಕ್ಷೇತ್ರಕ್ಕೆ ಶೇ 51ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡಿದರೆ, ಚಿಲ್ಲರೆ ವ್ಯಾಪಾರವನ್ನೇ ನಂಬಿಕೊಂಡಿರುವ ಸಮೂಹಕ್ಕೆ ದೊಡ್ಡ ಹೊಡೆತ ಬೀಳಬಹುದು ಎನ್ನುವುದು ವಿರೋಧಿಗಳ ವಾದ. ಆದರೆ, `ಎಫ್‌ಡಿಐ'ನಿಂದ ಚಿಲ್ಲರೆ ಮಾರುಕಟ್ಟೆ ಹೆಚ್ಚು ಸಂಘಟಿತವಾಗಿ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎನ್ನುವುದು ಸರ್ಕಾರದ ತರ್ಕ.

ಇತರೆ ದೇಶಗಳ ನೀತಿ?
ವಿವಿಧ ದೇಶಗಳು ಚಿಲ್ಲರೆ ಮಾರುಕಟ್ಟೆಯಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಎಫ್‌ಡಿಐಗೆ ಅವಕಾಶ ನೀಡಿವೆ. ಜಪಾನ್ ಬೆಳವಣಿಗೆ ಹಂತದಲ್ಲಿಯೇ ಈ ಕ್ಷೇತ್ರದಲ್ಲಿ `ಎಫ್‌ಡಿಐ' ಬರಮಾಡಿಕೊಂಡಿತು.

ಶ್ರೀಲಂಕಾ, ನಮ್ಮಂತೆಯೇ ಡೋಲಾಯಮಾನ ಸ್ಥಿತಿಯಲ್ಲಿದ್ದ ಫಿಲಿಪ್ಪೀನ್ಸ್, ಬೆಳವಣಿಗೆಯ ಕಡೆ ಈಗ ಮುಖ ಮಾಡಿರುವ ಮಾಜಿ ಕಮ್ಯೂನಿಸ್ಟ್ ದೇಶ ವಿಯೆಟ್ನಾಂ ಚಿಲ್ಲರೆ ಮಾರುಕಟ್ಟೆ ವಲಯದಲ್ಲಿ `ಎಫ್‌ಡಿಐ'ಗೆ ಒಪ್ಪಿವೆ. ಆಸ್ಟ್ರಿಯ, ಜೆಕ್ ರಿಪಬ್ಲಿಕ್, ಫ್ರಾನ್ಸ್, ಹಂಗರಿ, ಇಟಲಿ, ಕೋರಿಯಾದಲ್ಲಿ ಹಲವು ವರ್ಷಗಳಿಂದಲೇ ಎಫ್‌ಡಿಐ ಚಾಲ್ತಿಯಲ್ಲಿದೆ.

ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಮಾರ್ಗದರ್ಶಕ ಎನಿಸಬಹುದಾಗಿರುವುದು ಚೀನಾದ ಅನುಭವ. ಚೀನಾ 1992ರಿಂದಲೇ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ ಒಪ್ಪಿಕೊಂಡಿದೆ. 2004ರಲ್ಲಿ ಶೇ 100ರಷ್ಟು ವಿದೇಶಿ ಹೂಡಿಕೆಗೆ ಅನುಮತಿ ನೀಡಿದೆ. ಈ ಹಂತ ತಲುಪಲು ಚೀನಾ 12 ವರ್ಷ ತೆಗೆದುಕೊಂಡಿತು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಮೊದಲ ಹಂತದಲ್ಲಿ ಶೇ 26ರಷ್ಟು ಎಫ್‌ಡಿಐಗೆ ಅನುಮೋದಿಸಿ, ನಂತರ ವಿಸ್ತರಿಸುತ್ತಾ ಬಂದಿತು.

ಆರಂಭಿಕ ಹಂತದಲ್ಲಿ ಕೆಲವೇ ಮಹಾನಗರಗಳಲ್ಲಿ ವಿದೇಶಿ ಸಂಸ್ಥೆಗಳ ವಹಿವಾಟಿಗೆ ಅನುಮೋದನೆ ನೀಡಲಾಗಿತ್ತು. ವಿದೇಶಿ ಹೂಡಿಕೆದಾರರಿಗೆ ಅನುಮತಿ ನೀಡುವ ಜತೆಗೇ ದೇಶೀ ಸಂಸ್ಥೆಗಳಿಗೂ ಅಗತ್ಯ ನೆರವು ನೀಡಿ ವಿದೇಶಿ ಕಂಪೆನಿಗಳ ಪೈಪೋಟಿ ಎದುರಿಸಲು, ಉತ್ತಮ ಕ್ಷಮತೆ ಗಳಿಸಲು ನೆರವು ನೀಡಿತ್ತು. ಇದರಿಂದಾಗಿ 2010ರಲ್ಲಿ ಚೀನಾದಲ್ಲಿದ್ದ ಪ್ರಮುಖ ಹತ್ತು ಚಿಲ್ಲರೆ ವಹಿವಾಟು ಸಂಸ್ಥೆಗಳಲ್ಲಿ ಏಳು ದೇಶೀಯ ಸಂಸ್ಥೆಗಳೇ ಆಗಿದ್ದರೆ, ಮೂರು ಮಾತ್ರ ಅಮೆರಿಕ, ಫ್ರಾನ್ಸ್, ತೈವಾನ್ ಕಂಪನಿಗಳಾಗಿದ್ದವು.

ಚೀನಾದ ಈ ನೀತಿಗೆ ಹೋಲಿಸಿದರೆ ಸದ್ಯ ನಮ್ಮ ಕೇಂದ್ರ ಸರ್ಕಾರ ಘೋಷಿಸಿರುವ ನೀತಿಯು ಸ್ವಲ್ಪ ತುರಾತುರಿಯ ನಿರ್ಧಾರ ಎನಿಸದಿರದು. ಆರಂಭದಲ್ಲೇ ಶೇ 51ರಷ್ಟು ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವುದು, ಹತ್ತು ಲಕ್ಷ ಅಥವಾ ಅದಕ್ಕಿಂತಲೂ ಕಡಿಮೆ ಜನಸಂಖ್ಯೆ ಇರುವ ನಗರಗಳಲ್ಲಿಯೂ ಚಿಲ್ಲರೆ ವಹಿವಾಟು ಆರಂಭಿಸಲು ಅನುಮತಿ ನೀಡಿರುವುದು ಮತ್ತು ಅತಿ ಮುಖ್ಯವಾಗಿ ದೇಶೀಯ ಸಂಘಟಿತ ಮತ್ತು ಅಸಂಘಟಿತ ವಲಯದ ಚಿಲ್ಲರೆ ವ್ಯಾಪಾರಿ ಸಂಸ್ಥೆಗಳ ರಕ್ಷಣೆ ಮತ್ತು ಪುನರ್ ಸಂಘಟನೆಗೆ ಸಂಬಂಧಿಸಿದಂತೆ ಏನೂ ಹೇಳದಿರುವುದು ಪ್ರಕಟಿತ ನೀತಿಯ ಪುನರ್ ಪರಿಶೀಲನೆ ಅಗತ್ಯ ಎಂಬುದನ್ನು ಎತ್ತಿತೋರಿಸುತ್ತದೆ.

ಸಮಸ್ಯೆ ಇರುವುದು `ಎಫ್‌ಡಿಐ'ನಲ್ಲಿ ಅಲ್ಲ, ಅದನ್ನು ತರಲು ಹೊರಟಿರುವ ಮಾರ್ಗೋಪಾಯಗಳಲ್ಲಿ. ದೇಶದ ಚಿಲ್ಲರೆ ವ್ಯಾಪಾರ ಕ್ಷೇತ್ರದ ಬಗ್ಗೆ ಸಮಗ್ರ, ವೈಜ್ಞಾನಿಕ ಅಧ್ಯಯನವೇ ಈವರೆಗೂ ನಡೆದಿಲ್ಲ. ಈ ಪ್ರಯತ್ನ ಮೊದಲು ಆಗಬೇಕಿದೆ. ನಂತರ ಅಸಂಘಟಿತ ವಲಯವನ್ನು ಸಂಘಟಿತವನ್ನಾಗಿಸುವ ಮಾರ್ಗೋಪಾಯಗಳ ಬಗ್ಗೆ ನೀತಿ ರಚನೆ ಮತ್ತು ಅನುಷ್ಠಾನ.

ಈ  ಮೊದಲು ಶೇ 30ರಷ್ಟು ಸರಕುಗಳನ್ನು ದೇಶೀಯ ಸಣ್ಣ ಘಟಕಗಳಿಂದ ಖರೀದಿಸಬೇಕು ಎಂಬ ನಿಯಮವಿತ್ತು. ಈಗ ಕೇಂದ್ರ ಸರ್ಕಾರದ   ಹೊಸ ಪ್ರಸ್ತಾವನೆಯಲ್ಲಿ ಸಣ್ಣ ಘಟಕದ ವ್ಯಾಖ್ಯೆಯನ್ನು ವಿಸ್ತರಿಸಲಾಗಿದ್ದು ಹೆಚ್ಚು ಮಧ್ಯಮ ಘಟಕಗಳೂ ಈ ಪರಿಧಿಯಲ್ಲಿ ಬರಲಿವೆ.  ಶೇ 30ರಷ್ಟು ಸರಕುಗಳನ್ನು ಕೇವಲ ಸಣ್ಣ ಮತ್ತು ಅತಿ ಸಣ್ಣ ಘಟಕಗಳಿಂದ ಖರೀದಿಸುವುದು ಕಷ್ಟವಾದುದರಿಂದ ಮತ್ತು ಬಹಳಷ್ಟು ಸಂಸ್ಕರಣ ಘಟಕಗಳು ಮಧ್ಯಮ ಗಾತ್ರದವುಗಳಾದ್ದರಿಂದ ಈ ಬದಲಾವಣೆಯಿಂದ ಒಳಿತಾಗಬಹುದು.  ವಿಷೇಷವಾಗಿ ಸಂಸ್ಕರಿತ ಕೃಷಿ ಉತ್ಪನ್ನಗಳ ಬೇಡಿಕೆ ಹೆಚ್ಚುವುದರಿಂದ ಕೃಷಿ ಕ್ಷೇತ್ರಕ್ಕೆ ಅನುಕೂಲವಾಗಬಹುದು.

ಇನ್ನೆರಡು ಬದಲಾವಣೆ ಮಾತ್ರ ಒಳ್ಳೆಯವಲ್ಲ.  ಹತ್ತು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ನಗರಗಳಲ್ಲಿಯೂ ವಿದೇಶಿ ಹೂಡಿಕೆದಾರರು ಮಾರಾಟ ಮಳಿಗೆಗಳನ್ನು ತೆರೆಯಲು ಅವಕಾಶ ನೀಡುವುದರಿಂದ ಅಸಂಘಟಿತ ವಲಯದ ಸಣ್ಣ ಮಾರಾಟಗಾರರಿಗೆ ಸಮಸ್ಯೆಯಾಗುತ್ತದೆ.  ಇಂತಹ ಬದಲಾವಣೆ ತರಲು ಕನಿಷ್ಟ ಹತ್ತು ವರ್ಷವಾದರೂ ಕಾದುನೋಡಬೇಕು.

ನಿಯಮ ಸಡಿಲಿಕೆ
ಇನ್ನೊಂದು ಬದಲಾವಣೆಯಂತೂ ಆಘಾತಕಾರಿ. ಒಟ್ಟು ಬಂಡವಾಳ ಹೂಡಿಕೆಯ ಶೇ 50ರಷ್ಟನ್ನು ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ವಿನಿಯೋಗಿಸಬೇಕು ಎನ್ನುವ ನಿಯಮದ ಸಡಿಲಿಕೆ. ಇದು ಆರಂಭದಲ್ಲಿ ಹೂಡಿಕೆ ಮಾಡುವ 10 ಕೋಟಿ ಡಾಲರ್‌ಗಳಿಗೆ ಮಾತ್ರ ಕಡ್ಡಾಯವೆಂದೂ ನಂತರ ಹೂಡಿಕೆದಾರರ ವಿವೇಚನೆಗೆ ಬಿಟ್ಟಿದ್ದೆಂದೂ ಬದಲಾವಣೆ ಸೂಚಿಸಲಾಗಿದೆ.

ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಇದ್ದ ಪ್ರಬಲ ಕಾರಣವೇ ಮೂಲಸೌಕರ್ಯ ಅಭಿವೃದ್ಧಿ. ಇದೂ ಸೀಮಿತವಾದಲ್ಲಿ ಮೂಲ ಉದ್ದೇಶದಲ್ಲೇ ರಾಜಿ ಮಾಡಿಕೊಂಡಂತಾಗುತ್ತದೆ.  ಅಲ್ಲದೆ ಸರ್ಕಾರದ ಮೇಲೆ ಒತ್ತಡ ತಂದು ಈ ಬದಲಾವಣೆಗೆ ಕಾರಣವಾಗುತ್ತಿರುವ ವಿದೇಶಿ ಹೂಡಿಕೆದಾರರಿಗೆ ನಮ್ಮ ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಮನಸ್ಸಿಲ್ಲದಿರುವುದೂ ಸ್ಪಷ್ಟವಾಗುತ್ತದೆ.

ದೇಶದಲ್ಲಿ ಉತ್ಪಾದನೆ, ಸಂಸ್ಕರಣೆ, ವಿತರಣೆ, ವಸ್ತುಗಳ ವಿನ್ಯಾಸ ಅಭಿವೃದ್ಧಿ, ಗುಣ್ಣಮಟ್ಟ ನಿಯಂತ್ರಣ, ಉಗ್ರಾಣ ವ್ಯವಸ್ಥೆ, ಶೈತ್ಯಾಗಾರ  ನಿರ್ಮಾಣ ಮುಂತಾದವಕ್ಕೆ ಸಂಬಂಧಿಸಿದ ಮೂಲ ಪರಿಕರಗಳ ಅಭಿವೃದ್ಧಿಯಾದಲ್ಲಿ ಮಾತ್ರ ದೇಶಿ ಕೃಷಿಕರಿಗೆ, ಉತ್ಪಾದಕರಿಗೆ ಮತ್ತು ಮಾರಾಟಗಾರರಿಗೆ ಅನುಕೂಲ. ಇಲ್ಲವಾದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಯಾವುದೇ ಅರ್ಥವಿಲ್ಲ.  ಎಲ್ಲಕ್ಕಿಂತ ಹೆಚ್ಚಾಗಿ ಈ ಬದಲಾವಣೆ  ಹೇಗಾದರೂ ಮಾಡಿ ವಿದೇಶಿ ಬಂಡವಾಳವನ್ನು ಆಕರ್ಷಿಸಬೇಕೆನ್ನುವ ಸರ್ಕಾರದ ಹತಾಶೆ ಮತ್ತು ಅಸಹಾಯಕ ಕ್ರಮದಂತೆ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT