ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ನಿಯಂತ್ರಣಕ್ಕೆ ಇಂಟರ್‌ನೆಟ್‌ಗೆ ಫಿಲ್ಟರ್!

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಭಾರತ ಸರ್ಕಾರವೂ ಇಂಟರ್‌ನೆಟ್‌ಗೆ ಫಿಲ್ಟರ್ ಅಳವಡಿಸಲು ಹೊರಟಿದೆ. ಈ ಮೂಲಕ ಇಂಟರ್‌ನೆಟ್‌ನಲ್ಲಿ ಸುಲಭ ಲಭ್ಯವಾಗಿರುವ ಪೋರ್ನೋಗ್ರಫಿಗೆ (ಕಾಮಪ್ರಚೋದಕ ಸಾಹಿತ್ಯ, ಚಿತ್ರ ಮತ್ತು ವಿಡಿಯೋ) ಕಡಿವಾಣ ಹಾಕುವುದು. ಇದಕ್ಕಾಗಿ ಸೈಬರ್ ನಿಯಂತ್ರಣ ಸಲಹಾ ಸಮಿತಿ ಮತ್ತು ಇಂಟರ್‌ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾದ ಜೊತೆ ಸೇರಿಕೊಂಡು ಪೋರ್ನೋಗ್ರಫಿಯನ್ನು ಪ್ರಕಟಿಸುತ್ತಿರುವ ಎಲ್ಲಾ ಅಂತರ್ಜಾಲ ತಾಣಗಳ ಪಟ್ಟಿಯೊಂದನ್ನು ತಯಾರಿಸುತ್ತಿದೆ. ಅಷ್ಟೇ ಅಲ್ಲ ಇವುಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಇಂಟರ್‌ನೆಟ್ ಸೇವೆ ಒದಗಿಸುವ ಕಂಪೆನಿಗಳಿಗೆ ವಹಿಸುವ ದಿಕ್ಕಿನಲ್ಲಿ ಮುಂದುವರಿಯುತ್ತಿದೆ. ಎಲ್ಲಾ ಫಿಲ್ಟರ್‌ಗಳನ್ನು ಮೀರಬಹುದಾದ ಅನಂತ ತಾಂತ್ರಿಕ ಸಾಧ್ಯತೆಗಳಿರುವ ಈ ಕಾಲಘಟ್ಟದಲ್ಲಿ ಈ ಬಗೆಯ ಫಿಲ್ಟರ್ ಎಷ್ಟು ಪರಿಣಾಮಕಾರಿ?

ಸಂಕೀರ್ಣ ಸಾಮಾಜಿಕ ಸಮಸ್ಯೆಗಳನ್ನು ತಾಂತ್ರಿಕ ಪರಿಕರಗಳ ಮೂಲಕ ಸುಲಭವಾಗಿ ಪರಿಹರಿಸಿಬಿಡಬಹುದು ಎಂಬ ಭ್ರಮೆ ಎಲ್ಲಾ ಪ್ರಭುತ್ವಗಳಿಗೂ ಇರುತ್ತದೆ. ಫಿರ್ಜಿಯಾದ ದೊರೆ ಗೋರ್ಡಿಯಸ್ ಹಾಕಿದ ಗಂಟನ್ನು ಅಲೆಕ್ಸಾಂಡರ್ ಬಿಚ್ಚಿದ್ದೂ ಇದೇ ಬಗೆಯಲ್ಲಿ. ಅವನು ಖಡ್ಗದಿಂದ ಗಂಟನ್ನು ಕತ್ತರಿಸಿದನೇ ಹೊರತು ಅದನ್ನು ಬಿಚ್ಚಲಿಲ್ಲ. ಇತಿಹಾಸದ ಉದ್ದಕ್ಕೂ ಪ್ರಭುತ್ವಗಳು ಮಾಡಿದ್ದು ಇದನ್ನೇ. ಆಧುನಿಕ ಯುಗದಲ್ಲಿ ಇದು ಸಾಧ್ಯ ಎಂದು ವೈಜ್ಞಾನಿಕತೆಯ ಪರಿಭಾಷೆಯಲ್ಲಿ ವಿವರಿಸಿದ್ದು ಆಲ್ವಿನ್ ವೀನ್‌ಬರ್ಗ್ ಎಂಬ ಅಮೆರಿಕದ ಪರಮಾಣು ವಿಜ್ಞಾನಿ. ಈತ  1966ರಲ್ಲಿ ಪ್ರಕಟಿಸಿದ Can Technology Replace Social Engneering (http://goo.gl/h0buW1) ಎಂಬ ಶೀರ್ಷಿಕೆಯ ಪ್ರಬಂಧವನ್ನು ಮಧ್ಯಮ ವರ್ಗ ಮನಸ್ಥಿತಿಯ ಭಾರತದ ಆಡಳಿತಾರೂಢ ರಾಜಕಾರಣಿಗಳು ಓದಿರುವ ಸಾಧ್ಯತೆ ಕಡಿಮೆ. ಆದರೆ ಅವರು ತೆಗೆದುಕೊಳ್ಳುವ ನಿರ್ಧಾರಗಳನ್ನು ನೋಡಿದರೆ ವೀನ್‌ಬರ್ಗ್‌ನ Technological Fixನಲ್ಲಿ ನಂಬಿಕೆ ಇಟ್ಟವರಂತೆ ಕಾಣಿಸುತ್ತಾರೆ.

ಭಾರತದಲ್ಲಿ ಈಗಾಗಲೇ ‘ಅಶ್ಲೀಲ’ವಾದ ಏನನ್ನಾದರೂ ಪ್ರದರ್ಶಿಸುವುದಕ್ಕೆ ಮತ್ತು ಪ್ರಸಾರ ಮಾಡುವುದನ್ನು ತಡೆಯುವುದಕ್ಕೆ ಬೇಕಿರುವ ಕಾನೂನುಗಳಿವೆ. ಇಷ್ಟರ ಮೇಲೆ ಒಂದು ಫಿಲ್ಟರ್ ಬೇಕೆಂದು ಸರ್ಕಾರಕ್ಕೆ ಅನ್ನಿಸಿದ್ದಕ್ಕೆ ಮುಖ್ಯ ಕಾರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಅತ್ಯಾಚಾರ ಪ್ರಕರಣಗಳು. ಇದಕ್ಕೂ ಇಂಟರ್‌ನೆಟ್‌ನಲ್ಲಿರುಪ ಫೋರ್ನೋಗ್ರಫಿಗೂ ಸಂಬಂಧವಿದೆ ಎಂದು ಸರ್ಕಾರಕ್ಕಷ್ಟೇ ಹೊಳೆಯಿತು ಎನ್ನಲಾಗದು. ಈ ಸಂಬಂಧವನ್ನು ಕಲ್ಪಿಸಿದ್ದು ಕಳೆದ ವರ್ಷ ಇಂಟರ್‌ನೆಟ್ ಪೋರ್ನೋಗ್ರಫಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ವಕೀಲ. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಪೋರ್ನೋಗ್ರಫಿಯನ್ನು ಬಡಿಸುವ ಎಲ್ಲಾ ವೆಬ್‌ಸೈಟ್‌ಗಳನ್ನು ನಿಷೇಧಿಸಿ ಎಂದಿತ್ತು. ಅಂದಿನ ಸರ್ಕಾರ ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿ ವಿಫಲವಾಯಿತು. ಈಗಿನ ಸರ್ಕಾರ ಫಿಲ್ಟರ್ ಅಳವಡಿಕೆಗೆ ಮುಂದಾಗಿ ಅತ್ಯಾಚಾರಕ್ಕೊಂದು ತಾಂತ್ರಿಕ ಪರಿಹಾರವನ್ನು ಕಂಡುಕೊಳ್ಳಲು ಹೊರಟಿದೆ.
ಈ ಫಿಲ್ಟರ್ ಅಳವಡಿಕೆಯಿಂದ ಸರ್ಕಾರ ಮೂರು ಪರಿಹಾರಗಳನ್ನು ನಿರೀಕ್ಷಿಸುತ್ತಿದೆ. ಮೊದಲನೆಯದ್ದು ಅತ್ಯಾಚಾರಗಳ ನಿಯಂತ್ರಣ. ಎರಡನೆಯದ್ದು ಮಕ್ಕಳನ್ನು ಪೋರ್ನೋಗ್ರಫಿಯಿಂದ ದೂರವಿಡುವುದು. ಮೂರನೆಯದ್ದು ಭಾರತೀಯ ಸಂದರ್ಭದಲ್ಲಿ ಅಶ್ಲೀಲವೆನ್ನಿಸುವ ಎಲ್ಲವನ್ನೂ ತಡೆಯುವುದು. ಈ ಉದ್ದೇಶಗಳಿಗೆ ಪ್ರೇರಕವಾಗಿರುವ ರಾಜಕೀಯ ಸೈದ್ಧಾಂತಿಕತೆ ಯಾವುದೇ ಇದ್ದರೂ ಇದರ ಹಿಂದಿನ ಸದಾಶಯವನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ಇದು ಕಾರ್ಯಸಾಧುವೇ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಳ್ಳುತ್ತದೆ.

ಕೇವಲ ಒಂದೂವರೆ ದಶಕಗಳ ಹಿಂದೆ ಕ್ಯಾಮೆರಾ ಎಂಬುದು ಒಂದು ಐಷಾರಾಮಿ ವಸ್ತುವಾಗಿತ್ತು. ಸಾಮಾನ್ಯ ಕ್ಯಾಮೆರಾಗಳ ಬೆಲೆ ಕೆಲವೇ ಸಾವಿರ ರೂಪಾಯಿಗಳಿದ್ದರೂ ಅದನ್ನು ನಿರ್ವಹಿಸುವುದಕ್ಕೆ ಬೇಕಿರುವ ಖರ್ಚು ದೊಡ್ಡದಿತ್ತು. ವಿಡಿಯೋ ಕ್ಯಾಮೆರಾವಂತೂ ಕೇವಲ ವೃತ್ತಿಪರರ ಸೊತ್ತಾಗಿತ್ತು. ಆದರೆ ಕಳೆದ ಹದಿನೈದು ವರ್ಷಗಳಲ್ಲಿ ಈ ಎಲ್ಲವೂ ಬದಲಾಗಿ ಹೋಯಿತು. ಇಂದು ಮೊಬೈಲ್ ಫೋನ್ ಇಲ್ಲದೇ ಇರುವವರ ಸಂಖ್ಯೆ ಇಲ್ಲ ಎನ್ನುವಷ್ಟು ನಗಣ್ಯ. ಕೆಲವೇ ಸಾವಿರ ರೂಪಾಯಿಗಳಿಗೆ ದೊರೆಯುವ ಮೊಬೈಲ್ ಫೋನ್‌ಗಳಲ್ಲಿಯೂ ಸ್ಥಿರ ಛಾಯಾಗ್ರಹಣ ಮತ್ತು ವಿಡಿಯೋ ದಾಖಲಾತಿಗಳೆರಡೂ ಸಾಧ್ಯ. ಮಧ್ಯಮ ಬೆಲೆಯ ಮೊಬೈಲ್‌ಗಳಂತೂ ಈಗ ವೃತ್ತಿಪರ ಗುಣಮಟ್ಟದ ಚಿತ್ರಗಳು ಮತ್ತು ವಿಡಿಯೋ ತೆಗೆಯುವ ಅನುಕೂಲಗಳನ್ನು ಕಲ್ಪಿಸಿಕೊಟ್ಟಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಇದು ಸೆಲ್ಫಿಗಳ ಕಾಲ. ಹೀಗೆ ತಮ್ಮದೇ ಫೋಟೋಗಳನ್ನು ತಾವೇ ತೆಗೆದುಕೊಳ್ಳುವ ಯುಗ ಪೋರ್ನೋಗ್ರಫಿಯ ಸ್ವರೂಪವನ್ನೂ ಬದಲಾಯಿಸಿಬಿಟ್ಟಿದೆ. ಯಾರೋ ವೃತ್ತಿಪರರು ಪೋರ್ನೋಗ್ರಫಿಯನ್ನು ತಯಾರಿಸಿ ಹಂಚುವ ಕಾಲ ಇದಲ್ಲ. ಇಂಟರ್‌ನೆಟ್‌ನಲ್ಲಿರುವ ಪೋರ್ನೋಗ್ರಫಿಯ ತಾಣಗಳು ವೃತ್ತಿಪರರು ತಯಾರಿಸಿದ ಕಾಮಪ್ರಚೋದಕ ಚಿತ್ರಗಳಿಗಿಂತ ಹೆಚ್ಚಾಗಿ ಬಳಕೆದಾರರ ಒದಗಿಸುವ ಈ ಬಗೆಯ ಚಿತ್ರಗಳನ್ನು ಅವಲಂಬಿಸಿ ತಮ್ಮ ವ್ಯಾಪಾರ ನಡೆಸುತ್ತಿವೆ.

ಒಂದು ವೇಳೆ ಸರ್ಕಾರ ಪೋರ್ನೋಗ್ರಫಿಯನ್ನು ತಡೆಯುವುದಕ್ಕೊಂದು ಫಿಲ್ಟರ್ ಅಳವಡಿಸಿದರೆ ಅದಕ್ಕೆ ಮೋಸ ಮಾಡಿ ನೋಡುವುದೇನೂ ಕಷ್ಟವಲ್ಲ. ಪ್ರಪಂಚದಾದ್ಯಂತ ಇಂಟರ್‌ನೆಟ್ ಸೆನ್ಸಾರ್‌ಶಿಪ್ ನಡೆಸುವ ದೇಶಗಳು ಹಲವು. ಚೀನಾದ ಇಂಟರ್‌ನೆಟ್ ತಡೆಗೋಡೆಯಂತೂ ಬಹಳ ಪ್ರಬಲ. ಇಂತಹ ಗೋಡೆಗಳಿಗೆ ಕನ್ನ ಕೊರೆಯುವುದಕ್ಕಾಗಿಯೇ ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್, ಪಬ್ಲಿಕ್ ಪ್ರಾಕ್ಸಿಯಂಥ ಅನೇಕ ಸವಲತ್ತುಗಳಿವೆ. ಸರ್ಕಾರ ಅಳವಡಿಸುವ ಶೋಧಕಕ್ಕೆ ಇಂಟರ್‌ನೆಟ್ ಬಳಕೆದಾರ ಯಾವ ವೆಬ್‌ಸೈಟಿನಲ್ಲಿದ್ದಾನೆ ಎಂಬುದು ತಿಳಿಯುವುದೇ ಇಲ್ಲ. ಇಷ್ಟಕ್ಕೂ ಈ ತಂತ್ರಜ್ಞಾನ ಬಳಸುವುದಕ್ಕೆ ಭಾರೀ ಪರಿಣಿತಿಯೇನೂ ಬೇಕಾಗಿಲ್ಲ. ಒಮ್ಮೆ ಗೂಗಲಿಸಿದರೆ ಇಂಥ ಸಾವಿರಾರು ಪ್ರಾಕ್ಸಿಗಳು ಸಿಗುತ್ತವೆ.

ಇನ್ನು ಮಕ್ಕಳನ್ನು ಪೋರ್ನೋಗ್ರಫಿಯಿಂದ ದೂರವಿಡಬೇಕೆಂಬ ಉದ್ದೇಶವೂ ಈ ಬಗೆಯ ಫಿಲ್ಟರ್ ಅಳವಡಿಕೆಯಿಂದ ಪರಿಹರಿಸಲು ಸಾಧ್ಯವಿಲ್ಲ. ಇದಕ್ಕೆ ಬೇಕಿರುವುದು ಜವಾಬ್ದಾರಿಯುಳ್ಳ ಪಾಲಕರು. ಬೆಂಕಿ ಸುಡುತ್ತದೆ ಹಾಗೆಯೇ ಅದು ಬೆಳಕನ್ನೂ ಕೊಡುತ್ತದೆ ಎಂಬುದನ್ನು ಮಕ್ಕಳಿಗೆ ಅರ್ಥ ಮಾಡಿಸುವಲ್ಲಿ ಪಾಲಕರಿದ್ದಾರೆ, ಶಾಲೆ ಮತ್ತು ಸಮಾಜಗಳಿವೆ. ಇದನ್ನೇ ಇಂಟರ್‌ನೆಟ್ ಬಳಕೆಗೂ ಅನ್ವಯಿಸಲು ಸಾಧ್ಯವಿದೆ ಅದನ್ನು ಬಿಟ್ಟು ಫಿಲ್ಪರ್ ಅಳವಡಿಸುವ ಕೆಲಸ ನೆಗಡಿಯಾಯಿತೆಂದು ಮೂಗು ಕೊಯ್ದುಕೊಳ್ಳಂತಹ ಪರಿಹಾರ. ಫಿಲ್ಟರ್ ಅಳವಡಿಸುವ ಮೂಲಕ ಪರಿಹಾರ ಸಾಧ್ಯ ಎಂದು ಭಾವಿಸಿರುವ ಎಲ್ಲರೂ ಇಂಟರ್‌ನೆಟ್ ಪೂರ್ವಯುಗದಲ್ಲಿ ಹುಟ್ಟಿ ಬೆಳೆದು ಈಗ ಪಾಲಕರು, ಶಿಕ್ಷಕರು ಮತ್ತು ನೀತಿ ನಿರೂಪಣೆಯ ಹೊಣೆ ಹೊತ್ತಿರುವವರು. ಆದರೆ ಅವರು ಕಾಪಾಡಲು ಹೊರಟಿರುವ ಮಕ್ಕಳೆಲ್ಲರೂ ಇಂಟರ್‌ನೆಟ್ ಯುಗದಲ್ಲಿ ಹುಟ್ಟಿ ಬೆಳೆಯುತ್ತಿರುವವರು ಎಂಬುದನ್ನು ನೆನಪಿಡಬೇಕಾಗಿದೆ. ವಯಸ್ಕರು ಬಳಸಲು ಹೆಣಗಾಡುವ ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರನ್ನು ಮಕ್ಕಳು ಸಲೀಸಾಗಿ ಬಳಸುವುದನ್ನು ನೋಡಿ ಆಶ್ಚರ್ಯ ಪಡುವ ನಾವು ಇದೇ ಮಕ್ಕಳು ನಾವು ಸೃಷ್ಟಿಸುವ ಫಿಲ್ಟರ್‌ಗಳನ್ನು ವಂಚಿಸುವ ತಂತ್ರಗಳನ್ನೂ ಅಷ್ಟೇ ಸಲೀಸಾಗಿ ಕಂಡುಕೊಳ್ಳಬಲ್ಲರು ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಆದ್ದರಿಂದ ಮುಚ್ಚಿಡುವ ತಂತ್ರಗಳ ಬದಲಿಗೆ ಬೆಂಕಿಯ ಅಪಾಯವನ್ನು ಹೇಳಿಕೊಡುವಷ್ಟೇ ಮುಕ್ತವಾಗಿ ಪೋರ್ನೋಗ್ರಫಿಯ ಅಪಾಯದ ಕುರಿತಂತೆಯೂ ಮಕ್ಕಳಿಗೆ ಹೇಳಿಕೊಡುವುದಕ್ಕೇನು ಮಾಡಬೇಕು ಎಂದು ಯೋಚಿಸುವ ಅಗತ್ಯವಿದೆ.

ಇನ್ನು ಇರುವುದು ಶೀಲಾಶ್ಲೀಲದ ಪ್ರಶ್ನೆ. ಇದನ್ನು ಬಗೆಹರಿಸುವುದು ಭಾರತೀಯ ಸಂದರ್ಭದಲ್ಲಿ ಅಷ್ಟೊಂದು ಸುಲಭವೇ ಎಂಬುದನ್ನೂ ಪರಿಶೀಲಿಸಬೇಕು. ಬಹಳ ಪರಿಣಾಮಕಾರಿಯಾದ ಒಂದು ಫಿಲ್ಟರ್ ಅನ್ನು ಅಳವಡಿಸುವಲ್ಲಿ ಸರ್ಕಾರ ಯಶಸ್ವಿಯಾಯಿತೆಂದೇ ಭಾವಿಸೋಣ. ಆಗ ನಮ್ಮ ಪ್ರಾಚೀನ ಸಾಹಿತ್ಯದ ಗತಿ ಏನಾಗಬೇಕು. ಕಾಳಿದಾಸ, ಜಯದೇವ ಮುಂತಾದವರೆಲ್ಲಾ ಅಶ್ಲೀಲ ಸಾಹಿತ್ಯ ರಚಿಸಿದ ಆರೋಪ ಹೊರಬೇಕಾಗುತ್ತದೆ. ನಾವು ಯಾವುದನ್ನು ಶೃಂಗಾರ ರಸ ಎಂದು ವರ್ಣಿಸುತ್ತಿದ್ದೇವೆಯೇ ಅದೆಲ್ಲವೂ ಇದ್ದಕ್ಕಿದ್ದಂತೆಯೇ ಅಶ್ಲೀಲವಾಗಿಬಿಡುವ ಅಪಾಯವಿಲ್ಲವೇ?

ಇಷ್ಟಕ್ಕೂ ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಪೋರ್ನೋಗ್ರಫಿಯನ್ನು ಸಂಪೂರ್ಣವಾಗಿ ತಡೆಯಲು ಯಶಸ್ವಿಯಾದರೂ ಸಮಸ್ಯೆ ಪರಿಹಾರವಾಗುತ್ತದೆಯೇ? ಈಗ ಲಭ್ಯವಿರುವ ತಾಂತ್ರಿಕ ಪರಿಕರಗಳನ್ನು ನೋಡಿದರೆ ಅದೂ ಸಾಧ್ಯವಿಲ್ಲ. ಇಂಟರ್‌ನೆಟ್‌ನಲ್ಲಿ ಅಲಭ್ಯವಾಗಿರುವ ಪೋರ್ನೋಗ್ರಫಿ ಮೊಬೈಲ್ ರಿಚಾರ್ಜ್ ಅಂಗಡಿಗಳಲ್ಲಿಯೂ ವಿಡಿಯೋ ಲೈಬ್ರರಿಗಳಲ್ಲಿಯೂ ದೊರೆಯಲಾರಂಭಿಸುತ್ತದೆ. ಮದ್ಯ ನಿಷೇಧವನ್ನೇ ಬಳಸಿಕೊಂಡು ಬೆಳೆಯುವ ಕಳ್ಳಭಟ್ಟಿ ದಂಧೆಯಂತೆ ಪೋರ್ನೋಗ್ರಫಿಯ ದೇಶೀ ಉತ್ಪಾದನೆ ಆರಂಭವಾಗಿಬಿಡುತ್ತದೆ. ಇದಕ್ಕೆ ಯಾವ ಪರಿಹಾರವನ್ನು ಹುಡುಕುವುದು?

ಪ್ರಭುತ್ವಗಳಿಗೆ ಯಾವಾಗಲೂ ಸುಲಭ ಪರಿಹಾರಗಳಷ್ಟೇ ಬೇಕಾಗುತ್ತದೆ. ಆಲ್ವಿನ್ ವೀನ್‌ಬರ್ಗ್‌ನಂಥ ‘ಪರಿಹಾರವಾದಿ’ಗಳು ಇಂಥವುಗಳನ್ನು ಸುಲಭವಾಗಿ ಒದಗಿಸಿಕೊಡುತ್ತಿದ್ದರು. ಕೆಲವು ಸಾಮಾಜಿಕ ಸಮಸ್ಯೆಗಳ ಮಟ್ಟಿಗೆ ಇಂಥ ಪರಿಹಾರಗಳು ಕೆಲಮಟ್ಟಿಗೆ ಪರಿಣಾಮಕಾರಿಯೂ ಆಗಿಬಿಡುತ್ತವೆ. ಆದರೆ ಅವುಗಳು ನಿಜವಾದ ಪರಿಹಾರವನ್ನು ಯಾವತ್ತಿಗೂ ನೀಡುವುದಿಲ್ಲ. ಭಾರತದ ಸಂದರ್ಭದಿಂದಲೇ ಇದಕ್ಕೊಂದು ಉದಾಹರಣೆಯನ್ನು ಕೊಡಬಹುದು. ಆಧುನಿಕ ಶೌಚಾಲಯಗಳು ಮಲ ಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ಇಲ್ಲವಾಗಿಸುತ್ತದೆ ಎಂಬ ನಂಬಿಕೆಯಿತ್ತು. ಆದರೆ ಇತ್ತೀಚಿನ ಅಂಕಿ–ಅಂಶಗಳೂ ಕೂಡಾ ಲಕ್ಷಾಂತರ ಸಂಖ್ಯೆಯಲ್ಲಿ ಮಲಹೊರುವವರು ಇದ್ದಾರೆಂಬುದನ್ನು ನಮ್ಮ ಮುಂದಿಡುತ್ತಿದೆ. ಇಂಟರ್‌ನೆಟ್‌ಗೆ ಫಿಲ್ಟರ್ ಅಳವಡಿಸುವುದು ಮಲಹೊರುವ ಪದ್ಧತಿಗೆ ತಂತ್ರಜ್ಞಾನ ಒದಗಿಸಿದ ಮಟ್ಟಿಗಿನ ಪರಿಹಾರವನ್ನೂ ನೀಡಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT