ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಲನ ತಂದಿದೆ ಕಂಪೆನಿ ಮಸೂದೆ

Last Updated 20 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಲೋಕಸಭೆ 2012ರ ಡಿಸೆಂಬರ್‌ನಲ್ಲಿ ಅನುಮೋದಿಸಿದ್ದ ಹೊಸ `ಕಂಪೆನಿ ಮಸೂದೆ'ಗೆ ಇದೀಗ ರಾಜ್ಯಸಭೆಯೂ ಅಂಗೀಕಾರದ ಮುದ್ರೆ ಒತ್ತಿದೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಅಂಕಿತ ಬಿದ್ದೊಡನೆ ಹೊಸ ಕಾಯ್ದೆ ಜಾರಿಗೆ ಬರಲಿದೆ, ಅರ್ಧ ಶತಮಾನಕ್ಕೂ ಹಳೆಯದಾದ ಕಂಪೆನಿ ಮಸೂದೆ ಬದಿಗೆ ಸರಿಯಲಿದೆ.

ಹಳೆಯ ಕಂಪೆನಿ ಮಸೂದೆ ಸಂಕೀರ್ಣ ಹಾಗೂ ವಿರೋಧಾಭಾಸಗಳಿಂದ ಕೂಡಿದ್ದರೆ, ಹೊಸ ಮಸೂದೆ ಸರಳ ಎನ್ನಲಾಗುತ್ತಿದೆ. ಬಲು ದೀರ್ಘವಾಗಿದ್ದ ಹಳೆಯ ಮಸೂದೆಯಲ್ಲಿ ಇದ್ದ 700 ಸೆಕ್ಷನ್‌ಗಳು  ಹೊಸ ಮಸೂದೆಯಲ್ಲಿ 470 ಕಲಂಗಳಿಗೆ ತಗ್ಗಿವೆ. ಕಾಯ್ದೆಯ ಪುಟಗಳ ಸಂಖ್ಯೆಯೂ ಸಾಕಷ್ಟು ಇಳಿದಿದೆ.

`ಹೆಚ್ಚು ಸ್ಫುಟವಾದ ಆಶಯ ಮತ್ತು ಉದ್ದೇಶಗಳಿಂದ ಕೂಡಿರುವ ಈ ಮಸೂದೆ ರಾಷ್ಟ್ರದ 21ನೇ ಶತಮಾನದ ವ್ಯಾಪಾರ-ವಹಿವಾಟಿಗೆ ಹೇಳಿ ಮಾಡಿಸಿದ್ದು' ಎಂಬ ಮಾತುಗಳೂ ಉದ್ಯಮ ವಲಯದಲ್ಲಿ ಕೇಳಿಬಂದಿವೆ. ಇದರ ಆಶಯ-ಉದ್ದೇಶಗಳು, ಮುಖ್ಯವಾದ ಹೊಸ ಪರಿಕಲ್ಪನೆಗಳು, ಸಾಧಕ-ಬಾಧಕಗಳ ನೋಟ ಇಲ್ಲಿದೆ.

ಆಶಯಗಳು
-ರಾಷ್ಟ್ರದಲ್ಲಿ ವ್ಯಾಪಾರೋದ್ದಿಮೆ ಆರಂಭ ಹಾಗೂ ವಹಿವಾಟು ಪ್ರಕ್ರಿಯೆ ಸುಲಭಗೊಳಿಸುವುದು
-ಕಂಪೆನಿಗಳನ್ನು ಹೆಚ್ಚಿನ ಉತ್ತರದಾಯಿತ್ವಕ್ಕೆ ಒಳಪಡಿಸುವ ಮೂಲಕ ಕಾರ್ಪೊರೇಟ್ ಆಡಳಿತವನ್ನು ಮೇಲ್ದರ್ಜೆಗೆ ಏರಿಸುವುದು
-ಆಡಳಿತ ಮಂಡಳಿಗಳಲ್ಲಿ ಮಹಿಳಾ ನಿರ್ದೇಶಕರ ನೇಮಕ ಕಡ್ಡಾಯಗೊಳಿಸಿ, ಆ ಹಂತದಲ್ಲಿ ಲಿಂಗ ಸಮಾನತೆ ಉತ್ತೇಜಿಸುವುದು
-ಹೂಡಿಕೆಗೆ ಸಂಬಂಧಿಸಿದಂತೆ ಪಾರದರ್ಶಕತೆಗೆ ಒತ್ತು
-ಸಾಮಾನ್ಯ ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗೆ ಆದ್ಯತೆ
-ಕಂಪೆನಿಗಳ ಅಕ್ರಮ ವಹಿವಾಟಿಗೆ ಅವಕಾಶ ಇಲ್ಲದಂತೆ ನಿಗಾ ವಹಿಸುವುದು

ಹೊಸ ಪರಿಕಲ್ಪನೆ
`ಏಕೈಕ ನಿರ್ದೇಶಕ' ಕಂಪೆನಿ ಸ್ಥಾಪನೆಗೆ ಅವಕಾಶ. ಹಳೆಯ ಕಾಯ್ದೆ ಪ್ರಕಾರ, ಕಂಪೆನಿ ಎಂದರೆ ಕನಿಷ್ಠ ಇಬ್ಬರು ನಿರ್ದೇಶಕರಾದರೂ ಇರಬೇಕಿತ್ತು. ಷೇರುಪೇಟೆಯಲ್ಲಿ ನೋಂದಣಿಯಾದ ಪ್ರತಿ ಕಂಪೆನಿಯಲ್ಲೂ, ಸ್ವತಂತ್ರ ನಿರ್ದೇಶಕರ ಸಂಖ್ಯೆ ಕನಿಷ್ಠ ಮೂರನೇ ಒಂದರಷ್ಟು (1/3) ಇರಲೇಬೇಕು. ಸ್ವತಂತ್ರ ನಿರ್ದೇಶಕರಾದವರು ಐದು ವರ್ಷ ಕಾಲಾವಧಿಯ, ಹೆಚ್ಚೆಂದರೆ ಎರಡು ಅವಧಿಗೆ ಮಾತ್ರ ನೇಮಕವಾಗಬೇಕು ಎಂಬ ನಿಬಂಧನೆ ವಿಧಿಸಲಾಗಿದೆ.

ಹೀಗೆ ನಿರ್ದೇಶಕರಾದವರು ದೀರ್ಘಾವಧಿಗೆ ನೇಮಕವಾಗುತ್ತಲೇ ಹೋದರೆ ಅವರು ಕಂಪೆನಿಯ ಆಡಳಿತಕ್ಕೆ ತೀರಾ ಹತ್ತಿರವಾಗಿ ಸಾಮಾನ್ಯ ಹೂಡಿಕೆದಾರರ ಹಿತಾಸಕ್ತಿ ಹಿನ್ನೆಲೆಗೆ ಸರಿಯಬಾರದು ಎಂಬ ಉದ್ದೇಶ ಈ ನಿಯಮಾವಳಿಯ ಹಿಂದಿದೆ.

ಸ್ವತಂತ್ರ ನಿರ್ದೇಶಕರಾದವರು ನೇಮಕವಾದ ಕಂಪೆನಿಯೊಂದಿಗೆ ಅದರ ಶೇ 10ರಷ್ಟು ಆದಾಯಕ್ಕಿಂತ ಹೆಚ್ಚು ಮೌಲ್ಯದ ಯಾವುದೇ ಹಣಕಾಸು ವ್ಯವಹಾರ ಹೊಂದಿರಬಾರದು. ಪ್ರತಿ ನಿರ್ದೇಶಕನೂ ಸರ್ಕಾರದಲ್ಲಿ ನೋಂದಣಿ ಮಾಡಿಸಿ `ಡೈರೆಕ್ಟರ್ ಐಡೆಂಟಿಫಿಕೇಷನ್ ನಂಬರ್' (ಡಿ.ಐ.ಎನ್) ಪಡೆಯಬೇಕು. ಇದು ಒಬ್ಬ ವ್ಯಕ್ತಿ ಎಷ್ಟು ಕಂಪೆನಿಗಳಲ್ಲಿ ನಿರ್ದೇಶಕನಾಗಿದ್ದಾನೆ ಎಂಬುದನ್ನು ತಿಳಿದು, ಆತನ ಕಾರ್ಯವೈಖರಿ ಮೇಲೆ ನಿಗಾ ಇಡಲು ನೆರವಾಗುತ್ತದೆ ಎನ್ನಲಾಗಿದೆ.

ಲೆಕ್ಕಪತ್ರ ದಾಖಲಾತಿ ಮತ್ತು ಲೆಕ್ಕ ಪರಿಶೋಧನೆ ಮೇಲ್ವಿಚಾರಣೆಗಾಗಿ `ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ'ದ (ನ್ಯಾಷನಲ್ ಫೈನಾನ್ಷಿಯನ್ ರಿಪೋರ್ಟಿಂಗ್ ಅಥಾರಿಟಿ) ಸ್ಥಾಪನೆ. ಈ ಪ್ರಾಧಿಕಾರಕ್ಕೆ ಲೆಕ್ಕಪರಿಶೋಧಕರನ್ನೂ ತನಿಖೆಗೆ ಒಳಪಡಿಸುವ ಅಧಿಕಾರ.

ಉದ್ಯಮ ಸಮೂಹವೊಂದು ಷೇರುಪೇಟೆಯಲ್ಲಿ ನೋಂದಣಿಯಾಗಿರುವ ತನ್ನ ಕಂಪೆನಿಗಳ ಜತೆಗೆ, ನೋಂದಣಿಯಾಗದ ಅಂಗಸಂಸ್ಥೆಗಳ ವಹಿವಾಟನ್ನೂ ಸೇರಿಸಿ ಕ್ರೋಡೀಕೃತ ಬ್ಯಾಲೆನ್ಸ್ ಶೀಟ್(ಒಟ್ಟಾರೆ ವಹಿವಾಟಿನ ಹಣಕಾಸು ಲೆಕ್ಕಪತ್ರ) ಪ್ರಕಟಿಸುವುದು ಕಡ್ಡಾಯ. ಇದರಿಂದ ಕಂಪೆನಿಯ ಆಗುಹೋಗುಗಳಿಗೆ ಸಂಬಂಧಿಸಿದಂತೆ ಪಾರದರ್ಶಕತೆಗೆ ಒತ್ತು ನೀಡಿದಂತಾಗುತ್ತದೆಂಬ ನಿರೀಕ್ಷೆ ಇದೆ.

ಮಸೂದೆಯಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಮತ್ತೊಂದು ಹೊಸ ಪರಿಕಲ್ಪನೆ ಎಂದರೆ `ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ'(ಸಿ.ಎಸ್.ಆರ್). ಇದರ ಪ್ರಕಾರ, 500 ಕೋಟಿ ರೂಪಾಯಿಗೂ ಹೆಚ್ಚಿನ ನಿವ್ವಳ ಮೌಲ್ಯದ ಅಥವಾ ವಾರ್ಷಿಕ 1000 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸುವ ಅಥವಾ ವಾರ್ಷಿಕ 5 ಕೋಟಿ ರೂಪಾಯಿಗೂ ಹೆಚ್ಚು ನಿವ್ವಳ ಲಾಭ ಇರುವ ಕಂಪೆನಿಗಳು ತಮ್ಮ ಲಾಭದಲ್ಲಿನ ಶೇ 2ರಷ್ಟನ್ನು ಸಾಮಾಜಿಕ ಚಟುವಟಿಕೆಗಳಿಗೆ ವಿನಿಯೋಗಿಸಬೇಕು. ಈ ಪಾಲನ್ನು ಸಾಮಾಜಿಕ ಕಾರ್ಯಕ್ಕೆ ವಿನಿಯೋಗಿಸದಿದ್ದರೆ ದಂಡ ವಿಧಿಸುವ ನಿಯಮ ಇಲ್ಲ. ಆದರೆ, ತಾವು ಸಿ.ಎಸ್.ಆರ್ ನಿಧಿ ಬಳಸದೇ ಇರಲು ಕಾರಣ ಏನೆಂಬುದಕ್ಕೆ ಕಂಪೆನಿಗಳು ಸ್ಪಷ್ಟೀಕರಣ ನೀಡಬೇಕಾಗುತ್ತದೆ.

ಕಂಪೆನಿ ಲೆಕ್ಕಪರಿಶೋಧಕರ ಅವಧಿಯೂ ಗರಿಷ್ಠ 10 ವರ್ಷಕ್ಕೆ ಸೀಮಿತ. ಪ್ರವರ್ತಕರ ಅಕ್ರಮದಲ್ಲಿ ಲೆಕ್ಕಪರಿಶೋಧಕರೂ ಶಾಮೀಲಾಗುವುದನ್ನು ತಡೆಯಲು ಈ ಕ್ರಮ. ಹಳೆಯ ನಿಯಮದಲ್ಲಿ ಇದು ಇಲ್ಲ. ಮಸೂದೆಯ ಮತ್ತೊಂದು ಮುಖ್ಯ ಅಂಶ `ಕ್ಲ್ಯಾಸ್ ಆ್ಯಕ್ಷನ್ ಸೂಟ್ಸ್'ಗೆ ಇರುವ ಅವಕಾಶ. ಅಂದರೆ, ಕಂಪೆನಿಯಲ್ಲಿ ಅಕ್ರಮದ ಶಂಕೆ ಮೂಡಿದಾಗ, ಕೆಲವು ಷೇರುದಾರರು ಒಟ್ಟು ಸೇರಿ ಕಂಪೆನಿಯ ಕೆಲವರನ್ನು ಪ್ರತಿವಾದಿಗಳನ್ನಾಗಿ ಮಾಡಿ ನ್ಯಾಯಾಲಯದಲ್ಲಿ ದಾವೆ ಹೂಡಿ, ತಮ್ಮ ಷೇರುಪಾಲನ್ನು ವಾಪಸ್ ಕೋರಬಹುದಾಗಿದೆ. 2008ರಲ್ಲೇ ಈ ಕಾನೂನು ಇದ್ದಿದ್ದರೆ ಸತ್ಯಂ ಹಗರಣದ ವೇಳೆ ಭಾರತೀಯ ಷೇರುದಾರರಿಗೆ ರಕ್ಷಣೆ ಸಿಗುತ್ತಿತ್ತು ಎಂಬುದು ಪರಿಣತರ ಅಭಿಪ್ರಾಯ.

ನಿರೀಕ್ಷೆ
ಕಂಪೆನಿಗಳ ಸ್ವಾಧೀನ ಮತ್ತು ವಿಲೀನ ಪ್ರಕ್ರಿಯೆ ಹೆಚ್ಚಿಸುವ ನಿರೀಕ್ಷೆ ಇರುವ ಈ ಹೊಸ ಮಸೂದೆ ಬಗ್ಗೆ ಒಳ್ಳೆಯ ಮಾತುಗಳೇ ಹೆಚ್ಚಾಗಿದ್ದರೂ ಕೆಲವು ಪ್ರಶ್ನೆಗಳು ಕೂಡಾ ಕೇಳಿಬಂದಿವೆ. ಪ್ರವರ್ತಕರಿಂದ ನೇಮಕಗೊಂಡು ಅವರಿಂದ ವೇತನ ಪಡೆಯುವ ಸ್ವತಂತ್ರ ನಿರ್ದೇಶಕರು ಎಷ್ಟರ ಮಟ್ಟಿಗೆ `ಸ್ವತಂತ್ರ'ವಾಗಿರಲು ಸಾಧ್ಯ? ಪ್ರವರ್ತಕರು ನಿಜವಾಗಿಯೂ ಸ್ವತಂತ್ರ ಮನೋಪ್ರವೃತ್ತಿಯವರನ್ನು ಆಡಳಿತ ಮಂಡಳಿಗೆ ನೇಮಕ ಮಾಡುತ್ತಾರೆಯೇ?

ಸ್ವತಂತ್ರ ನಿರ್ದೇಶಕರಾಗಿ ನೇಮಕಗೊಳ್ಳಲು ಅರ್ಹರಾದವರು ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆಯೇ ಎನ್ನುವುದು ಮತ್ತೊಂದು ಅನುಮಾನ. ಸ್ವತಂತ್ರ ನಿರ್ದೇಶಕರಾಗಲು ವಿದ್ಯಾರ್ಹತೆ ಮಾನದಂಡವಲ್ಲ ಎಂಬುದು ನಿಜ; ಆದರೆ ಅವರು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಗಮನಿಸಿದರೆ ವಿದ್ಯಾರ್ಹತೆ ಇಲ್ಲದವರನ್ನು ಹೀಗೆ ನೇಮಕ ಮಾಡಲು ಸಾಧ್ಯವೇ ಎಂಬ ಸಂಶಯ ಮೂಡುತ್ತದೆ.

ಒಬ್ಬ ವ್ಯಕ್ತಿಗೆ ಗರಿಷ್ಠ 20 ಕಂಪೆನಿಗಳಲ್ಲಿ ಸ್ವತಂತ್ರ ನಿರ್ದೇಶಕನಾಗಲು ಅವಕಾಶ ಕಲ್ಪಿಸಲಾಗಿದೆ. ಏಕಕಾಲದಲ್ಲಿ ಇಷ್ಟೊಂದು ಕಂಪೆನಿಗಳ ಹೊಣೆ ಹೊತ್ತವರು ವಾಸ್ತವದಲ್ಲಿ ಸಾಮಾನ್ಯ ಷೇರುದಾರರ ಹಿತರಕ್ಷಣೆಗೆ ಗಮನ ಹರಿಸಲು ಸಾಧ್ಯವೇ? ಡಾಬರ್ ಕಂಪೆನಿಯ ಸ್ವತಂತ್ರ ನಿರ್ದೇಶಕರಾಗಿದ್ದ ಅನಲ್‌ಜಿತ್ ಸಿಂಗ್ ಅವರು 14 ಆಡಳಿತ ಮಂಡಳಿ ಸಭೆಗಳ ಪೈಕಿ ಒಂದಕ್ಕೆ ಮಾತ್ರ ಹಾಜರಾಗಿದ್ದುದು ಇದಕ್ಕೊಂದು ಉದಾಹರಣೆ.

ಸಿ.ಎಸ್.ಆರ್ ಅಸ್ಪಷ್ಟ
`ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ'(ಸಿ.ಎಸ್.ಆರ್)ಗೆ ಸ್ಪಷ್ಟ ವ್ಯಾಖ್ಯೆ ಕೊಡುವ ಯಾವ ಪ್ರಯತ್ನವೂ ಮಸೂದೆಯಲ್ಲಿ ಇಲ್ಲ. ಕಂಪೆನಿಯು `ಸಿ.ಎಸ್.ಆರ್' ನಿಧಿಯನ್ನು ಲೈಂಗಿಕ ಕಾರ್ಯಕರ್ತರ ನೆರವಿಗಾದರೂ ಬಳಸಲಿ ಅಥವಾ ಪೂಜಾ ಸ್ಥಳದ ನಿರ್ಮಾಣಕ್ಕಾದರೂ ಕೊಡಲಿ, ಎರಡೂ ಒಂದೇ ಎಂಬ ಧೋರಣೆಯನ್ನು ಮಸೂದೆ ತಾಳಿದೆ ಎನ್ನಲಾಗಿದೆ.

ರೂ. 6751 ಕೋಟಿ
ಅಧ್ಯಯನವೊಂದರ ಪ್ರಕಾರ ಬಿಎಸ್‌ಇ-500ರ ಪಟ್ಟಿಯಲ್ಲಿರುವ 457 ಕಂಪೆನಿಗಳು ಇದಕ್ಕಾಗಿ ವಾರ್ಷಿಕ 6751 ಕೋಟಿ ರೂಪಾಯಿ ಮೀಸಲಿಡಬೇಕು. ಇದು ಕಡಿಮೆ ಮೊತ್ತವೇನೂ ಅಲ್ಲ. ಆದರೂ ಈ ನಿಧಿ ಬಳಕೆಯಿಂದ ಸಮಾಜಕ್ಕೆ ನಿಜವಾಗಿಯೂ ಉಪಯೋಗವಾಗುತ್ತದೆಯೇ ಎಂಬ ಪ್ರಶ್ನೆ ಕೇಳಿಬಂದಿದೆ.

ಅಧಿಕಾರಶಾಹಿ ಮರ್ಜಿ
ರಾಷ್ಟ್ರದಲ್ಲಿ ಹಿಂದೆ ಯಾವ್ಯಾವ ಸಂದರ್ಭಗಳಲ್ಲಿ ಕಂಪೆನಿಗಳ ವ್ಯವಹಾರಗಳನ್ನು ಅಧಿಕಾರಶಾಹಿಯ ನಿಯಂತ್ರಣಕ್ಕೆ ಒಳಪಡಿಸಲಾಗಿದೆಯೋ ಆಗೆಲ್ಲಾ ಭ್ರಷ್ಟಾಚಾರ ಮತ್ತು ಲಂಚಗುಳಿತನ ಹೆಚ್ಚಾಗಿದೆ. ನಿರ್ದೇಶಕರ ಉತ್ತರದಾಯಿತ್ವ ಹೆಚ್ಚಿಸಲು ಈಗ `ಡಿ.ಐ.ಎನ್' ಜಾರಿಗೆ ಬರಲಿದೆಯಾದರೂ, ನಿರ್ದೇಶಕರು ಎಷ್ಟರ ಮಟ್ಟಿಗೆ ಸರ್ಕಾರದ ಕಣ್ಗಾವಲಿಗೆ ಒಳಪಡಲು ಇಚ್ಛಿಸುತ್ತಾರೆ ಎಂಬುದು ಸಂದೇಹಾಸ್ಪದ.  ಹೀಗಾಗಿ `ಡಿ.ಐ.ಎನ್' ಪದ್ಧತಿಯು ಸ್ಪರ್ಧಾತ್ಮಕ ಅರ್ಹರು ನಿರ್ದೇಶಕ ಸ್ಥಾನ ವಹಿಸಿಕೊಳ್ಳಲು ಉತ್ತೇಜಿಸುತ್ತದೋ ಅಥವಾ ಅವರು ಹಿಂಜರಿಯುವಂತೆ ಮಾಡುತ್ತದೋ ಕಾದು ನೋಡಬೇಕು.

ಮಹಿಳಾ ನಿರ್ದೇಶಕರು
ಕಂಪೆನಿಯ ಆಡಳಿತ ಮಂಡಳಿಯಲ್ಲಿ ಲಿಂಗ ಸಮಾನತೆ ಉತ್ತೇಜಿಸಲು ಕನಿಷ್ಠ ಒಬ್ಬ ಮಹಿಳೆಯನ್ನು ನಿರ್ದೇಶಕಿಯಾಗಿ ನೇಮಿಸಬೇಕೆಂಬ ನಿಬಂಧನೆ ಹಾಕಲಾಗಿದೆ. ಆದರೆ, ಇದು ಪರಿಣಾಮಕಾರಿ ಆಗಬೇಕಾದರೆ, ಆಡಳಿತ ಮಂಡಳಿ ಸೇರಲು ಅರ್ಹರಾದ ಮಹಿಳೆಯರ ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕಾದ ಅಗತ್ಯವೂ ಇದೆ.

2013ರಲ್ಲಿ `ಜಿ.ಎಂ.ಐ ರೇಟಿಂಗ್ಸ್' ನಡೆಸಿದ ಜಾಗತಿಕ ಸಮೀಕ್ಷೆಯ ಪ್ರಕಾರ, ಅಗ್ರಶ್ರೇಣಿಯ ಕಂಪೆನಿಗಳಲ್ಲಿ ಕೂಡ ಮಹಿಳಾ ನಿರ್ದೇಶಕರ ಸಂಖ್ಯೆ ಕೇವಲ ಶೇ 11ರಷ್ಟಿದೆ. 100 ಕೋಟಿ ರೂಪಾಯಿಗೂ ಹೆಚ್ಚು ಮಾರುಕಟ್ಟೆ ಮೌಲ್ಯವಿರುವ, ದೇಶದ 89 ಕಂಪೆನಿಗಳಲ್ಲಿನ ಮಹಿಳಾ ನಿರ್ದೇಶಕರ ಸಂಖ್ಯೆ ಶೇ 7ಕ್ಕಿಂತಲೂ ಕಡಿಮೆ ಇದೆ!

ಹೀಗೆ ಹೊಸ ಮಸೂದೆಯ್ಲ್ಲಲೂ ಇಂತಹ ಕೆಲವು ಅರೆಕೊರೆಗಳು ಇರಬಹುದು. ಆದರೆ, ಒಂದಿಷ್ಟು ಅನುಮಾನಗಳ ನಡುವೆಯೂ ಅರ್ಧ ಶತಮಾನಕ್ಕೂ ಹಿಂದಿನ (1956ರ) ಕಂಪೆನಿ ಮಸೂದೆ ಬದಲಾಗುತ್ತಿರುವುದು ಉದ್ಯಮ ವಲಯದಲ್ಲಿ ಸಂಚಲನ-ಸಂಭ್ರಮ ಮೂಡಿಸಿದೆ.

`ವಂಚನೆ ತಪ್ಪುತ್ತದೆ'

`ಹೊಸ ಮಸೂದೆಯು ಬೇನಾಮಿ ಕಂಪೆನಿಗಳ ಹುಟ್ಟಿಗೆ ತಡೆ ಒಡ್ಡುವುದರಿಂದ ಸಾಮಾನ್ಯ (ಆಮ್ ಆದ್ಮಿ) ಹೂಡಿಕೆದಾರರಿಗೆ ವಂಚನೆಯಾಗುವುದು ತಪ್ಪುತ್ತದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಗೆ ಒತ್ತು ನೀಡಿರುವುದರಿಂದ ಕಂಪೆನಿಗಳು ರಸ್ತೆ, ನೀರು ಒದಗಿಸುವ ಕಾರ್ಯಗಳನ್ನು ಕೂಡ ಅಚ್ಚುಕಟ್ಟಾಗಿ ಮಾಡಬಹುದು.

ಕಂಪೆನಿ ವ್ಯವಹಾರಗಳ ಸಚಿವಾಲಯವು ಈಗಾಗಲೇ ಸ್ವತಂತ್ರ ನಿರ್ದೇಶಕರಾಗಲು ಅರ್ಹರಾದವರ ಪಟ್ಟಿಯನ್ನು ಸಿದ್ಧಪಡಿಸಿರುವುದರಿಂದ ಅರ್ಹರಿಗಾಗಿ ಪರಿಶ್ರಮದ ಹುಡುಕಾಟ ಅಗತ್ಯವಿಲ್ಲ. ಒಟ್ಟಾರೆ ಬಹಳ ಒಳ್ಳೆಯ ಮಸೂದೆ ಎಂದು ಖುಷಿಯಾಗಿದೆ'.
-ಜೆ.ಕ್ರಾಸ್ತಾ,ಅಸೋಚಾಂ' ದಕ್ಷಿಣ ವಲಯ ಅಧ್ಯಕ್ಷ

`ಕಾರ್ಪೊರೇಟ್ ಜಗತ್ತಿಗೆ ಹೇಳಿ ಮಾಡಿಸಿದಂತಿದೆ'

`ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿನ ಕಂಪೆನಿ ನಿಯಮಗಳನ್ನೆಲ್ಲಾ ಅಧ್ಯಯನ ಮಾಡಿ ಸಿದ್ಧಪಡಿಸಿರುವ ಮಸೂದೆ ಇದು. 21ನೇ ಶತಮಾನದ ಕಾರ್ಪೊರೇಟ್ ಜಗತ್ತಿಗೆ ಹೇಳಿ ಮಾಡಿಸಿದಂತಿದೆ. ಸದ್ಯಕ್ಕಂತೂ ಈ ಮಸೂದೆ ಅತ್ಯಂತ ಸಮರ್ಪಕ ಎಂಬಂತೆ ತೋರುತ್ತಿದೆ. ಇದರಲ್ಲಿ ತೊಡಕುಗಳೇನಾದರೂ ಇದ್ದಲ್ಲಿ ಅದು ಬೆಳಕಿಗೆ ಬರಲು ಇನ್ನಷ್ಟು ಸಮಯ ಹಿಡಿಯುತ್ತದೆ'.
-ಜೋಸ್ ಥಾಮಸ್, ಅಭ್ಯಾಸ ನಿರತ ಕಂಪೆನಿ ಕಾರ್ಯದರ್ಶಿ, ಬೆಂಗಳೂರು

ಒಳ್ಳೆಯ ನಿಯಮ
`ಲೆಕ್ಕಪರಿಶೋಧಕರ ಅವಧಿಯನ್ನು ಗರಿಷ್ಠ 10 ವರ್ಷದ ಅವಧಿಗೆ ಸೀಮಿತಗೊಳಿಸಿರುವುದು ಬಹಳ ಒಳ್ಳೆಯ ನಿಯಮ. ಲೆಕ್ಕಪರಿಶೋಧನಾ ಸಮಿತಿಗಳು ಇದನ್ನು ಬಳಸಿಕೊಂಡು ಬೇರೆ ಬೇರೆ ಸಂಸ್ಥೆಗಳನ್ನು ಲೆಕ್ಕಪರಿಶೋಧನೆಗೆ ಬಳಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಬಹುದು'.
-ಡೇವಿಡ್ ಜೋನ್ಸ್
ವಾಕರ್ ಚಾಂದಿಯೋಕ್ ಅಂಡ್ ಕಂಪೆನಿ ಪಾಲುದಾರ

ಹೊಸ ಯುಗಕ್ಕೆ ನಾಂದಿ
`ಹೊಸ ಕಂಪೆನಿ ಮಸೂದೆ ಅಂಗೀಕರಿಸಿದ್ದಕ್ಕಾಗಿ ಸರ್ಕಾರವನ್ನು ಅಭಿನಂದಿಸುತ್ತೇವೆ. ಇದು ಕಾರ್ಪೊರೇಟ್ ಆಡಳಿತ ನಿಯಂತ್ರಣದ ಹೊಸ ಯುಗಕ್ಕೆ ನಾಂದಿಯಾಗುತ್ತದೆ'.
-ಂದ್ರಜಿತ್ ಬ್ಯಾನರ್ಜಿ, ಸಿ.ಐ.ಐ ಮಹಾ ಕಾರ್ಯದರ್ಶಿ

ಸ್ವಾಧೀನ-ವಿಲೀನಕ್ಕೆ ಅನುಕೂಲ

`ಮಸೂದೆಯು ಕಂಪೆನಿಗಳ ಸ್ವಾಧೀನ-ವಿಲೀನ ಪ್ರಕ್ರಿಯೆಗೆ ಒತ್ತಾಸೆಯಾಗಿ ನಿಲ್ಲುತ್ತದೆ. ಇದರಿಂದ ಕಂಪೆನಿಗಳ ಪುನರ್‌ರಚನೆಯೂ ಸುಲಭವಾಗುತ್ತದೆ'.
-ಅಮ್ರಿಶ್ ಷಾ, ತೆರಿಗೆ ವಿಭಾಗದ ಮುಖ್ಯಸ್ಥ ಅರ್ನ್ಸ್ಟ್ ಅಂಡ್ ಯಂಗ್

ನಿವೃತ್ತಿ ಇರಬೇಕು

`ನಿವೃತ್ತಿ ರಹಿತ ನಿರ್ದೇಶಕ'ರ ನೇಮಕಕ್ಕೆ ಅವಕಾಶ ಇರಬಾರದಿತ್ತು. ಪ್ರತಿ ನಿರ್ದೇಶಕನಿಗೂ ನಿವೃತ್ತಿ ಇರಬೇಕು. ಸ್ವತಂತ್ರ ನಿರ್ದೇಶಕರ ಅವಧಿಯನ್ನು ಮಸೂದೆ ಜಾರಿಗೆ ಬರುವ ದಿನದಿಂದ ಲೆಕ್ಕಕ್ಕೆ ತೆಗೆದುಕೊಳ್ಳುವ ಬದಲು, ಪೂರ್ವಾನ್ವಯವಾಗಿ ಗಣನೆಗೆ ತೆಗೆದುಕೊಳ್ಳಬೇಕಿತ್ತು.
-ಜೆ.ಎನ್.ಗುಪ್ತಾ, `ಸೆಬಿ' ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT