ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ತೆದಾರಿಕೆ ಬಾಲ್ ಕ್ಯಾಮೆರಾ

Last Updated 30 ಜೂನ್ 2015, 19:30 IST
ಅಕ್ಷರ ಗಾತ್ರ

ಧಗಧಗನೆ ಹೊತ್ತಿ ಉರಿಯುತ್ತಿರುವ ಬೆಂಕಿ.. ಆ ಕಟ್ಟಡದೊಳಗೆ ಸಿಲುಕಿಕೊಂಡ ವ್ಯಕ್ತಿ ಸಹಾಯಕ್ಕಾಗಿ ಕೂಗುತ್ತಿದ್ದಾನೆ. ಆದರೆ ದಟ್ಟ ಹೊಗೆಯಿಂದಾಗಿ ಪೊಲೀಸರಿಗಾಗಲೀ, ರಕ್ಷಣಾ ಪಡೆಯವರಿಗಾಗಲೀ ಅಲ್ಲಿ ತಲುಪಲಾಗುತ್ತಿಲ್ಲ. ಒಟ್ಟಿನಲ್ಲಿ ಅಸಹಾಯಕ ಪರಿಸ್ಥಿತಿ. ಅಲ್ಲಿ ಸಿಲುಕಿ ಕೊಂಡಿರುವ ವ್ಯಕ್ತಿ ಯಾವ ಮೂಲೆಯಲ್ಲಿದ್ದಾನೆ ಎಂದು ಗುರುತಿಸುವುದೂ ಕಷ್ಟವೇ.

ಈ ರೀತಿ ತೊಂದರೆಗೊಳಗಾದ ವ್ಯಕ್ತಿಯ ಇರುವಿಕೆಯನ್ನು ಸುಲಭವಾಗಿ ಪತ್ತೆ ಮಾಡುವಂತಿದ್ದರೆ? ಆತನ ಜೀವ ರಕ್ಷಣೆಗೆ ಹಾಗೂ ಆತನ ರಕ್ಷಣೆಗಾಗಿ ಮುಂದಡಿ ಇಟ್ಟವರಿಗೆ ಅದೆಷ್ಟು ಅನುಕೂಲವಾಗುತ್ತಿತ್ತು ಅಲ್ಲವೇ?

ಇದೀಗ ಅಮೆರಿಕ ಮೂಲದ ವಿಶ್ವವಿದ್ಯಾಲಯವೊಂದು ಈ ರೀತಿಯ ಸಂದರ್ಭದಲ್ಲಿ ಅನುಕೂಲವಾಗುವ ಸುರಕ್ಷತಾ ಕ್ಯಾಮೆರಾವೊಂದನ್ನು ತಯಾರಿಸಿದೆ. ಸುಮಾರು ಐದು ವರ್ಷಗಳ ಹಿಂದೆ ವಿದ್ಯಾರ್ಥಿಯೊಬ್ಬ ವ್ಯಾಸಂಗದ ಅವಧಿಯ ಪ್ರಾಜೆಕ್ಟ್‌ ರಿಪೋರ್ಟ್‌ನಲ್ಲಿ ಸೂಚಿಸಿದ್ದ ಚಿಂತನೆಯನ್ನೇ ಇದೀಗ ಹೀಗೆ ಅಭಿವೃದ್ಧಿಪಡಿಸಲಾಗಿದೆ.

ನೋಡಲು ಸಣ್ಣ ಬಾಲ್‌ನ ಆಕಾರದಲ್ಲಿ ಇರುವ ಈ ಅತ್ಯಾಧುನಿಕ ಕ್ಯಾಮೆರಾ, 360 ಡಿಗ್ರಿ ಕೋನದಲ್ಲಿ ದೃಶ್ಯಗಳನ್ನು ವೀಕ್ಷಿಸಲು ಅವಕಾಶವಾಗುವಂತೆ ತನ್ನ ಮೈಮೇಲೆ ಸುತ್ತಲೂ ಆರು ಕ್ಯಾಮೆರಾಗಳನ್ನು ಹೊಂದಿದೆ. ಇವು ರಾತ್ರಿಯ ಕತ್ತಲಿನಲ್ಲೂ ಸುಸ್ಪಷ್ಟವಾಗಿ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿವೆ. ಜತೆಗೆ ಸೆನ್ಸರ್‌ಗಳನ್ನು ಹೊಂದಿರುವ ಈ ಬಾಲ್, ಮನುಷ್ಯ ಇಲ್ಲವೇ ಪ್ರಾಣಿಯನ್ನು ಸ್ಪಷ್ಟವಾಗಿ ಗುರುತಿಸಬಲ್ಲದಾಗಿದೆ.

ಎಲ್‌ಇಡಿ ಬಲ್ಬ್‌ನ ಅಳವಡಿಕೆಯಿಂದಾಗಿ, ಇದರ ಕಾರ್ಯಾಚರಣೆಗೆ ಸೂಕ್ತ ಬೆಳಕು ಲಭಿಸುತ್ತದೆ. ರಕ್ಷಣಾ ಇಲಾಖೆ, ಪೊಲೀಸ್ ಮತ್ತು ಅಪರಾಧ ಪತ್ತೆ ತಂಡಗಳಿಗೆ ಇದು ಬಹೂಪಯೋಗಿಯಾಗಿದ್ದು, ಕಾರ್ಯಾಚರಣೆಗೆ ನೆರವಾಗಲಿದೆ. ಈ ಬಾಲ್ ಕ್ಯಾಮೆರಾ ಉರುಳಿಕೊಂಡು ಸಾಗುತ್ತಾ ತನ್ನ ಸುತ್ತಮುತ್ತಲಿನ ದೃಶ್ಯಗಳನ್ನು ಸೆರೆಹಿಡಿದು ತನ್ನ ನಿಯಂತ್ರಣ ಕೇಂದ್ರಕ್ಕೆ ಕಳುಹಿಸುತ್ತದೆ.

ಇದರ ನಿಯಂತ್ರಣ ಮತ್ತು ಚಿತ್ರಗಳನ್ನು ಸ್ಮಾರ್ಟ್‌ಫೋನಿನಲ್ಲೂ ನಿರ್ವಹಿಸುವಂತೆ ರೂಪಿಸಲಾಗಿದೆ. ಇದರಿಂದ ಬೇಕಾದ ಸಂದರ್ಭದಲ್ಲಿ ಇದನ್ನು ಸುಲಭವಾಗಿ ಬಳಸಬಹುದು. ಇದರ ಸೆನ್ಸರ್ ತನ್ನ ವ್ಯಾಪ್ತಿಯಲ್ಲಿ ಕಾಣಿಸುವ ವಸ್ತುಗಳನ್ನು ಗುರುತು ಹಿಡಿದು ತಕ್ಷಣ ಸಂದೇಶ ಕಳುಹಿಸುವ ಸೌಲಭ್ಯ ಹೊಂದಿದೆ.

ಆರು ವಿವಿಧ ಕೋನಗಳಲ್ಲಿರುವ ಕ್ಯಾಮೆರಾ ಮೂಲಕ 360 ಡಿಗ್ರಿಯ ಪನೋರಾಮಿಕ್ ಚಿತ್ರಗಳನ್ನು ಸುಲಭವಾಗಿ ಇದು ಸೆರೆ ಹಿಡಿಯುವುದರಿಂದ, ಏಕಕಾಲದಲ್ಲಿ ಒಂದು ಪ್ರದೇಶದ ಎಲ್ಲ ಕೋನಗಳ ಪೂರ್ಣ ಚಿತ್ರಣ ದೊರೆಯುತ್ತದೆ. ಭೂಕಂಪ, ಬೆಂಕಿ ಅವಘಡ ಮತ್ತಿತರ ದುರ್ಘಟನೆ ಸಂಭವಿಸಿದಾಗ ಒಳಗಡೆ ಸಿಲುಕಿಕೊಂಡಿರುವ ವ್ಯಕ್ತಿಯನ್ನು ಸುಲಭವಾಗಿ ಪತ್ತೆಮಾಡಬಹುದು.

ವೈರ್‌ಲೆಸ್ ತಂತ್ರಜ್ಞಾನದಿಂದಾಗಿ ಇದನ್ನು ಸುಲಭವಾಗಿ ನಿಯಂತ್ರಿಸಬಹುದು. ಕೆಲವೊಂದು ಸಂದರ್ಭದಲ್ಲಿ ಕೋಣೆಯೊಳಗೆ ಶಸ್ತ್ರಾಸ್ತ ಹಿಡಿದಿರುವ ಆಗಂತುಕರು, ಕಳ್ಳರನ್ನು ಕೂಡಾ ಇದನ್ನು ಬಳಸಿ ಪತ್ತೆಹಚ್ಚಬಹುದು. ಪೋಲಿಸರು ಇದರಿಂದ ಸುಲಭವಾಗಿ ಕಳ್ಳರ ಜಾಡು ಹಿಡಿಯಲು ಸಾಧ್ಯ. ಅದರೆ ಈ ಉಪಕರಣದ ಬಳಕೆಯನ್ನು ಕೇವಲ ರಕ್ಷಣಾ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಬಳಕೆಗೆ ಸೀಮಿತಗೊಳಿಸಿದರೆ ಉತ್ತಮ. ಇದು ದುರ್ಜನರ ಕೈಗೆ ಸಿಕ್ಕಿದರೆ ದುರುಪಯೋಗವಾಗುವ ಸಾಧ್ಯತೆ ಇರುತ್ತದೆ.

ಮುಂದೆ ಈ ಉಪಕರಣಕ್ಕೆ ಜಿಪಿಎಸ್ ಟ್ರ್ಯಾಕಿಂಗ್‌ನಂತಹ ಸಲಕರಣೆಗಳನ್ನು ಜೋಡಿಸಿ, ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವ ಯೋಜನೆ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗಕ್ಕಿದೆ. ಇದರಿಂದ ಪರಿಹಾರ ತಂಡದ ಕಾರ್ಯಕರ್ತರಿಗೆ ಮತ್ತು ತೊಂದರೆಯಲ್ಲಿ ಸಿಲುಕುವವರಿಗೆ ಪ್ರಯೋಜನವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT